ADVERTISEMENT

ನವರೂಜ್‌ ಮಧ್ಯ ಏಷ್ಯಾದ ಯುಗಾದಿ

ಡಾ.ನಿರಂಜನ ವಾನಳ್ಳಿ
Published 29 ಫೆಬ್ರುವರಿ 2020, 19:30 IST
Last Updated 29 ಫೆಬ್ರುವರಿ 2020, 19:30 IST
ಗೋಧಿ ಹುಲ್ಲು ನವರೂಜ್‌ನ ಶೋಭೆ
ಗೋಧಿ ಹುಲ್ಲು ನವರೂಜ್‌ನ ಶೋಭೆ   
""
""

ಮೂರು ತಿಂಗಳು ಆಗಾಗ ಮಳೆ- ಮರುದಿನ ಹಿಮಪಾತ. ರಸ್ತೆ, ಮನೆ, ಅಂಗಳ ಎಲ್ಲೆಲ್ಲೂ ಮಂಜುಗಡ್ಡೆಗಳು. ಮರುದಿನ ಸೂರ್ಯನ ಬಿಸಿಲು ಬಂದರೂ ಹಿಮ ಕರಗಿ ನೀರಾಗುವ ಸೂಚನೆಯೇ ಇಲ್ಲ. ಯಾಕೆಂದರೆ ಸೂರ್ಯನ ಬೆಳಕಿದ್ದಾಗಲೂ ಹವಾಮಾನ ಇರುವುದು –3, -4 ಡಿಗ್ರಿ. ಕೊರೆಯುವ ಚಳಿಯಲ್ಲಿ ಗಿಡಗಳೆಲ್ಲ ಎಲೆ ಉದುರಿಸಿ ಸತ್ತಂತೆ ನಿಂತಿವೆ. ಸದಾಕಾಲ ನಗುನಗುತ್ತಿದ್ದ ಹೂಗಿಡಗಳು ಮುರುಟಿಕೊಂಡಿವೆ. ಮನುಷ್ಯರ ಬದುಕೇ ಚಳಿಯಲ್ಲಿ ಮುರುಟಿಹೋಗಿದೆ ಎಂದರೆ ತಪ್ಪಲ್ಲ. ಎಲ್ಲರೂ ಕಾಯುವುದು ಮಳೆ-ಚಳಿ ಕಾಲ ಮುಗಿದು ವಾತಾವರಣ ಬೆಚ್ಚಗಾಗುವುದನ್ನು.

‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸವರುಷಕೆ ಹೊಸಹರುಷವ ಹೊಸತು ಹೊಸತು ತರುತದೆ’ ಎಂಬ ಬೇಂದ್ರೆ ಅಜ್ಜನ ಜನಪ್ರಿಯ ಕನ್ನಡ ಹಾಡು ನವರೂಜ್‍ಗೂ ಹೊಂದುವಂತದ್ದು. ಯುಗಾದಿಯ ಆಸುಪಾಸಿನಲ್ಲೇ ನವರೂಜ್‌ ಬರುವುದೂ ವಿಶೇಷ. ವ್ಯತ್ಯಾಸವೆಂದರೆ ಯುಗಾದಿಯಲ್ಲಿ ಎಲೆ ಉದುರಿಸುವ ಗಿಡ–ಮರಗಳೆಲ್ಲ ಹೊಸತಾಗಿ ಚಿಗುರಿ ನಿಲ್ಲುತ್ತವೆ.

ನವರೂಜಿನಲ್ಲಿ ಈವರೆಗೂ ಚಳಿಗೆ ಮುದುರಿನಿಂತಿದ್ದ ಮರ–ಗಿಡಗಳು ರಾತ್ರಿ ಬೆಳಗಾಗುವುದರೊಳಗಾಗಿ ಹೂವರಳಿಸಿ ನಿಲ್ಲುತ್ತವೆ. ಯುಗಾದಿಯ ದಿನ ನಮ್ಮೂರಲ್ಲಿ ಹೂವನ್ನೂ ಅಣಕಿಸುವ ಸೌಂದರ್ಯದ ಚಿಗುರೆಲೆಗಳನ್ನು ಎಲ್ಲೆಲ್ಲೂ ಕಾಣುತ್ತೇನೆ. ಇಲ್ಲಿ ಹಿಮಪಾತದ ಊರುಗಳಲ್ಲಿ ಚಳಿಗಾಲ ಮುಗಿದ ಕೂಡಲೇ ಎಲ್ಲೆಲ್ಲೂ ಹೂಗಳು. ಇಡೀ ಮರವೇ ಮೈದುಂಬಿ ನಿಂತಿರುತ್ತವೆ. ಪ್ರಕೃತಿಯಲ್ಲಿ ನಡೆಯುವ ಈ ಮಾಯಾಜಾಲವನ್ನು ಅನೇಕರು ಹೇಳಿದ್ದರೂ ನಂಬಿರಲಿಲ್ಲ. ಹಿಮಪಾತದ ಕಾಲಮುಗಿದು ನವರೂಜಿನ ಆರಂಭವನ್ನು ಘೋಷಿಸುವ ಹಾಗೆ ಗಿಡಗಳೆಲ್ಲ ಏಕಾಏಕಿ ಅರಳಿ ನಿಂತಾಗಲೇ ಪ್ರಕೃತಿಯ ಚಮತ್ಕಾರವನ್ನು ಕಂಡು ಕೈಮುಗಿದುದು.

ADVERTISEMENT

ನವರೂಜ್- ಪಾರ್ಸಿಭಾಷೆಯ ಶಬ್ದ. ‘ಹೊಸದಿನ’ ಎಂಬುದು ಅದರರ್ಥ. ಮಧ್ಯ ಏಷಿಯಾದ ದೇಶಗಳು ನವರೂಜಿನ ಭೂಪ್ರದೇಶಗಳು. ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದು, ಈಗ ಸ್ವತಂತ್ರವಾಗಿರುವ ಕಜಕಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ತುರ್ಕ್‍ಮೇನಿಸ್ತಾನ, ಉಜ್ಬೆಕಿಸ್ತಾನ ಹಾಗೂ ರಷ್ಯಾ ಅಲ್ಲದೇ ಅರ್ಮೇನಿಯಾ, ಅಫ್ಗಾನಿಸ್ತಾನ, ಅಜೈರ್ ಬೈಜಾನ್, ಇರಾನ್ ಮುಂತಾದ ದೇಶಗಳಲ್ಲಿ ಕೂಡಾ ನವರೂಜ್ ರಾಷ್ಟ್ರೀಯ ಹಬ್ಬ. ಈ ದೇಶಗಳಲ್ಲಿ ಸಾಮಾನ್ಯವಾಗಿ ಜನವರಿ- ಫೆಬ್ರುವರಿ- ಮಾರ್ಚ್‌ ತಿಂಗಳಲ್ಲಿ ಬಹುತೇಕ ಕೊರೆಯುವ ಹಿಮಚಳಿಯ ಕಾಲ. ಹಗಲು ಸೊನ್ನೆ ಡಿಗ್ರಿಯೂ ರಾತ್ರಿ 10ರಿಂದ -20 ಡಿಗ್ರಿಗಳು ಇರುವ ದಿನಗಳು ಇರುತ್ತವೆ. ಆಗ ಹೆಚ್ಚಾಗಿ ಎಲ್ಲಾ ಚಟುವಟಿಕೆಗಳನ್ನೂ ಬಂದ್ ಮಾಡಿ ಮನೆಗಳಲ್ಲೇ ಬೆಚ್ಚಗೆ ಅವಿತುಕೊಳ್ಳುವ ಜನಗಳು ನವರೂಜ್ ಬರುವುದನ್ನು ಕಾಯುತ್ತಾರೆ.

ಗಲ್ಲಿ ಗಲ್ಲಿಯಲ್ಲೂ ಕೆಂಪು ಹೂಗಳು

ಇಲ್ಲಿನ ನವರೂಜಿಗೆ ದೀರ್ಘಕಾಲದ ಚರಿತ್ರೆಯಿದೆ. ಒಮರ್ ಖಯ್ಯಾಂ ‘ನವರೂಜ್ ನಾಮಾ’ ಬರೆದಿದ್ದಾನೆ. ಪರ್ಷಿಯನ್ ದೊರೆ ಜಮ್‍ಷೆಡ್ ವಸಂತಕಾಲವನ್ನು ಸ್ವಾಗತಿಸಲು ಬಂಗಾರದ ಸಿಂಹಾಸನ ಮಾಡಿಸಿಕೊಂಡು ಅತ್ಯಂತ ಎತ್ತರದ ಪರ್ವತದ ಮೇಲೆ ಕುಳಿತು ಸೂರ್ಯನ ಬೆಳಗಿನ ಕಿರಣಗಳು ಬಂಗಾರದ ಸಿಂಹಾಸನದ ಮೇಲೆ ಬಿದ್ದು ಹೊಳೆಯುವುದನ್ನು ನೋಡಿ ಆನಂದಿಸಿದನಂತೆ. ಆ ದಿನವೇ ನವರೂಜ್ ಆಯಿತು ಎಂಬ ನಂಬಿಕೆ ಪರ್ಷಿಯನ್ನರಲ್ಲಿ ಇದೆ.

ಇದು ವರ್ಷದ ಮೊದಲ ದಿನ; ವಸಂತಕಾಲ ಅಡಿಯಿಡುವ ದಿನ. ಬರಹವು ಆರಂಭಗೊಳ್ಳುವ ಮೊದಲೇ ನವರೂಜ್ ಆರಂಭವಾಯಿತೆಂದು ಹೇಳುತ್ತಾರೆ. ಸೂರ್ಯದೇವನ ಆರಾಧನೆ ಆರಂಭಗೊಂಡಾಗಿನಿಂದ ನವರೂಜ್ ಆಚರಿಸಲ್ಪಟ್ಟಿದೆ. ಆಧಿಕೃತವಾಗಿ ಜೊರಾಸ್ಟ್ರಿಯನ್ ಹಬ್ಬವಾಗಿ ಅಬೆಮೆನಿಯನ್ ಗಣರಾಜ್ಯದಲ್ಲಿ ಕ್ರಿಸ್ತಪೂರ್ವ 648ರ ಹೊತ್ತಿಗೆ ಘೋಷಣೆ ಮಾಡಲಾಯಿತೆಂದು ಚರಿತ್ರೆಕಾರರು ಹೇಳುತ್ತಾರೆ. ನವರೂಜ್‌ನ ದಿನ ಖುಷಿಯಾಗಿದ್ದರೆ ವರ್ಷದ ಎಲ್ಲಾ ದಿನಗಳು ಖುಷಿಯಾಗಿರುತ್ತೀರಿ ಎಂಬ ನಂಬಿಕೆ ಈ ಭಾಗದ ಜನಗಳಲ್ಲಿದೆ.

ವಿಶ್ವಸಂಸ್ಥೆಯ 63ನೇ ಸಾಮಾನ್ಯ ಸಭೆಯು 2010ರಿಂದ ಮಾರ್ಚ್‌ 21ನೇ ದಿನಾಂಕವನ್ನು ಅಂತರರಾಷ್ಟ್ರೀಯ ನವರೂಜ್‌ ರಜೆಯಾಗಿ ಘೊಷಿಸಿದೆ. ಹೀಗಾಗಿ ಪ್ರತಿವರ್ಷ ಮಾರ್ಚ್‌ 21 ನವರೂಜ್ ರಜೆಯಾಗಿ ಅಂತರರಾಷ್ಟ್ರಿಯ ಮಾನ್ಯತೆಗಳಿಸಿದೆ. ಪ್ರವಾಸೋದ್ಯಮ ಜನಪ್ರಿಯಗೊಳ್ಳುತ್ತಿರುವ ಈ ಕಾಲದಲ್ಲಿ ನವರೂಜ್‌ನ ಆಕರ್ಷಣೆ ಹೆಚ್ಚುತ್ತಿದೆ. ಮಧ್ಯ ಏಷಿಯಾದ ಈ ಭಾಗಗಳಿಗೆ ನವರೂಜ್ ವೇಳೆಗೆ ಪ್ರವಾಸ ಬರಲು ಅಮೆರಿಕ, ಯುರೋಪ್ ಜನರು ಕೂಡ ಈಗ ತುದಿಗಾಲ ಮೇಲೆ ನಿಂತಿರುತ್ತಾರೆ. ತಜಕಿಸ್ತಾನವೊಂದರಲ್ಲೇ ನವರೂಜಿಗೆ ಬರುವ ಪ್ರವಾಸಿಗಳ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ 200ಪಟ್ಟು ಹೆಚ್ಚಿದೆ!

ಸಾಮಾನ್ಯವಾಗಿ ನವರೂಜನ್ನು ಒಂದು ವಾರ ಆಚರಿಸಲಾಗುತ್ತದೆ. ಇದು ಆಯಾ ದೇಶಗಳ ಮೇಲೆ ಅವಲಂಬಿತ. ಸಾಮಾನ್ಯವಾಗಿ ಮಾರ್ಚ್‌ 21ರಿಂದ ಒಂದು ವಾರ ಎಲ್ಲಾ ಕಡೆ ನವರೂಜ್ ಆಚರಿಸುತ್ತಾರೆ. ಇದು ನಮ್ಮ ಮೈಸೂರು ದಸರೆಯ ಹಾಗೆ ವಾರ್ಷಿಕ ಹಬ್ಬ. ಸಂಕ್ರಾಂತಿಯ ಹಾಗೆ ಸೂರ್ಯನ ಪಥ ಬದಲಾಗುವ ಸಮಯ. ಯುಗಾದಿಯ ಹಾಗೆ ಪ್ರಕೃತಿಯು ನಾನಾ ಬಣ್ಣಗಳಲ್ಲಿ ಚಿಗುರಿ, ನಿಮಿರಿ ನಿಲ್ಲುವ ಕಾಲ. ಹುಡುಗಿಯರು ತಮ್ಮ ಸಾಂಪ್ರದಾಯಿಕ ಲಂಗ, ದಾವಣಿಗಳನ್ನು ಹೊರತೆಗೆದು ಗರಗರಿಗೊಳಿಸಿ ನರ್ತನಕ್ಕೆ ಸಿದ್ಧಗೊಳ್ಳುವ ಸಂದರ್ಭ! ಎಲ್ಲೆಲ್ಲೂ ಸಂಗೀತವೇ... ಎಲ್ಲಾ ಊರುಗಳು ಹಾಡು ಕುಣಿತದಲ್ಲಿ ಮಿಂದೇಳುತ್ತವೆ!

ಭೇಟಿಯಾದವರೆಲ್ಲ ನವರೂಜ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹುಡುಗಿಯರು ಲೊಚಲೊಚ ಕೆನ್ನೆಗೆ ಮುತ್ತು ಕೊಟ್ಟುಕೊಳ್ಳುವುದೂ ಇದೆ! ನವರೂಜ್‌ನ ವಿಶೇಷವೆಂದರೆ ಪರ್ಷಿಯನ್ ಭಾಷೆಯ ‘ಸ’ಕಾರದಿಂದ ಆರಂಭಗೊಳ್ಳುವ ಏಳು ತಿನಿಸುಗಳನ್ನು ಮಾಡಿ ಬಡಿಸಬೇಕಂತೆ. ಖಲೀಸಾ ಮತ್ತು ಸಾಮಲಕ್ ಎಂಬುದು ವರ್ಷಕ್ಕೊಮ್ಮೆ ನವರೂಜ್‌ಗೆ ಮಾತ್ರ ಮಾಡುವ ಭಕ್ಷ್ಯಗಳು. ‘ಖಲೀಸಾ’ ಏಳುಧಾನ್ಯಗಳನ್ನು ಮಾಂಸದ ಜೊತೆ ಬೇಯಿಸುವುದಾದರೆ, ‘ಸಾಮಲಕ’ ಎಂಬುದು ಮೊಳಕೆಬರಿಸಿದ ಗೋಧಿಯ ಪಾಯಸ. ನವರೂಜ್ ಸಮಯದಲ್ಲಿ ಮನೆ ಮನೆಗಳಲ್ಲಿ ಆಪ್ತೇಷ್ಟರನ್ನು ಕರೆದು ಹಬ್ಬ ಆಚರಿಸುತ್ತಾರೆ.

ಮೊಳಕೆ ಬರಿಸಿದ ಗೋಧಿಯ ಕುಂಡಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಮೊಳಕೆಬರಿಸಿದ ಗೋಧಿಯ ಹಸಿರು ಹುಲ್ಲು ಒಂದು ರೀತಿಯಲ್ಲಿ ನವರೂಜಿನ ಪ್ರತೀಕವೆಂದರೆ ತಪ್ಪಲ್ಲ. ಸರ್ಕಾರದ ವತಿಯಿಂದ ಇಡೀ ನಗರವನ್ನು ಬಣ್ಣ ಬಣ್ಣದ ದೀಪಗಳಿಂದ ಶೃಂಗರಿಸಲಾಗುತ್ತದೆ. ಆಯ್ದ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ರಾತ್ರಿ ಪಟಾಕಿಗಳ ಆರ್ಭಟ. ಇಡೀ ಆಕಾಶವನ್ನು ಮುತ್ತುವಂತೆ ಹೂವಿನ ಕುಂಡಗಳ ಸರಮಾಲೆ. ಇದು ನವರೂಜಿನಲ್ಲಿ ಕಣ್ಣು ತುಂಬಿಕೊಳ್ಳುವ ದೃಶ್ಯ.

ನವರೂಜ್‌ ಈ ದೇಶಗಳ ಅಭಿವೃದ್ಧಿಯ ಮೇಲೂ ಸಾಕಷ್ಟು ಪ್ರಭಾವ ಹೊಂದಿದೆ. ಸಾಕಷ್ಟು ಜನ ವಿದೇಶಿ ಪ್ರವಾಸಿಗಳು ಬರುವುದರಿಂದ ವಿದೇಶಿ ವಿನಿಮಯ ಉಳಿತಾಯ ಆಗುತ್ತದೆ. ಪ್ರವಾಸೋದ್ಯಮದ ನೆಪದಲ್ಲಿ ಹಲವರಿಗೆ ಉದ್ಯೋಗ, ವ್ಯಾಪಾರ ವೃದ್ಧಿ, ಕಲೆ- ಸಾಂಸ್ಕೃತಿಕ ಕಲಾವಿದರಿಗೂ ಗೌರವ, ಅವರ ಹೊಟ್ಟೆಪಾಡಿಗೂ ಆಗುತ್ತದೆ. ಅದಕ್ಕೇ ಈ ದೇಶಗಳು ಈಗ ನವರೂಜನ್ನು ಪ್ರಸಿದ್ಧಿಗೆ ತರುತ್ತಿವೆ. ವರ್ಷದಿಂದ ವರ್ಷಕ್ಕೆ ನವರೂಜ್‌ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ.

ನವರೂಜ್‌ ಎಂದರೆ ಜಾತ್ರೆಯ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.