
ದಾವಣಗೆರೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ ಬುಧವಾರ ಇಲ್ಲಿ ನಡೆಯಲಿರುವ ‘ಅಮೃತ ಮಹೋತ್ಸವ’ಕ್ಕೆ ‘ದೇವನಗರಿ’ ಸಿಂಗಾರಗೊಂಡಿದೆ.
ವೇದಿಕೆ ಕಾರ್ಯಕ್ರಮ ನಡೆಯಲಿರುವ ನಗರದ ಹೊರವಲಯದ ಕುಂದವಾಡ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶಾಮನೂರು ಪ್ಯಾಲೆಸ್ ಮೈದಾನ ಸಜ್ಜುಗೊಂಡಿದೆ.
ಸಿದ್ದರಾಮಯ್ಯ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಬೃಹತ್ ಕಟೌಟ್ಗಳು, ಬ್ಯಾನರ್ಗಳು ಕಾರ್ಯಕ್ರಮ ನಡೆಯಲಿರುವ ವೇದಿಕೆ ಎದುರು ಸ್ವಾಗತ ಕೋರುತ್ತಿವೆ. ವಿವಿಧೆಡೆ
ಯಿಂದ ಬರುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೆ ಬುಧವಾರ ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಗಾಗಿ ಮಂಗಳವಾರ ಮಧ್ಯಾಹ್ನವೇ ಅಡುಗೆ ಸಿದ್ಧತೆ ಆರಂಭವಾಗಿದೆ. ಪಲಾವ್, ಮೊಸರನ್ನ, ಸಿಹಿ ತಿಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. 200 ಕೌಂಟರ್ಗಳಲ್ಲಿ ಊಟ ಬಡಿಸಲು ಸ್ವಯಂಸೇವಕರ ದಂಡು ಸನ್ನದ್ಧವಾಗಿದೆ.
ಬೃಹತ್ ವೇದಿಕೆ: ಅಂದಾಜು 300 ಗಣ್ಯರು ಆಸೀನರಾಗುವಂತೆ ಬೃಹತ್ ವೇದಿಕೆ ನಿರ್ಮಾಣ ಆಗಿದೆಯಾದರೂ, ರಾಹುಲ್ ಗಾಂಧಿ ಅವರು ಭಾಗವಹಿಸುವುದರಿಂದ 50 ಜನ ಮುಖಂಡರಿಗೆ ಅವಕಾಶ ನೀಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ವೇದಿಕೆಯ ಪಕ್ಕದಲ್ಲಿಯೇ ಗಣ್ಯರಿಗಾಗಿ ವಿಶ್ರಾಂತಿ ಕೊಠಡಿ, ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಎದುರು 4 ಲಕ್ಷ ಕುರ್ಚಿಗಳನ್ನು ಹಾಕಲಾಗಿದೆ. 2,000ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ.
ಗಣ್ಯರ ವಾಹನಗಳು ವೇದಿಕೆ ಬಳಿ ನೇರವಾಗಿ ತೆರಳಲು ಅವಕಾಶವಿದ್ದು, ಇತರರ ವಾಹನಗಳಿಗಾಗಿ ಒಂದು ಕಿ.ಮೀ. ದೂರದಲ್ಲೇ, ಹೆದ್ದಾರಿಯ ಎರಡೂ ಬದಿಗಳಲ್ಲಿ ಇರುವ ಖಾಲಿ ಜಮೀನುಗಳಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಸಂಗೀತ ನಿರ್ದೇಶಕ ಹಂಸಲೇಖ ತಂಡದಿಂದ ಬೆಳಿಗ್ಗೆ 10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಮಧ್ಯಾಹ್ನ 12ಕ್ಕೆ ‘ಅಮೃತ ಮಹೋತ್ಸವ’ ಕಾರ್ಯಕ್ರಮ ಶುರುವಾಗಲಿದ್ದು, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಹಿತ ಕೆಲವೇ ಕೆಲವು ಗಣ್ಯರು ಮಾತನಾಡಲಿದ್ದು, ಮಧ್ಯಾಹ್ನ 3ಕ್ಕೆ ಕಾರ್ಯಕ್ರಮ ಮುಕ್ತಾಯಗೊಳಿಸಲು ಯೋಜಿಸಲಾಗಿದೆ.
ಮಂಗಳವಾರ ನಸುಕಿನಲ್ಲಿ ಮಳೆ ಸುರಿದಿದ್ದು, ಬೆಳಿಗ್ಗೆ ಬಿಡುವು ನೀಡಿದೆಯಾದರೂ ಸಂಘಟಕರಲ್ಲಿ ಆತಂಕ ಮೂಡಿಸಿದೆ. ಆದಷ್ಟು ಬೇಗ ಬಂದು ಕುರ್ಚಿಗಳಲ್ಲಿ ಆಸೀನರಾಗುವಂತೆಯೂ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.