ADVERTISEMENT

ದೆಹಲಿ: ಪ್ಲಾಸ್ಮಾ ಚಿಕಿತ್ಸೆ ಬಳಿಕ ಚೇತರಿಸಿದ ಕೋವಿಡ್-19 ರೋಗಿ

ಪಿಟಿಐ
Published 21 ಏಪ್ರಿಲ್ 2020, 13:02 IST
Last Updated 21 ಏಪ್ರಿಲ್ 2020, 13:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ 49 ವರ್ಷದ ಕೋವಿಡ್-‌19 ರೋಗಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಏಪ್ರಿಲ್ 4ರಂದು ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಜ್ವರ ಹಾಗೂ ಉಸಿರಾಟದ ಸಮಸ್ಯೆಗಳು ಬಳಲುತ್ತಿದ್ದ ಅವರನ್ನು ಅಂದೇ ಆಸ್ಪತ್ರೆಯ ಕೋವಿಡ್‌ ವಿಭಾಗಕ್ಕೆ ದಾಖಲಿಸಲಾಗಿತ್ತು. ಕೆಲವೇ ದಿನಗಳಲ್ಲಿ ಆರೋಗ್ಯ ಗಂಭೀರವಾಗಿದ್ದರಿಂದ ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಲಾಗಿತ್ತು.

ʼಕೋವಿಡ್-‌19 ರೋಗಿಗೆ ಈ ರೀತಿಯ ಚಿಕಿತ್ಸೆ ನೀಡಿರುವುದು ಭಾರತದಲ್ಲಿ ಇದೇ ಮೊದಲಾಗಿದೆ. 49 ವರ್ಷದ ರೋಗಿಯ ಆರೋಗ್ಯದಲ್ಲಿ ಚೇರಿಕೆ ಕಂಡುಬಂದಿದ್ದು, ಕೃತಕ ಉಸಿರಾಟ ವ್ಯವಸ್ಥೆ ತೆಗೆದುಹಾಕಲಾಗಿದೆʼ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಈ ವ್ಯಕ್ತಿಯ ವಿಷಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ಉಪಯುಕ್ತವಾಗಿದೆ ಎನ್ನುವುದು ಸಂತಸ. ಈ ಸವಾಲಿನ ಸಂದರ್ಭದಲ್ಲಿ ಹೊಸ ಚಿಕಿತ್ಸಾ ವಿಧಾನ ಕಂಡುಕೊಳ್ಳುವಲ್ಲಿ ಇದು ಆಶಾದಾಯಕ ಬೆಳವಣಿಗೆ. ಆದರೆ ಈ ಚಿಕಿತ್ಸೆ ಜಾದೂ ಮಾಡುವುದಿಲ್ಲ ಎನ್ನುವುದನ್ನು ನಾವು ಅರಿಯುವುದು ಮುಖ್ಯ. ಕೇವಲ ಈ ಚಿಕಿತ್ಸೆಯಿಂದಲೇ ವ್ಯಕ್ತಿಯ ಆರೋಗ್ಯ ಸುಧಾರಿಸಿದ್ದು ಎಂದು ಹೇಳಲಾಗುವುದಿಲ್ಲ. ಕೋವಿಡ್‌-19 ಚಿಕಿತ್ಸೆಯ ಇತರೆ ಮಾನದಂಡಗಳನ್ನು ಸಹ ಅನುಸರಿಸಲಾಗಿದೆʼ ಎಂದು ಆಸ್ಪತ್ರೆಯ ಗ್ರೂಪ್‌ ಮೆಡಿಕಲ್‌ ಡೈರೆಕ್ಟರ್ ಡಾ ಸಂದೀಪ್‌ ಬುಧಿರಾಜಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.