ADVERTISEMENT

ಬದುಕು ಕಟ್ಟಿಕೊಟ್ಟ ಬಟನ್ ರೋಸ್’

ಹ.ಸ.ಬ್ಯಾಕೋಡ
Published 6 ಆಗಸ್ಟ್ 2018, 19:30 IST
Last Updated 6 ಆಗಸ್ಟ್ 2018, 19:30 IST
ಬಟನ್ ರೋಸ್ ಬಿಡಿಸುತ್ತಿರುವ ಶ್ರೀಧರ್
ಬಟನ್ ರೋಸ್ ಬಿಡಿಸುತ್ತಿರುವ ಶ್ರೀಧರ್   

ಬೆಂಗಳೂರು ಮಹಾನಗರದ ಹೊರವಲಯದಲ್ಲಿ ಕೃಷಿ ಭೂಮಿಯನ್ನು ಲೇಔಟ್ ಮಾಡಿ ಮಾರಾಟ ಮಾಡುತ್ತಿರುವವರೇ ಹೆಚ್ಚು. ಇಂಥ ವಾತಾವರಣದಲ್ಲೂ ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರಿನ ಯುವಕ ಶ್ರೀಧರ್, ತಮಗಿರುವ ಸಣ್ಣ ಹಿಡುವಳಿ ಜತೆಗೆ, ಸಮೀಪದಲ್ಲಿರುವ ಹೊಲವನ್ನು ಗುತ್ತಿಗೆ ಪಡೆದು ಅಲ್ಲಿ ಪುಷ್ಪ ಕೃಷಿ ಮಾಡುತ್ತಾ, ‘ಕೃಷಿಯಲ್ಲೇ ನೈಜ ಬದುಕಿದೆ’ ಎಂಬುದನ್ನು ತೋರಿಸಿದ್ದಾರೆ.

ಐದಾರು ವರ್ಷಗಳ ಹಿಂದೆ ಶ್ರೀಧರ್ ಕ್ಯಾಬ್‌ಡ್ರೈವರ್‌ ಆಗಿದ್ದರು. ಬಹುರಾಷ್ಟ್ರೀಯ ಕಂಪೆನಿಗಳಿಗೆ ನೌಕರರನ್ನು ಕರೆದುಕೊಂಡು ಹೋಗಿ ಬಿಡುವ ಕೆಲಸ ಅದು. ಇದರ ಜತೆಗೆ, ಸಾಲ ಮಾಡಿ ಸ್ವಂತಕ್ಕೆ ಕಾರು ಖರೀದಿಸಿದ್ದರು. ಆದರೆ, ಈ ಕಾರು ಓಡಿಸುವ ಕೆಲಸ ಬದುಕನ್ನು ಕಟ್ಟಿಕೊಡಲಿಲ್ಲ. ಹಗಲು, ರಾತ್ರಿ ದುಡಿದರೂ ಸಂಸಾರದ ನೌಕೆ ನೆಮ್ಮದಿಯಿಂದ ಸಾಗಲಿಲ್ಲ. ಬದಲಾಗಿ ಆರೋಗ್ಯದಲ್ಲಿ ಏರುಪೇರಾಯಿತು.

ಮಗನ ಪರಿಸ್ಥಿತಿ ಗಮನಿಸಿದ ತಂದೆ, ‘ಇರುವ ಹೊಲದಲ್ಲಿಯೇ ಕೃಷಿ ಮಾಡು’ ಎಂದು ಸಲಹೆ ಕೊಟ್ಟರು. ತನ್ನ ಸಲಹೆ ಒಪ್ಪಿದ ಮಗನಿಗೆ ಜಮೀನಿನಲ್ಲಿ ಹೂವು ಬೆಳೆಯುವುದನ್ನು ಹೇಳಿಕೊಟ್ಟರು. ಮೊದಮೊದಲು ಶ್ರೀಧರ್ ಹೂವಿನಗಿಡಗಳಿಗೆ ನೀರು ಹಾಕುತ್ತಿದ್ದರು. ಆಮೇಲೆ ಮೊಗ್ಗು ಬಿಡುತ್ತಿದ್ದ ಗಿಡಗಳಿಗೆ ಔಷಧ ಸಿಂಪಡಣೆ, ಕಳೆ ತೆಗೆಯುವ ಕೆಲಸ ಕಲಿತರು. ಹೂವಿನ ಕೃಷಿ ಅರ್ಥವಾಯಿತು. ನಂತರ, ತಂದೆಯಿಂದ ಹೂವಿನ ಕೃಷಿಯನ್ನು ಪರಿಪೂರ್ಣವಾಗಿ ಕಲಿತರು.

ADVERTISEMENT

ಕೈ ಹಿಡಿದ ‘ಬಟನ್ ರೋಸ್‌’
ತಮ್ಮ ಹೊಲದಲ್ಲಿ ನಿತ್ಯ ಬಳಕೆಯ ಹೂವು ಬೆಳೆಸಲು ಆರಂಭಿಸಿದರು. ಹೊಲದಿಂದ ಕೊಂಚ ದೂರದಲ್ಲಿರುವ ಹೊಸಕೋಟೆ ತಾಲ್ಲೂಕಿನ ಮತ್ಸಂದ್ರ ಗ್ರಾಮದ ಹೊರವಲಯದಲ್ಲಿ ಗೆಳೆಯರೊಬ್ಬರಿಂದ ಒಂದೂವರೆ ಎಕರೆ ಜಮೀನು ಗುತ್ತಿಗೆ ಪಡೆದರು. ಅದು ಪಾಳುಬಿದ್ದ ಹೊಲ. ಹಾಗಾಗಿ ಆ ಭೂಮಿ ಮಣ್ಣನ್ನು ಪರೀಕ್ಷೆ ಮಾಡಿಸಿದರು. ಪ್ರಯೋಗಾಲಯದ ವರದಿ ಪ್ರಕಾರ ‘ಇಲ್ಲಿನ ಮಣ್ಣು ಹೂವಿನ ಕೃಷಿ ಗೆ ಸೂಕ್ತವಾಗಿದೆ’ ಎಂದು ಉಲ್ಲೇಖವಾಗಿತ್ತ. ಜತೆಗೆ ಅನುಭವಿಗಳು ಬಟನ್ ರೋಸ್‌ ಬೆಳೆಯುವುದು ಸೂಕ್ತ ಎಂದು ಸಲಹೆ ನೀಡಿದರು. ಆದರೆ ಬಟನ್ ರೋಸ್ ಕೃಷಿಗೆ ಹಣ ಬೇಕಿತ್ತು. ಅವರ ಕೈಯಲ್ಲಿ ಸಾಕಷ್ಟು ಹಣ ಇರಲಿಲ್ಲ. ಅದಕ್ಕಾಗಿ ಮನೆಯವರ ಬಳಿಯೇ ಸಾಲದ ರೂಪದಲ್ಲಿ ಹಣ ಪಡೆದು, ಬಟನ್ ರೋಸ್ ಕೃಷಿಗೆ ಮುಂದಾದರು.

ಮೊದಲಿಗೆ ಜಮೀನಿಗೆ ಒಂದಿಷ್ಟು ಕೆಂಪು ಮಣ್ಣಿನ್ನು ತಂದು ಸುರಿದರು. ಸಗಣಿ ಗೊಬ್ಬರ ಹಾಕಿಸಿದರು. ಇಡೀ ಜಮೀನಿನ ಮಣ್ಣನ್ನು ತೋಟದ ಮಣ್ಣಿನಂತೆ ಹದಗೊಳಿಸಿದರು. ನಂತರ ಬಟನ್ ರೋಸ್ ಸಸಿ ಗಳನ್ನು ಖರೀದಿಸಿ ತಂದು ನಾಟಿ ಮಾಡಿದರು. ಹನಿ ನೀರಾವರಿ ಪೈಪುಗಳನ್ನು ಹಾಕಿ, ಅಲ್ಲಲ್ಲಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿದರು. ಮೂರು ತಿಂಗಳ ಸತತ ಪರಿಶ್ರಮದೊಂದಿಗೆ ಪುಷ್ಪ ಕೃಷಿ ಮುಂದುವರಿಯಿತು. ಹೂವಿನ ಸಸಿಗಳಿಗೆ ಸಕಾಲಕ್ಕೆ ನೀರು, ಗೊಬ್ಬರ ಉಣಿಸಿದರು. ಸಸಿಗಳ ಚಿಗುರು, ಎಲೆ ತಿನ್ನುವ ಕೀಟ ಹಾಗೂ ರೋಗಗಳಿಂದ ರಕ್ಷಿಸಲು ಹದಿನೈದು ದಿನಗಳಿಗೊಮ್ಮೆ ಇಡೀ ತೋಟಕ್ಕೆ ಔಷಧ ಸಿಂಪಡಿಸಿದರು. ಸಸಿಗಳ ಬುಡಗಳಲ್ಲಿ ಕಾಣಿಸಿಕೊಳ್ಳುವ ಕಳೆ ಸಸ್ಯಗಳನ್ನು ಕಿತ್ತು ಹಾಕಿದರು. ಸಸಿಗಳಲ್ಲಿ ಕೆಂಪನೆಯ ಮೊಗ್ಗು ಅರಳಲಾರಂಭಿಸಿದೆವು. ಇಡೀ ಜಮೀನಿನ ತುಂಬಾ ಕೆಂಪು ಗುಲಾಬಿ ಅರಳಿರುವುದನ್ನು ಕಂಡು ಶ್ರೀಧರ್ ಮುಖದಲ್ಲಿ ಸಂಭ್ರಮ ಮನೆ ಮಾಡಿತು.

‘ಮೊದಲ ಬೆಳೆ ಬಂದಾಗ ವರಮಹಾಲಕ್ಷ್ಮಿ ಹಬ್ಬದ ಸಂದರ್ಭ. ವ್ಯಾಪಾರ ಚೆನ್ನಾಗಿಯೇ ಆಯಿತು. ಉತ್ತಮ ಆದಾಯವೂ ಬಂತು. ಆಗ ಮನೆಯರ ಬಳಿ ಮಾಡಿದ ಸಾಲವನ್ನು ತೀರಿಸಿದೆ. ಈಗ ಯಾರ ಬಳಿಯೂ ಹಣಕ್ಕಾಗಿ ಕೈ ಚಾಚುತ್ತಿಲ್ಲ’ ಎಂದು ಶ್ರೀಧರ ಹೂವಿನ ಕೃಷಿಯ ಯಶಸ್ಸನ್ನು ಹೆಮ್ಮೆಯಿಂದ ಹಂಚಿಕೊಂಡರು.

ಬಟನ್ ರೋಸ್ ಸಸಿಗಳನ್ನು ನೆಟ್ಟು ಉಳಿದ ಜಾಗದಲ್ಲಿ ಮದುವೆ ಸಮಾರಂಭಗಳ ವೇದಿಕೆಗೆ ಅಲಂಕಾರಕ್ಕಾಗಿ ಬಳಸುವ ಆಸ್ಪರಾಗಸ್‍ ಸಸ್ಯವನ್ನು ನಾಟಿ ಮಾಡಿದರು. ಸದ್ಯ ಹೂವು ಮತ್ತು ಅಲಂಕಾರಿಕ ಸಸ್ಯಗಳಿಂದ ತಿಂಗಳಿಗೆ ₹40ಸಾವಿರದಿಂದ ₹50ಸಾವಿರ ಆದಾಯ ಪಡೆಯುತ್ತಿದ್ದಾರೆ ಶ್ರೀಧರ್.

‘ಆಲಸಿತನ ಬಿಟ್ಟು, ಕೃಷಿ ಮಾಡಿದರೆ, ಖಂಡಿತಾ ಕೃಷಿಯಲ್ಲಿ ಹಿನ್ನಡೆಯಾಗಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.