ADVERTISEMENT

ಅಡಿಕೆ ಸಸಿಗಳಿಗೆ ಬಂತು ಭಾರಿ ಬೇಡಿಕೆ

ಹೊಸ ಅಡಿಕೆ ತೋಟ ಮಾಡುವ ಕಡೆ ರೈತರ ಚಿತ್ತ

ಎಚ್.ವಿ.ನಟರಾಜ್
Published 26 ಮೇ 2022, 2:34 IST
Last Updated 26 ಮೇ 2022, 2:34 IST
ಚನ್ನಗಿರಿ ತಾಲ್ಲೂಕು ಗಂಗಗೊಂಡನಹಳ್ಳಿ ಗ್ರಾಮದಲ್ಲಿ ಅಡಿಕೆ ಸಸಿಗಳನ್ನು ಮಾರಾಟ ಮಾಡುತ್ತಿರುವ ರೈತ ಮಹಿಳೆ ಪುಟ್ಟಮ್ಮ.
ಚನ್ನಗಿರಿ ತಾಲ್ಲೂಕು ಗಂಗಗೊಂಡನಹಳ್ಳಿ ಗ್ರಾಮದಲ್ಲಿ ಅಡಿಕೆ ಸಸಿಗಳನ್ನು ಮಾರಾಟ ಮಾಡುತ್ತಿರುವ ರೈತ ಮಹಿಳೆ ಪುಟ್ಟಮ್ಮ.   

ಚನ್ನಗಿರಿ: ತಾಲ್ಲೂಕಿನಲ್ಲಿ ಈ ಹಿಂದೆ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಅಡಿಕೆಯನ್ನು ರೈತರು ಬೆಳೆಯುತ್ತಿದ್ದರು. ಹೀಗಾಗಿ ತಾಲ್ಲೂಕನ್ನು ‘ಅಡಿಕೆಯ ನಾಡು’ ಎಂದು ಕರೆಯಲಾಗುತ್ತಿದೆ. ಅಡಿಕೆ ಬೆಳೆಗಾರರು ಹಲವು ಸಮಸ್ಯೆ ಹಾಗೂ ಸಂಕಷ್ಟಗಳನ್ನು ಎದುರಿಸುವಂತಾದರೂ ಪ್ರತಿ ವರ್ಷ ಗಣನೀಯ ಪ್ರಮಾಣದಲ್ಲಿ ಹೊಸ ಅಡಿಕೆ ತೋಟಗಳನ್ನು ಮಾಡುವ ಕಡೆ ರೈತರು ಒಲವು ತೋರಿಸುತ್ತಿದ್ದಾರೆ. ಹೀಗಾಗಿ ಅಡಿಕೆ ಸಸಿಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ.

15 ವರ್ಷಗಳ ಹಿಂದೆ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿತ್ತು. ನಂತರ ಹದಿನೈದು ವರ್ಷಗಳಲ್ಲಿ ಈ ಪ್ರಮಾಣ 32 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬಂದು ಮುಟ್ಟಿದೆ. ಸಾಮಾನ್ಯವಾಗಿ ಪ್ರತಿ ವರ್ಷ 3 ಸಾವಿರದಿಂದ 4 ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಹೊಸದಾಗಿ ಅಡಿಕೆ ತೋಟಗಳನ್ನು ಮಾಡಲು ರೈತರು ಮುಂದಾಗುತ್ತಿದ್ದರು. ಮೂರು ವರ್ಷಗಳಿಂದ ಅಡಿಕೆಗೆ ಉತ್ತಮ ದರ ಸಿಗುತ್ತಿರುವ ಪರಿಣಾಮವಾಗಿ ಈ ಸಾಲಿನಲ್ಲಿ 15 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಅಡಿಕೆ ತೋಟವನ್ನು ಮಾಡಲು ರೈತರು ಮುಂದಾಗಿದ್ದಾರೆ.

ಹೊಸ ಅಡಿಕೆ ತೋಟ ಮಾಡಲು ಸಸಿಗಳು ಮುಖ್ಯವಾಗಿರುತ್ತವೆ. ಇಂತಹ ಸಸಿಗಳನ್ನು ರೈತರು ತಮ್ಮ ಹೊಲಗಳಲ್ಲಿ ಅಥವಾ ಹಿತ್ತಲಿನಲ್ಲಿ ಬೆಳೆದು ಮುಂಗಾರು ಹಂಗಾಮಿನಲ್ಲಿ ಸಸಿಗಳನ್ನು ಮಾರಾಟ ಮಾಡುತ್ತಾರೆ. ಗುಣಮಟ್ಟದ ಅಡಿಕೆ ಗೋಟುಗಳನ್ನು ತಂದು ಭೂಮಿಯಲ್ಲಿ ಹಾಕಿ ಬೆಳೆಸುತ್ತಾರೆ. ನಂತರ ಏಳೆಂಟು ತಿಂಗಳಾದ ಮೇಲೆ ಈ ಸಣ್ಣ ಸಸಿಗಳನ್ನು ಪ್ಲಾಸ್ಟಿಕ್ ಪ್ಯಾಕೆಟ್‌ಗಳಿಗೆ ಹಾಕಿ ಬೆಳೆಸುತ್ತಾರೆ. ಹೀಗೆ ಬೆಳೆಸಿದ ಗುಣ ಮಟ್ಟದ ಅಡಿಕೆ ಸಸಿಗಳನ್ನು ರೈತರು ಖರೀದಿಸಿಕೊಂಡು ಹೋಗಿ ಹೊಸ ತೋಟಗಳಲ್ಲಿ ಗುಂಡಿಗಳನ್ನು ತೋಡಿ ನೆಡುತ್ತಾರೆ.

ADVERTISEMENT

‘ತಾಲ್ಲೂಕಿನಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಹೊಸ ಅಡಿಕೆ ತೋಟಗಳನ್ನು ಮಾಡಲು ಮುಂದಾಗಿರುವುದರಿಂದ ಅಡಿಕೆ ಸಸಿಗಳಿಗೆ ಭಾರಿ ಬೇಡಿಕೆ ಬಂದಿದೆ. ಸಾಮಾನ್ಯವಾಗಿ ಕಳೆದ ವರ್ಷ 1 ಅಡಿಕೆ ಸಸಿಯನ್ನು ₹ 20ರಂತೆ ಮಾರಾಟ ಮಾಡಿದ್ದೆವು. ನಾವು ನಮ್ಮ ಜಮೀನಿನಲ್ಲಿ 4 ಸಾವಿರ ಅಡಿಕೆ ಸಸಿಗಳನ್ನು ಬೆಳೆಸಿದ್ದೇವೆ. ಈ ವರ್ಷ ಅದೇ ಅಡಿಕೆ ಸಸಿಗಳನ್ನು ₹ 38ರಿಂದ ₹ 40ಕ್ಕೆ ಮಾರಾಟ ಮಾಡುತ್ತಿದ್ದೇವೆ. ಬೇಡಿಕೆ ಹೆಚ್ಚಾದ ಕಾರಣದಿಂದಾಗಿ ಅಡಿಕೆ ಸಸಿಯ ಬೆಲೆಯೂ ಏರಿಕೆಯಾಗಿದೆ. ಮೂರು ವರ್ಷಗಳಿಂದ ಅಡಿಕೆಗೆ ಉತ್ತಮ ದರ ಸಿಕ್ಕಿರುವುದರಿಂದ ಉತ್ತೇಜನಗೊಂಡ ರೈತರು ಹೊಸ ಅಡಿಕೆ ತೋಟಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ರೈತರು ಮುಂಗಡವಾಗಿ ಹಣ ಕೊಟ್ಟು ಅಡಿಕೆ ಸಸಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಈಗ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಬಿದ್ದಿರುವುದರಿಂದ ಅಡಿಕೆ ಸಸಿಗಳನ್ನು ರೈತರು ಕೊಂಡೊಯ್ಯುತ್ತಿದ್ದಾರೆ’ ಎನ್ನುತ್ತಾರೆ ಅಡಿಕೆ ಸಸಿ ಬೆಳೆಸಿ ಮಾರಾಟ ಮಾಡುತ್ತಿರುವ ತಾಲ್ಲೂಕಿನ ಗಂಗಗೊಂಡನಹಳ್ಳಿ ಗ್ರಾಮದ ರೈತ ಮಹಿಳೆ ಪುಟ್ಟಮ್ಮ.

‘ಈ ತಾಲ್ಲೂಕಿನಲ್ಲಿರುವ ಮಣ್ಣು ಮತ್ತು ಹವಾಗುಣ ಅಡಿಕೆ ಬೆಳೆಯಲು ಉತ್ಕೃಷ್ಟವಾಗಿದೆ. ಹೀಗಾಗಿ ತಾಲ್ಲೂಕಿನ ರೈತರು ಪ್ರತಿ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಹೊಸದಾಗಿ ಅಡಿಕೆ ತೋಟಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಅಡಿಕೆ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ರೋಗಬಾಧೆಯೂ ಇಲ್ಲ. ಉತ್ತಮವಾಗಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕೂಡ ಹೆಚ್ಚಳವಾಗಿದೆ. ನೀರಿನ ತೊಂದರೆ ಇಲ್ಲದೇ ಇರುವುದರಿಂದ ರೈತರು ಹೊಸದಾಗಿ ಅಡಿಕೆ ತೋಟಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ಹೀಗೆಯೇ ಹೊಸದಾಗಿ ಅಡಿಕೆ ತೋಟದ ಪ್ರಮಾಣ ಹೆಚ್ಚಾದರೆ ಇನ್ನೆರಡು ವರ್ಷಗಳಲ್ಲಿ ತಾಲ್ಲೂಕಿನಲ್ಲಿ ಅಡಿಕೆ ಬೆಳೆಯುವ ಪ್ರದೇಶ 50 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಮುಟ್ಟುವ ಲಕ್ಷಣಗಳು ಕಂಡು ಬರುತ್ತಿವೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಲೋಹಿತ್ ತಿಳಿಸಿದರು.

‘ಅಡಿಕೆ ಬೆಳೆ ಬಿಟ್ಟರೆ ತಾಲ್ಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಎಷ್ಟೇ ಮೆಕ್ಕೆಜೋಳ ಬೆಳೆದರೂ ರೈತರಿಗೆ ಸಿಗುವ ಆದಾಯ ಅಲ್ಪವಾಗಿದೆ. ಹೀಗಾಗಿ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಾಗುವುದಿಲ್ಲ. ಮೂರು ವರ್ಷಗಳಿಂದ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ, ಜೂನ್ ತಿಂಗಳಲ್ಲಿ ಸಂತೇಬೆನ್ನೂರು ಹಾಗೂ ಕಸಬಾ ಹೋಬಳಿಗಳ ಕೆರೆಗಳನ್ನು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಮೂಲಕ ತುಂಬಿಸುವುದರಿಂದ ರೈತರು ಹೊಸದಾಗಿ ಅಡಿಕೆ ತೋಟ ಮಾಡಲು ಮುಂದಾಗುತ್ತಿದ್ದಾರೆ’ ಎಂದು ಹೊಸದಾಗಿ ಅಡಿಕೆ ತೋಟ ಮಾಡಿರುವ ದೇವರಹಳ್ಳಿ ಗ್ರಾಮದ ರೈತ ಪರಶುರಾಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.