ADVERTISEMENT

ಸೋಮವಾರಪೇಟೆ: ಜೇನು ನಂಬಿದರೆ ಬದುಕು ಸಿಹಿ: ಕೃಷಿಕ ಉತ್ತಯ್ಯರ ಯಶೋಗಾಥೆ

ಡಿ.ಪಿ.ಲೋಕೇಶ್
Published 4 ನವೆಂಬರ್ 2022, 19:30 IST
Last Updated 4 ನವೆಂಬರ್ 2022, 19:30 IST
ಸೋಮವಾರಪೇಟೆ ಸಮೀಪದ ಇನಕನಹಳ್ಳಿಯ ಉತ್ತಯ್ಯ ಅವರು ಜೇನುಪೆಟ್ಟಿಗೆಯನ್ನು ಪರೀಕ್ಷಿಸುತ್ತಿರುವುದು
ಸೋಮವಾರಪೇಟೆ ಸಮೀಪದ ಇನಕನಹಳ್ಳಿಯ ಉತ್ತಯ್ಯ ಅವರು ಜೇನುಪೆಟ್ಟಿಗೆಯನ್ನು ಪರೀಕ್ಷಿಸುತ್ತಿರುವುದು   

ಸೋಮವಾರಪೇಟೆ: ‌‘ಜೇನು ನಂಬಿದ ವರ ಬಾಳು ಸಿಹಿ’ ಎಂಬ ಮಾತನ್ನು ಇಲ್ಲಿನ ಶಾಂತಳ್ಳಿ ಹೋಬಳಿಯ ಇನಕನಳ್ಳಿ ಗ್ರಾಮದ ‍ಉತ್ತಯ್ಯ ನಿಜವಾಗಿಸಿದ್ದಾರೆ.

ಸಾಕಷ್ಟು ಕೃಷಿ ಭೂಮಿ ಇದ್ದರೂ, ಸದಾ ನಷ್ಟವನ್ನೇ ಅನುಭವಿಸುವ ರೈತರಿಗೆ ಅವರು ಮಾದರಿಯಾಗಿದ್ದಾರೆ. ಕಾಫಿ, ಮೆಣಸು, ಏಲಕ್ಕಿ, ಭತ್ತ, ತರಕಾರಿಗಳನ್ನು ಬೆಳೆಯುವುದರ ಜತೆಗೆ, ಇವುಗಳಿಗೆ ಪೂರಕವಾಗಿ ಜೇನು ಕೃಷಿಯನ್ನು ಮಾಡುವ ಮೂಲಕ ಪ್ರಗತಿಪರ ಕೃಷಿಕ ಎಂಬ ಹೆಸರು ಗಳಿಸಿದ್ದಾರೆ.

ಬೆಟ್ಟದಳ್ಳಿ ಹಾಗೂ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಜೇನು ಕೃಷಿಕರ ಪೆಟ್ಟಿಗೆಗಳಲ್ಲಿ ‘ಥಾಯ್ ಸ್ಯಾಕ್ ಬ್ರೂಡ್’ ನಂಜುರೋಗ ಕಾಣಿಸಿಕೊಂಡು ನಷ್ಟ ಅನುಭವಿಸಿದ್ದಾರೆ. ಆದರೆ, ಇವರು ಮಾತ್ರ ಜೇನಿನೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದು, ತಮ್ಮ ಕೃಷಿ ಜಮೀನಿನ ಆಸುಪಾಸಿನಲ್ಲಿ 80 ಜೇನುಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಕಾಯಿಲೆಯ ಲಕ್ಷಣಗಳು ಕಂಡು ಬಂದಲ್ಲಿ ಮುಂಜಾಗ್ರತೆಯಾಗಿ ಔಷಧಿ ಯನ್ನು ನೀಡಿ ಜೇನು ಹುಟ್ಟು ಪೆಟ್ಟಿಗೆಯನ್ನು ಬಿಟ್ಟುಹೋಗದ ಹಾಗೆ ಕಾಪಾಡಿಕೊಂಡಿದ್ದಾರೆ.

ADVERTISEMENT

ಒಂದು ಜೇನು ಕುಟುಂಬದಿಂದ ವರ್ಷಕ್ಕೆ ₹ 10 ಸಾವಿರ ಆದಾಯ ಬರುತ್ತದೆ. ಕೇವಲ ಸ್ವಾಬಾವಿಕವಾಗಿ ಜೇನು ಹುಳುಗಳು ಸಂಗ್ರಹಿಸುವ ಜೇನು ಬಿಟ್ಟರೆ, ಸಕ್ಕರೆ ಅಥವಾ ಇನ್ನಿತರ ಯಾವುದೇ ಕಲಬೆರಕೆ ಜೇನು ಇಲ್ಲಿ ಸಿಗುವುದಿಲ್ಲ. ಒಂದು ಕೆ.ಜಿ. ಜೇನು ₹ 1,500 ಗಳವರೆಗೆ ಮಾರಾಟವಾಗುತ್ತದೆ. ಕೆಲವು ಹೋಂ ಸ್ಟೇ ಮಾಲೀಕರು ಇಲ್ಲಿಯೆ ಬಂದು ಉತ್ತಮ ಬೆಲೆ ನೀಡಿದ ಜೇನು ಖರೀದಿಸಿಕೊಂಡು ಹೋಗುತ್ತಿದ್ದಾರೆ.

ರೋಗ ಪೀಡಿತ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಇತ್ತೀಚೆಗೆ ಮಾರ್ಪಡಿಸಿದ್ದು, ವರ್ಷಕ್ಕೆ 35 ರಿಂದ 45 ಚೀಲ ಕಾಫಿ ಮತ್ತು ಕಾಳು ಮೆಣಸು 3 ಎಕರೆ ಏಲಕ್ಕಿ ತೋಟದಲ್ಲಿ 350 ರಿಂದ 400 ಕೆ.ಜಿ. ವರೆಗೆ ಏಲಕ್ಕಿ ಹಾಗೂ 2.5 ಎಕರೆ ಗದ್ದೆಯಲ್ಲಿ ಭತ್ತವನ್ನು ಬೆಳೆದ ನಂತರ ಹಸಿರು ಮೆಣಸು, ಬೀನ್ಸ್ ಸೇರಿದಂತೆ ಇನ್ನಿತ್ತರ ತರಕಾರಿಯನ್ನು ಬೆಳೆದು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. 80 ಜೇನು ಪೆಟ್ಟಿಗೆಗಳಿಂದ ವಾರ್ಷಿಕ 350 ರಿಂದ 450 ಕೆ.ಜಿ ವರಗೆ ಗುಣಮಟ್ಟದ ಜೇನು ಉತ್ಪಾದಿಸುತ್ತಿದ್ದಾರೆ. ಇದರೊಂದಿಗೆ ಬಿಡು ವಿನ ಸಮಯದಲ್ಲಿ ಸಣ್ಣ ಪುಟ್ಟ ವ್ಯವ ಹಾರ ಮಾಡುವ ಮೂಲಕ ಎಲ್ಲ ಮೂಲಗ ಳಿಂದ ವಾರ್ಷಿಕ ₹ 15 ಲಕ್ಷ ವರಮಾನ ಗಳಿಸುತ್ತಿದ್ದಾರೆ.

ಕಾರ್ಮಿಕರನ್ನು ಹೆಚ್ಚಾಗಿ ನಂಬಿ ಕೊಳ್ಳದೆ, ಇವರೇ ಕೃಷಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕೃಷಿಯಲ್ಲಿ ಇವರೊಂದಿಗೆ ಕೈ ಜೋಡಿಸುತ್ತಿರುವ ಪತ್ನಿ ಸವಿತಾ ನಿರಂತರ ಸಹಕಾರ ನೀಡುತ್ತಿದ್ದಾರೆ. ಬೆಂಗಳೂರಿನ ಎವೈಎಸ್ ಕ್ರೀಡಾಶಾಲೆಯಲ್ಲಿ ಮಗ ವಿದ್ಯಾಭ್ಯಾಸ ಮುಂದುವರೆಸಿದರೆ, ಕೊನೆಯ ಪುತ್ರ ಇಲ್ಲಿನ ಒಎಲ್‍ವಿ ಕಾನ್ವೆಂಟ್‍ನಲ್ಲಿ 8ನೇ ತರಗತಿ ಅಭ್ಯಾಸ ಮಾಡುತ್ತಿದ್ದಾನೆ.

‘ಕೃಷಿ ನಂಬಿ ಅದರಲ್ಲಿಯೇ ನಮ್ಮನ್ನು ತೊಡಗಿಸಿಕೊಂಡರೆ, ಅದು ನಮ್ಮನ್ನು ಕೈ ಬಿಡುವುದಿಲ್ಲ. ಪ್ರಯೋಗಗಳ ಮೂಲಕ ಕೃಷಿ ಚಟುವಟಿಕೆ ನಡೆಸಬೇಕು. ಬೆಳೆಗಳು ಮಳೆಯಲ್ಲಿ ಹಾನಿಯಾದರೆ, ಸರ್ಕಾರ ಪರಿಹಾರ ನೀಡುತ್ತದೆ. ಆದರೆ, ಏಲಕ್ಕಿಗೆ ಪರಿಹಾರ ನೀಡುತ್ತಿಲ್ಲ’ ಎಂದು ಉತ್ತಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.