ADVERTISEMENT

ಇವರ ಕಬ್ಬು ಕೃಷಿಗೆ 50ರ ವಸಂತ

ಹಲವಾರು ಸವಾಲುಗಳ ನಡುವೆಯೂ ಬೆಳೆ ಉಳಿಸಿಕೊಂಡು ಬಂದಿರುವ ರೈತ ಕುಟುಂಬ

ಸಂಧ್ಯಾ ಹೆಗಡೆ
Published 22 ಏಪ್ರಿಲ್ 2019, 19:30 IST
Last Updated 22 ಏಪ್ರಿಲ್ 2019, 19:30 IST
ಕಬ್ಬಿನ ಗದ್ದೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದ ಶಿರಸಿ ತಾಲ್ಲೂಕು ಬ್ಯಾಗದ್ದೆಯ ಸತೀಶ ಹೆಗಡೆ
ಕಬ್ಬಿನ ಗದ್ದೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದ ಶಿರಸಿ ತಾಲ್ಲೂಕು ಬ್ಯಾಗದ್ದೆಯ ಸತೀಶ ಹೆಗಡೆ   

ಶಿರಸಿ: ಈ ಬಾರಿ ಹಂಗಾಮಿನಲ್ಲಿ ಟಿಎಸ್‌ಎಸ್‌ನಲ್ಲಿ ಸಿಗುತ್ತಿದ್ದ ಕಬ್ಬಿನ ಹಾಲಿನ ರುಚಿಯನ್ನು ಸವಿದವರು ನೂರಾರು ಮಂದಿ. ಆದರೆ, ಈ ಹಾಲು ಎಲ್ಲಿಯದೆಂದು ಹಲವರಿಗೆ ಗೊತ್ತಿಲ್ಲ.

ಕಾಡುಪ್ರಾಣಿಗಳ ಕಾಟಕ್ಕೆ ಹಿಂಜರಿಯದೇ, ನಿರಂತರವಾಗಿ ಕಬ್ಬನ್ನು ಬೆಳೆಯುತ್ತಿರುವ ತಾಲ್ಲೂಕಿನ ಬ್ಯಾಗದ್ದೆಯ ಸತೀಶ ಹೆಗಡೆ ಅವರ ಪರಿಶ್ರಮ ಇದರ ಹಿಂದಿದೆ. ಗದ್ದೆಯಲ್ಲಿ ಬೆಳೆದ ಕಬ್ಬನ್ನು ಕಡಿದು ತಂದು, ಅವರು ಪೇಟೆಯಲ್ಲಿರುವ ಸಹೋದರ ನಾಗರಾಜ ಹೆಗಡೆ ಅವರ ಮನೆಯಲ್ಲಿ ಸಂಗ್ರಹಿಸುತ್ತಿದ್ದರು. ಅಲ್ಲಿಂದ ಪ್ರತಿದಿನ ಟಿಎಸ್‌ಎಸ್‌ಗೆ 50 ಲೀಟರ್‌ನಷ್ಟು ತಾಜಾ ಕಬ್ಬಿನ ಹಾಲು ಪೂರೈಕೆಯಾಗುತ್ತಿತ್ತು.

ಬ್ಯಾಗದ್ದೆಯ ಗಣಪತಿ ಹೆಗಡೆ ಕುಟುಂಬದ ಕಬ್ಬು ಕೃಷಿಗೆ ಈಗ 50ರ ಹರೆಯ. 20 ವರ್ಷಗಳ ಈಚೆಗೆ ಗಣಪತಿ ಹೆಗಡೆ ಅವರ ಜೊತೆ ಮಗ ಸತೀಶ ಕೈಜೋಡಿಸುತ್ತಾರೆ. ‘ಅಪ್ಪಯ್ಯ ಕಬ್ಬು ಕೃಷಿ ಆರಂಭಿಸುವಾಗ ನೀರಾವರಿ ವ್ಯವಸ್ಥೆ ಇರಲಿಲ್ಲ. ಆಗ ಮಳೆಯನ್ನು ನಂಬಿಕೊಂಡು ಕಬ್ಬು ಬೆಳೆಯುತ್ತಿದ್ದರು. 50–60 ಡಬ್ಬಿ ಬೆಲ್ಲ ಆಗುತ್ತಿತ್ತು. ನಡುವೆ ಸ್ವಲ್ಪ ವರ್ಷ ಕಬ್ಬು ಬೆಳೆಯುವ ಪ್ರದೇಶವನ್ನು ಒಂದು ಎಕರೆಗೆ ವಿಸ್ತರಿಸಿದ್ದೆವು. ಖರ್ಚು–ವೆಚ್ಚ ಅಧಿಕವಾದ ಮೇಲೆ ನಾಲ್ಕೈದು ವರ್ಷಗಳಿಂದ 10 ಗುಂಟೆಯಲ್ಲಿ ಕಬ್ಬು ಬೆಳೆಯುತ್ತಿದ್ದೇವೆ’ ಎನ್ನುತ್ತಾರೆ ಸತೀಶ.

ADVERTISEMENT

‘ಸ್ವಂತ ಕೆಲಸ ಮಾಡಿಕೊಂಡರೆ ಭತ್ತಕ್ಕಿಂತ ಕಬ್ಬು ಲಾಭದಾಯಕ. ಎಲ್ಲದಕ್ಕೂ ಕೆಲಸಗಾರರನ್ನು ನಂಬಿಕೊಂಡರೆ ಖರ್ಚು ಮತ್ತು ಉತ್ಪನ್ನ ಸರಿದೂಗುತ್ತದೆ. ಈ ಬೆಳೆಗೆ ರೋಗ ಕಡಿಮೆ. ಔಷಧವೂ ಬೇಕಾಗದು. ರಾತ್ರಿ ಬರುವ ಮೊಲ, ಜಿಂಕೆ, ಹಂದಿ, ಹಗಲಿನಲ್ಲಿ ದಾಳಿಯಿಡುವ ಮಂಗಗಳಿಂದ ರಕ್ಷಿಸಿಕೊಳ್ಳಲು, ಸರಿಯಾದ ಬೇಲಿ ನಿರ್ಮಿಸಿಕೊಂಡರೆ, ಉತ್ತಮ ಫಸಲು ಕೈಗೆ ಸಿಗುತ್ತದೆ’ ಎಂಬುದು ಅವರ ಅಭಿಪ್ರಾಯ.

ದೀಪಾವಳಿ, ಚಂಪಾಷಷ್ಠಿ, ತುಳಸಿ ಮದುವೆ ಇಂತಹ ಹಬ್ಬ–ಹರಿದಿನಗಳಲ್ಲಿ ನೇರವಾಗಿ ಕಬ್ಬನ್ನೇ ಮಾರಾಟಕ್ಕೆ ತಂದರೆ ಹೆಚ್ಚು ಲಾಭ. ಬೆಲ್ಲ ತಯಾರಿಕೆಗೆ ವೆಚ್ಚ ಹಾಗೂ ಶ್ರಮ ಎರಡೂ ಬೇಕು. ಬೆಲ್ಲ ತಯಾರಿಸಲು ಕಟ್ಟಿಗೆ ಸಿಗುವುದಿಲ್ಲ. ಕಟ್ಟಿಗೆ ತರಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ. ಹೀಗಾಗಿ ಅನೇಕರು ಕಬ್ಬು ಮಾರಾಟಕ್ಕೆ ಒತ್ತು ಕೊಡುತ್ತಿದ್ದಾರೆ. ಮನೆ ಬಳಕೆಗೆ ಅಗತ್ಯವಿರುವಷ್ಟು ಬೆಲ್ಲವನ್ನು ಮಾತ್ರ ಸಿದ್ಧಪಡಿಸಿಕೊಳ್ಳುತ್ತಾರೆ ಎನ್ನುತ್ತಾರೆ ಅವರು.

ಅಡಿಕೆ ತೋಟದ ಜತೆಗೆ ಭತ್ತ ಬೆಳೆಯುವ ಅವರು, ಉಪಆದಾಯವಾಗಿ ತರಕಾರಿ ಕೃಷಿ ಮಾಡುತ್ತಾರೆ. ವಿಶೇಷವಾಗಿ ಮಗೆಕಾಯಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.