ADVERTISEMENT

ವಿದೇಶದಲ್ಲಿ ಸರಣಿ ಆಡಲು ಹೆಚ್ಚು ಅಭ್ಯಾಸ ಪಂದ್ಯಗಳಿದ್ದರೆ ಸೂಕ್ತ: ನೂಶಿನ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 14:45 IST
Last Updated 22 ಸೆಪ್ಟೆಂಬರ್ 2021, 14:45 IST
ಭಾರತ ತಂಡದ ಮಿಥಾಲಿ ರಾಜ್ ಮತ್ತು ಸಹ ಆಟಗಾರ್ತಿಯರ ಅಭ್ಯಾಸ  –ಪಿಟಿಐ ಚಿತ್ರ
ಭಾರತ ತಂಡದ ಮಿಥಾಲಿ ರಾಜ್ ಮತ್ತು ಸಹ ಆಟಗಾರ್ತಿಯರ ಅಭ್ಯಾಸ  –ಪಿಟಿಐ ಚಿತ್ರ   

ಬೆಂಗಳೂರು: ವಿದೇಶದಲ್ಲಿ ಸರಣಿಗಳನ್ನು ಆಡಲು ಹೋಗುವ ಭಾರತದ ತಂಡಕ್ಕೆ ಹೆಚ್ಚು ಅಭ್ಯಾಸ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಬೇಕು. ಆದರೆ, ಕೊರೊನಾ ಕಾಲಘಟ್ಟದಲ್ಲಿ ಇದು ಸವಾಲಿನ ಕೆಲಸ. ಆದ್ದರಿಂದ ಆಟಗಾರ್ತಿಯರು ವಿದೇಶದ ವಾತಾವರಣದಲ್ಲಿ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ನೂಶಿನ್ ಅಲ್ ಖಾದೀರ್ ಹೇಳಿದರು.

ಬುಧವಾರ ಸೋನಿ ಸಿಕ್ಸ್‌ ವಾಹಿನಿಯು ಏರ್ಪಡಿಸಿದ್ದ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಅವರು, ‘ಬೇರೆ ದೇಶಗಳಲ್ಲಿ ಆಡಲು ತೆರಳಿದಾಗ ಅಭ್ಯಾಸ ಪಂದ್ಯಗಳಲ್ಲಿ ಆಡಿದಾಗ ಅಲ್ಲಿಯ ವಾತಾವರಣ, ಪಿಚ್‌ಗಳು ಮತ್ತು ಅಲ್ಲಿಯ ಆಟಗಾರ್ತಿಯರ ಕೌಶಲಗಳನ್ನು ಅರಿಯಲು ಅನುಕೂಲವಾಗುತ್ತದೆ’ ಎಂದರು.

‘ಭಾರತ–ಆಸ್ಟ್ರೇಲಿಯಾ ನಡುವಣ ಸರಣಿಯ ಮೊದಲ ಪಂದ್ಯದಲ್ಲಿ ಶಫಾಲಿ ವರ್ಮಾ ಅವರಿಗೆ ಬೌಲರ್‌ಗಳು ಶಾರ್ಟ್‌ ಪಿಚ್ ಎಸೆತಗಳನ್ನು ಹೆಚ್ಚು ಪ್ರಯೋಗಿಸಿದರು. ಶಫಾಲಿ ಅವರು ತಮ್ಮ ಬ್ಯಾಕ್‌ಫುಟ್‌ ಕೌಶಲವನ್ನು ವೃದ್ಧಿಸಿಕೊಂಡರೆ ಮುಂದಿನ ಪಂದ್ಯಗಳಲ್ಲಿ ಈ ಸವಾಲನ್ನು ಮೆಟ್ಟಿ ನಿಲ್ಲಬಲ್ಲರು. ಅವರಿಗೆ ಆ ಸಾಮರ್ಥ್ಯ ಮತ್ತು ಪ್ರತಿಭೆಗಳಿವೆ’ ಎಂದು ಮಾಜಿ ಆಫ್‌ಸ್ಪಿನ್ನರ್ ಮತ್ತು ಬ್ಯಾಟರ್ ನೂಶಿನ್ ಹೇಳಿದರು.

ADVERTISEMENT

‘ಮಿಥಾಲಿ ರಾಜ್ ಅವರ ಸ್ಟ್ರೈಕ್‌ ರೇಟ್ ಕಡಿಮೆ ಇದೆ ಎಂದು ಟೀಕಿಸುವುದು ಬಹಳ ಸುಲಭ. ಅದರೆ, ಪಂದ್ಯದ ಅಗತ್ಯಕ್ಕೆ ತಕ್ಕಂತೆ ಆಡುವುದು ಮುಖ್ಯ. ಅವರು ಬ್ಯಾಟಿಂಗ್ ಮಾಡಲು ಹೋದ ಸಂದರ್ಭದಲ್ಲಿ ವಿಕೆಟ್ ಪತನ ತಡೆದು ತಂಡದ ರನ್‌ ಗಳಿಕೆಯು ನಿರಂತರವಾಗಿರುವಂತೆ ನೋಡಿಕೊಳ್ಳುವ ಅಗತ್ಯವೂ ಇತ್ತು. ಅದನ್ನು ಗಮನಿಸಬೇಕು. ಮಿಥಾಲಿ ವಿಶ್ವದ ಅಗ್ರಮಾನ್ಯ ಬ್ಯಾಟರ್‌’ ಎಂದು 40 ವರ್ಷದ ನೂಶಿನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.