ರೈತರ ಜಮೀನಿನಲ್ಲಿ ಅಳವಡಿಸಿದ ಎಐ ಆಧಾರಿತ ಹವಾಮಾನ ವರದಿ ಸಂಗ್ರಹಣಾ ಡಿವೈಸ್
ಇದು ಎ.ಐ. ಜಮಾನಾ. ಇದೀಗ ಕೃಷಿಕ್ಷೇತ್ರದಲ್ಲೂ ಎ.ಐ. ಬಳಕೆ ಶುರುವಾಗಿದ್ದು, ಇದೊಂದು ಕ್ರಾಂತಿಕಾರಕ ಹೆಜ್ಜೆ ಎನ್ನಬಹುದು.
ಮೈಸೂರಿನ ಮೊಬಿಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ‘ಎ.ಐ. ಆಧಾರಿತ ನೀರಾವರಿ ಹಾಗೂ ಗೊಬ್ಬರ ಯಾಂತ್ರಿಕೃತ ವ್ಯವಸ್ಥೆ’ ತಂತ್ರಜ್ಞಾನ ಈಗ ಕೃಷಿಕ್ಷೇತ್ರವನ್ನು ಮತ್ತಷ್ಟು ಸ್ಮಾರ್ಟ್ ಆಗಿಸುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಈ ತಂತ್ರಜ್ಞಾನ ಅಳವಡಿಸಿದರೆ ತಮ್ಮ ಬೆಳೆಗಳಿಗೆ ಎಷ್ಟು ನೀರು ಕೊಡಬೇಕು, ಯಾವ ಬೆಳೆಗೆ ಎಷ್ಟು ಗೊಬ್ಬರ ನೀಡಬೇಕು, ಹವಾಮಾನ ಹೇಗಿದೆ, ಮಣ್ಣಿನ ತೇವಾಂಶ ಹೇಗಿದೆ, – ಎಂಬಿತ್ಯಾದಿ ಮಾಹಿತಿಗಳನ್ನು ‘ಡಿಕಾನ್‌ಎಜ್’ ಮೊಬೈಲ್ ಆ‍್ಯಪ್ ಮೂಲಕ ರೈತರಿಗೆ ತಲುಪುತ್ತದೆ.
ಕೃಷಿಭೂಮಿಗೆ ನೀರುಣಿಸಲು ಬಳಸುವ ಪಂಪ್‌ಸೆಟ್‌ಗಳಿಗೆ ರೈತರು ವಿದ್ಯುತ್‌ಚ್ಛಕ್ತಿಯ ಮೊರೆ ಹೋಗುವುದು ಸಾಮಾನ್ಯ. ಆದರೆ, ಲೋಡ್‌ಶೆಡ್ಡಿಂಗ್, ಸಿಂಗಲ್ ಫೇಸ್‌ನಂತಹ ಹಲವಾರು ಕಾರಣಗಳಿಂದ ಯಾವಾಗ ವಿದ್ಯುತ್ ಬರುತ್ತದೆ, ಯಾವಾಗ ಹೋಗುತ್ತದೆ ಎಂಬುದು ರೈತರಿಗೆ ಗೊತ್ತೇ ಆಗುವುದಿಲ್ಲ. ವೊಲ್ಟೇಜ್ ಹೆಚ್ಚು ಕಡಿಮೆಯಿಂದ ಮೋಟಾರ್ ಪಂಪ್‌ಸೆಟ್‌ಗಳು ಸುಟ್ಟುಹೋಗುವ ಸಾಧ್ಯತೆಗಳೂ ಹೆಚ್ಚಿರುತ್ತವೆ. ಸುಟ್ಟ ಪಂಪ್‌ಸೆಟ್‌ಗಳನ್ನು ಸರಿಪಡಿಸಿ, ಮತ್ತೆ ಅವನ್ನು ಅಳವಡಿಸಲು ರೈತರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ; ಜೊತೆಗೆ ಸಾಕಷ್ಟು ಹಣವನ್ನೂ ವ್ಯಯಿಸಬೇಕಾಗುತ್ತದೆ. ಇದರಿಂದ ತೋಟ, ಗದ್ದೆಗಳ ಕೆಲಸಗಳಿಗೂ ಸಮಸ್ಯೆ ಉಂಟಾಗುತ್ತದೆ. ಆದರೆ, ಎ.ಐ. ಆಧಾರಿತ ತಂತ್ರಜ್ಞಾನ ಇದಕ್ಕೆಲ್ಲ ಪರಿಹಾರ ಎನಿಸಿದೆ.
ರೈತರು ತಮ್ಮ ಮನೆಯಲ್ಲಿಯೇ ಕುಳಿತು ಅಥವಾ ಯಾವುದೇ ಸ್ಥಳದಿಂದಲಾದರೂ ತಮ್ಮ ತೋಟ ಅಥವಾ ಹೊಲಗಳಿಗೆ ವಿದ್ಯುತ್ ಚಾಲಿತ ಪಂಪ್‌ಸೆಟ್ ಮೋಟಾರನ್ನು ಮೊಬೈಲ್ ಮೂಲಕ ನಿಯಂತ್ರಿಸಬಹುದು. ಕರೆಂಟ್ ಯಾವಾಗ ಬರುತ್ತೆ, ಯಾವಾಗ ಹೋಗುತ್ತದೆ ಎಂಬುದನ್ನು ತಿಳಿಯಬಹುದು. ಇದರಿಂದ ರಾತ್ರಿ ಹೊತ್ತು ಬೆಳೆಗಳಿಗೆ ನೀರುಣಿಸಲು ಜಮೀನಿಗೆ ಹೋಗುವುದು ತಪ್ಪುತ್ತದೆ.
ಎಲ್ಲ ರೀತಿಯ ಅಳತೆಯ ತೋಟ ಮತ್ತು ಗದ್ದೆಗಳಿಗೆ ಉಪಯುಕ್ತವಾಗಿದ್ದು, ಒಂದು ಮೊಬೈಲ್ ಸಿಮ್ ಕಾರ್ಡ್‌ನಿಂದ ಹಲವು ತೋಟಗಳನ್ನು ನಿಯಂತ್ರಿಸಬಹುದು. ಸೋಲಾರ್ ಆಧಾರಿತ ಕಾರ್ಯನಿರ್ವಹಣೆ ಸೌರಫಲಕದೊಂದಿಗೆ 24 ಗಂಟೆ ಕಾರ್ಯ ನಿರ್ವಹಿಸಲಿದೆ. ಅಷ್ಟೇ ಅಲ್ಲದೆ ಸದೃಢ ಬ್ಯಾಟರಿ ನೆರವು, ಮೋಡ ಕವಿದ ವಾತಾವರಣದಲ್ಲೂ 24 ಗಂಟೆ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಕಾರ್ಯವಿಧಾನ ಹೇಗೆ ?
ಮೋಟಾರ್ ಪಂಪ್‌ಸೆಟ್ ಸ್ಟಾರ್ಟರ್ ಬೋರ್ಡ್‌ನಲ್ಲಿ ‘ಡಿಒಲ್ ಸ್ಟಾರ್ಟರ್’ (ಮೇನ್ ಕಂಟ್ರೊಲರ್) ಇರುತ್ತದೆ. ಇದನ್ನು ಕಂಟ್ರೋಲ್ ಮಾಡಲು ಎಂಸಿಯು (ಮೋಟಾರ್ ಕಂಟ್ರೋಲ್ ಯುನಿಟ್) ಹಾಗೂ ಎಂಎಸ್‌ಯು (ಮೋಟಾರ್ ಸ್ಟಾರ್ಟರ್ ಯೂನಿಟ್) ಬರುತ್ತದೆ. ಇವೆರಡು ಡಿವೈಸ್‌ಗಳನ್ನು ವೈಯರ್‌ಲೆಸ್ ಮೂಲಕ ಮೇನ್ ಮಾಸ್ಟರ್ ಕಂಟ್ರೋಲರ್ ಡಿಕ್ಯಾನ್ ಏಜ್‌ಗೆ ಕನೆಕ್ಟ್ ಮಾಡಲಾಗಿರುತ್ತದೆ. ಮೇನ್ ಕಂಟ್ರೋಲ್ ಬೋರ್ಡ್‌ನಲ್ಲಿ ಆಟೋ ಬ್ಯಾಕ್‌ವರ್ಡ್ (ಎಬಿಡಬ್ಲು) ಎನ್ನುವ ಡಿವೈಸ್ ಕೂಡ ಇರುತ್ತದೆ. ಇದು ನೀರಿನ ಹಾಗೂ ಗೊಬ್ಬರದ ಫಿಲ್ಡರ್ ಕ್ಲೀನ್ ಮಾಡಲು ಸಹಾಯ ಮಾಡುತ್ತದೆ. ವಾಟರ್ ಲೆವೆಲ್ ಕಂಟ್ರೊಲ್ ಯುನಿಟ್ ಅಳವಡಿಸಲಾಗುತ್ತದೆ. ಹವಾಮಾನ ಮಾಹಿತಿ ಯುನಿಟ್ ರೈತರಿಗೆ ತಮ್ಮ ಜಮೀನಿನ ಮಣ್ಣಿನಲ್ಲಿರುವ ತೇವಾಂಶದ ಕುರಿತು ಮಾಹಿತಿಯನ್ನು ನೀಡುತ್ತದೆ. ಈ ಎಲ್ಲಾ ಡಿವೈಸ್‌ಗಳು ಸೌರ ವಿದ್ಯುತ್ತನ್ನು ಬಳಸುವುದರಿಂದ ದಿನದ 24 ಗಂಟೆಯೂ ವಿದ್ಯುತ್ ಸಹಾಯವಿಲ್ಲದೆ ಕಾರ್ಯನಿರ್ವಹಿಸುತ್ತವೆ. ಈ ಎಲ್ಲಾ ಡಿವೈಸ್‌ಗಳು ಕಾರ್ಯನಿರ್ವಹಿಸಲು ಕೇವಲ ಒಂದು ಸಿಮ್ ಕಾರ್ಡ್ ಮಾತ್ರ ಸಾಕು. ಈ ಸಿಮ್ ಕಾರ್ಡ್ ಅಳವಡಿಸಿದರೆ ಸಾಕು, ರೈತರಿಗೆ ಪ್ರತಿ ದಿನ ತಮ್ಮ ಬೆಳೆಗಳು, ಅದಕ್ಕೆ ಬೇಕಾಗುವ ನೀರು, ಗೊಬ್ಬರದ ಮಾಹಿತಿಗಳು ಅವರನ್ನು ತಲುಪುತ್ತದೆ. ಮೊಬಿಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಮೊಬೈಲ್ ಆ್ಯಪ್ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.