ADVERTISEMENT

ರೈತರಿಗೆ ಮಾರಕವಾದ ಸೈನಿಕ ಹುಳು: ವಿಜ್ಞಾನಿಗಳಿಂದ ಎಲೆ ಪರೀಕ್ಷೆ

ಪರ್ಯಾಯ ಬೆಳೆ ಬೆಳೆಯಲು ರೈತರ ನಿರಾಸಕ್ತಿ

ಸಿದ್ದನಗೌಡ ಪಾಟೀಲ
Published 21 ಜುಲೈ 2020, 19:30 IST
Last Updated 21 ಜುಲೈ 2020, 19:30 IST
ಡಾ.ಎಂ.ಬಿ.ಪಾಟೀಲ
ಡಾ.ಎಂ.ಬಿ.ಪಾಟೀಲ   

ಕೊಪ್ಪಳ:ಕಳೆದ ಮೂರು– ನಾಲ್ಕು ವರ್ಷಗಳಿಂದ ಮುಂಗಾರು ಮಳೆಯ ಕೊರತೆಯಿಂದ ಸಂಕಷ್ಟ ಅನುಭವಿಸಿದ್ದ ರೈತರು, ಈ ಸಾರಿ ಉತ್ತಮ ಮಳೆಸುರಿದಿದ್ದರಿಂದ ಹರ್ಷ ಚಿತ್ತರಾಗಿದ್ದಾರೆ. ಏಕದಳ, ದ್ವಿದಳ ಧಾನ್ಯ ಸೇರಿದಂತೆ ಮೆಕ್ಕೆಜೋಳ ಜಿಲ್ಲೆಯಾದ್ಯಂತ ಬಿತ್ತನೆ ಮಾಡಿದ್ದಾರೆ.

ಅದರಲ್ಲಿಯೂ ಮೆಕ್ಕೆಜೋಳವನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಿತ್ತನೆ ಮಾಡುವ ಮೂಲಕ ಜಿಲ್ಲೆಯ ಸಾಂಸ್ಕೃತಿಕ ಬೆಳೆಯನ್ನಾಗಿ ಮಾಡಿದ್ದಾರೆ. ಈ ಸಾರಿ ಕುಕನೂರು, ಯಲಬುರ್ಗಾ ತಾಲ್ಲೂಕುಗಳಲ್ಲಿ ಹೆಸರು, ಉದ್ದು, ಕುಷ್ಟಗಿ ಭಾಗದಲ್ಲಿ ಮಡಿಕೆ, ಸಜ್ಜೆ, ಅಲಸಂದಿ, ಕೊಪ್ಪಳ ಭಾಗದಲ್ಲಿ ಸಜ್ಜೆ, ಮೆಕ್ಕೆ ಜೋಳವನ್ನುಭಾಗಶಃ ಬಿತ್ತನೆ ಮಾಡಿದ್ದಾರೆ.

ಮೆಕ್ಕೆಜೋಳ ಕಡಿಮೆ ಮಾಡಿ ಪರ್ಯಾಯ ಬೆಳೆ ಬೆಳೆಯುವಂತೆ ರೈತರು ಕೃಷಿ ವಿಜ್ಞಾನಿಗಳು ಮೇಲಿಂದ ಮೇಲೆ ಹೇಳಿದರೂ ಕಡಿಮೆ ಖರ್ಚಿನ ಮತ್ತು ದಣಿವರಿಯದ ಕೆಲವು ರೈತರು ಮೆಕ್ಕೆಜೋಳ ಬೆಳೆದು ಇಳುವರಿಯತ್ತ ಚಿತ್ತ ಹರಿಸಿದ್ದಾರೆ. ಇದಕ್ಕೆ ಸರ್ಕಾರ ಈಗ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದು, ಮತ್ತಷ್ಟು ಉತ್ತೇಜಿತರಾಗಿದ್ದಾರೆ.

ADVERTISEMENT

ಈಗ ಮುಂಗಾರು ಮಳೆಗಳು ಮುಗಿದು ಹೆಸರು, ಉದ್ದು, ಅಲಸಂದಿ ಸೇರಿದಂತೆ ಬಹುಅಮೂಲ್ಯವಾದ ಬೆಳೆ ತಿಂಗಳೊಪ್ಪತ್ತಿನಲ್ಲಿ ಬಂದು ಬಿಟ್ಟಿದ್ದು, ಇನ್ನೇನು ಕೊಯ್ಲು ಆರಂಭವಾಗಿಯೇ ಬಿಡುತ್ತದೆ. ಆದರೆ ಮೆಕ್ಕೆಜೋಳ ಸ್ವಲ್ಪ ದೀರ್ಘ ಅವಧಿಗೆ ಹೋಗಲಿದ್ದು, ಸೈನಿಕ ಹುಳುವಿನ ಬಾಧೆಗೆ ಸಿಲುಕಲಿದೆ.

ಸೈನಿಕ ಹುಳು ಕಾಟ: ಈಗಾಗಲೇ ಸೈನಿಕ ಹುಳು ಬಾಧೆಯು ಹಿಟ್ನಾಳ ಹೋಬಳಿಯ ಹುಲಿಗಿ, ಹಿರೇಕಾಸನಕಂಡಿ, ಚಿಕ್ಕ ಕಾಸನಕಂಡಿಗ್ರಾಮದಲ್ಲಿ ಕಂಡು ಬಂದಿದ್ದು, ವಿಜ್ಞಾನಿಗಳು ಎಲೆಗಳ ಪರೀಕ್ಷೆ ನಡೆಸಿದ್ದಾರೆ.

ಸೈನಿಕ ಹುಳುವಿನ ಬಾಧೆ ಜಿಲ್ಲೆಗೆ ಹೊಸದಲ್ಲ. ಆದರೆ ರೈತರು ಕ್ರಿಮಿನಾಶಕ ಹೊಡೆದರೆ ಸಾಕು ಎಂಬ ಭಾವನೆಯಲ್ಲಿ ಇದ್ದಾರೆ. ಒಮ್ಮೊಂದೊಮ್ಮೆಲೆ ಜಮೀನುಗಳಲ್ಲಿ ಎಲ್ಲ ಬೆಳೆಗಳು ಮುಗಿದು ಮೆಕ್ಕೆಜೋಳ ಮಾತ್ರ ಉಳಿದಾಗ ಹುಳುಗಳು ಎಲೆ, ಕಾಂಡವನ್ನು ತಿಂದು ಇಳುವರಿ ಕುಂಠಿತಗೊಳಿಸುತ್ತವೆ.

ಪರ್ಯಾಯ ಬೆಳೆ: ಹೊಲದ ಸುತ್ತಲೂ ಚೆಂಡು ಹೂವು, ಎಳ್ಳು ಸೇರಿದಂತೆ ವಿವಿಧ ಬೆಳೆಗಳನ್ನು ಹಾಕಬೇಕು. ಆದರೆ ರೈತರು ಅಷ್ಟೊಂದು ಶ್ರಮ ಪಡುತ್ತಿಲ್ಲ. ಪರಿಣಾಮವಾಗಿ ಸೈನಿಕ ಹುಳು ಜಿಲ್ಲೆಗೆ ಕಾಲಿಡುತ್ತಿದೆ. ಮೆಕ್ಕೆಜೋಳ ಸಂಪೂರ್ಣ ಹೊಡೆ ಒಡೆಯುವವರಿಗೆ ಕಾಯುವ ಹುಳು, ಮೆಕ್ಕೆ ತೆನೆ ಆಗುವ ಸಂದರ್ಭದಲ್ಲಿ ಜೊಳ್ಳಾಗುವಂತೆ ನೋಡಿಕೊಳ್ಳುತ್ತದೆ.

ಆಗ ರೈತರು ಕ್ರಿಮಿನಾಶಕದ ಯಂತ್ರಗಳನ್ನು ಹೆಗಲೇರಿಸಿಕೊಂಡು ಹೊಲದಲ್ಲಿ ಠಿಕಾಣಿ ಹೂಡುವುದು ಪ್ರತಿವರ್ಷ ನಡೆದೇ ಇದೆ.

ಇಲ್ಲಿಯ ಮೆಕ್ಕೆಜೋಳ ವಿದೇಶಗಳಿಗೆ ರಫ್ತು ಆಗುತ್ತದೆ. ಸೈನಿಕ ಹುಳುವಿನ ಕಾಟ ಸೇರಿದಂತೆ ಇತರೆ ರೋಗಳಗಳನ್ನು ನಿರ್ಮೂಲನೆ ಮಾಡಿ ಮೆಕ್ಕೆಜೋಳಕ್ಕೆ ಮಾರುಕಟ್ಟೆ ಕಲ್ಪಿಸುವುದಲ್ಲದೆ, ಮೆಕ್ಕೆಜೋಳ ಸಂಸ್ಕರಣಾ ಘಟಕಆರಂಭಿಸಬೇಕು ಎಂಬ ಪ್ರಸ್ತಾವ ಬಹಳ ದಿನದಿಂದ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.