ADVERTISEMENT

ಭತ್ತಕ್ಕೆ MSPಗಿಂತಲೂ ಹೆಚ್ಚು ಬೆಲೆ; ಖರೀದಿ ಕೇಂದ್ರಗಳತ್ತ ಸುಳಿಯದ ಬೆಳೆಗಾರರು

ಡಿಸೆಂಬರ್ ಆರಂಭದಿಂದಲೂ ದರ ಏರುಮುಖ

ರಾಮಮೂರ್ತಿ ಪಿ.
Published 19 ಡಿಸೆಂಬರ್ 2025, 0:30 IST
Last Updated 19 ಡಿಸೆಂಬರ್ 2025, 0:30 IST
ದಾವಣಗೆರೆ ಎಪಿಎಂಸಿ ಆವರಣದಲ್ಲಿ ಒಣಗಿಸಿದ ಭತ್ತವನ್ನು ಚೀಲಕ್ಕೆ ತುಂಬುವುದರಲ್ಲಿ ನಿರತರಾಗಿದ್ದ ಕಾರ್ಮಿಕರು ಪ್ರಜಾವಾಣಿ ಚಿತ್ರ; ಸತೀಶ್ ಬಡಿಗೇರ
ದಾವಣಗೆರೆ ಎಪಿಎಂಸಿ ಆವರಣದಲ್ಲಿ ಒಣಗಿಸಿದ ಭತ್ತವನ್ನು ಚೀಲಕ್ಕೆ ತುಂಬುವುದರಲ್ಲಿ ನಿರತರಾಗಿದ್ದ ಕಾರ್ಮಿಕರು ಪ್ರಜಾವಾಣಿ ಚಿತ್ರ; ಸತೀಶ್ ಬಡಿಗೇರ   

ದಾವಣಗೆರೆ: ಮುಂಗಾರು ಹಂಗಾಮಿನ ಭತ್ತದ ಕಟಾವು ಬಹುತೇಕ ಮುಗಿಯುವ ಹಂತದಲ್ಲಿದ್ದು, ಈ ಬಾರಿ ಬೆಂಬಲ ಬೆಲೆಗಿಂತಲೂ (ಎಂಎಸ್‌ಪಿ) ಹೆಚ್ಚಿನ ದರ ದೊರೆಯುತ್ತಿದೆ. ಇದು ಕೃಷಿಕರ ಖುಷಿಗೆ ಕಾರಣವಾಗಿದೆ. 

ಕೇಂದ್ರ ಸರ್ಕಾರ ಕ್ವಿಂಟಲ್‌ ಭತ್ತಕ್ಕೆ (ಸಾಮಾನ್ಯ) ₹ 2,369 ಹಾಗೂ ಗ್ರೇಡ್ ‘ಎ’ ಭತ್ತಕ್ಕೆ ₹ 2,389 ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ದಾವಣಗೆರೆ ಮಾತ್ರವಲ್ಲದೇ ಕೊಪ್ಪಳ, ರಾಯಚೂರು ಎಪಿಎಂಸಿಗಳಲ್ಲಿ ಕ್ವಿಂಟಲ್‌ಗೆ ಸರಾಸರಿ ₹2,500 ದರ ಇದೆ. ಗರಿಷ್ಠ ₹2,900ರವರೆಗೂ ಮಾರಾಟವಾಗುತ್ತಿದೆ.

ಹೆಚ್ಚು ಭತ್ತ ಬೆಳೆಯುವ ಪ್ರದೇಶಗಳಾದ ಗಂಗಾವತಿ, ಕಾರಟಗಿ, ಸಿಂಧನೂರು, ಸಿರಗುಪ್ಪ ಹಾಗೂ ಶಿವಮೊಗ್ಗ ಮಾರುಕಟ್ಟೆಗಳಲ್ಲೂ ಉತ್ತಮ ಬೆಲೆ ಸಿಗುತ್ತಿದೆ. ಡಿಸೆಂಬರ್ ಆರಂಭದಿಂದಲೂ ದರ ಏರುಮುಖವಾಗಿದೆ.

ADVERTISEMENT

ದಾವಣಗೆರೆ ಎಪಿಎಂಸಿಯಲ್ಲಿ ಗುರುವಾರ (ಡಿ.18) ಕ್ವಿಂಟಲ್‌ ಭತ್ತ ಕನಿಷ್ಠ ₹1,950 ಹಾಗೂ ಗರಿಷ್ಠ ₹2,803ಕ್ಕೆ (ಸರಾಸರಿ ₹2,417) ಬಿಕರಿಯಾಗಿದೆ. ಗ್ರಾಮೀಣ ಭಾಗದಲ್ಲೂ ₹ 2,450ರಿಂದ ₹ 2,500 ಬೆಲೆ ಲಭಿಸುತ್ತಿದೆ. 

ಮುಕ್ತ ಮಾರುಕಟ್ಟೆಯಲ್ಲೇ ಬೆಂಬಲ ಬೆಲೆಗಿಂತ ಹೆಚ್ಚಿನ ದರ ಸಿಗುತ್ತಿರುವ ಕಾರಣ ಬಹುಪಾಲು ರೈತರು ಗ್ರಾಮಗಳಿಗೆ ಬರುವ ವ್ಯಾಪಾರಿ ಹಾಗೂ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕೊಪ್ಪಳ ಎಪಿಎಂಸಿಯಲ್ಲಿ ಬುಧವಾರ ಕನಿಷ್ಠ ₹2,660 ಮತ್ತು ಗರಿಷ್ಠ ₹2,750 ಹಾಗೂ ಗುರುವಾರ ಸರಾಸರಿ ₹2,550 ದರದಲ್ಲಿ ಭತ್ತದ ಮಾರಾಟ ನಡೆದಿದೆ.

‘ರಾಯಚೂರು ಎಪಿಎಂಸಿಯಲ್ಲಿ ಕೆಲವು ದಿನಗಳಿಂದ ₹2,650ರ ಸರಾಸರಿಯಲ್ಲಿ ಮಾರಾಟ ನಡೆಯುತ್ತಿದೆ. ಗುರುವಾರ ಗರಿಷ್ಠ ₹2,872, ಕನಿಷ್ಠ ₹1,961 ರಂತೆ ವ್ಯಾಪಾರ ನಡೆದಿದೆ. ಆಂಧ್ರಪ್ರದೇಶದಿಂದ ಆವಕವಾಗುತ್ತಿದ್ದ ಭತ್ತದ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಇದಕ್ಕೆ ಕಾರಣ’ ಎಂದು ರಾಯಚೂರು ಎಪಿಎಂಸಿಯ ಸಹಾಯಕ ನಿರ್ದೇಶಕ ಆದಪ್ಪ ತಿಳಿಸಿದರು. 

ದಾವಣಗೆರೆಯಲ್ಲಿ ಈ ಬಾರಿ 20 ರೈತರು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ, ಯಾರೊಬ್ಬರೂ ಎಂಎಸ್‌ಪಿ ದರದಲ್ಲಿ ಭತ್ತ ಮಾರಾಟ ಮಾಡಿಲ್ಲ. ಬಹುತೇಕರು ಗ್ರಾಮಗಳಲ್ಲಿ ಹಾಗೂ ಕೆಲವರು ಎಪಿಎಂಸಿಗೆ ತಂದು ಮಾರಿದ್ದಾರೆ. 

ದಾವಣಗೆರೆ ಎಪಿಎಂಸಿಯಲ್ಲಿ ಅಕ್ಟೋಬರ್‌ನಲ್ಲಿ 7,542 ಕ್ವಿಂಟಲ್‌ ಭತ್ತ ಆವಕವಾಗಿತ್ತು. ನವೆಂಬರ್‌ನಲ್ಲಿ 1,90,012 ಕ್ವಿಂಟಲ್‌ ಹಾಗೂ ಡಿಸೆಂಬರ್‌ನಲ್ಲಿ (17ರ ವರೆಗೆ) 2,11,327 ಕ್ವಿಂಟಲ್‌ ಆವಕವಾಗಿದೆ. ರೈತರಿಗೆ ಸರಾಸರಿ ₹ 2,427 ದರ ದೊರೆತಿದೆ. 

ಎಪಿಎಂಸಿಯಲ್ಲಿ ಖರೀದಿಸಿದ ಭತ್ತವನ್ನು ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ರವಾನಿಸಲಾಗಿದೆ. ಗ್ರಾಮಗಳಲ್ಲೇ ಖರೀದಿಸಿದ ಭತ್ತವನ್ನು ಸ್ಥಳೀಯ ರೈಸ್‌ಮಿಲ್‌ಗಳಿಗೆ ಮಾತ್ರವಲ್ಲದೇ ಬೇರೆ ಜಿಲ್ಲೆಯ ರೈಸ್‌ಮಿಲ್‌ಗಳಿಗೂ ಪೂರೈಸಲಾಗುತ್ತಿದೆ. 

‘ಎಪಿಎಂಸಿ ಅಥವಾ ಖರೀದಿ ಕೇಂದ್ರಕ್ಕೆ ಭತ್ತ ಸಾಗಿಸಲು ಹೆಚ್ಚು ಹಣ ಖರ್ಚಾಗುತ್ತದೆ. ಭತ್ತ ತುಂಬುವ ಹಮಾಲರಿಗೆ ಚೀಲಕ್ಕೆ ಇಂತಿಷ್ಟು ಮೊತ್ತ ನೀಡಬೇಕು. ಖಾಲಿ ಚೀಲಗಳ ಖರೀದಿ ಹಾಗೂ ಸಾಗಣೆ ವೆಚ್ಚವನ್ನೂ ನಾವೇ ಭರಿಸಬೇಕು. ಎಪಿಎಂಸಿಗೆ ಹೋದರೂ ದಲ್ಲಾಳಿಗಳ ಮೂಲಕವೇ ಮಾರಾಟ ಮಾಡಬೇಕಾಗುತ್ತದೆ. ಹೀಗಾಗಿ ಗ್ರಾಮಕ್ಕೆ ಬಂದಿದ್ದ ವ್ಯಾಪಾರಿಗೇ ₹2,360ರ ದರಕ್ಕೆ ಮಾರಾಟ ಮಾಡಿದೆ’ ಎಂದು ದಾವಣಗೆರೆಯ ಚಿರಡೋಣಿ ಗ್ರಾಮದ ಎಸ್‌.ವಿ.ಕೇಶವಮೂರ್ತಿ ತಿಳಿಸಿದರು.

‘ಕಳೆದ ವರ್ಷ ದರ ₹1,800ಕ್ಕೆ ಕುಸಿದಿತ್ತು. ಈ ಬಾರಿ ಉತ್ತಮ ಬೆಲೆ ದೊರೆತಿದ್ದು, ಗ್ರಾಮದಲ್ಲೇ ₹2,530 ರಂತೆ 94 ಕ್ವಿಂಟಲ್‌ ಭತ್ತ ಮಾರಾಟ ಮಾಡಿದ್ದೇನೆ’ ಎನ್ನುತ್ತಾರೆ ಕಾರಿಗನೂರಿನ ರೈತ ಕೆ.ಜಿ.ಮುರುಗೇಶ್.

‘ಕನಿಷ್ಠ ₹3000 ದರ ನಿಗದಿಪಡಿಸಲಿ’

‘ಕೇಂದ್ರ ಸರ್ಕಾರ ಭತ್ತಕ್ಕೆ ನೀಡುತ್ತಿರುವ ಬೆಂಬಲ ಬೆಲೆಯನ್ನು ಪರಿಷ್ಕರಿಸಬೇಕು. ಕ್ವಿಂಟಲ್‌ಗೆ ಕನಿಷ್ಠ ₹3000 ನಿಗದಿಪಡಿಸಬೇಕು. ಕೃಷಿ ಉತ್ಪನ್ನಗಳ ಖರೀದಿಗೆ ಮಿತಿ ಹೇರಬಾರದು’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಕೋರಿದರು. ‘ಸ್ಥಳೀಯ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ತೇವಾಂಶದ ಕಾರಣ ಕೊಟ್ಟು ರೈತರಿಗೆ ಕಿರಿಕಿರಿ ಮಾಡುವುದಿಲ್ಲ. ಪೇಮೆಂಟ್‌ ಕೂಡ ಬೇಗ ಆಗುತ್ತದೆ. ಈ ಸಲ ಉತ್ತಮ ದರ ದೊರೆತಿರುವುದರಿಂದ ಬೆಳೆಗಾರರು ಖರೀದಿ ಕೇಂದ್ರಗಳಿಗೆ ತೆರಳದೇ ಗ್ರಾಮಗಳಲ್ಲೇ ಮಾರಾಟ ಮಾಡಿದ್ದಾರೆ. ಎಂಎಸ್‌ಪಿಯನ್ನು  ರೈತ ಸ್ನೇಹಿಯಾಗಿಸಬೇಕು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.