ADVERTISEMENT

ಸಂಪಾದಕೀಯ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ ಭವಿಷ್ಯದ ಬೆಳವಣಿಗೆಗೆ ದಾರಿದೀಪ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 19:31 IST
Last Updated 6 ಸೆಪ್ಟೆಂಬರ್ 2021, 19:31 IST
ಸಂಪಾದಕೀಯ
ಸಂಪಾದಕೀಯ   

ಜಪಾನಿನ ಟೋಕಿಯೊದಲ್ಲಿ ಭಾರತದ ಕ್ರೀಡಾಶಕ್ತಿ ಮತ್ತೊಮ್ಮೆ ಪ್ರಜ್ವಲಿಸಿದೆ. ಭಾನುವಾರ ಮುಕ್ತಾಯ ವಾದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಂಗವಿಕಲ ಕ್ರೀಡಾಪಟುಗಳು ಅಮೋಘ ಪ್ರದರ್ಶನ ತೋರಿ ದ್ದಾರೆ. ಈ ಕೂಟದಲ್ಲಿ ದೇಶ 19 ಪದಕಗಳನ್ನು ಗೆದ್ದುಕೊಂಡಿರುವುದು ಐತಿಹಾಸಿಕ ಸಾಧನೆಯೇ ಸರಿ. ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಗೆದ್ದು 24ನೇ ಸ್ಥಾನ ಪಡೆದಿದೆ.

ಹೋದ ತಿಂಗಳು ಇಲ್ಲಿಯೇ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಒಂದು ಚಿನ್ನ ಸೇರಿದಂತೆ ಏಳು ಪದಕ ಜಯಿಸಿತ್ತು. ಅದೇ ಸ್ಫೂರ್ತಿಯ ಅಲೆಯಲ್ಲಿ ತೇಲಿದ ಪ್ಯಾರಾ ಅಥ್ಲೀಟ್‌ಗಳು ತಮ್ಮ ನೋವು, ಅವಮಾನ ವನ್ನೆಲ್ಲ ಮರೆತು ವಿಜೃಂಭಿಸಿದ್ದಾರೆ. ಈ ಪ್ಯಾರಾಲಿಂಪಿಕ್ಸ್‌ನಲ್ಲಿ ಕೆಲವರು ಪದಕ ಗೆದ್ದಿರಬಹುದು. ಆದರೆ ಇಲ್ಲಿ ಸೋತವರು ಯಾರೂ ಇಲ್ಲ ಎಂದೇ ಹೇಳಬೇಕು. ಪೋಲಿಯೊದಿಂದಲೋ ಅಪಘಾತ– ಅವಘಡಗಳಿಂದಲೋ ಅಂಗವೈಕಲ್ಯಕ್ಕೆ ತುತ್ತಾದಾಗ ತಮ್ಮ ಬದುಕೇ ಮುಗಿಯಿತು ಎಂದುಕೊಳ್ಳದೆ ಒಲಿಂಪಿಕ್ ಅಭಿಯಾನದ ಭಾಗವಾಗಿ ಬೆಳೆದಿರುವುದು ಅವರ ಇಚ್ಛಾಶಕ್ತಿಗೆ ನಿದರ್ಶನ.

162 ದೇಶಗಳ 4,400 ಅಥ್ಲೀಟ್‌ಗಳು ಸ್ಪರ್ಧಿಸಿದ್ದ ಈ ಕೂಟದಲ್ಲಿ 22 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆದವು. ಕೋವಿಡ್‌ ಸಾಂಕ್ರಾಮಿಕದ ಕಾರಣ ಕೆಲವು ನಿರ್ಬಂಧಗಳ ನಡುವೆ ನಡೆದ ಈ ಕೂಟದಲ್ಲಿ ಭಾರತದ ಸಾಧನೆ ನಿರೀಕ್ಷೆಗೂ ಮೀರಿದ್ದು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕು ಪದಕಗಳನ್ನು ಜಯಿಸಿದ್ದೇ ಇಲ್ಲಿಯವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಕೋವಿಡ್‌ ಕಾಲಘಟ್ಟದಲ್ಲಿ ಪ್ಯಾರಾ ಅಥ್ಲೀಟ್‌ಗಳಿಂದ ಮೂಡಿಬಂದಿರುವ ಸಾಧನೆಗೆ ಹೆಚ್ಚಿನ ತೂಕವಿದೆ. ಏಕೆಂದರೆ, ಭಾರತದಲ್ಲಿ ಕ್ರೀಡೆಗಳಿಗೆ ಸಿಕ್ಕಿರುವ ಆದ್ಯತೆ ಅಷ್ಟಕ್ಕಷ್ಟೆ.

ADVERTISEMENT

ವಿದ್ಯಾಭ್ಯಾಸ, ಉದ್ಯೋಗ ಗಳಿಕೆಯ ಕಸರತ್ತಿನಲ್ಲಿ ಕ್ರೀಡೆಗೆ ಕೊನೆಯ ಸ್ಥಾನ. ಅಂಥದ್ದರಲ್ಲಿ ಅಂಗವಿಕಲರಿಗೆ ವಿಶೇಷ ಸವಲತ್ತು ಕೊಟ್ಟು, ಮೂಲಸೌಕರ್ಯ ಕಲ್ಪಿಸಿ ಪ್ಯಾರಾ ಕ್ರೀಡೆಗಳನ್ನು ಬೆಳೆಸುವ ಮಾತು ದೂರವೇ ಉಳಿಯಿತು.

ಅಂಗವಿಕಲ ಕ್ರೀಡಾಪಟುಗಳನ್ನು ತರಬೇತುಗೊಳಿಸುವುದು ಮತ್ತು ನಿರ್ವಹಿಸುವುದು ಸುಲಭದ ಮಾತಲ್ಲ. ಅವರಿಗೆ ಸದಾ ವೈದ್ಯಕೀಯದ ನೆರವೂ ಅಗತ್ಯ. ಈ ಬಾರಿ ಪ್ಯಾರಾಲಿಂಪಿಕ್‌ಗೆ ತೆರಳಿದ್ದ ಬೆಂಗಳೂರಿನ ಈಜುಪಟು ನಿರಂಜನ್ ಮುಕುಂದನ್ 19 ಸಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಂತಹ ಪ್ಯಾರಾ ಅಥ್ಲೀಟ್‌ಗಳಿಗೆ ವಿಶೇಷ ಕಾಳಜಿ ತೋರುವುದು ಅತ್ಯವಶ್ಯ. ಅವರ ಪ್ರಯಾಣಕ್ಕಾಗಿ ವಿಶೇಷ ವ್ಯವಸ್ಥೆ, ಕಟ್ಟಡ, ಕ್ರೀಡಾಂಗಣಗಳಲ್ಲಿ ಹತ್ತಿ ಇಳಿಯಲು ರ‍್ಯಾಂಪ್‌, ವಿವಿಧ ಬಗೆಯ ಉಪಕರಣ, ಪೌಷ್ಟಿಕ ಆಹಾರ ಮತ್ತಿತರ ಸೌಲಭ್ಯಗಳು ಬೇಕು. ವಿಶೇಷ ತರಬೇತಿ ಪಡೆಯಲು, ವಿದೇಶಕ್ಕೆ ತೆರಳಲು ಆರ್ಥಿಕ ವ್ಯವಸ್ಥೆಯೂ ಆಗಬೇಕು.

ಸರ್ಕಾರದ ವಿವಿಧ ಇಲಾಖೆಗಳೇ ಸಲ್ಲಿಸಿರುವ ಆಡಿಟ್ ವರದಿಯ ಪ್ರಕಾರ, ಅಂಗವಿಕಲರ ಸ್ನೇಹಿಯಾದ ಕಟ್ಟಡಗಳಿರುವುದು ಬೆರಳೆಣಿಕೆಯಷ್ಟು ಮಾತ್ರ. ಇಂತಹ ಸನ್ನಿವೇಶದಲ್ಲಿ ಅವರು
ಕ್ರೀಡಾಪಟುಗಳಾಗಿ ಬೆಳೆಯುವುದು ದೊಡ್ಡ ಸಾಹಸವೇ ಸರಿ. ಈ ಸವಾಲುಗಳನ್ನು ಮೆಟ್ಟಿ ನಿಂತು
ಪ್ಯಾರಾಲಿಂಪಿಕ್‌ನಲ್ಲಿ ಭಾಗವಹಿಸಿದ ಭಾರತದ 54 ಅಥ್ಲೀಟ್‌ಗಳೂ ಅಭಿನಂದನೆಗೆ ಅರ್ಹರು.
ಅದರಲ್ಲೂ ಒಂದೂವರೆ ವರ್ಷದಿಂದ ಕೊರೊನಾ ಲಾಕ್‌ಡೌನ್‌ನಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ಥಗಿತವಾಗಿದ್ದವು. ಕ್ರೀಡಾಂಗಣಗಳ ಬಾಗಿಲು ಮುಚ್ಚಿದ್ದವು. ಸರಿಯಾದ ಅಭ್ಯಾಸವಿಲ್ಲದೇ, ಚಿಕಿತ್ಸೆ, ಔಷಧೋಪ ಚಾರಗಳ ಕೊರತೆ ಎದುರಿಸಬೇಕಾಗಿತ್ತು. ಈ ಎಲ್ಲ ‘ಇಲ್ಲ’ಗಳನ್ನು ಮೀರಿ ಸಾಧನೆ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಕೂಟದಲ್ಲಿ ಆರಂಭಿಸಲಾದ ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಭಗತ್, ಕೃಷ್ಣ ನಗಾರ್ ಚಿನ್ನ ಗೆದ್ದಿದ್ದಾರೆ. ಉತ್ತರಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಕನ್ನಡಿಗ ಸುಹಾಸ್ ಯತಿರಾಜ್‌ ಬೆಳ್ಳಿ ಮತ್ತು ಮನೋಜ್ ಸರ್ಕಾರ್ ಕಂಚಿನ ಪದಕ ಜಯಿಸಿದ್ದಾರೆ. 19 ವರ್ಷದ ಶೂಟರ್ ಅವನಿ ಲೇಖರ ಒಂದು ಚಿನ್ನ ಮತ್ತು ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಒಂದೇ ಕೂಟದಲ್ಲಿ ಎರಡು ಪದಕ ಜಯಿಸಿದ ಭಾರತದ ಪ್ರಥಮ ಮಹಿಳೆಯೆಂಬ ಹೆಗ್ಗಳಿಕೆ ಅವರದಾಗಿದೆ. ಜಾವೆಲಿನ್‌ನಲ್ಲಿ ಸುಮಿತ್ ಅಂಟಿಲ್, ಶೂಟಿಂಗ್‌ನಲ್ಲಿ ಮನೀಷ್ ನರ್ವಾಲ್ ಚಿನ್ನದ ಸಂಭ್ರಮ ಮೂಡಿಸಿದ್ದಾರೆ. ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದ ಪ್ರವೀಣಕುಮಾರ್, ಮಾರಿಯಪ್ಪನ್ ತಂಗವೇಲು ಅವರು ಸ್ವಲ್ಪದರಲ್ಲಿ ಮೊದಲ ಸ್ಥಾನ ತಪ್ಪಿಸಿಕೊಂಡಿದ್ದಾರೆ.

1972ರಲ್ಲಿ ಮೊದಲ ಬಾರಿ ಪದಕ ಜಯಿಸಿದ್ದ ಭಾರತ ನಂತರದ ಕೂಟಗಳಲ್ಲಿ ಏಳು–ಬೀಳುಗಳನ್ನು ಕಂಡಿದೆ. ಈ ಬಾರಿಯ ಸಾಧನೆಯಲ್ಲಿ ಭಾರತ ಪ್ಯಾರಾಲಿಂಪಿಕ್ ಸಮಿತಿ, ಕೇಂದ್ರ ಕ್ರೀಡಾ ಸಚಿವಾಲಯದ ಒಂದಿಷ್ಟು ನೆರವು ಇದೆ. ಆದರೆ ಅಷ್ಟು ಸಾಲದು. ಪ್ಯಾರಾ ಅಥ್ಲೀಟ್‌ಗಳಿಗಾಗಿಯೇ ಪ್ರತ್ಯೇಕ ಕ್ರೀಡಾವ್ಯವಸ್ಥೆ ಮಾಡಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಅಂಗವಿಕಲರು, ಮಾನಸಿಕವಾಗಿ ವಿಶೇಷ ಸಾಮರ್ಥ್ಯವುಳ್ಳವರನ್ನು ಸೇರಿಸಲು ಕ್ರೀಡೆಯು ಪ್ರಮುಖ ಮಾಧ್ಯಮವಾಗಬೇಕು. ಅನುಕಂಪದ ಬದಲು ಅವಕಾಶಗಳನ್ನು ಒದಗಿಸಬೇಕು. ಆಗ 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನವನ್ನು ಖಂಡಿತವಾಗಿಯೂ ನಿರೀಕ್ಷಿಸಬಹುದು. ಈ ಬಾರಿಯ ಒಲಿಂಪಿಕ್ಸ್‌ ಮತ್ತು
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯರ ಸಾಧನೆಯನ್ನು ದೇಶದಲ್ಲಿ ಭವಿಷ್ಯದ ಕ್ರೀಡಾ ಬೆಳವಣಿಗೆಗೆ ಮೆಟ್ಟಿಲನ್ನಾಗಿ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.