ADVERTISEMENT

World Coconut Day 2022 | ಪ್ರತಿ ವರ್ಷ ಶೇ 5ರಷ್ಟು ಬೆಳೆ ಪ್ರದೇಶ ಕುಸಿತ!

ವಿಶ್ವ ತೆಂಗಿನ ದಿನಾಚರಣೆ ಇಂದು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 4:33 IST
Last Updated 2 ಸೆಪ್ಟೆಂಬರ್ 2022, 4:33 IST
ದಾವಣಗೆರೆಯ ಐ.ಸಿ.ಎ.ಆರ್. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅವರು ತೆಂಗು ಬೆಳೆಯ ಬಗ್ಗೆ ಮಾಹಿತಿ ನೀಡುತ್ತಿರುವುದು.
ದಾವಣಗೆರೆಯ ಐ.ಸಿ.ಎ.ಆರ್. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅವರು ತೆಂಗು ಬೆಳೆಯ ಬಗ್ಗೆ ಮಾಹಿತಿ ನೀಡುತ್ತಿರುವುದು.   

ತೆಂಗು ಕಲ್ಪವೃಕ್ಷ. ತನ್ನ ಎಲ್ಲಾ ವಸ್ತುಗಳನ್ನು ಮನುಜನ ಉಪಯೋಗಕ್ಕೆ ನೀಡುತ್ತಿರುವ ವೃಕ್ಷ ತೆಂಗು. ಇದು ತಾಯಿಯ ಎದೆ ಹಾಲಿನ ನಂತರ ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುವ ಪದಾರ್ಥ. ಆದರೆ, ನಮ್ಮ ದೇಶದಲ್ಲಿ ಇದರ ಬಳಕೆಯು ನಿರೀಕ್ಷಿತ ಮಟ್ಟದಲ್ಲಿ ಇಲ್ಲ.

ಏಷ್ಯನ್‌ ಪೆಸಿಫಿಕ್‌ ಕೊಕೊನಟ್‌ ಕಮ್ಯುನಿಟಿ (ಎ.ಪಿ.ಸಿ.ಸಿ) ಎಂಬ ಸರ್ಕಾರಿ ಸಂಸ್ಥೆಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದ ನೆನಪಿಗಾಗಿ 2009ರಿಂದ ಪ್ರತಿ ವರ್ಷ ಸೆಪ್ಟೆಂಬರ್‌ 2ರಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತಿದೆ. ‘ಕೋವಿಡ್ ಪಿಡುಗಿನ ನಡುವೆ ಮತ್ತು ನಂತರ ಸುಸ್ಥಿರ ತೆಂಗಿನ ಕುಟುಂಬವನ್ನು ಕಟ್ಟುವೆಡೆ ಚೇತರಿಕೆಯುಳ್ಳ ಸುರಕ್ಷಿತ ತಂತ್ರಜ್ಞಾನಗಳನ್ನು ಬಳಸುವುದು’ ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷ ಆಚರಿಸಲಾಗುತ್ತಿದೆ.

ತೆಂಗಿನ ಮರದಿಂದ ಆಹಾರ, ಪಾನೀಯ, ಸೌದೆ, ವಸತಿಗೆ ಮರ–ಮುಟ್ಟು ,ಕೈಗಾರಿಕೆಗೆ ಕಚ್ಚಾವಸ್ತು, ಸಿಪ್ಪೆಯ ಉತ್ಪನ್ನಗಳು, ಮೌಲ್ಯವರ್ಧಿತ ಪದಾರ್ಥಗಳು ಇನ್ನೂ ಹಲವು ಉತ್ಪನ್ನಗಳು ಸಿಗುತ್ತಿವೆ. ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ವೈರಲ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೆಂಗಿನ ಕಾಯಿಯ ಹಾಲನ್ನು ಮಕ್ಕಳಿಗೆ ನೀಡುವುದರಿಂದ ಮೂಳೆಗಳು ಬಲಿಷ್ಠವಾಗುತ್ತವೆ. ತೆಂಗಿನ ಕಾಯಿಯಲ್ಲಿ ಅಧಿಕ ನಾರಿನ ಅಂಶವಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ.

ADVERTISEMENT

ಇಂದು ಅಡಿಕೆ ಬೆಳೆಯ ಭರಾಟೆಯಲ್ಲಿ ತೆಂಗು ಮೊನಚನ್ನು ಕಳೆದುಕೊಳ್ಳುತ್ತಿದೆ. ರೈತರು ಇದನ್ನು ಮುಖ್ಯಬೆಳೆಯಾಗಿ ಪರಿಗಣಿಸಿಯೇ ಇಲ್ಲ. ಎಟಿಎಂ ಯಂತ್ರದಂತೆ ಕಾಯಿ ಕೆಡವುತ್ತಿದ್ದೇವೆ ಹೊರತು, ಅದಕ್ಕೆ ಬೇಕಾದ ಸೂಕ್ತ ಪೋಷಕಾಂಶಗಳನ್ನು ವಾಪಸ್‌ ಡಿಪೋಸಿಟ್‌ ಮಾಡುತ್ತಿಲ್ಲ.

ರಾಜ್ಯದಲ್ಲಿ 6.24 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳಲಾಗುತ್ತಿದ್ದು, ಸುಮಾರು 22,06,198 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 9,305 ಹೆಕ್ಟೇರ್‌ನಲ್ಲಿ 47,602 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಐದು ವರ್ಷಗಳಿಂದ ಪ್ರತಿ ವರ್ಷ ಸರಾಸರಿ ಶೇ 5ರಷ್ಟು ವಿಸ್ತೀರ್ಣ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ.

ತೆಂಗಿನ ವಿಚಾರದಲ್ಲಿ ರೈತರ ದೃಷ್ಟಿಕೋನ ಬದಲಾಗಬೇಕಿದೆ. ನಾವು ಮೊದಲು ತೆಂಗಿನ ಉತ್ಪನ್ನಗಳನ್ನು ಬಳಸುವುದನ್ನು ಕಲಿಯಬೇಕಿದೆ. ನಂತರ ತಂತಾನೇ ಕಚ್ಚಾಪದಾರ್ಥಗಳಿಗೆ ಉತ್ತಮ ಬೆಲೆ ಬರಲಿದೆ. ವಿಶ್ವ ತಂಗಿನ ದಿನದಂದು ನಾವೆಲ್ಲ ಇದರ ಅಸ್ತಿತ್ವವನ್ನು ಉಳಿಸಿ, ಬೆಳೆಸಿ, ಬಳಸುವ ನಿರ್ಧಾರವನ್ನು ಕೈಗೊಳ್ಳೋಣ.

(ಲೇಖಕರು: ತೋಟಗಾರಿಕೆ ವಿಜ್ಞಾನಿ, ಐ.ಸಿ.ಎ.ಆರ್. ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.