ADVERTISEMENT

ಬಿರಿದ ಹೂವಿನಲಿ ಚಿಲಿಪಿಲಿ ಚಿತ್ತಾರ

ಸಂಧ್ಯಾ ಹೆಗಡೆ
Published 23 ಮಾರ್ಚ್ 2020, 19:30 IST
Last Updated 23 ಮಾರ್ಚ್ 2020, 19:30 IST
   
""
""

ಸಹಸ್ರಾರು ತೊಳೆಗಳು ಒತ್ತಟ್ಟಿಗೆ ಸೇರಿಸಿದ ಗಜಗಾತ್ರದ ಕಿತ್ತಳೆ ಹಣ್ಣಿನಂತೆ ಕಾಣುವ ಮುತ್ತುಗದ ಮರ ಕೌತುಕದ ಆಗರ. ಇದಕ್ಕೆ ಸೊಂಪಾದ ಮಲೆನಾಡು, ಬೆಂಕಿಯುಗುಳುವ ಬಯಲು ನಾಡೆಂಬ ಭೇದವಿಲ್ಲ. ಮೊಳಕೆಯೊಡೆದು ಹೆಮ್ಮರವಾದಲ್ಲೆಲ್ಲಾ ಮೈತುಂಬ ಹೂ ಬಿಡುವ ಮುತ್ತುಗ, ಬಾನಾಡಿಗಳ ಜೀವನಾಡಿ.

ಮುತ್ತುಗದ ಮರವೆಂದರೆ ಮಿನಿ ಪಕ್ಷಿಧಾಮವಿದ್ದಂತೆ. ಕೆಂಪು–ಅರಿಸಿನ ಮಿಶ್ರಿತ ಮೊಗ್ಗು, ಬಿರಿದ ಹೂಗಳೊಳಗೆ ಕೊಕ್ಕು ಇಣುಕಿಸಿ ಪಕ್ಷಿಗಳು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಬೇಸಿಗೆಯಲ್ಲಿ ಮರಗಳೆಲ್ಲ ಬೆತ್ತಲಾಗುವ ಹೊತ್ತಿಗೆ, ಈ ಮರ ಹೂವಿನ ಅಂಗಿಯಲ್ಲಿ ಮೈತುಂಬಿಸಿಕೊಳ್ಳುತ್ತದೆ.

ದಾರಿಯಂಚಿನಲ್ಲಿ ಮರದ ಮೇಲೆ ದೊಡ್ಡ ಗೋಲದಂತೆ ಕಾಣುವ ಮುತ್ತುಗದ ಹೂಗಳು ಕಣ್ಸೆಳೆಯುತ್ತವೆ. ಶಿರಸಿಯ ಅರಣ್ಯ ಕಾಲೇಜಿನ ಸನಿಹದಲ್ಲೊಂದು ಮುತ್ತುಗದ ಮರವಿದೆ. ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆ ಪ್ರಿಯವಾದ ಕೆಲಸ. ನಿತ್ಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಕ್ಷಿ ವೀಕ್ಷಣೆಗೆ ಹೋಗುವಾಗ ಈ ಮರವನ್ನು ದಾಟಿಯೇ ಹೋಗಬೇಕು. ಈ ತಂಡದೊಳಗಿದ್ದ ಕೇಶವಮೂರ್ತಿ ಅವರಿಗೆ ಹತ್ತಾರು ಹಕ್ಕಿಗಳ ದನಿಗೂಡಿದ ಸಮೂಹ ಗಾನ ಕೇಳುತ್ತಿತ್ತು. ಅವರು ಒಬ್ಬರೇ ಗಾಯಕರನ್ನು ಗುರುತಿಸುತ್ತ ಹೋದರು. ಅವರಿಗೇ ಅಚ್ಚರಿ ! ಈ ಸಂಖ್ಯೆ 45 ದಾಟಿತ್ತು.

ADVERTISEMENT

‘ಪೆಡಂಬೈಲು ಮಾರ್ಗದಲ್ಲಿ ಬೆಳಿಗ್ಗೆ ಆರು ಗಂಟೆಗೆ ಪಕ್ಷಿ ವೀಕ್ಷಣೆಗೆ ಹೋಗುತ್ತಿದ್ದ ನಮಗೆ, ಮುತ್ತುಗದ ಮರ ಬಂದಾಕ್ಷಣ ನಡಿಗೆ ನಿಧಾನವಾಗುತ್ತಿತ್ತು. ಕಣ್ಣಿಗೆ ಕಾಣುವ ಹಕ್ಕಿಗಳನ್ನೆಲ್ಲ ಗುರುತಿಸಿ ಪಟ್ಟಿ ಮಾಡುತ್ತಿದ್ದೆವು. ಮುತ್ತುಗದ ಎದುರು ಫಿಕಸ್ (ficus) ಮರವೊಂದಿದೆ. ಅಲ್ಲಿ ಪಾರಿವಾಳಗಳು ಹೆಚ್ಚಿರುತ್ತಿದ್ದವು’ ಎಂದು ಪ್ರಸ್ತುತ ಎಂ.ಎಸ್ಸಿ ಓದುತ್ತಿರುವ ಕೇಶವಮೂರ್ತಿ ನೆನಪಿಸಿಕೊಂಡರು.

‘ತಿರುಗಿ ರೂಮಿಗೆ ಬಂದ ಮೇಲೆ ಪಟ್ಟಿ ತೆಗೆದು, ಯಾವ ಹಕ್ಕಿ ಯಾವ ಮರದ ಮೇಲಿತ್ತು ಎಂಬುದನ್ನು ನೋಡಿದರೆ, ಬಹಳಷ್ಟು ಹಕ್ಕಿಗಳು ಮುತ್ತುಗದ ಮರದ ಮೇಲಿನವೇ ಆಗಿದ್ದವು. ಕುತೂಹಲ ಹೆಚ್ಚುತ್ತ ಹೋಯಿತು. ಮುತ್ತುಗದ ಮರವೊಂದನ್ನೇ ಗಮನಿಸುತ್ತ ಹೋದೆ. ಕೆಂಪು ತಲೆಯ ಗಿಳಿ, ನೀಲಿ ರೆಕ್ಕೆಯ ಗಿಳಿ, ಕೆಂಪು ಕೊರಳಿನ ಗಿಳಿ, ಗೊರವಂಕಗಳು, ಬೆಳ್ಳಕ್ಕಿ, ಸೂರಕ್ಕಿ, ಮರಕುಟುಕ, ಗೋವಕ್ಕಿ ಹೀಗೆ 36 ವಿಧದ ಹಕ್ಕಿಗಳು, ಆರು ಬಗೆಯ ಚಿಟ್ಟೆಗಳು, ಅಳಿಲುಗಳು, ಜೇನ್ನೊಣಗಳು ಬಿಡುವಿಲ್ಲದಂತೆ, ತಿನ್ನುವುದರಲ್ಲಿ ತೊಡಗಿರುತ್ತವೆ. ಪಕ್ಷಿಗಳು ಪಕಳೆಗಳನ್ನು ತಿನ್ನುತ್ತ ಹೂವಿನ ಒಡಲು ಬಗೆದಿಟ್ಟರೆ, ಜೇನ್ನೊಣಗಳು, ದುಂಬಿಗಳು ಮಕರಂದ ಹೀರುತ್ತವೆ’ ಎಂದು ಮುತ್ತುಗದ ಒಡನಾಡಿಗಳ ಕತೆ ಬಿಚ್ಚಿಟ್ಟರು.

ಚಿತ್ರಗಳು: ಸುಸ್ಮಿತಾ ಹುಲ್ಲಟ್ಟಿ, ರವೀಂದ್ರ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.