ADVERTISEMENT

ಭತ್ತದ ಈ ತಳಿಗೆ ಬಾರದು ಬೆಂಕಿರೋಗ

9 ಹೊಸ ತಳಿಗಳ ಆವಿಷ್ಕರಿಸಿದ ಕೃಷಿ ವಿವಿ, ರೈತರ ಸಮಸ್ಯೆಗಳಿಗೆ ಪರಿಹಾರ

ಅದಿತ್ಯ ಕೆ.ಎ.
Published 28 ಸೆಪ್ಟೆಂಬರ್ 2022, 22:30 IST
Last Updated 28 ಸೆಪ್ಟೆಂಬರ್ 2022, 22:30 IST
ಭತ್ತದ ಹೊಸ ತಳಿ ‘ಕೆಎಂಪಿ– 225’
ಭತ್ತದ ಹೊಸ ತಳಿ ‘ಕೆಎಂಪಿ– 225’   

ಬೆಂಗಳೂರು: ಬೆಂಕಿರೋಗ ನಿಗ್ರಹಿಸುವ ಸಾಮರ್ಥ್ಯ, ಅಲ್ಪಾವಧಿಯಲ್ಲೇ ಕಟಾವು, ಅಧಿಕ ಇಳುವರಿ ನೀಡುವ ಎರಡು ಬಗೆಯ ಭತ್ತದ ತಳಿಗಳನ್ನು ಸಂಶೋಧಿಸಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಅವುಗಳ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ.

ನ.3ರಿಂದ 6ರ ತನಕ ನಡೆಯುವ ‘ಕೃಷಿ ಮೇಳ’ ದಲ್ಲಿ ಈ ಹೊಸ ತಳಿಗಳು ಪ್ರದರ್ಶನವಾಗಲಿವೆ.

ಪ್ರತಿಕೂಲ ಹವಾ ಮಾನ, ಅಧಿಕ ವೆಚ್ಚ, ರೋಗಬಾಧೆ ಹಾಗೂ ಕೃಷಿ ಕಾರ್ಮಿಕರ ಕೊರತೆಯಿಂದ ರಾಜ್ಯದಲ್ಲಿ ಭತ್ತ ಬೆಳೆ ಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಭತ್ತದ ಬಿತ್ತನೆ ಪ್ರದೇಶವೂ ಕುಸಿಯುತ್ತಿದೆ. ಭತ್ತದ ಬೆಳೆಗಾರರನ್ನು ಉತ್ತೇಜಿಸಲು ಹಾಗೂ ಹೆಚ್ಚಿನ ಆದಾಯ ತರುವ ಉದ್ದೇಶದಿಂದ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ADVERTISEMENT

‘ಕೆಎಂಪಿ– 225’ ಭತ್ತದ ಹೊಸ ತಳಿಯು ಅಲ್ಪಾವಧಿಯಲ್ಲೇ ಕಟಾವಿಗೆ ಬರಲಿದೆ. ಬೇರೆ ತಳಿಗಳ ಭತ್ತದ ಬೆಳೆ ಸಾಮಾನ್ಯವಾಗಿ 160ರಿಂದ 180 ದಿನಗಳಲ್ಲಿ ಕಟಾವಿಗೆ ಬಂದರೆ, ಹೊಸ ತಳಿಯ ಫಸಲನ್ನು 120ರಿಂದ 125 ದಿನಕ್ಕೇ ಕಟಾವು ಮಾಡಬಹುದು’ ಎಂದು ತಿಳಿಸಿದ್ದಾರೆ.

‘ಈ ತಳಿಯನ್ನು ರಾಜ್ಯದ ದಕ್ಷಿಣ ವಲಯದಲ್ಲಿ ಜುಲೈನಲ್ಲಿ ಬಿತ್ತನೆ ಮಾಡಬಹುದು. ‘ಐಆರ್‌ 64’ ತಳಿ ಸಾಮಾನ್ಯವಾಗಿ ಬೆಂಕಿರೋಗಕ್ಕೆ ತುತ್ತಾಗಿ ನಷ್ಟವಾಗುತ್ತಿತ್ತು. ಹೊಸತಳಿಯು ‘ಐಆರ್‌ 64’ ಭತ್ತದ ತಳಿಗೆ ಹೋಲಿಕೆಯಾದರೂ ಎಲೆ, ತೆನೆದಂಟು ಬೆಂಕಿ ರೋಗ ನಿಗ್ರಹ ಸಾಮರ್ಥ್ಯ ಹೊಂದಿದೆ. ಜತೆಗೆ, ಎಕರೆಗೆ 26 ಕ್ವಿಂಟಲ್‌ ಇಳುವರಿ ಬರಲಿದೆ’ ಎಂದು ಕೃಷಿ ವಿವಿಯ ಪ್ರಾಧ್ಯಾಪಕ ಕೆ.ಶಿವರಾಮ ಹೇಳುತ್ತಾರೆ.

‘ಆರ್‌ಎನ್‌ಆರ್‌ 15048’ ವೈಜ್ಞಾನಿಕ ಹೆಸರಿನ ಮತ್ತೊಂದು ಭತ್ತದ ಹೊಸ ತಳಿಯೂ ಅಲ್ಪಾವಧಿ ಯಲ್ಲೇ ಕೊಯ್ಲಿಗೆ ಬರಲಿದೆ. 125 ದಿನಗಳಲ್ಲಿ ಕಟಾವು ಮಾಡಬಹುದು. ಒಣ ವಲಯದಲ್ಲಿ ಬಿತ್ತನೆಗೆ ಇದು ಹೆಚ್ಚು ಸೂಕ್ತ. ಅಕ್ಕಿಯ ಗಾತ್ರ ತುಂಬ ಸಣ್ಣದಾಗಿರುತ್ತದೆ. ಉತ್ಕೃಷ್ಟದರ್ಜೆಯ ಭತ್ತವಾಗಿದ್ದು ಪ್ರತಿ ಎಕರೆಗೆ 22ರಿಂದ 24 ಕ್ವಿಂಟಲ್‌ ಇಳುವರಿ ಬರಲಿದೆ’ ಎಂದು ತಿಳಿಸಿದ್ದಾರೆ.

ವಿಜ್ಞಾನಿಗಳು ಸಂಶೋಧಿಸಿರುವ ಮುಸುಕಿನ ಜೋಳ ಎಂಎಎಚ್ 14-138 ಸಹ ಕೃಷಿ ಮೇಳದಲ್ಲಿ ಗಮನ ಸೆಳೆಯಲಿದೆ.

ಇದು ಎಲೆ ಅಂಗಮಾರಿ, ಕೇದಿಗೆ ರೋಗನಿರೋಧಕ ಸಾಮರ್ಥ್ಯವನ್ನು ಹೊಂದಿದೆ. ಕಟಾವು ಹಂತದಲ್ಲೂ ಹಸಿರಾಗಿರಲಿದೆ. ಹೆಕ್ಟೇರ್‌ಗೆ 85 ರಿಂದ 95 ಕ್ವಿಂಟಲ್‌ ಇಳುವರಿ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.