ADVERTISEMENT

ಪ್ರಜಾವಾಣಿ ಚರ್ಚೆ: ರಾಜಕೀಯ ಸಂಸ್ಕೃತಿ ಬದಲಾಗದೆ ನೇಮಕಾತಿ ಅಕ್ರಮ ನಿಲ್ಲದು

ನಾರಾಯಣ ಎ
Published 14 ಮೇ 2022, 2:38 IST
Last Updated 14 ಮೇ 2022, 2:38 IST
ಉದ್ಯೋಗ ಸೌಧ
ಉದ್ಯೋಗ ಸೌಧ   

ಶಾಸಕರನ್ನು ಖರೀದಿಸಿ ಅಧಿಕಾರ ಪಡೆದಿರುವ ಸರ್ಕಾರವೊಂದರಲ್ಲಿ ಆಯಕಟ್ಟಿನ ಹುದ್ದೆಗಳು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತಿರುವುದು ತೀರಾ ಸಹಜ ವಿದ್ಯಮಾನ. ದೊಡ್ಡ ಪ್ರಮಾಣದಲ್ಲಿ ಅಂತ ಹೇಳಿದ್ದು ಯಾಕೆ ಅಂದರೆ, ಒಂದಷ್ಟು ಪ್ರಮಾಣದಲ್ಲಿ ಬಹುತೇಕ ಎಲ್ಲಾ ಹಂತದ ಹುದ್ದೆಗಳು ಎಲ್ಲಾ ಕಾಲದಲ್ಲೂ ಬಿಕರಿಯಾಗಿವೆ. ಅದನ್ನು ಸಹಿಸಿಕೊಂಡದ್ದಕ್ಕೆ ಈಗ ಆ ಪ್ರಮಾಣ ಮೇರೆ ಮೀರಿ ಅಕ್ರಮಗಳು ಒಂದಾದ ನಂತರ ಒಂದರಂತೆ ಬೆಳಕಿಗೆ ಬರುತ್ತಿವೆ. ನೇಮಕಾತಿ ಎನ್ನುವುದು ಪ್ರಹಸನದಂತೆ ಕಾಣುತ್ತಿದೆ. ಗುತ್ತಿಗೆದಾರರಿಂದ ಪ್ರತಿಶತ ಐದು ಹತ್ತರ ಪ್ರಮಾಣದಲ್ಲಿ ಸುಲಿಗೆ ನಡೆಯುತ್ತಿದ್ದದ್ದು ಪ್ರತಿಶತ ನಲುವತ್ತು ತಲುಪಿದಾಗ ಹಾಹಾಕಾರವೆದ್ದಂತೆ ಈ ನೇಮಕಾತಿ ಅಕ್ರಮದ ಕತೆ ಕೂಡಾ.

ನಿಜವಾಗಿ ನೋಡಿದರೆ ಈ ವಿಚಾರದಲ್ಲಿ ಧ್ವನಿ ಎತ್ತುವ ನೈತಿಕ ಅಧಿಕಾರ ಕರ್ನಾಟಕದಲ್ಲಿ ಈ ತನಕ ಅಧಿಕಾರ ನಡೆಸಿದ ಯಾವುದೇ ರಾಜಕೀಯ ಪಕ್ಷಕ್ಕೂ ಇಲ್ಲ. ಕೆಪಿಎಸ್‌ಸಿಯ ಮೂಲಕ 2011ರಲ್ಲಿ ಉನ್ನತ ಹುದ್ದೆಗಳಿಗೆ ನಡೆದ ಹಗರಣಗ್ರಸ್ತ ನೇಮಕಾತಿಯನ್ನು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳನ್ನೇ ಉಲ್ಲಂಘಿಸಿ ಆಳುವ ಬಿಜೆಪಿ ಸಕ್ರಮಗೊಳಿಸಿದ ಪಾಪದಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜನತಾದಳ ಪಕ್ಷಗಳೆರಡೂ ಮನಸಾ ಭಾಗಿಯಾಗಿದ್ದವಲ್ಲ. ಈಗ ಅವರು ಯಾವ ಮುಖ ಹೊತ್ತು ದೊಡ್ಡ ಮಟ್ಟಿಗೆ ಸುದ್ದಿ ಮಾಡುತ್ತಿರುವ ಸಬ್-ಇನ್ಸ್‌ಪೆಕ್ಟರ್‌, ಸಹಾಯಕ ಪ್ರಾಧ್ಯಾಪಕ ಮುಂತಾದ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮಗಳನ್ನು ಪ್ರಶ್ನಿಸಲು ಸಾಧ್ಯ?

ನಾರಾಯಣ ಎ.

ನೇಮಕಾತಿ ದಂಧೆ ಎನ್ನುವುದು ಸರ್ವಪಕ್ಷಗಳ ಸಹಯೋಗದ ಅದ್ಭುತ ಕೂಡಾಟ. ಈ ಲೇಖನವನ್ನು ರಾಜಕೀಯ ಪಕ್ಷಗಳನ್ನು ಪ್ರಸ್ತಾಪಿಸುವುದರ ಮೂಲಕ ಪ್ರಾರಂಭಿಸುವುದಕ್ಕೆ ಕಾರಣವಿದೆ. ಕೆಲವು ವರ್ಷಗಳ ಹಿಂದೆ ಹೀಗೆ ನೇಮಕಾತಿ ಅಕ್ರಮಗಳು ಪಂಜಾಬಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದಾಗ ಸುಪ್ರೀಂ ಕೋರ್ಟ್, ಪಂಜಾಬ್ ಸರಕಾರವನ್ನು ಹಿಗ್ಗಾಮುಗ್ಗಾ ಜಾಡಿಸಿತು. ಆಗ ಇನ್ನೂ ಸುಪ್ರೀಂ ಕೋರ್ಟ್ ಹೇಳಿದರೆ ಸ್ವಲ್ಪ ಮಟ್ಟಿಗೆ ಕೇಳುವಷ್ಟು ಮಾನ ಮರ್ಯಾದೆ ಇತ್ಯಾದಿಗಳನ್ನು ಆಳುವ ಸರ್ಕಾರಗಳು ಇರಿಸಿಕೊಂಡಿದ್ದ ಕಾರಣ ಅಂದಿನ ಪಂಜಾಬ್ ಸರ್ಕಾರವು ಮಿಲಿಟರಿ ಅಧಿಕಾರಿಯೊಬ್ಬರನ್ನು ರಾಜ್ಯದ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ ಹೇಗಾದರೂ ಮಾಡಿ ಈ ದಂಧೆಯನ್ನು ನಿಯಂತ್ರಿಸಿ ಅಂತ ಸ್ವಾತಂತ್ರ್ಯ ನೀಡಿತು. ಅವರ ಅವಧಿಯಲ್ಲಿ ನೇಮಕಾತಿ ಅಕ್ರಮಗಳು ನಿಯಂತ್ರಣಕ್ಕೆ ಬಂದವು ಕೂಡ.

ADVERTISEMENT

ಇದೆಲ್ಲಾ ಆಗಿ ಬಹಳ ಸಮಯದ ನಂತರ ಆ ಅಧಿಕಾರಿ ಒಂದು ಅಧಿಕೃತ ಸಭೆಯಲ್ಲಿ ಮಾತಿಗೆ ಸಿಕ್ಕಿದರು. ಆ ಮಾತುಕತೆಯಲ್ಲಿ ನೇಮಕಾತಿ ಅಕ್ರಮಗಳನ್ನು ನಿಯಂತ್ರಿಸುವ ಕುರಿತು ತಾವು ಮಾಡಿದ ಪ್ರಯೋಗಗಳನ್ನು ವಿವರಿಸುತ್ತಾ ಅವರು ಒಂದು ವಿಷಯ ಹೇಳಿದರು: ‘ನನ್ನ ಅವಧಿಯಲ್ಲಿ ಒಂದು ಕಡೆ ತಂತ್ರಜ್ಞಾವನ್ನು ಬಳಸಿ, ಇನ್ನೊಂದು ಕಡೆ ಪರೀಕ್ಷಾ ವಿಧಾನಗಳನ್ನು ಬಿಗಿಗೊಳಿಸಿ ಅಕ್ರಮಗಳು ನಡೆಯದಂತೆ ನೋಡಿಕೊಂಡೆ. ಆದರೆ ಅವೆಲ್ಲವೂ ತಾತ್ಕಾಲಿಕ. ವಾಸ್ತವದಲ್ಲಿ ಬದಲಾಗಬೇಕಾಗಿರುವುದು ರಾಜಕೀಯ ನಾಯಕತ್ವ ಮತ್ತು ಅದು ಸರ್ಕಾರಿ ನೇಮಕಾತಿಗಳನ್ನು ನೋಡುವ ದೃಷ್ಟಿಕೋನ. ಸರ್ಕಾರಿ ನೇಮಕಾತಿಗಳು ಸಕ್ರಮವಾಗಿ ನಡೆಯಬೇಕು ಎನ್ನುವುದು ಯಾವುದೇ ಸನ್ನಿವೇಶದಲ್ಲೂ ರಾಜಿ ಮಾಡಿಕೊಳ್ಳಬಾರದ ಒಂದು ಮೌಲ್ಯ ಅಂತ ರಾಜಕೀಯ ನಾಯಕತ್ವ ಒಪ್ಪಿ ಅನುಸರಿಸುವ ತನಕ ಈ ದೇಶದಲ್ಲಿ ನೇಮಕಾತಿ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವೇ ಇಲ್ಲ’. ಈ ಮಾತು ಅಕ್ಷರಶ ನಿಜ.

ಸರ್ಕಾರಿ ನೇಮಕಾತಿಗಳು ಮೂರು ರೀತಿಯಲ್ಲಿ ದಾರಿತಪ್ಪುತ್ತವೆ. ಮೊದಲನೆಯದಾಗಿ ಹಣಕ್ಕಾಗಿ ಹುದ್ದೆಗಳನ್ನು ಮಾರುವುದು. ಇದು ಭ್ರಷ್ಟಾಚಾರ. ಎರಡನೆಯದಾಗಿ ಸರ್ಕಾರಿ ಹುದ್ದೆಗಳು ತಮ್ಮ ಜಾತಿಯವರಿಗೆ, ತಮ್ಮ ಕುಟುಂಬದವರಿಗೆ, ತಮ್ಮ ಸ್ನೇಹಿತ ವರ್ಗದವರಿಗೆ ಮತ್ತು ತಮ್ಮ ಸಿದ್ಧಾಂತಗಳಿಗೆ ಬದ್ಧರಾದವರಿಗೆ ಸಿಗುವಂತೆ ಮಾಡಲು ಪರೀಕ್ಷಾ ಅಕ್ರಮಗಳನ್ನು ನಡೆಸುವುದು. ಇದು ಸ್ವಜನ ಪಕ್ಷಪಾತ. ನೇಮಕಾತಿಗಳು ದಾರಿ ತಪ್ಪುವ ಮೂರನೆಯ ಸಾಧ್ಯತೆಯಲ್ಲಿ ಭ್ರಷ್ಟಾಚಾರ-ಸ್ವಜನಪಕ್ಷಪಾತ ಇತ್ಯಾದಿ ಏನೂ ಇರುವುದಿಲ್ಲ. ಆದರೆ ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ಅರ್ಹತೆಯನ್ನು ಸರಿಯಾಗಿ ಪರಿಶೀಲಿಸದೆ, ಪರಿಶೀಲಿಸಲು ಬೇಕಾದ ಪರೀಕ್ಷಕರು ಮತ್ತು ಪರೀಕ್ಷಾ ವ್ಯವಸ್ಥೆ ಇಲ್ಲದೆ ಅನರ್ಹರ ನೇಮಕಾತಿ ನಡೆಯುತ್ತದೆ. ಇಲ್ಲಿ ಎಲ್ಲಾ ನಿಯಮಗಳನ್ನೂ ಪಾಲಿಸಲಾಗುತ್ತದೆ. ಆದರೆ ಕಳಪೆ ಪ್ರಶ್ನೆ ಪತ್ರಿಕೆ, ಕಳಪೆ ಪರೀಕ್ಷಕರು ಮತ್ತು ಕಳಪೆ ಪರೀಕ್ಷಾ ವಿಧಾನ ಇತ್ಯಾದಿಗಳಿಂದಾಗಿ ಕಳಪೆ ಗುಣಮಟ್ಟದ ಮಂದಿ ಆಯಕಟ್ಟಿನ ಜಾಗ ಸೇರಿಕೊಳ್ಳುತ್ತಾರೆ.

ಪರೀಕ್ಷಾ ವಿಧಾನಗಳನ್ನು ಬಿಗಿಗೊಳಿಸುವುದರಿಂದ, ತಂತ್ರಜ್ಞಾನ ಅಳವಡಿಸುವುದರಿಂದ ಮಾತ್ರ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ತಡೆಗಟ್ಟಲು ಸಾಧ್ಯವಿಲ್ಲ. ಎಲ್ಲಾ ತಂತ್ರಜ್ಞಾನ ಅಳವಡಿಕೆಯ ಹಿಂದೆಯೂ ಒಂದು ಹಂತದ ಮಾನವ ಪಾತ್ರ ಇದ್ದೇ ಇರುತ್ತದೆ. ಮಾತ್ರವಲ್ಲ. ತಂತ್ರಜ್ಞಾನ ಅಳವಡಿಸಿ ಪರೀಕ್ಷಾ ಕ್ರಮ ಬಿಗಿಗೊಳಿಸಿದ ಹಾಗೆಯೇ, ಅದೇ ತಂತ್ರಜ್ಞಾನವನ್ನು ಬಳಸಿ ಬಿಗಿಯಾದ ಕ್ರಮಗಳನ್ನು ಸೋಲಿಸುವುದಕ್ಕೂ ಸಾಧ್ಯವಿದೆ. ಮೌಖಿಕ ಪರೀಕ್ಷೆಯಲ್ಲಿಯೇ ಹೆಚ್ಚು ಅಕ್ರಮಗಳಿಗೆ ಅವಕಾಶ ಇರುವುದು ಅಂತ ಇತ್ತೀಚಿಗೆ ಕೆಲವು ರಾಜ್ಯಗಳು ಮೌಖಿಕ ಪರೀಕ್ಷೆಯನ್ನೇ ರದ್ದುಗೊಳಿಸಿವೆ ಅಥವಾ ಮೌಖಿಕ ಪರೀಕ್ಷೆಗೆ ನಿಗದಿಗೊಳಿಸಿದ ಅಂಕಗಳನ್ನು ಕಡಿಮೆ ಮಾಡಿವೆ. ಸಂದರ್ಶನದಲ್ಲಿ ಅಕ್ರಮ ನಡೆಯುತ್ತದೆ ಎಂದಾದರೆ ಪ್ರಾಮಾಣಿಕ ಪರೀಕ್ಷಕರನ್ನು ನೇಮಿಸಬೇಕೇ ಹೊರತು ಹೊರತು ಮೌಖಿಕಪರೀಕ್ಷೆಯನ್ನೇ ತೆಗೆದು ಹಾಕಿದರೆ ಹೇಗೆ? ಎಷ್ಟೋ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಿಂತಲೂ ಸಂದರ್ಶನದ ಅಂಕಗಳು ಮುಖ್ಯವಾಗುತ್ತವೆ. ಅಕ್ರಮ ನಡೆಯುತ್ತಿದೆ ಎನ್ನುವ ಕಾರಣಕ್ಕೆ ಅದನ್ನು ರದ್ದುಗೊಳಿಸುವುದು ಅಥವಾ ಅದರ ಅಂಕಗಳನ್ನೂ ಕಡಿತಗೊಳಿಸುವುದು ಎಂದರೆ ಅಕ್ರಮಗಳನ್ನು ನಿಲ್ಲಿಸುವುದು ಸಾಧ್ಯವೇ ಇಲ್ಲ ಎಂದು ಪರ್ಯಾಯವಾಗಿ ಒಪ್ಪಿಕೊಂಡಂತೆ.

ನೇಮಕಾತಿಗೆ ಬೇಕಾದ ಪ್ರಶ್ನೆ ಪತ್ರಿಕೆಗಳು ಬರುವುದು ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯಿಂದ. ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದು ಕೂಡ ಸರ್ಕಾರಿ ಸ್ವಾಮ್ಯದ ಉನ್ನತ ಶಿಕ್ಷಣ ಸಂಸ್ಥೆಯಿಂದ ಬರುವ ಪ್ರಾಧ್ಯಾಪಕರು. ಉನ್ನತ ಶಿಕ್ಷಣದ ಗುಣಮಟ್ಟ ತೀರಾ ಹದಗೆಟ್ಟಿರುದರಿಂದ ಈಗ ಸರಿಯಾದ ಪ್ರಶ್ನೆ ಪತ್ರಿಕೆಗಳನ್ನು ರೂಪಿಸುವವರು ಸಿಗುತ್ತಿಲ್ಲ. ಮೌಲ್ಯಮಾಪನದ ಸ್ಥಿತಿ ಹೇಗಿರುತ್ತದೆ ಎಂದರೆ ಅಕಸ್ಮಾತ್ ಒಬ್ಬ ಅಭ್ಯರ್ಥಿ ಒಳ್ಳೆಯ ಉತ್ತರ ಬರೆದರೆ ಅದು ಬಹುತೇಕ ಮೌಲ್ಯಮಾಪಕರಿಗೆ ಅರ್ಥವಾಗದೆ ಇರುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಕಳಪೆ ಮಟ್ಟದ ಉತ್ತರಗಳಿಗೆ ಅಧಿಕ ಅಂಕಗಳು ಸಿಕ್ಕಿ ಉತ್ತಮ ಅಭ್ಯರ್ಥಿಗಳು ಅವಕಾಶ ಕಳೆದುಕೊಳ್ಳುತ್ತಿರುವುದು ನಡೆಯುತ್ತಿದೆ. ಇದನ್ನು ಸರಿಪಡಿಸಬೇಕಾದರೆ ಉನ್ನತ ಶಿಕ್ಷಣ ವ್ಯವಸ್ಥೆ ಸರಿ ಆಗಬೇಕು. ಉನ್ನತ ಶಿಕ್ಷಣ ವ್ಯವಸ್ಥೆ ಸರಿ ಆಗಬೇಕಾದರೆ ಮೊದಲಿಗೆ ಉನ್ನತ ಶಿಕ್ಷಣ ರಂಗದಲ್ಲಿ ನೇಮಕಾತಿ ಸರಿ ಆಗಬೇಕು.

ಈ ಎಲ್ಲಾ ಕಾರಣಗಳಿಂದಾಗಿ ನೇಮಕಾತಿ ಅಕ್ರಮಗಳನ್ನು ತಂತ್ರಜ್ಞಾನವನ್ನು ಬಳಸುವ ಮೂಲಕವಾಗಲಿ ಪರೀಕ್ಷಾ ಕ್ರಮಗಳ ಸುಧಾರಣೆಗಳಿಂದಾಗಲಿ ತಡೆಗಟ್ಟಲು ಸಾಧ್ಯವಿಲ್ಲ. ಅಕ್ರಮಗಳು ಇಲ್ಲದೆ ನೇಮಕಾತಿ ನಡೆಯಬೇಕು ಎಂದಾದರೆ ಅಂತಹದ್ದೊಂದು ಸಂದೇಶ ಉನ್ನತ ರಾಜಕೀಯ ನಾಯಕತ್ವದ ಕಡೆಯಿಂದ ಬರಬೇಕು. ನೇಮಕಾತಿ ನಡೆಸುವ ಆಯೋಗಗಳಿಗೆ, ಪ್ರಾಧಿಕಾರಗಳಿಗೆ ಮತ್ತು ಸಮಿತಿಗಳಿಗೆ ನಂಬಿಕೆಗೆ ಅರ್ಹರಾದ, ಪ್ರಾಮಾಣಿಕತೆ, ಅರ್ಹತೆ, ದಿಟ್ಟತನಕ್ಕೆ ಹೆಸರಾದ, ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿಯುಳ್ಳ ಸದಸ್ಯರನ್ನು ಮತ್ತು ಅಧಿಕಾರಿ ವರ್ಗದವರನ್ನೇ ನೇಮಿಸಬೇಕು. ಇಷ್ಟಾದರೆ ಕೆಳಗಿನ ಹಂತದಲ್ಲಿ ಅಕ್ರಮ ನಡೆಸುವ ಧೈರ್ಯ ಯಾರಿಗೂ ಬರುವುದಿಲ್ಲ. ಆಗ ಕಳಪೆ ಪರೀಕ್ಷಕರನ್ನು ಸಾಧ್ಯವಾದಷ್ಟು ಹೊರಗಿಡುವ ಕೆಲಸವೂ ಆಗುತ್ತದೆ. ಮೊದಲ ಎರಡು ಹಂತಗಳಲ್ಲಿ, ಅಂದರೆ ರಾಜಕೀಯ ನಾಯಕತ್ವದಲ್ಲಿ ಮತ್ತು ನೇಮಕಾತಿ ಪ್ರಾಧಿಕಾರ/ಆಯೋಗದ ಹಂತದಲ್ಲೇ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ಸಹಿಸಿಕೊಳ್ಳುವ ಮನೋಭಾವ ಇದ್ದು ಬಿಟ್ಟರೆ, ಈ ಎರಡು ಹಂತಗಳಲ್ಲಿ ಅರ್ಹತೆಯ ಬಗ್ಗೆ ಗಂಭೀರ ಕಾಳಜಿ ಹೊಂದಿದವರು ಇಲ್ಲದೆ ಹೋದರೆ ನೇಮಕಾತಿ ಸುಧಾರಣೆ ಎನ್ನುವುದು ಸಾಧ್ಯವೇ ಇಲ್ಲ.

ವಾಸ್ತವದಲ್ಲಿ ಇಂದಿನ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕತ್ವ ಬೆಳೆಯುವುದೇ ಇಂತಹ ಅಕ್ರಮಗಳನ್ನು ಪೋಷಿಸುವ ಮೂಲಕ. ಆದ ಕಾರಣ ನಿಜಕ್ಕೂ ನೇಮಕಾತಿಗಳು ಸರಿಯಾಗಿ ನಡೆಯಬೇಕು ಎಂದಾದರೆ ಹೊಸ ರಾಜಕೀಯ ಸಂಸ್ಕೃತಿಯನ್ನು ರೂಢಿಸಿಕೊಂಡ ಪಕ್ಷಗಳು ಅಧಿಕಾರಕ್ಕೆ ಬರಬೇಕು, ಹೊಸ ರೀತಿಯ ರಾಜಕೀಯ ನಾಯಕತ್ವ ಬೆಳೆಯಬೇಕು. ಅಲ್ಲಿಯ ವರೆಗೆ ಹೆಚ್ಚೆಂದರೆ ತೇಪೆ ಹಚ್ಚುವ ಕೆಲಸ ನಡೆಯಬಹುದು.

ಲೇಖಕ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.