ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವುದೇ ಗುರಿ: ಮನ್‌ಪ್ರೀತ್‌

ಪಿಟಿಐ
Published 6 ಸೆಪ್ಟೆಂಬರ್ 2021, 11:24 IST
Last Updated 6 ಸೆಪ್ಟೆಂಬರ್ 2021, 11:24 IST
ಮನ್‌ಪ್ರೀತ್‌ ಸಿಂಗ್‌
ಮನ್‌ಪ್ರೀತ್‌ ಸಿಂಗ್‌   

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳುವುದು ಪ್ರಮುಖ ಗುರಿ ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವುದು ಖುಷಿ ತಂದಿದೆ ನಿಜ. ಆದರೆ ಆ ಗುಂಗಿನಲ್ಲೇ ಕಾಲ ಕಳೆಯಲು ಸಾಧ್ಯವಿಲ್ಲ. ಇನ್ನು ಸಾಧನೆಯ ಕಡೆಗೆ ಗಮನ ನೀಡಬೇಕಾಗಿದೆ. ಈಚಿನ ಕೆಲವು ತಿಂಗಳಲ್ಲಿ ನಾವೆಲ್ಲ ಖುಷಿಯ ಅಲೆಯಲ್ಲಿದ್ದೇವೆ. ಇಡೀ ದೇಶವೇ ತಂಡದ ಮೇಲೆ ಅಭಿಮಾನದ ಮಳೆ ಸುರಿಸಿದೆ. ಈಗ, 2022ರ ಋತುವಿನ ಬಗ್ಗೆ ಯೋಚಿಸಬೇಕಾಗಿದೆ’ ಎಂದು ಅವರು ಹೇಳಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಮೂಲಕ 41 ವರ್ಷಗಳ ಪದಕದ ಬರವನ್ನು ನೀಗಿಸಿತ್ತು. ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿಯನ್ನು 5–4ರಲ್ಲಿ ಭಾರತ ತಂಡ ಸೋಲಿಸಿ ಒಂದು ತಿಂಗಳು ಕಳೆದಿದೆ.

ADVERTISEMENT

ಮುಂದಿನ ವರ್ಷದ ಸೆಪ್ಟೆಂಬರ್ 10ರಿಂದ 25ರ ವರೆಗೆ ಚೀನಾದ ಜೆಜಿಯಾಂಗ್‌ನಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದೆ. ಆ ಕೂಟದಲ್ಲಿ ಚಿನ್ನದ ಪದಕ ಗೆದ್ದರೆ ತಂಡ ಮುಂದಿನ ಒಲಿಂಪಿಕ್ಸ್‌ಗೆ ನೇರ ಪ್ರವೇಶದ ಅವಕಾಶ ಗಿಟ್ಟಿಸಿಕೊಳ್ಳಲಿದೆ.

‘ಕಳೆದ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದರಿಂದ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಳಿಸಲು ಆಗಲಿಲ್ಲ. ಭಾರತದಲ್ಲಿ ನಡೆದ ಎಫ್‌ಐಎಚ್‌ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿದ್ದರಿಂದ ಟೋಕಿಯೊ ಟಿಕೆಟ್ ಲಭಿಸಿತ್ತು. ಆದರೆ ಪ್ರತಿ ಬಾರಿ ಹೀಗೆಯೇ ನಡೆಯುತ್ತದೆ ಎನ್ನಲಾಗದು. ಆದ್ದರಿಂದ ಈ ಬಾರಿ ಭಿನ್ನವಾಗಿ ಯೋಚಿಸಬೇಕಾಗಿದೆ’ ಎಂದು ಮನ್‌ಪ್ರೀತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.