ADVERTISEMENT

ನೀವೂ ಕೃಷಿ ತಂತ್ರಜ್ಞರಾಗಬೇಕೇ?

ಸಂದೀಪ್ ಕೆ.ಎಂ.
Published 16 ನವೆಂಬರ್ 2018, 18:38 IST
Last Updated 16 ನವೆಂಬರ್ 2018, 18:38 IST
ಜಿಕೆವಿಕೆಯ ಸಸ್ಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ. ಕೆ.ಎಂ.ಹರಿಣಿ ಕುಮಾರ್‌ ಮತ್ತು ಪ್ರೊ. ಅನಿತಾ ಪೀಟರ್‌ ಅವರೊಂದಿಗೆ ಅಗ್ರಿ ಇನ್ನೋವೇಷನ್‌ ಸೆಂಟರ್‌ ತಂಡ –ಪ್ರಜಾವಾಣಿ ಚಿತ್ರ
ಜಿಕೆವಿಕೆಯ ಸಸ್ಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ. ಕೆ.ಎಂ.ಹರಿಣಿ ಕುಮಾರ್‌ ಮತ್ತು ಪ್ರೊ. ಅನಿತಾ ಪೀಟರ್‌ ಅವರೊಂದಿಗೆ ಅಗ್ರಿ ಇನ್ನೋವೇಷನ್‌ ಸೆಂಟರ್‌ ತಂಡ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೃಷಿ ಸಮಸ್ಯೆಗಳಿಗೆ ರೈತರು ತಾವೇ ಕಂಡುಕೊಂಡಿರುವ ಪರಿಹಾರ ಮಾರ್ಗಗಳಿಗೆ ವೈಜ್ಞಾನಿಕ ದೃಢೀಕರಣ ನೀಡುವ ಜೊತೆಗೆ ಅವರಿಗೆ ಅಗತ್ಯವಾದ ಸಂಶೋಧನಾ ನೆರವನ್ನೂ ನೀಡಲು ಜಿಕೆವಿಕೆ ಆವರಣದ ಅಗ್ರಿ ಇನ್ನೋವೇಷನ್‌ ಸೆಂಟರ್‌ ಮುಂದಾಗಿದೆ.

ಕೃಷಿ ವಿ.ವಿ.ಯ ಸಸ್ಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ. ಕೆ.ಎಂ.ಹರಿಣಿ ಕುಮಾರ್‌ ಈ ಕುರಿತು ಮಾಹಿತಿ ನೀಡಿ, ಈಗಾಗಲೇ ಆವಿಷ್ಕರಿಸಿರುವ ಕೃಷಿ ತಂತ್ರಜ್ಞಾನವನ್ನು ಈ ಕೇಂದ್ರದ ಮೂಲಕ ನೀಡಲಾಗುತ್ತದೆ. ಇದನ್ನು ಉಪಯೋಗಿಸಿಕೊಂಡು ವಾಣಿಜ್ಯ ಉದ್ದೇಶಗಳಿಗಾಗಿ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ ಎಂದು ಹೇಳಿದರು.

ಕಿರುಧಾನ್ಯದಿಂದ ಆಹಾರ ಉತ್ಪನ್ನ ತಯಾರಿಸುವ ತಂತ್ರಜ್ಞಾನ ಕೇಂದ್ರದಲ್ಲಿ ಲಭ್ಯವಿದ್ದು, ಅದನ್ನು ಉಪಯೋಗಿಸಿಕೊಂಡು ಆಸಕ್ತರು ಉದ್ಯಮ ಪ್ರಾರಂಭಿಸಬಹುದು ಎಂದು ಮಾಹಿತಿ ನೀಡಿದರು.

ADVERTISEMENT

ಈಗಾಗಲೇ ರಾಗಿ, ಹಲಸು, ಚಾಕೊಲೇಟ್‌ ಬಾರ್‌, ಕೋಕಮ್ ಸಕ್ಕರೆ ಪಾನೀಯ, ಚಿಕ್ಕಿ, ಎನರ್ಜಿ ಮಿಕ್ಸ್, ಹಾಲಿನ ಬರ್ಫಿ, ಟೊಮೆಟೊ ಸೂಪ್‌ನ ಮಿಶ್ರಣ ಸೇರಿದಂತೆ ವಿವಿಧ ಆಹಾರೋತ್ಪನ್ನಗಳ ತಯಾರಿಕಾ ತಂತ್ರಜ್ಞಾನ ಲಭ್ಯವಿದೆ ಎಂದು ತಿಳಿಸಿದರು.

ಸಣ್ಣ ಮತ್ತು ಮಧ್ಯಮ ಕೃಷಿ ಉತ್ಪನ್ನ ಸಂಸ್ಥೆಗಳಿಗೆ ಪ್ರಯೋಗ ಮತ್ತು ಸಂಶೋಧನೆ ಕೈಗೊಳ್ಳಲು ಪ್ರಯೋಗಾಲಯಗಳು ಮತ್ತು ಸಂಶೋಧಕರ ಕೊರತೆ ಇರುತ್ತದೆ. ಇಂತಹ ಕಂಪನಿಗಳು ಸೆಂಟರ್‌ನಲ್ಲಿರುವ ಪ್ರಯೋಗಾಲಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

‘ನಮ್ಮ ಕೇಂದ್ರದ ನೆರವು ಪಡೆದು ರೈತರು ತಯಾರಿಸಿ, ಮಾರುಕಟ್ಟೆಗೆ ಪರಿಚಯಿಸುವ ಎಲ್ಲ ಉತ್ಪನ್ನಗಳ ಮೇಲೂ ಜೆಕೆವಿಕೆಯ ಅಧಿಕೃತ ಲಾಂಛನವನ್ನು ಬಳಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಮತ್ತು ಮುಂದಿನ ಕೃಷಿ ಮೇಳದಲ್ಲಿಯೂ ಭಾಗವಹಿಸಲು ಅವಕಾಶ ನೀಡಲಾಗುತ್ತದೆ’ ಎಂದುತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.