ADVERTISEMENT

ವಿಶ್ಲೇಷಣೆ: ಭಾರತವನ್ನು ಜೋಡಿಸಬಲ್ಲದೆ ಕಾಂಗ್ರೆಸ್?

ದೇಶವನ್ನು ಒಗ್ಗೂಡಿಸುವ ಮಹತ್ತರ ಕೆಲಸ ಕಾಂಗ್ರೆಸ್ ಪಕ್ಷವೊಂದರಿಂದಲೇ ಸಾಧ್ಯವಾಗಲಾರದು

ನಟರಾಜ ಹುಳಿಯಾರ್
Published 19 ಮೇ 2022, 19:45 IST
Last Updated 19 ಮೇ 2022, 19:45 IST
ಭಾರತವನ್ನು ಜೋಡಿಸಬಲ್ಲದೆ ಕಾಂಗ್ರೆಸ್?
ಭಾರತವನ್ನು ಜೋಡಿಸಬಲ್ಲದೆ ಕಾಂಗ್ರೆಸ್?   

ಕಾಂಗ್ರೆಸ್ ಪಕ್ಷದ ಉದಯಪುರ ಚಿಂತನ ಶಿಬಿರದಲ್ಲಿ ಪಕ್ಷದ ಮರುಹುಟ್ಟಿನ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಚುನಾವಣಾ ತಂತ್ರನಿಪುಣ ಪ್ರಶಾಂತ್ ಕಿಶೋರ್ ‘ಇಂದಿರಾ ಗಾಂಧಿ ಪೂರ್ವದ ಕಾಂಗ್ರೆಸ್ ಮಾದರಿ’ ಕುರಿತು ಮಾತಾಡಿರುವುದು ಕುತೂಹಲಕರ! ಕಾಂಗ್ರೆಸ್ ಪಕ್ಷದ ಪೂರ್ಣ ಚೇತರಿಕೆಗಾಗಿ ಕಿಶೋರ್ ತಯಾರಿಸಿದ್ದ ‘ನಟರಾಜ ಮಾಡೆಲ್’ ಹಳಬರ ಹಿಂಜರಿಕೆಯಿಂದಾಗಿ ನನೆಗುದಿಗೆ ಬಿದ್ದಿದೆ. ತಾವೇ ಹೊಸ ರಾಜಕೀಯ ಪಕ್ಷ ಕಟ್ಟಲು ಹೊರಟಿರುವ ಕಿಶೋರ್, ‘ಇಂದಿರಾ ಗಾಂಧಿ ಬರುವುದಕ್ಕಿಂತ ಮೊದಲಿನ ಕಾಂಗ್ರೆಸ್ಸಿಗೆ ಸಮಾಜದ ಸಜ್ಜನರೆಲ್ಲ ಸಹಜವಾಗಿ ಸೇರುತ್ತಿದ್ದರು. ಅಂಥ ಮಾದರಿಯ ಪಕ್ಷವೊಂದನ್ನು ಈಗ ರೂಪಿಸಬೇಕಾಗಿದೆ’ ಎಂದಿದ್ದಾರೆ.

ದೇಶದ ಒಳಿತನ್ನು ಬಯಸುವ ಜನ ಒಳ್ಳೆಯ ರಾಜಕೀಯ ಪಕ್ಷವೊಂದನ್ನು ಬೆಂಬಲಿಸುತ್ತಾರೆ ಎಂಬ ಈ ಚರ್ಚೆ ಒಳ್ಳೆಯತನಕ್ಕೂ ರಾಜಕಾರಣಕ್ಕೂ ಸಂಬಂಧವೇ ಇಲ್ಲದ ಧೂರ್ತ ರಾಜಕಾರಣದ ಕಾಲದಲ್ಲಿ ಮಹತ್ವದ್ದಾ ಗಿದೆ. ತಮ್ಮ ಪಕ್ಷದ ಅರವತ್ತು ವರ್ಷಗಳ ಹಿಂದಿನ ಮಾದರಿಯನ್ನು ಕಾಂಗ್ರೆಸ್ಸಿಗರೇ ಮರೆತಿರುವಾಗ, ಹೊಸ ರಾಜಕಾರಣ ಮಾಡಬಯಸುವ ಕಿಶೋರ್ ಆ ಮಾದರಿ ಯನ್ನು ಮತ್ತೆ ಹುಡುಕುತ್ತಿದ್ದಾರೆ. ಈ ಮಾದರಿಯ ಅನಿವಾರ್ಯ, ಅರ್ಥಪೂರ್ಣತೆಗಳನ್ನು ಕಾಂಗ್ರೆಸ್ ಮತ್ತೆ ಕಂಡುಕೊಂಡರೆ ಮಾತ್ರ ಅದು ಈ ವರ್ಷದ ಗಾಂಧಿ ಜಯಂತಿಯಂದು ಆರಂಭಿಸಲಿರುವ ‘ಭಾರತ್ ಜೋಡೋ’ ಯಾತ್ರೆ ಪ್ರಾಮಾಣಿಕವಾಗಿ ಇರಬಲ್ಲದು.

ರಾಜಕಾರಣದ ‘ಬೇಸಿಕ್ಸ್’ಗೆ ಮರಳುವ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರಿಗೆ ಈಗಲಾದರೂ ತಮ್ಮ ಪಕ್ಷದ ಮೂಲ ಉದ್ದೇಶಗಳತ್ತ ಹೊರಳಿ ನೋಡುವ ತಾಳ್ಮೆಯಿದೆಯೇ? ಸ್ವಾತಂತ್ರ್ಯಾನಂತರ, ‘ಕಾಂಗ್ರೆಸ್ ಪಕ್ಷ ವಿಸರ್ಜನೆಗೊಂಡು ಭಾರತದ ಹಳ್ಳಿಗಳ ಅಸ್ಪೃಶ್ಯತೆ, ನಿರುದ್ಯೋಗ, ಜಾತೀಯತೆ, ಕೋಮು ಅಸಹನೆ, ಅನಾರೋಗ್ಯಗಳನ್ನು ಕೊನೆಗಾಣಿಸುವ ಲೋಕಸೇವಕ ಸಂಘ ವಾಗಬೇಕು; ಸಾಮಾಜಿಕ, ನೈತಿಕ, ಆರ್ಥಿಕ ಸ್ವಾತಂತ್ರ್ಯ ಗಳಿಗಾಗಿ ಹೋರಾಡುವ ಸಂಘವಾಗಿ ಅರಳಬೇಕು’ ಎಂದು ಗಾಂಧೀಜಿ ಬಯಸಿದ್ದರು. ಆದರೆ ಅವತ್ತು ದೇಶವನ್ನು ಆಳಲು ಅಷ್ಟರಮಟ್ಟಿಗಾದರೂ ಸಿದ್ಧತೆಯಿದ್ದ ದೊಡ್ಡ ಪಕ್ಷಗಳಿರಲಿಲ್ಲ. ಗಾಂಧೀಜಿಯ ಅಂದಿನ ಕರೆ, ಗುರಿಗಳನ್ನು ವಿನೋಬಾ ಭಾವೆ, ಜೆ.ಪಿ., ಎಚ್.ಎಸ್.ದೊರೆಸ್ವಾಮಿ ಥರದ ಹಿರಿಯರು ಮುಂದಕ್ಕೆ ಒಯ್ದರು. ಆದರೆ ನೆಹರೂ ಥರದ ಕೆಲವರನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದ ಬಹುತೇಕರಿಗೆ ಇಂಥ ನಿಸ್ವಾರ್ಥ ನಾಯಕರ ಜೊತೆ ನಡೆಯುವ ಹೊಣೆಗಾರಿಕೆ, ಬದ್ಧತೆಗಳಿರಲಿಲ್ಲ; ಅಧಿಕಾರ ರಾಜಕಾರಣವೇ ಮುಖ್ಯವಾಗಿ, ಸಾರ್ವಜನಿಕ ಸೇವೆಯ ಬಗ್ಗೆ ಪಕ್ಷದಲ್ಲಿ ಅಸಡ್ಡೆ ಶುರುವಾಯಿತು. ಪಕ್ಷದ ಮೂಲ ಆದರ್ಶ, ತಾತ್ವಿಕತೆಗಳನ್ನು ಸ್ವಾತಂತ್ರ್ಯೋತ್ತರ ಭಾರತೀಯ ಸಮಾಜದಲ್ಲಿ ಬೆಳೆಸಬಲ್ಲ ಸೇವಾ ಸಂಸ್ಥೆಗಳು ಕಾಂಗ್ರೆಸ್ಸಿನ ಅಂಗಸಂಸ್ಥೆಗಳಾಗಿ ದೊಡ್ಡ ಮಟ್ಟದಲ್ಲಿ ಬೆಳೆಯಲಿಲ್ಲ.

ADVERTISEMENT

ಇಷ್ಟು ವರ್ಷಕಾಲ ಹಲ ಬಗೆಯ ಅಧಿಕಾರಗಳನ್ನು ಅನುಭವಿಸಿ, ಈಗಲೂ ಪಕ್ಷವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ಗೊಣಗುತ್ತಿರುವ ಜಿ-23 ನಾಯಕರು ಕಾಂಗ್ರೆಸ್ ಪಕ್ಷದೊಳಗೇ ಇಂಥದೊಂದು ಸೇವಾ ಸಂಸ್ಥೆ ಯನ್ನು ಬಲಗೊಳಿಸಲು ತಮ್ಮ ‘ಜನಪ್ರಿಯತೆ’ಯನ್ನು, ಗಳಿಸಿರುವ ಸಂಪತ್ತನ್ನು ಬಳಸಿದರೆ ಉಪಯುಕ್ತವಾಗಬಲ್ಲದು. ಪಕ್ಷ ಯಾವುದೇ ಹೊಸ ಪ್ರಯೋಗ ಮಾಡಲು ಬಿಡದೆ ಜಗ್ಗುತ್ತಿರುವ ಹಳೆ ತಲೆಗಳಿಂದ ಪಾರಾಗದಿದ್ದರೆ ಕಾಂಗ್ರೆಸ್ ನವಚೈತನ್ಯ ಪಡೆಯುವುದು ಕಷ್ಟ.

ಉದಯಪುರ ಚಿಂತನ ಶಿಬಿರದಲ್ಲಿ ರಾಹುಲ್ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿಸುವ ಚಿಂತನೆಗೆ ಕೊಂಚ ಒತ್ತು ಸಿಕ್ಕಂತಿದೆ. ಆದರೆ ರಾಹುಲ್‌ ಅವರಿಗೆ ನಿಜಕ್ಕೂ ಬೇಕಾಗಿರುವುದು ಹೊಸ ರೀತಿಯಲ್ಲಿ ಯೋಚಿಸಬಲ್ಲ ತಂಡ. ಕೆಲವು ವರ್ಷಗಳ ಕೆಳಗೆ ಮಧ್ಯಪ್ರದೇಶ, ರಾಜಸ್ಥಾನ ದಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ, ಸಚಿನ್ ಪೈಲಟ್ ಥರದ ಯುವ ನಾಯಕರನ್ನು ಇಟ್ಟುಕೊಂಡು ರಾಹುಲ್ ಆರಂಭಿ ಸಿದ್ದ ಹೊಸ ತಲೆಮಾರಿನ ರಾಜಕೀಯಕ್ಕೆ ಕಾಂಗ್ರೆಸ್ಸಿನ ಹಿರಿ ತಲೆಗಳು ಅಡ್ಡಗಾಲು ಹಾಕಿದವು. ದೇಶದ ಮತದಾರರ ತಲೆಯಲ್ಲಿ ರಾಜಪ್ರಭುತ್ವ ಕಾಲದ ಗುಲಾಮಗಿರಿ ಮನೆ ಮಾಡಿರುವಂತೆ, ದೇಶದ ಎಲ್ಲ ರಾಜಕೀಯ ಪಕ್ಷಗಳಲ್ಲೂ ‘ಮತ್ತೊಬ್ಬ ನಾಯಕನನ್ನು ಮುಗಿಸುವುದೇ ತಾನು ನಾಯಕನಾಗುವ ದಾರಿ’ ಎಂಬ ರಾಜಾಳ್ವಿಕೆಯ ಕಾಲದ ಕ್ರೌರ್ಯ, ಕಾಯಿಲೆಗಳು ಮುಂದುವರಿದಿವೆ. ಹಿರಿಯ ಪಕ್ಷವಾದ ಕಾಂಗ್ರೆಸ್ಸಿನಲ್ಲಂತೂ ಆಳವಾಗಿ ಬೇರೂರಿರುವ ಈ ಕಾಯಿಲೆ ಪಕ್ಷವನ್ನು ಒಳಗೊಳಗೇ ಕೊರೆಯುತ್ತಿದೆ.

ಕಾಂಗ್ರೆಸ್ ಈ ಹಳೆಯ ಕಾಯಿಲೆಯನ್ನು ಗುಣ ಪಡಿಸಿಕೊಂಡು ದೇಶದ ಹಿತಕ್ಕಾಗಿ ರಾಜಕಾರಣ ಮಾಡಲು ಬಯಸಿದ್ದರೆ ಅದು ಹೊಸ ಪ್ರತಿಭೆಗಳನ್ನು ಬೆಳೆಸಬೇಕು. ಉದಯಪುರ ಚಿಂತನ ಶಿಬಿರದ ಅರ್ಧದಷ್ಟು ಪ್ರತಿನಿಧಿಗಳು ನಲವತ್ತು ವರ್ಷಕ್ಕಿಂತ ಕೆಳ ಗಿನವರಾಗಿದ್ದರು; ಟಿಕೆಟ್ ಹಂಚಿಕೆಯಲ್ಲಿ ಹಿರಿಯ- ಕಿರಿಯರ ನಡುವೆ ಸಮತೋಲನ ಕಾಯ್ದುಕೊಳ್ಳುವ ತೀರ್ಮಾನವಾಗಿದೆ. ಇವೆರಡೂ ಪಕ್ಷದ ಮುಂದಿನ ನಡಿಗೆಯ ದಿಕ್ಸೂಚಿಯಂತಿವೆ. ‘ಭಾರತ್ ಜೋಡೋ’ ಯಾತ್ರೆಯನ್ನು ಯುವ ನಾಯಕರು ಹೇಗೆ ಮುಂದೊಯ್ಯ ಬಲ್ಲರು ಎಂಬುದರ ಮೇಲೂ ಪಕ್ಷದ ದಿಕ್ಕು ದೆಸೆಗಳು ನಿರ್ಧಾರವಾಗಲಿವೆ.

ಕಾಂಗ್ರೆಸ್ಸಿನಲ್ಲಿ ಎಷ್ಟೋ ಕಾಲದಿಂದ ಯುವ ಪಡೆಯನ್ನು ಮುಂಚೂಣಿಗೆ ತರುವ ಕೆಲಸವೇ ನಿಂತುಹೋಗಿದೆ. ಕರ್ನಾಟಕದಲ್ಲೇ ನೋಡಿ: ಸ್ಪಷ್ಟ ಜಾತ್ಯತೀತ ಚಿಂತನೆಯುಳ್ಳ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ಕೃಷ್ಣ ಬೈರೇಗೌಡ, ಈಶ್ವರ ಖಂಡ್ರೆ ಥರದವರ ಶಕ್ತಿಯನ್ನು ಪಕ್ಷವು ಸದನದಲ್ಲೂ ಸದನದ ಹೊರಗೂ ಸರಿಯಾಗಿ ಬಳಸಿಕೊಂಡಿಲ್ಲ. ಇವರ ಜೊತೆಗೇ ರಿಜ್ವಾನ್, ಸೌಮ್ಯಾ ರೆಡ್ಡಿ, ಡಾ. ಅಂಜಲಿ ನಿಂಬಾಳ್ಕರ್, ಜಮೀರ್ ಅಹಮದ್ ಥರದ ಹೊಸ ತಲೆಮಾರಿನ ಶಾಸಕರು ಹೊಸ ತಲೆಮಾರಿನ ತರುಣ ತರುಣಿಯರ ಜೊತೆ ಹೊಸ ಭಾಷೆಯಲ್ಲಿ ಮಾತಾಡುವ ಅಗತ್ಯವಿದೆ. ಇವರಲ್ಲದೆ, ಇನ್ನೂ ಅಧಿಕಾರದ ಹತ್ತಿರವೂ ಸುಳಿಯದ ಪಕ್ಷದ ನೂರಾರು ತರುಣ ನಾಯಕ, ನಾಯಕಿಯರು ನಿತ್ಯದ ರಾಜಕಾರಣದ ವಿಭಜನೆಯ ಭಾಷೆಯನ್ನು ತಿರಸ್ಕರಿಸಿ, ಜನರನ್ನು ಒಗ್ಗೂಡಿಸುವ ಹೊಸ ಭಾಷೆಯನ್ನು ಬಳಸಬೇಕು; ಆಗ ಮಾತ್ರ ಭಾರತವನ್ನು ಜೋಡಿಸುವ ಕೆಲಸ ಸರಿಯಾಗಿ ಶುರುವಾಗಬಲ್ಲದು.

ಉದಯಪುರ ಶಿಬಿರದಲ್ಲಿ ‘ಪ್ರಾದೇಶಿಕ ಪಕ್ಷಗಳಿಗೆ ಸಿದ್ಧಾಂತದ ಕೊರತೆಯಿದೆ’ ಎಂಬ ರಾಹುಲ್ ಮಾತಿಗೆ ಎಚ್.ಡಿ.ಕುಮಾರಸ್ವಾಮಿ, ತೇಜಸ್ವಿ ಯಾದವ್ ಎತ್ತಿರುವ ಆಕ್ಷೇಪ ಸಕಾರಣವಾಗಿದೆ. ‘ಕಾಂಗ್ರೆಸ್‌ಗೆ ಇರುವ ರಾಷ್ಟ್ರೀಯ ಉದ್ದೇಶ ಮತ್ತು ಪ್ರಾದೇಶಿಕ ಪಕ್ಷಗಳ ಪ್ರಾದೇಶಿಕ ಉದ್ದೇಶದ ವ್ಯತ್ಯಾಸ ಕುರಿತು ಮಾತ್ರ ರಾಹುಲ್ ಹೇಳಿದ್ದಾರೆ’ ಎಂದು ಶಶಿ ತರೂರ್ ವಿವರಣೆ ಕೊಟ್ಟಿದ್ದರೂ, ಪ್ರಾದೇಶಿಕ ಪಕ್ಷಗಳ ಅನುಮಾನ ಮಾಯವಾಗಿಲ್ಲ. ಯಾಕೆಂದರೆ, ಆರೋಗ್ಯಕರ ಧೋರಣೆಯ ಪ್ರಾದೇಶಿಕ ಪಕ್ಷಗಳ ಜೊತೆಜೊತೆಗೇ ಕಾಂಗ್ರೆಸ್ಸಿನ ‘ಭಾರತ್ ಜೋಡೋ’ ನಡಿಗೆ ಮುನ್ನಡೆಯಬೇಕಾಗಿದೆ.

ಧಾರ್ಮಿಕ ಜಗಳಗಳಿಂದಾಗಿ ಕೂಡ ನೆರೆಯ ಶ್ರೀಲಂಕಾ ನೆಲ ಕಚ್ಚಿರುವ ಕಾಲದಲ್ಲಿ, ‘ಭಾರತ್ ಜೋಡೋ’ ಯಾತ್ರೆ ಅಧಿಕಾರ ರಾಜಕಾರಣದ ಏಕಮಾತ್ರ ಗುರಿ ಬಿಟ್ಟು, ದೇಶವನ್ನು ಒಗ್ಗೂಡಿಸುವ ನಿಜವಾದ ಉದ್ದೇಶದಿಂದ ನಡೆದರೆ ಮಾತ್ರ ಜನರಲ್ಲಿ ಹೊಸ ಭರವಸೆ ಮೂಡಬಲ್ಲದು. ಒಡಕಿನ ರಾಜಕಾರಣ ದೇಶವನ್ನು ಒಡೆಯುತ್ತಿರುವ ರೀತಿ ಕಂಡು ಜನ ಅಸಹ್ಯಗೊಂಡಿದ್ದಾರೆ. ಬಾಯಿ ಬಿಟ್ಟು ಮಾತಾಡದ ಜನ ನೆಮ್ಮದಿಯ ಬದುಕಿಗಾಗಿ ಕಾತರಿಸುತ್ತಿದ್ದಾರೆ. ಆದ್ದರಿಂದಲೇ ‘ಭಾರತ್ ಜೋಡೋ’ದ ನಡಿಗೆ, ಭಾಷೆ, ನುಡಿಗಟ್ಟು, ಕಾಳಜಿ, ಗುರಿ ಎಲ್ಲವೂ ಪ್ರಾಮಾಣಿಕ ನಂಬಿಕೆಯಿಂದ ರೂಪುಗೊಳ್ಳಬೇಕಾಗಿದೆ. ಕಾಂಗ್ರೆಸ್ ಬಸವಳಿದಿದೆ; ಆದರೆ ಗಾಂಧಿ, ನೆಹರೂ, ಪಟೇಲರ ಜೊತೆಗೆ, ಒಂದು ಕಾಲಕ್ಕೆ ಜೆ.ಪಿ., ಸುಭಾಷ್‌ಚಂದ್ರ ಬೋಸ್, ಲೋಹಿಯಾ ಕೂಡ ಭಾಗ ವಾಗಿದ್ದ ಕಾಂಗ್ರೆಸ್ ಇವತ್ತಿಗೂ ಅಖಿಲ ಭಾರತ ಪಕ್ಷ ವಾಗಿಯೇ ಉಳಿದಿದೆ. ಅದು ತನ್ನ ದೊಡ್ಡ ನಾಯಕರ ಪರಂಪರೆಯನ್ನು ನೆನಪಿನಲ್ಲಿ ಇಟ್ಟುಕೊಂಡು, ಕೊನೆಯ ಪಕ್ಷ ನೆಹರೂ ಯುಗದ ವಿಶಾಲ ಚೌಕಟ್ಟನ್ನಾದರೂ ಪಡೆದರೆ ಮಾತ್ರ ದೇಶಕ್ಕೆ ಉಪಯುಕ್ತವಾಗಬಲ್ಲದು.

ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲುವುದು ಮುಖ್ಯ, ನಿಜ; ಆದರೆ ಅದರಾಚೆಗೆ ದೇಶದ ಮನಸ್ಸು
ಗಳನ್ನು ನಿಜಕ್ಕೂ ಜೋಡಿಸುವ ಕೆಲಸ ಮಾಡಿದಾಗ ಮಾತ್ರ ಹೊಸ ರಾಜಕಾರಣ ಸಾಧ್ಯ. ಕಾಂಗ್ರೆಸ್ ಸರ್ವ ಜಾತಿ, ಧರ್ಮ, ವರ್ಗಗಳನ್ನು ಒಳಗೊಳ್ಳುವ ವಿಶಾಲ ಸಿದ್ಧಾಂತವನ್ನು ಒಪ್ಪುವ ಪ್ರಾದೇಶಿಕ ಪಕ್ಷಗಳ ಜೊತೆಗೆ ‘ಭಾರತ್ ಜೋಡೋ’ದ ಉದ್ದೇಶವನ್ನು ಬೆಸೆದು ಮುನ್ನಡೆ ದರೆ ಮಾತ್ರ ದೇಶದುದ್ದಕ್ಕೂ ಸದ್ಭಾವನೆಯನ್ನು ಹಬ್ಬಿಸುವ ತಂಡಗಳು ಸೃಷ್ಟಿಯಾಗಬಲ್ಲವು; ಆಗ ಮಾತ್ರವೇ ದೇಶದ ಸಜ್ಜನರು ಭಾರತವನ್ನು ಜೋಡಿಸುವ ಮಹತ್ಕಾರ್ಯದಲ್ಲಿ ನಾಮುಂದು ತಾಮುಂದು ಎಂದು ಭಾಗಿಯಾಗಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.