ADVERTISEMENT

ನನ್ನ ಮಗ ಆಶಿಶ್‌ ಮುಗ್ಧ, ನಾಳೆ ಪೊಲೀಸರ ಮುಂದೆ ಹಾಜರಾಗಲಿದ್ದಾನೆ: ಅಜಯ್‌ ಮಿಶ್ರಾ

ಪಿಟಿಐ
Published 8 ಅಕ್ಟೋಬರ್ 2021, 16:19 IST
Last Updated 8 ಅಕ್ಟೋಬರ್ 2021, 16:19 IST
ಅಜಯ್‌ ಮಿಶ್ರಾ
ಅಜಯ್‌ ಮಿಶ್ರಾ   

ಲಖನೌ: ‘ನನ್ನ ಮಗ ಆಶಿಶ್‌ ಮಿಶ್ರಾ ಮುಗ್ಧ. ಆತ ನಾಳೆ (ಶನಿವಾರ) ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾನೆ’ ಎಂದು ಕೇಂದ್ರ ಸಚಿವ ಅಜಯ್‌ ಮಿಶ್ರಾ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮಗೆ ಕಾನೂನಿನ ಮೇಲೆ ಸಂಪೂರ್ಣ ನಂಬಿಕೆ ಇದೆ. ನನ್ನ ಮಗ ನಿರಪರಾಧಿ. ಆತನಿಗೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಆದರೆ, ಆತನ ಆರೋಗ್ಯ ಸರಿ ಇರಲಿಲ್ಲ. ಈಗ ಆತ ಚೇತರಿಸಿಕೊಂಡಿದ್ದು, ನಾಳೆ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುತ್ತಾನೆ’ ಎಂದು ಅಜಯ್‌ ಮಿಶ್ರಾ ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಆಶಿಶ್‌ ಮಿಶ್ರಾಗೆ ಪೊಲೀಸರು ಸಮನ್ಸ್ ನೀಡಿದ್ದರು. ಆದರೆ, ಆಶಿಶ್‌ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಸದ್ಯ ಹೊಸ ಸಮನ್ಸ್‌ ನೀಡಿರುವ ಪೊಲೀಸರು ಶನಿವಾರ ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ಸೂಚಿಸಿದ್ದಾರೆ. ಜತೆಗೆ, ವಿಚಾರಣೆಗೆ ಹಾಜರಾಗದಿದ್ದರೆ ಆಶಿಶ್‌ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಅ. 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. ಹಲವಾರು ಜನರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.