ADVERTISEMENT

ಸಮಾನತೆಗಾಗಿ ಕಾಂಗ್ರೆಸ್, ಆರ್‌ಎಸ್‌ಎಸ್‌ ಎರಡನ್ನೂ ಸೋಲಿಸಬೇಕು: ನಟ ಚೇತನ್ ಅಹಿಂಸಾ

ಟ್ವೀಟ್ ಮೂಲಕ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2021, 7:05 IST
Last Updated 9 ಸೆಪ್ಟೆಂಬರ್ 2021, 7:05 IST
ಚೇತನ್ ಅಹಿಂಸಾ
ಚೇತನ್ ಅಹಿಂಸಾ   

ಬೆಂಗಳೂರು: ಸಮಾಜದಲ್ಲಿ ಸಮಾನತೆಗಾಗಿ ಕಾಂಗ್ರೆಸ್‌ ಮತ್ತು ಆರ್‌ಎಸ್‌ಎಸ್‌ ಎರಡನ್ನೂ ಸೋಲಿಸಬೇಕು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.

ಈ ಕುರಿತು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಫೋಸ್ಟ್ ಹಾಕಿಕೊಂಡಿರುವ ಅವರು ಕಾಂಗ್ರೆಸ್ ಕೂಡ ಬ್ರಾಹ್ಮಣ್ಯವನ್ನು ಸಲುಹುವ ಸಂಸ್ಥೆ ಎಂದು ಕಿಡಿಕಾರಿದ್ದಾರೆ.

‘ಕಾಂಗ್ರೆಸ್ ಪಕ್ಷದ ಸದಸ್ಯರಾದ ಕೆಬಿ ಹೆಡ್ಗೆವಾರ್ ಅವರು 1925 ರಲ್ಲಿ ಆರ್‌ಎಸ್‌ಎಸ್‌ ಸ್ಥಾಪಿಸಿದರು.ಕಾಂಗ್ರೆಸ್‌ನ ಮತ್ತೊಬ್ಬ ಸದಸ್ಯರಾದ ಬಾಲ ಗಂಗಾಧರ ತಿಲಕ್ ಅವರು ಹೆಡ್ಗೆವಾರ್ ಅವರನ್ನು ಪ್ರಭಾವಿಸಿದ್ದರು.ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್‌ ( ಸಂಘ ಪರಿವಾರ ) ಯಾವತ್ತಿನಿಂದಲೂ ಒಂದಕ್ಕೊಂದು ಬೆಸೆದುಕೊಂಡೇ ಇದೆ.
ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದರಿಂದ ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್‌, ಎರಡಕ್ಕೂ ಲಾಭವಾಗುತ್ತದೆ.ಸಮಾನತೆಗಾಗಿ ಕಾಂಗ್ರೆಸ್ ಮತ್ತು ಸಂಘ ಎರಡನ್ನೂ ಸೋಲಿಸಬೇಕು‘ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದರು

ಕಳೆದ ಶನಿವಾರ ಟ್ವೀಟ್‌ ಮಾಡಿದ್ದ ಚೇತನ್ ಸಿದ್ದರಾಮಯ್ಯ ಅವರನ್ನು ಜಾತಿವಾದಿ ಎಂದಿದ್ದರು. ‘ಸಿದ್ದರಾಮಯ್ಯ ಕರ್ನಾಟಕ ಮತ್ತು ಕಾಂಗ್ರೆಸ್‌ನ ಪ್ರಬಲ ನಾಯಕ. ಆದರೆ, ಬ್ರಾಹ್ಮಣ್ಯವನ್ನು ಆಳವಾಗಿ ಬೇರೂರಿಸಿಕೊಂಡಿರುವ ಜಾತಿವಾದಿ ನಾಯಕ’ ಎಂದು ಹೇಳಿದ್ದರು.

‘ನಿಜವಾದ ಬದಲಾವಣೆಗೆ ಕರ್ನಾಟಕ ಮತ್ತು ಭಾರತಕ್ಕೆ ಜಾತಿ ವಿರೋಧಿ ನಾಯಕತ್ವ ಬೇಕಾಗಿದೆ. ಸಿದ್ದರಾಮಯ್ಯನವರ ಸೇವೆ ಅವರು ಹುಟ್ಟಿದ ಜಾತಿಗೆ ಮಾತ್ರ ಸೀಮಿತವಾಗಿದ್ದು, ಇತರ ಬಹು ಜನರಿಂದ ಸಿಗುವ ಮತಗಳಿಗಾಗಿ ಮಾತ್ರ ಬಣ್ಣದ ಮಾತನಾಡುತ್ತಾರೆ’ ಎಂದು ಟೀಕಿಸಿದ್ದರು.

ಇದಕ್ಕೂ ಹಿಂದೆ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರನ್ನೂ ಟ್ವೀಟ್‌ ಮೂಲಕ ಟೀಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.