ADVERTISEMENT

ಒಣ ನೆಲದಲ್ಲಿ ಹಸಿರು ಸಂಪತ್ತು | ಕಪ್ಪು ಮಣ್ಣಲ್ಲಿ ಯಂತ್ರದ ಮೂಲಕ ನೀರು ಸಂಗ್ರಹ

ಕಪ್ಪು ಮಣ್ಣಲ್ಲಿ ಯಂತ್ರದ ಮೂಲಕ ನೀರು ಸಂಗ್ರಹಿಸುವ ತಂತ್ರ

ಗಣೇಶ ವೈದ್ಯ
Published 20 ಸೆಪ್ಟೆಂಬರ್ 2022, 5:38 IST
Last Updated 20 ಸೆಪ್ಟೆಂಬರ್ 2022, 5:38 IST
‘ಕಂಪಾರ್ಟ್‌ಮೆಂಟ್ ಬಂಡ್ ಫಾರ್ಮರ್’ ಮೂಲಕ ಒಣ ಭೂಮಿಯಲ್ಲಿ ನಿರ್ಮಿಸಿರುವ ಚೌಕು ಮಡಿಗಳಲ್ಲಿ ನೀರು ಸಂಗ್ರಹಗೊಂಡಿರುವುದು
‘ಕಂಪಾರ್ಟ್‌ಮೆಂಟ್ ಬಂಡ್ ಫಾರ್ಮರ್’ ಮೂಲಕ ಒಣ ಭೂಮಿಯಲ್ಲಿ ನಿರ್ಮಿಸಿರುವ ಚೌಕು ಮಡಿಗಳಲ್ಲಿ ನೀರು ಸಂಗ್ರಹಗೊಂಡಿರುವುದು   

ಧಾರವಾಡ: ಒಣ ಭೂಮಿಯಲ್ಲೂ ಹೇರಳ ಹಸಿರು ಚಿಗುರಿಸುವ ಜೊತೆಗೆ ಕೈತುಂಬ ಆದಾಯವನ್ನೂ ಗಳಿಸುವುದು ಸಾಧ್ಯ ಎಂಬುದನ್ನು ಮನದಟ್ಟು ಮಾಡಲು ಶ್ರಮಿಸುತ್ತಿದೆ ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ.

ಅಖಿಲ ಭಾರತ ಸಮನ್ವಿತ ಒಣ ಬೇಸಾಯ ಸಂಶೋಧನಾ ಯೋಜನೆಯೊಂದಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕೇಂದ್ರವು, ಒಣ ಭೂಮಿಯಲ್ಲಿ ಯಾವ ಮಾದರಿಯ ಕೃಷಿ ಲಾಭದಾಯಕ ಎಂದು ರೈತರಿಗೆ ಮಾಹಿತಿ ಒದಗಿಸುತ್ತಿದೆ.

ಒಣ ಭೂಮಿಯಲ್ಲಿ ಬೇಸಾಯ ಮಾಡಲು ಮೂಲ ಅಗತ್ಯವೆಂದರೆ ಮಳೆಯ ನೀರನ್ನು ಭೂಮಿಗೆ ಇಂಗಿಸುವುದು. ಇದಕ್ಕಾಗಿ ಅಡೆತಡೆಗಳುಳ್ಳ ಚೌಕು ಮಡಿ ಮಾಡುವುದು ಮೊದಲಿನಿಂದಲೂ ನಡೆದಿದೆ. ಆದರೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಮನುಷ್ಯನೇ ಈ ಕೆಲಸ ಮಾಡಬೇಕಿತ್ತು. ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರವು ಈ ಕೆಲಸಕ್ಕೆ ಟ್ರ್ಯಾಕ್ಟರ್ ಚಾಲಿತ ‘ಕಂಪಾರ್ಟ್‌ಮೆಂಟ್ ಬಂಡ್ ಫಾರ್ಮರ್’ ಸಾಧನ ಬಳಸುವ ಕುರಿತು ಉತ್ತೇಜಿಸುತ್ತಿದೆ.

ADVERTISEMENT

‘ಈ ಸ್ವಯಂಚಾಲಿತ ಯಂತ್ರದಿಂದ ಒಂದು ದಿನಕ್ಕೆ 14 ಎಕರೆ ಜಮೀನಿಗೆ ಚೌಕುಮಡಿ ಮಾಡಬಹುದು’ ಎಂದು ಕೃಷಿ ವಿಜ್ಞಾನಿ ಡಾ. ಎಸ್.ಬಿ. ಪಾಟೀಲ ಮಾಹಿತಿ ನೀಡುತ್ತಾರೆ.

ಈ ಸಾಧನದ ಮೂಲಕ ಮಳೆ ನೀರನ್ನು ಇಂಗಿಸುವುದು ಕಡಿಮೆ ಶ್ರಮದಾಯಕ ಮತ್ತು ಕಡಿಮೆ ವೆಚ್ಚದಾಯಕ. ಜುಲೈ ತಿಂಗಳಲ್ಲಿ ಸುರಿಯುವ ಒಂದೆರಡು ಮಳೆಯ ನೀರನ್ನೇ ಕಪ್ಪು ಮಣ್ಣಿನಲ್ಲಿ ಇಂಗಿಸಲು ಚೌಕು ಮಡಿಗಳನ್ನು ಮಾಡಿ, ಇಳಿಜಾರಿಗೆ ಅಡ್ಡಲಾಗಿ ಚಿಕ್ಕಚಿಕ್ಕ ದಿಂಡು ಸಾಲುಗಳನ್ನು ನಿರ್ಮಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ನೀರು ಹೊಲದಿಂದ ಹೊರಗೆ ಹೋಗದೇ ಅಲ್ಲಿಯೇ ಇಂಗುತ್ತದೆ. ಇನ್ನೊಂದು ಮುಖ್ಯ ಪ್ರಯೋಜನವೆಂದರೆ, ಮಣ್ಣು ಸವಕಳಿ ತಪ್ಪಿಸುತ್ತದೆ.

ಅದೇ ರೀತಿ, ಸಬ್‌ಸಾಯಿಲರ್ ಎಂಬ ಯಂತ್ರದಿಂದ ಮುಂಗಾರು ಪೂರ್ವದಲ್ಲಿ ಜಮೀನಿನ ಕೆಳ ಗಟ್ಟಿ ಪದರವನ್ನು ಉಳುಮೆ ಮಾಡಿ ಸೀಳುವ ತಂತ್ರಜ್ಞಾನವನ್ನೂ ತಿಳಿಸಿಕೊಡಲಾಗುತ್ತಿದೆ. ‘ಇದರಿಂದ ಮಳೆ ನೀರು ಭೂಮಿಯ ಆಳಕ್ಕೆ ಇಳಿದು, ಭೂಮಿಯಲ್ಲಿ ತೇವಾಂಶ ಉಳಿಯುತ್ತದೆ. ಅದು ಕೃಷಿಗೆ ವರದಾನವಾಗುತ್ತದೆ. ಮೂರು ವರ್ಷಕ್ಕೊಮ್ಮೆ ಈ ರೀತಿ ಮಾಡಿದರೂ ಸಾಕು’ ಎಂಬುದು ಎಸ್.ಬಿ. ಪಾಟೀಲ ಅವರ ಮಾಹಿತಿ.

ಬೆಳೆ ಆಯ್ಕೆ: ‘ಬೇಗ ಮಾಗುವ ಮತ್ತು ಬರ ತಡೆದುಕೊಳ್ಳುವಂತಹ ಹುರುಳಿ, ಮಡಿಕೆ, ಸೂರ್ಯಕಾಂತಿ, ಹಿಂಗಾರಿ ಜೋಳ, ಕಡಲೆ, ಕುಸುಬೆ, ಅಲಸಂದಿ ಮುಂತಾದ ಬೆಳೆಗಳನ್ನು ಒಣ ಭೂಮಿಗೆ ಆಯ್ದುಕೊಳ್ಳಬೇಕು. ಅಗಲ ಸಾಲಿನಲ್ಲಿ ಬಿತ್ತನೆ ಮಾಡಬೇಕು. ಬೇಗ ಮೊಳಕೆ ಒಡೆಯುವಂತೆ ಬೀಜೋಪಚಾರ ಮಾಡಬೇಕು. ತೇವಾಂಶ ಕಾಪಾಡಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ ಬಳಸಬೇಕು’ ಎಂಬುದು ಅವರ ಸಲಹೆ.

ಒಣ ಭೂಮಿಯ ಹಣ್ಣು ರುಚಿ

‘ಚೌಕು ಮಡಿ ಮತ್ತು ಗಟ್ಟಿ ಪದರ ಸೀಳುವ ತಂತ್ರಜ್ಞಾನದಿಂದ ಕಪ್ಪು ಮಣ್ಣಿನಲ್ಲಿ ಚಿಕ್ಕು, ಪೇರಲ; ಕೆಂಪು ಮಣ್ಣು ಅಥವಾ ಕಡಿಮೆ ಆಳದ ಕಪ್ಪು ಮಣ್ಣಿನಲ್ಲಿ ಹುಣಸೆ, ನೆಲ್ಲಿ, ಸೀತಾಫಲ, ನೇರಳೆ, ಬೆಳೆಯನ್ನೂ ತೆಗೆಯಬಹುದು. ಒಣ ಬೇಸಾಯ ಪದ್ಧತಿಯಲ್ಲಿ ಈ ಬೆಳೆಗಳಿಗೆ ಹೇರಳವಾಗಿ ನೀರು ಸಿಗುವುದಿಲ್ಲ. ಭೂಮಿಯಲ್ಲಿ ಲಭ್ಯವಿರುವ ತೇವಾಂಶ ಹೀರಿಕೊಳ್ಳಲು ಬೇರುಗಳು ಆಳಕ್ಕೆ ಮತ್ತು ವಿಸ್ತಾರವಾಗಿ ಹರಡಿಕೊಳ್ಳುತ್ತವೆ. ಅದರಿಂದ ಪೋಷಕಾಂಶ ಹೀರಿಕೊಳ್ಳುವ ವ್ಯಾಪ್ತಿ ವಿಸ್ತರಿಸುತ್ತದೆ. ಅದೇ ಕಾರಣಕ್ಕಾಗಿ ಒಣ ಭೂಮಿಯಲ್ಲಿ ಬೆಳೆಯುವ ಹಣ್ಣುಗಳು ಹೆಚ್ಚು ರುಚಿ ಮತ್ತು ಪೋಷಕಾಂಶ ಭರಿತವಾಗಿರುತ್ತವೆ’ ಎಂಬುದು ಕೃಷಿ ವಿಜ್ಞಾನಿ ಎಸ್.ಬಿ.ಪಾಟೀಲ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.