ಇದು ಪಲಾವ್ ಸೊಪ್ಪಿನ ಗಿಡ. ಇದನ್ನು ಬಾಸ್ಮತಿ ಸೊಪ್ಪು ಎಂದೂ ಕರೆಯುತ್ತಾರೆ. ಬಾಸ್ಮತಿ ಅಕ್ಕಿಯ ಪರಿಮಳ ಈ ಗಿಡದ ಎಲೆಗಳಿಗೆ ಇರುವುದರಿಂದ ಆ ಹೆಸರು ಬಂದಿದೆ. ಈ ಗಿಡಗಳು ಹೆಚ್ಚು ತೇವಾಂಶವಿರುವ ಭೂಮಿಯಲ್ಲಿ ದಟ್ಟ ಪೊದೆಯಂತೆ ಬೆಳೆಯುತ್ತದೆ.
ತೆಂಗಿನ ಗರಿಗಳನ್ನು ಹೋಲುವ ಪಲಾವ್ ಸೊಪ್ಪಿನ ಗಿಡದ ಎಲೆಗಳನ್ನು ಪಲಾವ್, ಘೀರೈಸ್, ವಾಂಗೀಬಾತ್, ಪಾಯಸ, ಮತ್ತಿತರ ಖಾದ್ಯ ಪದಾರ್ಥಗಳಲ್ಲಿ ಪರಿಮಳಕ್ಕಾಗಿ ಬಳಸುತ್ತಾರೆ. ಎಲೆಗಳು ಘಂ ಎಂಬ ಪರಿಮಳ ಹೊಂದಿರುವುದರಿಂದ ಈ ಖಾದ್ಯಗಳ ವಾಸನೆ ಹೆಚ್ಚುತ್ತದೆ.
ತಾಯಿ ಗಿಡದ ಬುಡದಲ್ಲಿ ಹುಟ್ಟಿಕೊಂಡ ಸಣ್ಣ ದಂಟುಗಳನ್ನು ಕಿತ್ತು ನೆಟ್ಟರೂ ಅವು ಬೆಳೆಯುತ್ತವೆ. ಸಂತೆಗಳಲ್ಲಿ ಈ ಸೊಪ್ಪನ್ನು ಮಾರಾಟ ಮಾಡಬಹುದು. ಬೇಸಿಗೆಯಲ್ಲಿ ಈ ಗಿಡದ ಎಲೆಗಳನ್ನು ನೀರಿನ ಡ್ರಂ ಹಾಗೂ ಹೂಜಿಗಳಲ್ಲಿ ಇಟ್ಟರೆ ನೀರಿಗೆ ವಿಶಿಷ್ಟ ಪರಿಮಳ ಮತ್ತು ರುಚಿ ಬರುತ್ತದೆ.
ಪಲಾವ್ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಿ ಮನೆ ಅಂಗಳದಲ್ಲಿ ಇಟ್ಟರೆ ಕೈತೋಟದ ಅಂದ ಹೆಚ್ಚುತ್ತದೆ. ಪಲಾವ್ ಗಿಡಗಳಿಗೆ ರೋಗ ಹಾಗೂ ಕೀಟಗಳ ಬಾಧೆ ಕಡಿಮೆ. ಗಿಡಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆಸಬಹುದು. ದಿನಕ್ಕೆ ಸ್ವಲ್ಪ ನೀರು ಹಾಕಿದರೂ ಸಾಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.