ADVERTISEMENT

ಒಳನೋಟ| ಹೆಚ್ಚುತ್ತಿರುವ ಹಾಲು ಉತ್ಪಾದನೆ

ಮಾರುಕಟ್ಟೆ ಕೊರತೆ, ಬೆಲೆ ಏರಿಕೆಯಿಂದ ಹೈನುಗಾರರು ಹೈರಾಣ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 20:09 IST
Last Updated 18 ಸೆಪ್ಟೆಂಬರ್ 2021, 20:09 IST
   

ಮಂಗಳೂರು: ಬೀಡಿ ಉದ್ಯಮ ಕುಸಿದ ಬಳಿಕ,ಹೈನುಗಾರಿಕೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅತಿ ಸಣ್ಣ ಮತ್ತು ಭೂ ರಹಿತ ಕೃಷಿಕರನ್ನು ಆರ್ಥಿಕ ಸಂಕಷ್ಟ ಕಾಲದಲ್ಲಿ ಕೈ ಹಿಡಿದಿದೆ.

ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡವರು ಹಾಗೂ ಹೊರ ದೇಶ, ರಾಜ್ಯ, ಜಿಲ್ಲೆಗಳಿಂದ ತವರಿಗೆ ಮರಳಿದ ಹೆಚ್ಚಿನವರು ಹೈನುಗಾರಿಕೆಯನ್ನು ಆಶ್ರಯಿಸಿದ್ದಾರೆ ಎಂಬುದಕ್ಕೆ ಹಾಲು ಉತ್ಪಾದನೆ ಶೇ 8ರಷ್ಟು ಹೆಚ್ಚಿರುವುದು ಸಾಕ್ಷಿ.

ಉಭಯ ಜಿಲ್ಲೆಗಳಲ್ಲಿ ಅಂದಾಜು 4 ಲಕ್ಷ ಜಾನುವಾರುಗಳಿದ್ದು (ದನ, ಎತ್ತು, ಎಮ್ಮೆ, ಕೋಣ ಇತ್ಯಾದಿ), ಈ ಪೈಕಿ 2.5 ಲಕ್ಷದಷ್ಟು ಹೈನುಗಾರಿಕೆಯಲ್ಲಿವೆ. ಒಟ್ಟು 1.44 ಲಕ್ಷ ಹೈನುಗಾರರಿದ್ದು, ಸುಮಾರು 60 ಸಾವಿರ ಮಂದಿ ಸಕ್ರಿಯರಾಗಿದ್ದಾರೆ. ಈ ಮೊದಲು ದಿನಕ್ಕೆ ಸುಮಾರು 5 ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರವಾಗುತ್ತಿದ್ದರೆ, ಈಚೆಗೆ ಅದು 5.40 ಲಕ್ಷ ಲೀಟರ್‌ಗೆ ಹೆಚ್ಚಿದೆ.

ADVERTISEMENT

ಆದರೆ, ಹಾಲು ಮತ್ತು ಅದರ ಉತ್ಪನ್ನಗಳ ಮಾರುಕಟ್ಟೆ ಕುಸಿತ ಹಾಗೂ ಪಶು ಆಹಾರಗಳ ಬೆಲೆ ಏರಿಕೆ ಮತ್ತು ಅಲಭ್ಯತೆಯು ಹೈನುಗಾರರನ್ನು ಸಂಕಷ್ಟಕ್ಕೆ ದೂಡಿದೆ. ಹಾಲಿನ ಉತ್ಪಾದನೆ ಹೆಚ್ಚಿದ ಕಾರಣಕ್ಕೆ ಹಾಲು ಉತ್ಪಾದಕರ ಸಂಘಗಳೂ ಹಾಲಿನ ಜಿಡ್ಡು (3.5), ಜಿಡ್ಡೇತರ ಘನ ಪದಾರ್ಥಗಳನ್ನೂ (8.5) ಕಟ್ಟುನಿಟ್ಟಾಗಿ ಪರಿಶೀಲಿಸಿಕೊಂಡು ಖರೀದಿಸುತ್ತಿವೆ.

‘ಒಂದು ಲೀಟರ್ ಹಾಲಿಗೆ ₹28 ಸಿಕ್ಕಿದರೆ, ಒಂದು ಕೆ.ಜಿ. ಹಿಂಡಿಗೆ ₹58 ಇದೆ. ಎರಡು ಲೀಟರ್‌ ಹಾಲು ಮಾರಿ, ಒಂದು ಕೆ.ಜಿ. ಹಿಂಡಿ ಖರೀದಿಸಬೇಕಾಗಿದೆ’ ಎಂದು ಹೈನುಗಾರ ರಾಜೇಶ್ ಹೇಳುತ್ತಾರೆ.

ಉಭಯ ಜಿಲ್ಲೆಗಳಲ್ಲಿ ಜನವಸತಿ ಚದುರಿದ ರೀತಿಯಲ್ಲಿದ್ದು, ಕುರಿ ಇತ್ಯಾದಿ ಸಾಕಾಣಿಕೆ ವಿರಳ. ಇದರಿಂದಾಗಿ ರೋಗ ಬಾಧೆ ಕಡಿಮೆ. ಆದರೆ, ಗರ್ಭಧಾರಣೆ, ಚಿಕಿತ್ಸೆ ಇತ್ಯಾದಿಗಳಿಗೆ ಪಶುವೈದ್ಯರ ಅವಲಂಬನೆಯು ತ್ರಾಸದಾಯಕವಾಗಿದೆ. ಶೇ 75ರಷ್ಟು ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ.

ಇವುಗಳನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.