ADVERTISEMENT

ಸಂಪಾದಕೀಯ | ಜಮ್ಮು ಮತ್ತು ಕಾಶ್ಮೀರಮಾತುಕತೆಯ ಹೆಜ್ಜೆ ಸ್ವಾಗತಾರ್ಹ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 19:45 IST
Last Updated 23 ಜೂನ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳನ್ನು ಕೇಂದ್ರ ಸರ್ಕಾರವು ಮಾತುಕತೆಗೆ ಆಹ್ವಾನಿಸಿದೆ. ಜಮ್ಮು ಮತ್ತು ಕಾಶ್ಮೀರದ ಗುಪ್ಕಾರ್ ಕೂಟದ ಸದಸ್ಯ ಪಕ್ಷಗಳ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಯಲ್ಲಿ ನವದೆಹಲಿಯಲ್ಲಿ ಗುರುವಾರ (ಜೂನ್‌ 24) ಮಾತುಕತೆ ನಡೆಸಲಿದ್ದಾರೆ. ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಈ ಪ್ರದೇಶಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, 2019ರಲ್ಲಿ ಈ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರದಲ್ಲಿ ನಡೆಯುತ್ತಿರುವ ಅತ್ಯಂತ ಮಹತ್ವದ ಬೆಳವಣಿಗೆ ಇದು. ಕೇಂದ್ರ ಸರ್ಕಾರವು ಈ ಕಣಿವೆ ಪ್ರದೇಶದ ಪ್ರಮುಖ ರಾಜಕೀಯ ಪಕ್ಷಗಳನ್ನು ಮಾತುಕತೆಗೆ ಆಹ್ವಾನಿಸಿದ್ದು ಸ್ವಾಗತಾರ್ಹ ಕ್ರಮ.

ಅಲ್ಲಿನ ರಾಜಕೀಯ ಪಕ್ಷಗಳು ‘ನಾವು ಮಾತುಕತೆಗೆ ಬರುತ್ತೇವೆ’ ಎಂಬ ಸಂದೇಶವನ್ನು ಕೇಂದ್ರಕ್ಕೆ ರವಾನಿಸಿರುವುದು ಕೂಡ ಅಷ್ಟೇ ಸ್ವಾಗತಾರ್ಹ. ವಿಶೇಷ ಸ್ಥಾನಮಾನ ರದ್ದುಪಡಿಸುವುದರೊಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ‘ರಾಜ್ಯ’ದ ಸ್ಥಾನಮಾನವನ್ನೂ ಹಿಂದಕ್ಕೆ ಪಡೆಯಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪುನರ್‌ ವಿಂಗಡಣೆ ಕಾಯ್ದೆಯ ಮೂಲಕ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲಾಗಿದೆ. ಅಲ್ಲಿ ಜನ ರಿಂದ ಚುನಾಯಿತವಾದ ಸರ್ಕಾರ ಇಲ್ಲ. ಈಗ ಪ್ರಧಾನಿಯವರು ಅಲ್ಲಿನ ರಾಜಕೀಯ ಪಕ್ಷಗಳನ್ನು ಮಾತುಕತೆಗೆ ಆಹ್ವಾನಿಸಿರುವ ಕಾರಣ, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಬಹುದು, ಚುನಾವಣೆಗಳು ನಡೆದು ಅಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವೊಂದು ಆಡಳಿತದ ಚುಕ್ಕಾಣಿ ಹಿಡಿಯಬಹುದು ಎಂಬ ನಿರೀಕ್ಷೆ ಹೊಂದಬಹುದು.

ವಿಶೇಷ ಸ್ಥಾನಮಾನ ರದ್ದಾದ ನಂತರದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗಳಾದ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಅನೇಕ ರಾಜಕೀಯ ಮುಖಂಡ ರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಅಲ್ಲಿನ ರಾಜಕೀಯ ಪಕ್ಷಗಳ ದನಿಗೆ ಹೆಚ್ಚಿನ ಬೆಲೆ ಇರಲಿಲ್ಲ. ಅಷ್ಟೇ ಅಲ್ಲದೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವತ್ತಿಗೂ ಸ್ಥಗಿತಗೊಳ್ಳಬಾರದ ಕೆಲವು ಪ್ರಕ್ರಿಯೆಗಳು ಕೂಡ ಅಲ್ಲಿ ನಿಂತುಹೋಗಿದ್ದವು– ಇಂಟರ್ನೆಟ್‌ ಸಂಪರ್ಕ ಕೆಲವು ಕಾಲ ಇಲ್ಲವಾಗಿದ್ದ ಕಾರಣ ಮಾಧ್ಯಮ ಸ್ವಾತಂತ್ರ್ಯಕ್ಕೂ ಧಕ್ಕೆಯಾಗಿತ್ತು. ಇದರಿಂದಾಗಿ ಆ ಒಂದು ಭಾಗದ ಜನರ ದನಿ ದೇಶದ ಇತರ ಕಡೆಗಳ ಜನರಿಗೆ ಸರಿಯಾಗಿ ಕೇಳಿಸದಂತೆ ಆಗಿತ್ತು. ಇಂತಹ ಕ್ರಮಗಳು ಪ್ರಜಾತಂತ್ರ ವ್ಯವಸ್ಥೆಗೆ ಸರಿಹೊಂದುವುದಿಲ್ಲ. ಈ ಕ್ರಮಗಳ ಪರಿಣಾಮವಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾ ತಾಂತ್ರಿಕ ಪ್ರಕ್ರಿಯೆಗಳನ್ನು ಮತ್ತೆ ಆರಂಭಿಸಬೇಕು ಎಂಬ ಒತ್ತಡವು ಕೇಂದ್ರ ಸರ್ಕಾರದ ಮೇಲೆ ಹೆಚ್ಚುತ್ತಿತ್ತು.

ADVERTISEMENT

ಅದರಲ್ಲೂ ಮುಖ್ಯವಾಗಿ, ಅಮೆರಿಕದಲ್ಲಿ ಜೋ ಬೈಡೆನ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ, ಕಾಶ್ಮೀರದ ವಿಚಾರವಾಗಿ ಕೇಂದ್ರ ಸರ್ಕಾರವು ಹೆಚ್ಚಿನ ಒತ್ತಡ ಎದುರಿಸುತ್ತಿದೆ ಎಂಬ ವರದಿಗಳು ಇವೆ. ಬೈಡೆನ್ ನೇತೃತ್ವದ ಸರ್ಕಾರದ ಜೊತೆ ಒಳ್ಳೆಯ ಸಂಬಂಧವನ್ನು ಭಾರತ ಹೊಂದಬೇಕು ಎಂದಾದರೆ, ಕಾಶ್ಮೀರದಲ್ಲಿ ಪ್ರಜಾತಂತ್ರದ ಮರುಸ್ಥಾಪನೆ ಆಗಬೇಕು ಎಂಬ ವಿಶ್ಲೇಷಣೆ ಗಳು ಕೂಡ ಇವೆ. ಕಣಿವೆ ಪ್ರದೇಶದ ವಿವಿಧ ರಾಜಕೀಯ ಪಕ್ಷಗಳಿಗೆ ಮಾತುಕತೆಗೆ ಆಹ್ವಾನ ನೀಡುವ ಸಂದರ್ಭದಲ್ಲಿ ಪ್ರಧಾನಿಯವರ ಮನಸ್ಸಿನಲ್ಲಿ ಈ ಎಲ್ಲ ಲೆಕ್ಕಾಚಾರಗಳು ಇದ್ದಿರಬಹುದು.

ಗುರುವಾರ ನಡೆಯಲಿರುವ ಮಾತುಕತೆಯ ಸಂದರ್ಭದಲ್ಲಿ ಮಹತ್ವದ ಬದಲಾವಣೆಗಳು ಆಗಿಬಿಡುತ್ತವೆ ಎಂಬ ನಿರೀಕ್ಷೆ ಬೇಡ ಎನ್ನುವ ಸಂದೇಶವು ಕೇಂದ್ರ ಸರ್ಕಾರದ ಕಡೆಯಿಂದ ರವಾನೆ ಆಗಿದೆ. ಹೀಗಿದ್ದರೂ, ಕೇಂದ್ರ ಹಾಗೂ ಕಣಿವೆ ಪ್ರದೇಶದ ರಾಜಕೀಯ ಪಕ್ಷಗಳ ಜೊತೆ ಮಾತುಕತೆ ಶುರುವಾಗುತ್ತಿದೆ ಎಂಬುದೇ ದೊಡ್ಡ ಸಂಗತಿ. ಈ ಮಾತುಕತೆ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡುವುದಕ್ಕೆ ಸಂಬಂಧಿಸಿದ ವಿಷಯಗಳು ಪ್ರಸ್ತಾಪ ಆಗುವ ಸಾಧ್ಯತೆ ಇದೆ.

ಗುಪ್ಕಾರ್ ಕೂಟವು, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವುದಷ್ಟೇ ಅಲ್ಲದೆ, ಅಲ್ಲಿಗೆ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಮತ್ತೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರದ ಮುಂದೆ ಇರಿಸುವ ಸಾಧ್ಯತೆ ಇದೆ. ವಿಶೇಷ ಸ್ಥಾನಮಾನ ಕಲ್ಪಿಸಲು ಕೇಂದ್ರವು ಒಪ್ಪಿಕೊಳ್ಳುವ ಸಾಧ್ಯತೆ ತೀರಾ ಕ್ಷೀಣ. ಆದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ‘ರಾಜ್ಯ’ ಎಂಬ ಸ್ಥಾನವನ್ನು ಮತ್ತೆ ನೀಡುವುದಕ್ಕೆ ಕೇಂದ್ರಕ್ಕೆ ಆಕ್ಷೇಪವೇನೂ ಇರಲಿಕ್ಕಿಲ್ಲ. ಅಲ್ಲಿಗೆ ರಾಜ್ಯದ ಸ್ಥಾನಮಾನವನ್ನು ಮತ್ತೆ ನೀಡಲಾಗುವುದು ಎಂದು ಕೇಂದ್ರವೇ ಈ ಹಿಂದೆ ಭರವಸೆ ನೀಡಿತ್ತು. ಹಾಗಾಗಿ, ಈಗಿನ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ‘ಕಣಿವೆ ರಾಜ್ಯ’ ಎಂಬ ಪಟ್ಟವನ್ನು ಮತ್ತೆ ನೀಡುವ ವಿಚಾರವು ಕೇಂದ್ರಕ್ಕೂ ಗುಪ್ಕಾರ್ ಕೂಟಕ್ಕೂ ಒಪ್ಪಿಗೆ ಆಗುವ ಸಮಾನ ಅಂಶ ಆಗಬಹುದು.

ಕೇಂದ್ರವು ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳನ್ನು ಆರಂಭಿಸಿ, ಅಲ್ಲಿ ಚುನಾವಣೆಗಳನ್ನು ನಡೆಸಿ, ಆ ಚುನಾವಣೆಗಳಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಹಾಗೆ ಮಾಡಿದರೆ, ಅಲ್ಲಿನ ಜನರಿಗೆ ಕೂಡ ವ್ಯವಸ್ಥೆಯ ಬಗ್ಗೆ ಹೆಚ್ಚು ವಿಶ್ವಾಸ ಮೂಡುತ್ತದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತಿಪಾದಿಸುತ್ತಿದ್ದ ‘ಇನ್ಸಾನಿಯತ್, ಜಮೂರಿಯತ್, ಕಾಶ್ಮೀರಿಯತ್’ (ಮಾನವೀಯತೆ, ಪ್ರಜಾಪ್ರಭುತ್ವ,ಕಾಶ್ಮೀರದ ಸಾಂಸ್ಕೃತಿಕ ಪ್ರಜ್ಞೆ) ತತ್ವದ ಅಡಿಯಲ್ಲಿ ಕೇಂದ್ರವು ಮುಂದಡಿ ಇರಿಸಿದರೆ, ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.