ADVERTISEMENT

ರೈತನ ಕೈಹಿಡಿದ ಸಮಗ್ರ ಕೃಷಿ

ಹೈನುಗಾರಿಕೆ, ಕೋಳಿ ಸಾಕಾಣಿಕೆಯಿಂದಲೂ ಉತ್ತಮ ಆದಾಯ

ಗುಂಡಪ್ಪ ಕರೆಮನೋರ
Published 16 ಜನವರಿ 2021, 2:31 IST
Last Updated 16 ಜನವರಿ 2021, 2:31 IST
ಕಾಳಗಿ ತಾಲ್ಲೂಕಿನ ರಾಜಾಪುರ ಗ್ರಾಮದಲ್ಲಿ ಕುರಿಗಳೊಂದಿಗೆ ರೈತ ಶರಣರೆಡ್ಡಿ ಮಳಗಿ
ಕಾಳಗಿ ತಾಲ್ಲೂಕಿನ ರಾಜಾಪುರ ಗ್ರಾಮದಲ್ಲಿ ಕುರಿಗಳೊಂದಿಗೆ ರೈತ ಶರಣರೆಡ್ಡಿ ಮಳಗಿ   

ಕಾಳಗಿ: ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಸಾವಯವ ಗೊಬ್ಬರ ಬಳಸಿ ವಿವಿಧ ಬೆಳೆ ಬೆಳೆಯುತ್ತಿರುವ ತಾಲ್ಲೂಕಿನ ರಾಜಾಪುರ ಗ್ರಾಮದ ರೈತ ಶರಣರೆಡ್ಡಿ ಮಳಗಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ.

5 ಎಕರೆ ಸ್ವಂತ ಜಮೀನು ಹೊಂದಿರುವ ಅವರು ತಮ್ಮ ಗ್ರಾಮದಲ್ಲಿ 60 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದು ಕೃಷಿ ಜತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಮಾಡುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.‌‌

30 ಎಕರೆಯಲ್ಲಿ ಹೆಸರು, 20 ಎಕರೆಯಲ್ಲಿ ತೊಗರಿ ಮತ್ತು ಉದ್ದು, ಇನ್ನುಳಿದ 10 ಎಕರೆಯಲ್ಲಿ ಕಡಲೆ, ತೊಗರಿ, ಉದ್ದು, ಹೆಸರು, ಜೋಳ, ಈರುಳ್ಳಿ, ಮೆಣಸಿನಕಾಯಿ, ಶುಂಠಿ, ಸಜ್ಜೆ, ಮೆಕ್ಕೆಜೋಳ, ಅಲಸಂದಿ ಬೆಳೆದಿದ್ದಾರೆ.

ADVERTISEMENT

ಹೊಸಳ್ಳಿ ಮಾರ್ಗದಲ್ಲಿ 8 ವರ್ಷದ ಅವಧಿಗೆ ಗಿರವಿ ಹಾಕಿಕೊಂಡು 10 ಎಕರೆ ಹೊಲದ ಒಂದು ಭಾಗದಲ್ಲಿ ಕುರಿ, ಕೋಳಿ, ಹಸು ಸಾಕಾಣಿಕೆ ಮಾಡಲು ₹ 8.5 ಲಕ್ಷ ಖರ್ಚಿನಲ್ಲಿ ಶೆಡ್ ನಿರ್ಮಿಸಿದ್ದಾರೆ. 2 ಟ್ರ್ಯಾಕ್ಟರ್ ಮತ್ತು 1 ಜೆಸಿಬಿ ಯಂತ್ರ ಹೊಂದಿದ್ದಾರೆ. ಹೊಲ ಕಾಯಲು 6 ನಾಯಿಗಳಿವೆ.

150 ಕುರಿಗಳು, 100 ಕೋಳಿ, 5 ಎಮ್ಮೆ, 15 ಹಸು, 4 ಕರು ಮತ್ತು 18 ಹೋರಿಗಳನ್ನು ಅವರು ಸಾಕಿದ್ದಾರೆ. ಸ್ಥಳೀಯರಿಗೆ ಪ್ರತಿ ತಿಂಗಳು 3 ರಿಂದ 4 ಕೆ.ಜಿ ತುಪ್ಪ ಮಾರುತ್ತಾರೆ.

ಒಟ್ಟು 2 ಎಕರೆ ಜಮೀನಲ್ಲಿ ಹಸಿಮೆಣಸಿನಕಾಯಿ ಬೆಳೆದಿದ್ದು, ಅದರಿಂದಲೇ ದಿನಕ್ಕೆ ₹ 8 ಸಾವಿರ ಆದಾಯ ಕೈ ಸೇರುತ್ತಿದೆ. 10 ಕೃಷಿ ಕಾರ್ಮಿಕರಿಗೆ ಅವರು ಉದ್ಯೋಗ ನೀಡಿದ್ದಾರೆ. ವಾರ್ಷಿಕ ₹7ರಿಂದ 8 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

‘ಈ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ನನಗೆ ಆಸಕ್ತಿಯಿತ್ತು. ಆದರೆ ಕೃಷಿಯಲ್ಲಿನ ನೆಮ್ಮದಿ ಮತ್ತೊಂದರಿಲ್ಲ ಎಂದು ಅರಿತ ಮೇಲೆ ಈಗ ಇದರಲ್ಲೇ ಬದುಕನ್ನು ಕಂಡುಕೊಂಡಿದ್ದೇನೆ. ಈ ವರ್ಷ ಲಾಕ್‌ಡೌನ್, ಅತಿವೃಷ್ಟಿಯಿಂದ ಸ್ವಲ್ಪ ಹಾನಿಯಾಗಿದೆ’ ಎಂದು ಶರಣರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.