ADVERTISEMENT

ಹೊಸ ನೆಲದೊಳು ಹಸನು ಬಾಳೆ

ಗಾಣಧಾಳು ಶ್ರೀಕಂಠ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

`ಆ ದಿನ ಅಂಗಡಿಯವನು ಒಂದು ಬಾಳೆ ಹಣ್ಣಿಗೆ 15 ರೂಪಾಯಿ ಅಂತ ಹೇಳಿದ್ದೇ ಇವತ್ತು ನನ್ನ ಜಮೀನಿನಲ್ಲಿ ನಂಜನಗೂಡು ರಸಬಾಳೆ ತಳಿ ಬೆಳೆಯಲು ಕಾರಣವಾಯ್ತು. ಈ ತಳಿಯನ್ನೂ ಮಧ್ಯ ಕರ್ನಾಟಕದ ಮಣ್ಣಿಗೆ ಒಗ್ಗಿಸಬಹುದು ಎಂದು ತೋರಿಸಲು ಸಾಧ್ಯವಾಯ್ತು'
- ಮೂರೂವರೆ ಎಕರೆಯಲ್ಲಿ ಬೆಳೆದಿರುವ ಒಂದೂವರೆ ಸಾವಿರ ಬಾಳೆ ಗಿಡಗಳ ನಡುವೆ ಹೆಜ್ಜೆ ಹಾಕುತ್ತಾ, ಗಿಡದಲ್ಲಿ ತೊನೆದಾಡುತ್ತಿದ್ದ ಗೊನೆಗಳನ್ನು ತೋರಿಸುತ್ತಾ, ನಂಜನಗೂಡಿನ ರಸಬಾಳೆಯ ತಳಿಯನ್ನು ಭರಮಸಾಗರದ ತನ್ನ ತೋಟಕ್ಕೆ ಕರೆತಂದ ಕಥೆಯನ್ನು ಶಾಂತವೀರಪ್ಪ ಬಿಚ್ಚಿಟ್ಟ ಬಗೆ ಇದು. `ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಹೋಗಿದ್ದೆ. ಪೆಟ್ಟಿಗೆ ಅಂಗಡಿಯೊಂದರ್ಲ್ಲಲಿ ಬಾಳೆ ಹಣ್ಣು ಖರೀದಿಸಿ ಸೇವಿಸಿದೆ. ರುಚಿಯಾಗಿದ್ದ ಬಾಳೆಹಣ್ಣಿಗೆ ಅಂಗಡಿಯಾತ ಹೇಳಿದ ಬೆಲೆ ಕೇಳಿ ಅವಕ್ಕಾದೆ. ಒಂದು ಬಾಳೆಹಣ್ಣಿಗೆ ಆತ ಹೇಳಿದ ಬೆಲೆ 15ರೂಪಾಯಿ! ಅವನನ್ನು ಪ್ರಶ್ನಿಸಿದಾಗ  `ಸ್ವಾಮಿ ಇದು ನಂಜನಗೂಡಿನ ರಸಬಾಳೆ. ಸಿಗುವುದು ಕಷ್ಟ. ಅದಕ್ಕೆ ಇಷ್ಟು ದುಬಾರಿ' ಎಂದ. ಅಂದೇ ಈ ಹಣ್ಣು ಬೆಳೆಯುವ ತೀರ್ಮಾನಕ್ಕೆ ಬಂದುಬಿಟ್ಟೆ' ಎಂದರು ಶಾಂತವೀರಪ್ಪ.

ಹೀಗೆ ನಿಂತಲ್ಲೇ ರಸಬಾಳೆ ಬೆಳೆಯುವ ನಿರ್ಧಾರ ಮಾಡಿದ ಅವರು ಆ ಕ್ಷಣದಲ್ಲೇ ತಳಿ ಖರೀದಿಗಾಗಿ ನಂಜನಗೂಡಿಗೆ ಹೊರಟರು. ನಂಜನಗೂಡಿನ ರೈತರೆಲ್ಲ `ಯಾಕ್ರಿ ರೀ ತಳಿ ಬೆಳೆದು ಕೈ ಸುಟ್ಟುಕೊಳ್ತೀರಿ. ಇಲ್ಲೇ ಬೆಳೆಯೋದಿಲ್ಲ, ಇನ್ನೂ ಅಲ್ಲಿ ಬೆಳೆಯುತ್ತದೆಯೇ' ಎಂದು ಅವರ ಉತ್ಸಾಹಕ್ಕೆ ತಣ್ಣೀರು ಎರಚುವವರೇ ಹೆಚ್ಚಾದರು. ತಜ್ಞರು ಕೂಡ `ಇಲ್ಲಿ ಬೆಳೆಯುವ ಈ ತಳಿಗೆ ರೋಗ ಅಧಿಕ. ಇದೇ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಖರೀದಿಸಿ' ಎಂದು ಸಲಹೆ ಕೊಟ್ಟರು. ಅಲ್ಲಿಂದಲೇ ಬೆಂಗಳೂರಿನ ಕೃಷಿ ವಿವಿಗೆ ಹೊರಟ ಶಾಂತವೀರಪ್ಪ, ಅಂಗಾಂಶ ಕೃಷಿಯಲ್ಲಿ ಬೆಳೆದ ನಂಜನಗೂಡಿನ ರಸಬಾಳೆ ತಳಿಯ  400 ಕಂದುಗಳನ್ನು ಖರೀದಿಸಿದರು.

ನೆಟ್ಟಿದ್ದೇ ವಿಶೇಷ
ಗಿಡದಿಂದ ಗಿಡಕ್ಕೆ 8 ಅಡಿ, ಸಾಲಿನಿಂದ ಸಾಲಿಗೆ 9 ಅಡಿ ಅಂತರದಲ್ಲಿ ಕಂದುಗಳನ್ನು ನಾಟಿ ಮಾಡಿದ್ದಾರೆ. ಮೂರು ಅಡಿ ಆಳ- ಅಲಗದ ಗುಂಡಿಯ ತಳದಲ್ಲಿ ಒಂದು ಅಡಿಯಷ್ಟು ಬೇವಿನ ಬೀಜದ ಹಿಂಡಿ ಹಾಕಿಸಿ, ಮೇಲೆ ಒಂದು ಅಡಿ ಕುರಿ ಗೊಬ್ಬರ, ಅದರ ಮೇಲ್ಭಾಗದಲ್ಲಿ ಒಂದು ಅಡಿ ಕೆಂಪು ಮಣ್ಣು ಹರಡಿಸಿದರು. `ಬೇವಿನ ಬೀಜ ಹಾಕುವುದರಿಂದ ಬೇರುಗಂಟು ರೋಗ ಬರುವುದಿಲ್ಲ ಎಂಬ ತಜ್ಞರ ಸಲಹೆ ಮೇರೆಗೆ ಹೀಗೆ ಮಾಡಿದ್ದೇನೆ' ಎಂದರು ಶಾಂತವೀರಪ್ಪ.

ಗಿಡ ನಾಟಿ ಮಾಡಿಯಾಯ್ತು. ತೋಟದಲ್ಲಿ ಉಳುಮೆ ನಿಲ್ಲಿಸಿ, ಶೂನ್ಯ ಬಂಡವಾಳ ಕೃಷಿ ಪದ್ಧತಿ ಅಳವಡಿಸಿದ್ದೂ ಆಯ್ತು. ಆದರೆ ಬಾಳೆಗಿಡಗಳಿಗೆ ನೀರು ಹನಿಸುತ್ತಿದ್ದ ಕೊಳವೆ ಬಾವಿ ಕೈಕೊಟ್ಟಿತು. ಸಾಲ ಮಾಡಿ ಮತ್ತೆ ಕೊಳವೆ ಬಾವಿ ಕೊರೆಸಿದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವಾಗಲೇ ಶಾಂತವೀರಪ್ಪ ಅವರಿಗೆ ಆರೋಗ್ಯ ಕೈಕೊಟ್ಟಿತು. ಹಾಸಿಗೆ ಹಿಡಿದರು. `ಇಷ್ಟೆಲ್ಲ ಬಂಡವಾಳ ಹಾಕಿ, ತೋಟ ಮಾಡುವಾಗ ಹೀಗಾಯ್ತಲ್ಲ' ಎಂದು ಚಿಂತಿಸುತ್ತಿದ್ದಾಗ, ಪಿಯುಸಿ ಓದುತ್ತಿದ್ದ ಮಗ ವಿವೇಕಾನಂದ, ಪತ್ನಿ ಪುಷ್ಪ ಅವರು `ಚಿಂತೆ ಮಾಡ್ಬೇಡಿ. ನಾವಿದ್ದೇವೆ' ಎಂದು ಸಮಾಧಾನ ಹೇಳಿದರು. ಅಪ್ಪನಿಗೆ ವಿಶ್ರಾಂತಿ ನೀಡಿದ ಮಗ, ತೋಟದ ಕೆಲಸಕ್ಕೆ ಟೊಂಕ ಕಟ್ಟಿ ನಿಂತ. ಹೊಸ ಕೊಳವೆಬಾವಿಯಿಂದ ಬಾಳೆಗಿಡಗಳಿಗೆ ಹನಿ ನೀರಾವರಿ ಅಳವಡಿಸಿದ. ಕೆಲಸಗಾರರ ನೆರವಿನಿಂದ ಸ್ವತಃ ತೋಟದ ಕೆಲಸಕ್ಕೆ ನಿಂತ.

ತಜ್ಞರ ಸಲಹೆಯಂತೆ ಆರೈಕೆ
ಆರು ತಿಂಗಳಿಗೊಮ್ಮೆ ಮೇಲ್ಗೊಬ್ಬರ, ತಜ್ಞರ ಸಲಹೆಯಂತೆ ನಡು ನಡುವೆ ಜೀವಾಮೃತ, ಗಂಜಲ, ಎರೆಗೊಬ್ಬರದ ಆರೈಕೆಯಲ್ಲಿ ಬೆಳೆದ ಬಾಳೆ ಗಿಡಗಳಲ್ಲಿ `ಮೋತೆ'ಗಳು ಇಣುಕಿ ಹಾಕಿದವು. ಗಿಡಗಳಲ್ಲಿ ಗೊನೆ ಬಿಡುತ್ತಿದ್ದಂತೆ, ಶಾಂತವೀರಪ್ಪನವರ ಆರೋಗ್ಯವೂ ಸುಧಾರಿಸಿತು. ಗಿಡ ನೆಟ್ಟು ವರ್ಷ ಪೂರ್ಣಗೊಳ್ಳುವ ಹೊತ್ತಿಗೆ ಬಾಳೆ ತೋಟದಲ್ಲಿ ನೂರಕ್ಕೂ ಹೆಚ್ಚು ಗೊನೆಗಳು ತೊನೆದಾಡಲಾರಂಭಿಸಿದವು. ಪ್ರತಿ ಗಿಡದ ಗೊನೆಯಲ್ಲಿ 7, 8 ಅಥವಾ 9 ಚಿಪ್ಪುಗಳು ಮಾತ್ರ ಬಿಡುತ್ತವೆ. ಇದು ನಂಜನಗೂಡು ತಳಿಯ ವಿಶೇಷ. ಪ್ರತಿ ಕಾಯಿಗಳು ಒಂದೇ ಗಾತ್ರದಲ್ಲಿರುತ್ತವೆ. ಆಕಾರ ಕೂಡ ಒಂದೇ.

ಕೊಯ್ದ ಬಾಳೆ ಗೊನೆಗಳನ್ನು ಹಣ್ಣು ಮಾಡುವ ಮುನ್ನ ಗಂಜಲ-ಬೆಲ್ಲದ ಮಿಶ್ರಣ (50 ಲೀಟರ್ ನೀರು+10 ಲೀಟರ್ ಗಂಜಲ+2-3 ಕೆ.ಜಿ ಬೆಲ್ಲ ಮಿಶ್ರಮಾಡಿ, 15 ದಿನ ಚೆನ್ನಾಗಿ ಕಳಿಸಿದ ಮಿಶ್ರಣ) ಅದ್ದಿ ಮಾಗಿಸುತ್ತಾರೆ. ಕಾಯಿಗಳಿಗೆ ರೋಗ ಅಥವಾ ಕೀಟಬಾಧೆ ಸೋಂಕು ಇದ್ದರೆ, ಈ ಪ್ರಕ್ರಿಯೆಯಿಂದ ಅದು ನಿವಾರಣೆಯಾಗುತ್ತದೆ' ಎನ್ನುತ್ತಾರೆ ತೋಟಗಾರಿಕಾ ನಿರ್ದೇಶಕ ಇಂದೂಧರ್.

ಬಾಳೆಯ ಸಂಗಾತಿ ಬೆಳೆಯಾಗಿ ಬೆಳೆಸಿರುವ ಅಡಿಕೆ ಮರಗಳು, ಬಾಳೆಗೆ ನೆರಳು ಪೂರೈಸಿವೆ. ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ 2-3 ಕೂಳೆ ಬೆಳೆ ಪಡೆಯಲು ಅಡಿಕೆಯ ನೆರಳು ಸಹಾಯವಾಗುತ್ತದೆ ಎನ್ನುವುದು ತಜ್ಞರ ಅಭಿಮತ. ಬಾಳೆ ತೋಟದ ಸುತ್ತಲೂ ತೆಂಗಿನ ಸಸಿಗಳನ್ನು ನೆಟ್ಟಿದ್ದಾರೆ. ಏಲಕ್ಕಿ, ಕಾಳುಮೆಣಸು, ಜಾಯಿಕಾಯಿ ಬೆಳೆಸುವ ಯೋಜನೆ ಇದೆ. ಇವೆಲ್ಲ ಜೊತೆಯಾದರೆ, ಉಪ ಆದಾಯ ಪಡೆಯುವ ಜೊತೆಗೆ ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ ಎನ್ನುವುದು ಶಾಂತವೀರಪ್ಪ ಅವರ ಪತ್ನಿ ಪುಷ್ಪ ಅವರ ದೂರಾಲೋಚನೆ.

ಮನೆ ಬಾಗಿಲಲ್ಲೇ ಮಾರ್ಕೆಟ್
ಬಾಳೆ ಗೊನೆ ಬಿಡುವ ಹೊತ್ತಿಗೆ, ದಾವಣಗೆರೆಯ ವ್ಯಾಪಾರಿಯೊಬ್ಬರು ಬೆಳೆ ಖರೀದಿಗೆ ಮುಂದಾಗಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನ ತೋಟಗಾರಿಕಾ ಇಲಾಖೆ ಹಾಗೂ ಹಾಪ್‌ಕಾಮ್ಸ ಮಳಿಗೆಗಳಲ್ಲಿ ರಸಬಾಳೆ ಖರೀದಿಸುವ ಭರವಸೆ ನೀಡಿದ್ದಾರೆ. ತಿಂಗಳ ಹಿಂದೆ 60 ಕೆ.ಜಿ ಬಾಳೆಯನ್ನು ಪ್ರತಿ ಕೆ.ಜಿಗೆ ರೂ 60 ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಬಾಳೆ ಗೊನೆ ಜೊತೆಗೆ ರಸಬಾಳೆಯ ಕಂದುಗಳು ಮಾರಾಟಕ್ಕೆ ಸಿದ್ಧವಾಗಿವೆ. ಈಗಾಗಲೇ ಚಳ್ಳಕೆರೆ ಹಾಗೂ ಸುತ್ತಲಿನ ರೈತರು ಕಂದುಗಳನ್ನು ಖರೀದಿಗೆ ಮುಂದಾಗಿದ್ದಾರೆ. ಈ ಮೂಲಕ ಅಳಿವಿನಂಚಿನಲ್ಲಿರುವ ರಸಬಾಳೆಯನ್ನು ಚಿತ್ರದುರ್ಗ-ದಾವಣಗೆರೆ ಜಿಲ್ಲೆಯಾದ್ಯಂತ ಬೆಳೆಸಲು ಶಾಂತವೀರಪ್ಪ ಉತ್ತೇಜನ ನೀಡುತ್ತಿದ್ದಾರೆ.

ಸಾವಯವ ವಿಧಾನದಲ್ಲಿ ಬಾಳೆ ಬೆಳೆದಿರುವುದಕ್ಕೆ ಬೆಂಗಳೂರಿನ ಸಾವಯವ ದೃಢೀಕರಣ ಸಂಸ್ಥೆ ಎಪಿಒಎಫ್ ಪ್ರಮಾಣ ಪತ್ರವನ್ನೂ ನೀಡಿದೆ. ಹಣ್ಣಾದ ಬಾಳೆಗೆ ಸ್ಥಳೀಯ ಹಾಪ್‌ಕಾಮ್ಸಗಳಲ್ಲೂ ಬೇಡಿಕೆ ಇದೆ.

ಈ ಎಲ್ಲ ಬೆಳವಣಿಗೆಗಳು ಶಾಂತವೀರಪ್ಪ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿವೆ. `ನನ್ನದು ಶ್ರಮ, ಬಂಡವಾಳ ಅಷ್ಟೇ. ನನ್ನ ಕೆಲಸದ ಹಿಂದೆ ತಾಂತ್ರಿಕ ಶಕ್ತಿ ಕೃಷಿ ವಿವಿಯ ಡಾ. ಬಿ.ಎಸ್.ಸತ್ಯನಾರಾಯಣ, ತೋಟಗಾರಿಕಾ ಇಲಾಖೆಯ ಜಯಪ್ರಕಾಶ್, ಪಿ.ವಿ.ವಿಜಯಕುಮಾರ್‌ರಂತಹ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿದ್ದಾರೆ' ಎಂದು ಅವರು ನೆನೆಯುತ್ತಾರೆ.

ಇವೆಲ್ಲದರ ನಡುವೆ, ಅನಿವಾರ್ಯವೋ, ಅಗತ್ಯವೋ, ಈ ಒಂದು ವರ್ಷದ ಅನುಭವ ಪುತ್ರ ವಿವೇಕಾನಂದನಲ್ಲಿ ಕೃಷಿ ಕ್ಷೇತ್ರದಲ್ಲಿ ಉಳಿಯಬೇಕೆಂಬ ವಿಶ್ವಾಸ ತುಂಬಿದೆ. ಮುಂದೆ ಕೃಷಿ ಪದವಿಯನ್ನೇ ಕಲಿತು ಕೃಷಿ ಕ್ಷೇತ್ರದಲ್ಲೇ ಸಾಧನೆಗಾಗಿ ಮುಂದುವರಿಯಬೇಕೆಂಬ ಅಭಿಲಾಷೆ ಆತನದ್ದು. ಯುವಕರು ಕೃಷಿ ಕ್ಷೇತ್ರ ತೊರೆಯುತ್ತಿದ್ದಾರೆ ಎಂಬ ಅಘೋಷಿತ ಘೋಷಣೆಗಳ ನಡುವೆ, ಇದೊಂದು ಆಶಾದಾಯಕ ಬೆಳವಣಿಗೆ. ಶಾಂತವೀರಪ್ಪನವರ ಸಂಪರ್ಕಕ್ಕಾಗಿ 9986907054
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.