ADVERTISEMENT

ರಾಹುಲ್‌ಗೆ ನಿಂದನೆ: ನಳಿನ್‌ ಕ್ಷಮೆ ಕೇಳುವ ನಿರೀಕ್ಷೆ ಹೊಂದಿದ್ದೇನೆ ಎಂದ ಡಿಕೆಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2021, 11:48 IST
Last Updated 19 ಅಕ್ಟೋಬರ್ 2021, 11:48 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕ್ಷಮೆಯಾಚಿಸಬಹುದು ಎಂಬುದಾಗಿ ಭಾವಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

‘ರಾಜಕೀಯದಲ್ಲಿ ವಿರೋಧಿಗಳ ಜತೆಗೂ ನಾಗರಿಕ ಮೌಲ್ಯಗಳ ಜತೆಗೆ ಗೌರವಯುತವಾಗಿ ನಡೆದುಕೊಳ್ಳುವುದರಲ್ಲಿ ನಂಬಿಕೆ ಇದೆ ಎಂದು ನಿನ್ನೆ ನಾನು ಹೇಳಿದ್ದೆ. ಇದನ್ನು ಬಿಜೆಪಿಯು ಒಪ್ಪಲಿದೆ ಎಂದೂ ಭಾವಿಸಿದ್ದೇನೆ. ರಾಹುಲ್ ಗಾಂಧಿಯವರನ್ನು ಅಸಂಸದೀಯ ಪದಗಳಿಂದ ನಿಂದಿಸಿರುವ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರು ಕ್ಷಮೆಯಾಚಿಸಲಿದ್ದಾರೆ ಎಂದು ಭಾವಿಸಿದ್ದೇನೆ’ ಎಂದು ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಕೆಪಿಸಿಸಿಯ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಏಕವಚನದಲ್ಲಿ, ಅವಹೇಳನಾಕಾರಿಯಾಗಿ ನಿಂದಿಸಲಾಗಿತ್ತು. ಈ ಕುರಿತು ಸೋಮವಾರ ರಾತ್ರಿ ವಿಷಾದ ವ್ಯಕ್ತಪಡಿಸಿದ್ದ ಶಿವಕುಮಾರ್, ಟ್ವೀಟ್‌ಗಳನ್ನು ತಕ್ಷಣವೇ ತೆಗೆದುಹಾಕಲು ಸೂಚಿಸಲಾಗಿದೆ. ಈ ಅಚಾತುರ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.

ಕಾಂಗ್ರೆಸ್ ಟ್ವೀಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಬಿಜೆಪಿಯು ರಾಹುಲ್ ಗಾಂಧಿ ವಿರುದ್ಧವೂ ಏಕವಚನದಲ್ಲಿ ನಿಂದಿಸಿ ಟ್ವೀಟ್ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.