ADVERTISEMENT

ಪ್ರಗತಿಪರ ರೈತರ ಯಶೋಗಾಥೆ: ಕೆಂಪು ಸೊಳೆ ಹಲಸು ಅರಸುತ್ತಾ..

ವೆಂಕಟೇಶ ಜಿ.ಎಚ್.
Published 27 ಜುಲೈ 2024, 23:30 IST
Last Updated 27 ಜುಲೈ 2024, 23:30 IST
<div class="paragraphs"><p>ತೋಟದಲ್ಲಿ ರುದ್ರಾಕ್ಷಿ ತಳಿಯ ಹಲಸಿನ ಜೊತೆ ಅನಂತಮೂರ್ತಿ ಜವಳಿ</p></div>

ತೋಟದಲ್ಲಿ ರುದ್ರಾಕ್ಷಿ ತಳಿಯ ಹಲಸಿನ ಜೊತೆ ಅನಂತಮೂರ್ತಿ ಜವಳಿ

   
ಇದು ಪ್ರಗತಿಪರ ರೈತರ ಯಶೋಗಾಥೆ. ಅನಂತಮೂರ್ತಿ ಅವರು ಅಪರೂಪದ ಹಲಸು ತಳಿಗಳ ಸಂರಕ್ಷಣೆ ಮತ್ತು ಕಸಿ ಮೂಲಕ ಮಹತ್ತರ ಕಾಯಕದಲ್ಲಿ ತೊಡಗಿದ್ದಾರೆ. ಇವರ ತೋಟದಲ್ಲಿ 24ಕ್ಕೂ ಹೆಚ್ಚು ತಳಿಯ ಹಲಸಿನ ಮರಗಳಿವೆ. ಹಳದಿ ಬಣ್ಣದ ಸೊಳೆಯ ರುದ್ರಾಕ್ಷಿ ತಳಿ ಹಲಸಿಗೆ ಪೇಟೆಂಟ್‌ ಕೂಡ ಪಡೆದಿದ್ದಾರೆ.

ಹಲಸು ತಳಿಗಳ ಮೋಹಕ್ಕೆ ಬಿದ್ದ ರೈತ ಅನಂತಮೂರ್ತಿ ಜವಳಿ ಕೆಂಪು ಸೊಳೆ ಇರುವ ವಿಶಿಷ್ಟ ರುದ್ರಾಕ್ಷಿ ತಳಿಯ ಹಲಸು ಹುಡುಕುತ್ತಾ ಪಶ್ಚಿಮಘಟ್ಟದಲ್ಲಿ ಅಲೆದಾಡಿದ್ದರು. ಇದಕ್ಕೆ ಕಾರಣವಿದೆ. ರುದ್ರಾಕ್ಷಿ ಹಲಸಿನ ತಳಿಯಲ್ಲಿ ಹಳದಿ ಬಣ್ಣದ ಸೊಳೆ ಇರುವಾಗ, ಕೆಂಪು ಬಣ್ಣದ್ದೂ ಇರಬೇಕಲ್ಲವೇ ಎಂದು ಒಳಮನಸ್ಸು ಹೇಳುತ್ತಲೇ ಇತ್ತು. ತಮ್ಮ ಕುತೂಹಲವನ್ನು ತಣಿಸಿಕೊಳ್ಳುವ ಸಲುವಾಗಿಯೇ ಹುಡುಕಾಟ ನಡೆಸಿದ್ದರು. ಒಂದು ದಿನ ಇವರು ಹುಡುಕುತ್ತಿದ್ದ ಹಲಸು ಸಿಕ್ಕಿಯೇ ಬಿಟ್ಟಿತು. ಅದನ್ನು ತಂದು ಕಸಿಮಾಡಿ ತಮ್ಮ ತೋಟದಲ್ಲಿ ಬೆಳೆಸಿದ್ದು, ಅವು ಫಲ ಕೊಡುತ್ತಿವೆ.

ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ–ತೀರ್ಥಹಳ್ಳಿ ರಸ್ತೆಯಲ್ಲಿರುವ ಬರುವೆ ಗ್ರಾಮದ ತಮ್ಮ ತೋಟದಲ್ಲಿ ತಿರುಗಾಡುತ್ತಲೇ 74 ವರ್ಷದ ಅನಂತಮೂರ್ತಿ ಹಲಸಿನ ತಳಿಗಳ ಹುಡುಕಾಟದ ತಮ್ಮ ಮೂರೂವರೆ ದಶಕಗಳ ಅನುಭವವನ್ನು ಹಂಚಿಕೊಂಡರು. 

ADVERTISEMENT

ವರ್ಕೋಡು ಗ್ರಾಮ ಸೇವಕ ಬರುವೆ ಗ್ರಾಮದ ಅಳಿಯ. ಅವರು ಒಮ್ಮೆ ಅನಂತಮೂರ್ತಿ ಅವರ ತೋಟ ನೋಡುತ್ತಾ ‘ಹಲಸಿನ ಗಿಡ ಕಸಿ ಕಟ್ಟುತ್ತೀರಾ? ನಮ್ಮಲ್ಲೊಂದು ರುದ್ರಾಕ್ಷಿ ಹಲಸಿನಮರ ಇದೆ. ಅದರಲ್ಲಿ ಬಿಡುವ ಕೆಂಪು ಸೊಳೆಯ ಹಣ್ಣು ಬಹಳ ರುಚಿ’ ಅಂದರು. ಅನಂತಮೂರ್ತಿ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಏಕೆಂದರೆ, ಇವರು ಹುಡುಕುತ್ತಿದ್ದ ಬಳ್ಳಿಯೊಂದು ಕಾಲಿಗೆ ಸಿಕ್ಕಂತಾಗಿತ್ತು.

‘ವರ್ಕೋಡಿಗೆ ಕೂಡಲೇ ಓಡಿಹೋದೆ. ಅಲ್ಲಿ ಶ್ರೀಕಂಠಪ್ಪ ಗೌಡರ ಮನೆಯ ಹಿತ್ತಿಲಲ್ಲಿದ್ದ ಮರವನ್ನು ಕಣ್ತುಂಬಿಕೊಂಡೆ. ಅದರ ಕುಡಿ ತಂದು ತೋಟದಲ್ಲಿ ನೆಟ್ಟೆ. ಈಗ ನಮ್ಮಲ್ಲಿ ಹತ್ತಕ್ಕೂ ಹೆಚ್ಚು ಕೆಂಪು ಸೊಳೆಯ ರುದ್ರಾಕ್ಷಿ ತಳಿ ಹಲಸಿನಮರಗಳು ಇವೆ’ ಎಂದು ಅನಂತಮೂರ್ತಿ ಆ ಸಾಲು ತೋರಿಸಿದರು.

ಅನಂತಮೂರ್ತಿ ಎಪ್ಪತ್ತರ ದಶಕದಲ್ಲಿ ಸುರತ್ಕಲ್‌ನ ಆಗಿನ ಕೆಆರ್‌ಇಸಿಯಲ್ಲಿ ಎಲೆಕ್ಟ್ರಿಕ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು. ಕೆಇಬಿಯಲ್ಲಿ ನೌಕರಿ. ಹತ್ತು ವರ್ಷ ಕೆಲಸ ಮಾಡಿ ಸರ್ಕಾರಿ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೇ ರಾಜೀನಾಮೆ ಕೊಟ್ಟು ಕೃಷಿಯಲ್ಲಿ ತೊಡಗಿಕೊಂಡರು. ಹಲಸು, ಮಾವು, ಬಾಳೆ, ಗುಲಾಬಿ ಸೇರಿದಂತೆ ವಿಶೇಷವಾಗಿ ಹಣ್ಣು, ಹೂವಿನ ತಳಿಗಳಿಗೆ  ಹದಿಮೂರು ಎಕರೆ ಜಮೀನನ್ನು ಪ್ರಯೋಗ ಶಾಲೆಯಾಗಿ ಮಾಡಿಕೊಂಡಿದ್ದಾರೆ.

ಕೆಂಪು ರುದ್ರಾಕ್ಷಿ ತಳಿ ಹಲಸಿನ ಹಣ್ಣಿನ ತೊಳೆಗಳು

ಬಾಲ್ಯದಿಂದಲೂ ಹಲಸಿನ ಮೋಹ

‘ಮಲೆನಾಡಿನಲ್ಲಿ ಹಲಸು ತರಕಾರಿ ಮತ್ತು ಹಣ್ಣು–ಹೀಗೆ ಎರಡು ರೀತಿಯಲ್ಲೂ ಬಳಕೆಯಾಗುತ್ತದೆ. ಅರವತ್ತರ ದಶಕದಲ್ಲಿ ಆಹಾರದ ಕೊರತೆ ಇದ್ದಾಗ ಹಲಸು ಮಲೆನಾಡಿನ ಜನರ ಹಸಿವು ನೀಗಿಸಿತ್ತು. ಆಗ ಅದರ ಬೀಜ ಕೂಡ ಬೇಯಿಸಿ ತಿನ್ನುತ್ತಿದ್ದೆವು. ಹಪ್ಪಳ, ಸಾರು–ಪಲ್ಲೆ, ಬಿದಿರಿನ ಪಟ್ಟಿಯಲ್ಲಿಟ್ಟು ಬೇಯಿಸಿ ಶೀಟ್ ಹೆಸರಿನ ಸಿಹಿ ಕೂಡ ಮಾಡುತ್ತಿದ್ದ ನೆನಪು. ಹೀಗಾಗಿ ಸಹಜವಾಗಿಯೇ ನನಗೆ ಹಲಸಿನ ಬಗ್ಗೆ ಹೆಚ್ಚು ಮೋಹ. ಅದರ ಕೃಷಿ, ತಳಿ ಸಂರಕ್ಷಣೆಯಲ್ಲಿ ತೊಡಗಿಕೊಂಡೆನು’ ಎಂದು ಅನಂತಮೂರ್ತಿ ಹೇಳುತ್ತಾರೆ.

ಅನಂತಮೂರ್ತಿ ಅವರು ಸರ್ಕಾರಿ ನೌಕರಿ ತೊರೆದ ನಂತರ ರಿಪ್ಪನ್‌ಪೇಟೆಯಲ್ಲಿ ಮೋಟಾರು ರಿಪೇರಿ ವರ್ಕ್‌ಶಾಪ್ ಇಟ್ಟುಕೊಂಡಿದ್ದರು. ಜಮೀನು, ತೋಟದಲ್ಲಿ ಪಂಪ್‌ಸೆಟ್ ದುರಸ್ತಿಗೆಂದು ರೈತರು ಕರೆಯುತ್ತಿದ್ದರು. ಅಲ್ಲಿಗೆ ಹೋದಾಗ ಹಲಸು, ಮಾವಿನಹಣ್ಣು ತಿನ್ನಲು ಕೊಡುತ್ತಿದ್ದರು. ಅವುಗಳ ರುಚಿ ನೋಡಿ ಅಪರೂಪ ಅನ್ನಿಸಿದರೆ ಅದರ ಕುಡಿ ತಂದು ತೋಟದಲ್ಲಿ ನೆಡುತ್ತಿದ್ದರು. ಇಲ್ಲವೇ ಕಸಿ ಮಾಡುತ್ತಿದ್ದರು. ಅದರ ಬೇರೆ ಬೇರೆ ತಳಿಗಳ ಸಂರಕ್ಷಿಸುವ ಇವರ ಆಸಕ್ತಿಗೆ ಇದು ನೀರೆರೆಯಿತು. ಇಬ್ಬರು ತಂಗಿಯರಿಗೆ ವರಾನ್ವೇಷಣೆಗೆ ಹೋದಾಗಲೂ ಇವರು ಹಲಸು, ಮಾವಿನ ತಳಿ ಹುಡುಕಿ ತಂದಿದ್ದರು!

‘ಹಲಸಿನಲ್ಲಿ ಎರಡು ನಮೂನೆ. ಒಂದರ ಹಣ್ಣು ಅಂಬಲಿ ರೀತಿ ನೀರಾಗುತ್ತದೆ. ಅದು ತಿನ್ನಲು ಮಜಾ ಬರೊಲ್ಲ. ಹಣ್ಣು ಕ್ರಂಚಿ ಇರಬೇಕು. ಬಯಲುಸೀಮೆಯಲ್ಲಿನ ಹಲಸಿನ ತಳಿಗಳಲ್ಲಿ ಹಣ್ಣು ಕ್ರಂಚಿಯಾಗಿಯೇ ಇರುತ್ತದೆ. ಮಲೆನಾಡಿನಲ್ಲಿ ಕಾಣಸಿಗುವ ತಳಿಗಳನ್ನು ಬಯಲುಸೀಮೆಯಲ್ಲಿ ನೆಟ್ಟರೆ ಅಂಬಲಿಯಂತೆ ಇರುವ ಹಣ್ಣು ಅಲ್ಲಿ ಕ್ರಂಚಿ ಆಗಿರುತ್ತದೆ. ಮಣ್ಣಿನ ಗುಣ, ವಾತಾವರಣ, ನೀರಿನ ಲಭ್ಯತೆ ಇದೆಲ್ಲವೂ ಹಣ್ಣಿನಲ್ಲಿನ ಸೊಳೆಯ ದೃಢತೆ ನಿರ್ಧರಿಸುತ್ತವೆ’ ಎನ್ನುತ್ತಾರೆ ಅನಂತಮೂರ್ತಿ.

ಹಲಸು ಕೃಷಿ, ತಳಿ ಸಂರಕ್ಷಣೆಯಲ್ಲಿ ಅನಂತಮೂರ್ತಿ ಪುತ್ರ, ಎಂ. ಟೆಕ್‌ ಪದವೀಧರ ಅಮೋಘ, ಉಪನ್ಯಾಸಕಿ ವೃತ್ತಿ ತೊರೆದು ಬಂದಿರುವ ಸೊಸೆ ಕೀರ್ತಿ ಭಟ್ ಕೂಡ ಕೈಜೋಡಿಸಿದ್ದು, ಅಪರೂಪದ ತಳಿ ಸಂರಕ್ಷಣೆಯ ವಾರಸುದಾರಿಕೆಯನ್ನು ವಹಿಸಿಕೊಂಡಿದೆ.

ರುದ್ರಾಕ್ಷಿ ಹಲಸಿನ ತಳಿಗೆ ಪೇಟೆಂಟ್
ಅನಂತಮೂರ್ತಿ ಅವರ ಹಿತ್ತಿಲಿನಲ್ಲಿ ಬೆಳೆದ ಹಳದಿ ಬಣ್ಣದ ಸೊಳೆಯ ರುದ್ರಾಕ್ಷಿ ತಳಿ ಹಲಸು ಹಾಗೂ ರಿಪ್ಪನ್‌ಪೇಟೆ ಬಳಿಯ ವರ್ಕೋಡಿನ ಶ್ರೀಕಂಠಪ್ಪ ಗೌಡರ ಮನೆಯ ಹಿತ್ತಿಲಿನ ಕೆಂಪು ಬಣ್ಣದ ಸೊಳೆಯ ರುದ್ರಾಕ್ಷಿ ತಳಿ ಹಲಸು ಸೇರಿದಂತೆ ಮಲೆನಾಡಿನ (ಕೆಂಪು–ಆರ್‌ಟಿಬಿ ಹಾಗೂ ಕಿತ್ತಳೆ–ಆರ್‌ಪಿಎನ್) ನಾಲ್ಕು ತಳಿಯ ಹಲಸಿಗೆ ಕೇಂದ್ರ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ಪೇಟೆಂಟ್ ನೀಡಿದೆ. ‘ಪಶ್ಚಿಮ ಘಟ್ಟದಲ್ಲಿ ಮಾತ್ರ ಈ ತಳಿಯ ಮರಗಳು ಸಿಗುತ್ತವೆ. ವರ್ಕೋಡು ಗ್ರಾಮದ ಶ್ರೀಕಂಠಪ್ಪಗೌಡರ ಮನೆಯ ಹಿತ್ತಿಲಲ್ಲಿರುವ ಕೆಂಪು ಸೊಳೆಯ ರುದ್ರಾಕ್ಷಿ ತಳಿಯ ಹಲಸಿನ ಮರ ಸುಮಾರು 500 ವರ್ಷದ ಹಳೆಯದ್ದು. ರಿಪ್ಪನ್‌ಪೇಟೆಯ ನಮ್ಮ ಹಳೆಯ ಮನೆಯ ಹಿತ್ತಿಲಲ್ಲಿ ಇರುವ ಹಳದಿ ಬಣ್ಣದ ತೊಳೆಯ ರುದ್ರಾಕ್ಷಿ ಹಲಸಿನಮರ ಅಮ್ಮ ಹಾಕಿದ್ದು’ ಎಂದು ಅನಂತಮೂರ್ತಿ ನೆನಪಿಸಿಕೊಳ್ಳುತ್ತಾರೆ. ರೈತರು ಹಲಸು ಬೆಳೆಯುವುದು ಮಾತ್ರವಲ್ಲ, ತಳಿ ಸಂರಕ್ಷಣೆಗೆ ಒತ್ತು ನೀಡಿದರೆ ಪೇಟೆಂಟ್‌ನ ಶಕ್ತಿ ದೊರೆತು ಆರ್ಥಿಕವಾಗಿಯೂ ಲಾಭವಾಗಲಿದೆ ಎಂದು ಅನಂತಮೂರ್ತಿ ಹೇಳುತ್ತಾರೆ. (9448554514)
ಪೇಟೆಂಟ್ ದೊರೆತಿರುವ ಹಳದಿ ರುದ್ರಾಕ್ಷಿ ತಳಿಯ ಮೂಲ ಮರ

ಅಕಾಲದಲ್ಲೂ ಹಣ್ಣು ಬಿಡುವ ತಳಿ..

ಬಯಲುಸೀಮೆ, ಮಲೆನಾಡು, ಕರಾವಳಿ ಭಾಗದಲ್ಲಿ ಬೇರೆ ಬೇರೆ ಹಂಗಾಮಿನಲ್ಲಿ ಬರುವ ಅಕಾಲದಲ್ಲಿ ಫಸಲು ಕೊಡುವ ಹಲಸಿನ ತಳಿಗಳನ್ನು ಅನಂತಮೂರ್ತಿ ಅವರ ತೋಟದಲ್ಲಿ ಕಾಣಬಹುದು.

ಹಳದಿ, ಕೆಂಪು, ತಿಳಿಹಳದಿ, ತಿಳಿಗೆಂಪು, ಕೇಸರಿ ಬಣ್ಣ, ಬಂಗಾರದ ವರ್ಣದ ತೊಳೆಗಳು ಇರುವ ಭದ್ರಾವತಿ ಯೆಲ್ಲೋ (ಭದ್ರಾವತಿಯ ವಿಐಎಸ್‌ಎಲ್ ಕಾಲೊನಿಯಲ್ಲಿ ದೊರೆತದ್ದು), ವರ್ಷವಿಡೀ ಹಣ್ಣು ಕೊಡುವ ಕೊಡಗಿನ ಬಿ–365 (ಮೂರ್ನಾಡಿನ ಬೆಳ್ಳಿಯಪ್ಪ ಅವರ ತೋಟದಲ್ಲಿ ಗುರುತಿಸಿದ್ದು), ಕೆಳದಿ ಬಕ್ಕೆ, ಬಂಗಾರ ವರ್ಣದ ತೊಳೆಯ ಕನಕ, ಚಂದ್ರ ಹಲಸು, ಪ್ರಕಾಶಚಂದ್ರ, ಥೈಯ್ಲೆಂಡ್‌  ಪಿಂಕ್, ಡ್ಯಾಂಗ್ ಸೂರ್ಯ, ಮಂಕಳಲೆ ರೆಡ್, ಜಿಕೆವಿಕೆ ರೆಡ್‌, ದೊಡ್ಡಬಳ್ಳಾಪುರ ಬಳಿಯ ತೂಬಗೆರೆಯ ರೆಡ್‌, ಲಾಲ್‌ಬಾಗ್ ಮಧುರಾ, ಸ್ವರ್ಣಾ, ಸೊಂಪಾಡಿ ಗಮ್‌ಲೆಸ್‌, ವಿಯಟ್ನಾಂ ಸೂಪರ್‌– ಹೀಗೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮಾತ್ರವಲ್ಲದೇ ವಿಯಟ್ನಾಂ, ಸಿಂಗಪುರ, ಮಲೇಶಿಯಾದ ಗಿಡ್ಡ ತಳಿಯ ಹಲಸಿನಮರಗಳು ಇವರ ತೋಟದಲ್ಲಿವೆ.

ಪ್ರಜಾವಾಣಿಯಿಂದ ‘ಶ್ರೀವಿಜಯ’ನ ಪತ್ತೆ
‘ಪ್ರಜಾವಾಣಿ’ಯ ಕೃಷಿ ಪುರವಣಿಯಲ್ಲಿ 35 ವರ್ಷಗಳ ಹಿಂದೆ ವಿಜಯನಗರದ ಎಂ.ಸಿ ಲೇಔಟ್‌ನಲ್ಲಿ ಮನೆ ಪಕ್ಕದಲ್ಲಿ ಬೆಳೆದ ಹಲಸಿನ ಮರ ಟೆರೇಸ್‌ಗೂ ಚಾಚಿತ್ತು. ಮರದ ಟೊಂಗೆಗಳೇ ಕಾಣದಷ್ಟು ಹಣ್ಣು ಬಿಟ್ಟಿರುವ ಬಗ್ಗೆ ಚಿತ್ರ ಸಮೇತ ಲೇಖನ ಬಂದಿತ್ತು. ಅದು ವರ್ಷವಿಡೀ ಹಣ್ಣು ಬಿಡುವ ಹಲಸಿನ ಮರ ಎಂಬುದು ಉಲ್ಲೇಖಗೊಂಡಿತ್ತು. ಅದನ್ನು ಓದಿ ಬೆಂಗಳೂರಿಗೆ ತೆರಳಿ ಆ ಮನೆಯ ಮಾಲೀಕ ಶ್ರೀನಿವಾಸಮೂರ್ತಿ ಅವರನ್ನು ಕಂಡು, ಹಣ್ಣು ತಿಂದು ಮರದ ಬಗ್ಗೆ ಮಾಹಿತಿ ಪಡೆದಿದ್ದೆನು’ ಎಂದು ಅನಂತಮೂರ್ತಿ ನೆನಪಿಸಿಕೊಳ್ಳುತ್ತಾರೆ. ಎಂಸಿ ಲೇಔಟ್‌ನಲ್ಲಿ ಬೆಳೆದಿದ್ದ ಆ ಮರದ ಕುಡಿ ತಂದು ತೋಟದಲ್ಲಿ ನೆಟ್ಟಿದ್ದಾರೆ. ಅದು ಈಗ ದೊಡ್ಡ ಮರ ಆಗಿದೆ. ಆ ತಳಿಗೆ ‘ಶ್ರೀವಿಜಯ’ (ಶ್ರೀನಿವಾಸಮೂರ್ತಿ–ವಿಜಯನಗರ) ಎಂದು ಅನಂತಮೂರ್ತಿ ಹೆಸರಿಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.