ADVERTISEMENT

ಅರಸು ಜಿಲ್ಲೆಗೆ ಅನರ್ಹ ಶಾಸಕ ವಿಶ್ವನಾಥ್ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 10:35 IST
Last Updated 1 ಡಿಸೆಂಬರ್ 2019, 10:35 IST

ಬೆಂಗಳೂರು: ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರು ನಗರವನ್ನು ಕೇಂದ್ರೀಕರಿಸಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹೆಸರಿನಲ್ಲಿ ಪ್ರತ್ಯೇಕ ಜಿಲ್ಲೆ ರಚಿಸುವಂತೆ ಅನರ್ಹ ಶಾಸಕ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹೊಸ ಜಿಲ್ಲೆ ರಚನೆಗೆ ಬೇಡಿಕೆ ಸಲ್ಲಿಸಿದ್ದಾರೆ. ಇದರ ವ್ಯಾಪ್ತಿಗೆ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್.ನಗರ ಹಾಗೂ ಹೊಸದಾಗಿ ರಚನೆಯಾಗಿರುವ ಸರಗೂರು, ಸಾಲಿಗ್ರಾಮ ತಾಲ್ಲೂಕುಗಳನ್ನು ಸೇರಿಸುವಂತೆ ಮನವಿ ಮಾಡಿದ್ದಾರೆ.

‘ಇದು ಹಳೆಯ ಪ್ರಸ್ತಾಪ. ಈಗ ಮನವಿ ಸಲ್ಲಿಸಿದ್ದು, ಮತ್ತೊಮ್ಮೆ ಮುಖ್ಯಮಂತ್ರಿಬಳಿ ಸಮಾಲೋಚನೆ ನಡೆಸಿದ್ದೇನೆ. ಈ ಸಂಬಂಧ ಆರು ತಾಲ್ಲೂಕುಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ನಾಗರಿಕರ ಜತೆ ಚರ್ಚಿಸಲಾಗುವುದು’ ಎಂದು ವಿಶ್ವನಾಥ್ ತಿಳಿಸಿದ್ದಾರೆ.

ADVERTISEMENT

ಹೊಸ ಜಿಲ್ಲೆಗೆ ಬೇಡಿಕೆ ಸಲ್ಲಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ– ವಿರೋಧ ಚರ್ಚೆಗಳು ಆರಂಭವಾಗಿವೆ. ಈಗ ಪ್ರಸ್ತಾಪಿಸಿರುವ ತಾಲ್ಲೂಕುಗಳನ್ನು ಹೊಸ ಜಿಲ್ಲೆಗೆ ಸೇರಿಸಿದರೆ ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಕೇವಲ ಮೂರು ತಾಲ್ಲೂಕುಗಳು (ಮೈಸೂರು, ನಂಜನಗೂಡು, ತಿ.ನರಸೀಪುರ) ಉಳಿದುಕೊಳ್ಳುತ್ತವೆ. ಮೂರು ತಾಲ್ಲೂಕುಗಳಿಗೆ ಒಂದು ಜಿಲ್ಲೆ ಬೇಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಮೈಸೂರು ಜಿಲ್ಲೆಯಿಂದ ಚಾಮರಾಜನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿ ದಶಕವೇ ಕಳೆದಿದ್ದರೂ ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿ ಕಂಡಿಲ್ಲ. ಈಗಲೂ ತೀರ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ. ಮೂರ‍್ನಾಲ್ಕು ತಾಲ್ಲೂಕು ಕೇಂದ್ರಗಳಿಗೆ ಒಂದು ಜಿಲ್ಲಾ ಕೇಂದ್ರ ಮಾಡಿದರೆ ಅಭಿವೃದ್ಧಿಗಿಂತ ಆಡಳಿತ ವೆಚ್ಚವೇ ಅಧಿಕವಾಗುತ್ತದೆ. ಹಾಗಾಗಿ ಮೈಸೂರು ಜಿಲ್ಲೆಯನ್ನು ವಿಭಜಿಸಬಾರದು ಎಂದು ಆಗ್ರಹಿಸಿದ್ದಾರೆ.

ಬೇಡಿಕೆ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆಗೆ ಆರಂಭವಾದ ಬೇಡಿಕೆ ಇತರೆಡೆಗೂ ವಿಸ್ತರಿಸಿದೆ. ಮೊದಲಿಗೆ ಬೆಳಗಾವಿ ಜಿಲ್ಲೆಯನ್ನು ಪ್ರತ್ಯೇಕಿಸಬೇಕು ಎಂಬ ಒತ್ತಡ ಜೋರಾಗಿದೆ. ತುಮಕೂರು ಜಿಲ್ಲೆ ವಿಭಜನೆಗೂ ಬೇಡಿಕೆ ಆರಂಭವಾಗಿದೆ. ಈ ಪಟ್ಟಿಗೆ ಅರಸು ಜಿಲ್ಲೆ (ಹುಣಸೂರು) ಹೊಸದಾಗಿ ಸೇರಿಕೊಂಡಿದೆ.

‘ಚುನಾವಣೆ ಗಿಮಿಕ್’
ಹುಣಸೂರು ಜಿಲ್ಲೆ ರಚನೆಗೆ ವಿಶ್ವನಾಥ್ ಒತ್ತಾಯಿಸುತ್ತಿರುವುದು ಚುನಾವಣೆ ಗಿಮಿಕ್. ಒಮ್ಮೆಲೆ ಜಿಲ್ಲೆ ರಚನೆಗೆ ತೀರ್ಮಾನಿಸಬಾರದು. ಅಲ್ಲಿನ ಜನಪ್ರತಿನಿಧಿಗಳು, ಮುಖಂಡರು, ಜನರ ಅಭಿಪ್ರಾಯ ಪಡೆದು ನಿರ್ಧರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ವಿಜಯನಗರ ಜಿಲ್ಲೆ ರಚನೆ ವಿಚಾರದಲ್ಲೂ ರಾಜಕಾರಣ ನಡೆದಿದೆ. ಇಂತಹ ವಿಚಾರದಲ್ಲಿ ರಾಜಕಾರಣ ಬಿಟ್ಟು ವಾಸ್ತವದಿಂದ ನೋಡಬೇಕು ಎಂದು ಒತ್ತಾಯಿಸಿದರು.

‘30 ಕಿ.ಮೀ.ಗೆ ಒಂದು ಜಿಲ್ಲೆ ರಚಿಸಲು ಸಾಧ್ಯವೆ?’
ಮೈಸೂರು: ಮೈಸೂರು ಜಿಲ್ಲೆ ವಿಭಜನೆ ಪ್ರಸ್ತಾಪಕ್ಕೆ ಕಾಂಗ್ರೆಸ್‌, ಜೆಡಿಎಸ್ ನಾಯಕರು ಸೋಮವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

‘30 ಕಿ.ಮೀ.ಗೆ ಒಂದು ಜಿಲ್ಲೆ ರಚಿಸಲು ಸಾಧ್ಯವೇ? ಮೈಸೂರಿನಿಂದ ಕೆಲವೇ ಕಿ.ಮೀ. ದೂರದಲ್ಲಿ ಹುಣಸೂರು ಪಟ್ಟಣವಿದೆ. ರಾಜಕೀಯ ಉದ್ದೇಶದಿಂದ ಕೆಲ ನಾಯಕರು ಹುಣಸೂರು ಜಿಲ್ಲೆ ರೂಪಿಸುವಂತೆ ಒತ್ತಡ ಸೃಷ್ಟಿಸುತ್ತಿದ್ದಾರೆ. ಮೂರು ತಾಲ್ಲೂಕುಗಳಿಗೆ ಒಂದು ಜಿಲ್ಲೆ ರಚಿಸಲು ಸಾಧ್ಯವೇ? ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ, ವೈಜ್ಞಾನಿಕವೂ ಅಲ್ಲ. ಇದಕ್ಕೆ ಸರ್ಕಾರ ಸ್ಪಂದಿಸಕೂಡದು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿ.ನರಸೀಪುರದಲ್ಲಿ ಹೇಳಿದರು.

ವಿರೋಧವಿದೆ: ‘ಹುಣಸೂರು ಜಿಲ್ಲೆ ರಚನೆಗೆ ವಿರೋಧವಿದೆ. ಕೆ.ಆರ್.ನಗರ, ಸಾಲಿಗ್ರಾಮ ಸೇರ್ಪಡೆಗೆ ಸಹಮತವಿಲ್ಲ. ರಾಜಕೀಯ ಗಿಮಿಕ್‌ಗಾಗಿ ಜಿಲ್ಲೆ ರಚನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಸುತರಾಂ ಒಪ್ಪಲ್ಲ. ನಮ್ಮ ತಾಲ್ಲೂಕಿನ ಜನರು ಒಲವು ತೋರಲ್ಲ’ ಎಂದು ಕೆ.ಆರ್‌.ನಗರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್‌ ತಿಳಿಸಿದರು.

‘ಜಿಲ್ಲೆಯ ವಿಭಜನೆಗೂ ಮುನ್ನ ಜನರು,
ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.