ADVERTISEMENT

ಫ್ರೆಂಚ್ ಓಪನ್‌ನಲ್ಲಿ ಇತಿಹಾಸ ಬರೆದ ಜೊಕೊವಿಚ್, ನಡಾಲ್‌ಗೆ ಸೋಲಿನ ಶಾಕ್

ಪಿಟಿಐ
Published 12 ಜೂನ್ 2021, 1:24 IST
Last Updated 12 ಜೂನ್ 2021, 1:24 IST
ಫ್ರೆಂಚ್ ಓಪನ್‌ನಲ್ಲಿ ಇತಿಹಾಸ ಬರೆದ ಜೊಕೊವಿಚ್, ನಡಾಲ್‌ಗೆ ಗೇಟ್‌ಪಾಸ್
ಫ್ರೆಂಚ್ ಓಪನ್‌ನಲ್ಲಿ ಇತಿಹಾಸ ಬರೆದ ಜೊಕೊವಿಚ್, ನಡಾಲ್‌ಗೆ ಗೇಟ್‌ಪಾಸ್   

ಪ್ಯಾರಿಸ್: 13 ಬಾರಿಯ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಸರದಾರ ಹಾಗೂ ಹಾಲಿ ಚಾಂಪಿಯನ್, 'ಕಿಂಗ್ ಆಫ್ ಕ್ಲೇ ಕೋರ್ಟ್' ಖ್ಯಾತಿಯ ಸ್ಪೇನ್‌ನ ರಫೆಲ್ ನಡಾಲ್ ಅವರನ್ನೇ ಮಣಿಸಿರುವ ವಿಶ್ವದ ನಂ.1 ರ‍್ಯಾಂಕ್‌ನ ಸರ್ಬಿಯಾದ ನೊವಾಕ್ ಜೊಕೊವಿಚ್ ಪ್ರತಿಷ್ಠಿತ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರ ನಡೆದ ಜಿದ್ದಾಜಿದ್ದಿನ ಸೆಮಿಫೈನಲ್ ಮುಖಾಮುಖಿಯಲ್ಲಿ ಅಗ್ರ ಶ್ರೇಯಾಂಕಿತ ಜೊಕೊವಿಚ್ ಅವರು 3-6, 6-3, 7-6 (7/4), 6-2ರ ಸೆಟ್ ಅಂತರದ ಕಠಿಣ ಹೋರಾಟದಲ್ಲಿ ಮೂರನೇ ಶ್ರೇಯಾಂಕಿತ ನಡಾಲ್ ವಿರುದ್ಧ ಗೆದ್ದು ಬೀಗಿದರು.

ಈ ಮೂಲಕ ಫ್ರೆಂಚ್ ಓಪನ್ ಇತಿಹಾಸದಲ್ಲಿ ಅಂತಿಮ ನಾಲ್ಕರ ಹಂತದಲ್ಲಿ ನಡಾಲ್ ಅವರನ್ನು ಮಣಿಸಿದ ಮೊದಲ ಆಟಗಾರ ಎಂದೆನಿಸಿದರು. ಅತ್ತ 16 ವರ್ಷಗಳ ತಮ್ಮ ಕ್ರೀಡಾ ಜೀವನದಲ್ಲಿ ಆವೆ ಮಣ್ಣಿನಲ್ಲಿ ಆಡಿರುವ 108 ಪಂದ್ಯಗಳಲ್ಲಿ ಕೇವಲ ಮೂರನೇ ಬಾರಿಗೆ ಮಾತ್ರ ನಡಾಲ್ ಸೋಲಿಗೆ ಶರಣಾಗಿದ್ದಾರೆ. ಇಲ್ಲಿ 14ನೇ ಬಾರಿಗೆ ನಡಾಲ್ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ ಸಾಧನೆ ಮಾಡಿದ್ದರು.

ನೊವಾಕ್ ಜೊಕೊವಿಚ್ ಗೆಲುವಿನ ಸಂಭ್ರಮ

19ನೇ ಗ್ರ್ಯಾನ್‌ಸ್ಲಾಮ್ ಸೇರಿದಂತೆ ಎರಡನೇ ಫ್ರೆಂಚ್ ಓಪನ್ ಕಿರೀಟದ ಮೇಲೆ ಜೊಕೊವಿಚ್ ಕಣ್ಣಿಟ್ಟಿದ್ದಾರೆ. ಈ ಬಾರಿ ಚಾಂಪಿಯನ್ ಆದರೆ ಎಲ್ಲ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಜೊಕೊವಿಕ್ ಒಂದು ಬಾರಿ ಮಾತ್ರ (2016ರಲ್ಲಿ) ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.

ಇಲ್ಲಿ ಗಮನಾರ್ಹ ಅಂಶವೆಂದರೆ 2015ರಲ್ಲಿ ನಡೆದ ಟೂರ್ನಿಯಲ್ಲೂ ನಡಾಲ್ ಅವರನ್ನು ಜೊಕೊವಿಚ್ ಮಣಿಸಿದ್ದರು. ಆದರೆ ಕಳೆದ ವರ್ಷ ಫೈನಲ್‌ನಲ್ಲಿ ಸೋಲನುಭವಿಸಿ ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು. ಒಟ್ಟಿನಲ್ಲಿ ಫ್ರೆಂಚ್‌ ಓಪನ್‌ನಲ್ಲಿ ಎಂಟು ಬಾರಿ ನಡಾಲ್ ಎದುರಿಸಿರುವ ಜೊಕೊವಿಚ್ ಎರಡನೇ ಗೆಲುವು ದಾಖಲಿಸಿದ್ದಾರೆ. ಆದರೆ ಕಳೆದ ವರ್ಷವೂ ಸೇರಿದಂತೆ ಮೂರು ಬಾರಿ ಫೈನಲ್‌ನಲ್ಲಿ ಸೋಲನುಭಸಿದ್ದರು.

ಈಗ 29ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಫೈನಲ್ ಪ್ರವೇಶಿಸಿರುವ ಜೊಕೊವಿಚ್ ಅವರು ಗ್ರೀಸ್‌ನ 5ನೇ ಶ್ರೇಯಾಂಕಿತ ಸ್ಟೆಫಾನೊಸ್ ಸಿಟ್ಸಿಪಾಸ್ ಸವಾಲನ್ನು ಎದುರಿಸಲಿದ್ದಾರೆ. ಮಗದೊಂದು ಸೆಮೀಸ್ ಹೋರಾಟದಲ್ಲಿ ಜರ್ಮನಿಯ ಆರನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 6-3, 6-3, 4-6, 4-6, 6-3ರ ಅಂತರದಲ್ಲಿ ಸ್ಟೆಫಾನೊಸ್ ಗೆಲುವು ದಾಖಲಿಸಿದ್ದರು.

35 ವರ್ಷದ ನಡಾಲ್ ಅವರ 21ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ. ಅಲ್ಲದೆ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಜತೆಗೆ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಹಂಚಿಕೊಂಡಿದ್ದಾರೆ. ಗಾಯದ ಆತಂಕ ಹಿನ್ನೆಲೆಯಲ್ಲಿ ನಾಲ್ಕನೇ ಸುತ್ತಿನಿಂದಲೇ ಫೆಡರರ್ ಹಿಂದೆ ಸರಿದಿದ್ದರು.

ನಡಾಲ್‌ಗೆ ಸೋಲಿನ ಆಘಾತ

'ರಫಾ ವಿರುದ್ಧ ಆಡುವುದು ವಿಶೇಷ ಸವಲತ್ತು ಎಂದು ಉಲ್ಲೇಖಿಸಿರುವ ಜೊಕೊವಿಚ್, ಅವರನ್ನು ಎದುರಿಸಲು 'ಮೌಂಟ್ ಎವರೆಸ್ಟ್' ಶಿಖರವನ್ನೇ ಏರಬೇಕು. ಇದು ಪ್ಯಾರಿಸ್‌ನಲ್ಲಿ ನಡೆದ ನನ್ನ ಜೀವನಶ್ರೇಷ್ಠ ಪಂದ್ಯವಾಗಿದೆ' ಎಂದು ಹೇಳಿದ್ದಾರೆ. ಅತ್ತ ನಡಾಲ್ 'ಇದು ತನ್ನಉತ್ತಮ ಪಂದ್ಯವಾಗಿರಲಿಲ್ಲ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.