ADVERTISEMENT

ತೀರ್ಥಹಳ್ಳಿಯಲ್ಲಿ ಆಗ್ರಾದ ‘ಪೇಠಾ‘ ತಯಾರಿ:ಬೆಳೆದ ಕುಂಬಳ ನಷ್ಟವಾಗದಂತೆ ರೈತನ ಐಡಿಯಾ

​ಪ್ರಜಾವಾಣಿ ವಾರ್ತೆ
Published 6 ಮೇ 2020, 8:22 IST
Last Updated 6 ಮೇ 2020, 8:22 IST
ಬೂದು ಕುಂಬಳದಿಂದ ಪೇಠಾ ಸಿಹಿ ತಿನಿಸು ತಯಾರಿ– ಸಾಂಕೇತಿಕ ಚಿತ್ರ
ಬೂದು ಕುಂಬಳದಿಂದ ಪೇಠಾ ಸಿಹಿ ತಿನಿಸು ತಯಾರಿ– ಸಾಂಕೇತಿಕ ಚಿತ್ರ   

ತೀರ್ಥಹಳ್ಳಿ: ಬೆಳೆದ ಬೂದು ಕುಂಬಳ ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ಹೊಲದಿಂದ ತಲುಪಬೇಕಾದ ಸ್ಥಳವನ್ನು ತಲುಪದೆ, ಸ್ಥಳೀಯವಾಗಿ ಮಾರಾಟವೂ ಆಗದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ 'ಪೇಠಾ' ಅವರಿಗೆಲ್ಲ ಸ್ವಲ್ಪ ಮಟ್ಟಿನ ಸಿಹಿ ನೀಡುತ್ತಿದೆ.

ಆಗ್ರಾದ 'ಪೇಠಾ' ಎಂದೇ ಪ್ರಸಿದ್ಧಿಯಾಗಿರುವ ಸಿಹಿ ತಿನಿಸು ಈಗ ಮಲೆನಾಡು ಭಾಗವಾದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತಯಾರಾಗುತ್ತಿದೆ.

50ಕ್ಕಿಂತಲೂ ಹೆಚ್ಚು ರೈತರು ಸುಮಾರು 2,000 ಟನ್‌ಗಳಷ್ಟು ಬೂದು ಕುಂಬಳ ಬೆಳೆದು ಬಿಕರಿಯಾಗದೆ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಉತ್ತರ ಪ್ರದೇಶ, ದೆಹಲಿ ಹಾಗೂ ರಾಜಸ್ಥಾನಗಳಲ್ಲಿ ಹೆಚ್ಚಾಗಿ ಸಿದ್ಧಪಡಿಸಲಾಗುವ ಪೇಠಾ ಸಿಹಿ ತಿನಿಸಿಗಾಗಿ ಬೂದು ಕುಂಬಳ ಬಳಕೆಯಾಗುತ್ತದೆ. ಆದರೆ, ಲಾಕ್‌ಡೌನ್‌ನಿಂದಾಗಿ ಪೇಠಾ ತಯಾರಿಸುವ ಘಟಕಗಳುಕಾರ್ಯಸ್ಥಗಿತಗೊಳಿಸಿವೆ ಹಾಗೂ ಸಾಗಣೆಗೂ ಅಡಚಣೆ ಉಂಟಾಗಿರುವುದರಿಂದ ತೀರ್ಥಹಳ್ಳಿಯ ಕುಂಬಳಉತ್ತರ ಭಾರತಕ್ಕೆ ರವಾನೆಯಾಗದೇ ಉಳಿಯಿತು.

ಯುವ ಉದ್ಯಮಿ ವಿಶ್ವನಾಥ್‌ ಕುಂಟವಳ್ಳಿ ಅವರು ಸ್ಥಳೀಯವಾಗಿ ಪೇಠಾ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆರವಿಗೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ತಹಶೀಲ್ದಾರ್‌ಶ್ರೀಪಾದ್‌ ಎಸ್‌.ಬಿ. ಹಲವು ಮಾರ್ಗಗಳ ಹುಡುಕಾಟದೊಂದಿಗೆ ವಿಶ್ವನಾಥ್‌ ಅವರನ್ನು ಸಂಪರ್ಕಿಸಿದರು. ವಿಶ್ವನಾಥ್‌ ಅವರು ಇಬ್ಬನಿ ಫುಡ್‌ ಇಂಡಸ್ಟ್ರೀಸ್‌ ನಡೆಸುತ್ತಿದ್ದಾರೆ.


ಯಾವತ್ತಿಗೂ ಪೇಠಾ ತಿನಿಸು ಸಿದ್ಧಪಡಿಸಿ ಗೊತ್ತಿರದ ವಿಶ್ವನಾಥ್‌ ಹೊಸ ಸವಾಲಾಗಿ ಸ್ವೀಕರಿಸಿ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಪೇಠಾ ತಯಾರಿಕೆಯ ಹಂತಗಳನ್ನು ಕಲಿತರು. ಯುಟ್ಯೂಬ್‌ ವಿಡಿಯೊಗಳನ್ನು ನೋಡುತ್ತಲೇ ವಿಶ್ವನಾಥ್‌ ಮತ್ತು ಅವರ ತಂಡ ರುಚಿಕರವಾದ ಪೇಠಾ ಸಿದ್ಧಪಡಿಸಿಯೇ ಬಿಟ್ಟರು.

ಮೊದಲ ಹಂತದಲ್ಲಿ ಪೇಠಾ ತಿನಿಸನ್ನು ಸ್ಥಳೀಯ ಜರಿಗೆ ಹಂಚಿ ಅವರಿಂದ ಪ್ರತಿಕ್ರಿಯೆ ಪಡೆಯಲಾಯಿತು. ತಿನಿಸು ಸವಿದವರು ಸೊಗಸಾಗಿದೆ ಎಂಬ ಅಭಿಪ್ರಾಯಗಳನ್ನು ಹಂಚಿಕೊಂಡರು. ಇದರಿಂದ ಸ್ಫೂರ್ತಿ ಪಡೆದ ವಿಶ್ವನಾಥ್‌, ದೊಡ್ಡ ಪ್ರಮಾಣದಲ್ಲಿ ಪೇಠಾ ತಯಾರಿಕೆಗೆ ಮುಂದಾಗಿ 'ತೀರ್ಥಹಳ್ಳಿ ಪೇಠಾ ಬ್ರ್ಯಾಂಡ್‌' ಸೃಷ್ಟಿಸಿದರು.

ADVERTISEMENT

ಪೇಠಾ ತಯಾರಿಕೆ ತುಂಬ ದೊಡ್ಡ ‍ಪ್ರಕ್ರಿಯೆಯಾಗಿದ್ದು, ಮೊದಲಿಗೆ ಆರು ಮಂದಿ ಯಂತ್ರಗಳ ಸಹಾಯವಿಲ್ಲದೆ ಆರು ದಿನಗಳಲ್ಲಿ ಪೇಠಾ ತಯಾರಿಸಿದರು. ಯಂತ್ರಗಳನ್ನು ಬಳಸಿ ನಿತ್ಯ ಸುಮಾರು 10 ಟನ್‌ಗಳಷ್ಟು ಪೇಠಾ ಸಿದ್ಧಪಡಿಸಬಹುದಾಗಿದೆ ಎಂದು ವಿಶ್ವನಾಥ್‌ ಹೇಳುತ್ತಾರೆ.

ಪ್ರತಿ ಟನ್‌ಗೆ ₹5,000 ನೀಡಿ ಈವರೆಗೂ ಎರಡು ಟನ್‌ ಬೂದು ಕುಂಬಳ ಖರೀದಿಸಿದ್ದಾರೆ. ಸಾಮಾನ್ಯ ದರಕ್ಕಿಂತಲೂ ಇದು ಕಡಿಮೆಯಾದರೂ, ರೈತರು ಕೊಳೆಯಲು ಬಿಡುವುದಕ್ಕಿಂತಲೂ ಕನಿಷ್ಠ ದರದ ನೆಮ್ಮದಿ ಪಡೆದಿದ್ದಾರೆ.

ವಾಣಿಜ್ಯ ಉದ್ದೇಶಿತ ತಯಾರಿಕೆ ಆರಂಭವಾಗುತ್ತಿದ್ದಂತೆ ರೈತರು ಉತ್ತಮ ಬೆಲೆ ಪಡೆಯಲಿದ್ದಾರೆ ಎಂದು ತಹಶೀಲ್ದಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ಥಳೀಯವಾಗಿ ಉತ್ಪಾದನೆ ಮಾಡುವುದು ರೈತರು ಹಾಗೂ ಉದ್ಯಮಿಗಳು ಇಬ್ಬರಿಗೂ ಲಾಭಕರವಾಗಲಿದೆ. ಈ ಪ್ರಯತ್ನ ಮುಂದಿನ ದೊಡ್ಡ ಪ್ರಯಾಣದ ಸಣ್ಣ ಹೆಜ್ಜೆಯಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.