ADVERTISEMENT

ಆಹಾ ಹಿಮಾಲಯ...

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಆಗಸ್ಟ್ 2011, 19:30 IST
Last Updated 26 ಆಗಸ್ಟ್ 2011, 19:30 IST

ಸರ್ಕಾರಿ ಅಧಿಕಾರಿಗಳು ವರ್ಷವಿಡೀ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಬೇರೊಂದನ್ನು ಯೋಚನೆ ಮಾಡಲಿಕ್ಕೆ ಪುರುಸೊತ್ತು ಇರೋದಿಲ್ಲ. ಯಾವುದಾದರೂ ಹವ್ಯಾಸ ಇದ್ದರೂ ಅದು ಕೆಲಸದ ಒತ್ತಡದ ಮಧ್ಯೆ ಇಲ್ಲವಾಗಿ ಬಿಡುತ್ತದೆ. ಆದರೆ ಹಿರಿಯ ಐಎಎಸ್ ಅಧಿಕಾರಿ ಎಂ. ಮದನಗೋಪಾಲ್ ಅವರು ಮಾತ್ರ ಇದಕ್ಕೆ ಅಪವಾದ.
ಪ್ರೌಢವಸ್ಥೆಯಲ್ಲಿ ಇದ್ದಾಗಲೇ ಅವರಲ್ಲಿ ಚಿಗುರೊಡೆದ ಫೋಟೋಗ್ರಫಿ ಬಗೆಗಿನ ಹವ್ಯಾಸ ಇನ್ನೂ ಜೀವಂತವಾಗಿದೆ. ನೈಸರ್ಗಿಕವಾಗಿ ಸೃಷ್ಟಿಯಾಗಿರುವ ಅಪೂರ್ವ ಅಜ್ಞಾತ ಸ್ಥಳಗಳನ್ನು ಕ್ಲಿಕ್ಕಿಸುವುದು ಇವರ ವೈಶಿಷ್ಟ್ಯ.

ಹಿಮಾಲಯ ಮತ್ತು ಅದರ ಸೌಂದರ್ಯ ರಾಶಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ತಪ್ಪಲಿನಲ್ಲಿರುವ ಹಲವು ಅಪರೂಪದ ಮತ್ತು ಅನೇಕರಿಗೆ ಗೊತ್ತೆ ಇರದ ಸ್ಥಳಗಳ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಕಂಡು ಬರುವ ಹಿಮಾಲಯದ ವಿಹಂಗಮ ನೋಟ, ಪೂರ್ಣಚಂದ್ರನ ಬೆಳಕಿನಲ್ಲಿ ತವಾಚೆ ಪರ್ವತ ಶ್ರೇಣಿ ಮತ್ತು ಇಳಿಸಂಜೆಯಲ್ಲಿ ಮಚ್ಚಪುಚ್ಚರೆ ಪರ್ವತಶ್ರೇಣಿ ಚಿನ್ನದಲ್ಲಿ ಮಿಂದೆದ್ದಿರುವಂತೆ ಕಂಡು ಬರುವ ಚಿತ್ರಗಳಂತೂ ನೋಡುತ್ತಿದ್ದರೆ ಒಂದು ಕ್ಷಣ ಮೈಮರೆಯುವಷ್ಟು ಸುಂದರವಾಗಿವೆ.

ಫೋಟೋಗ್ರಫಿಯಲ್ಲಿ ಮದನಗೋಪಾಲ್ ಅವರಿಗಿರುವ ಚಾಕಚಕ್ಯತೆ, ಶ್ರದ್ಧೆ, ನಿಸರ್ಗ ಪ್ರೇಮವನ್ನು ಇದು ತೋರಿಸಿಕೊಡುತ್ತದೆ.

ಇದಲ್ಲದೇ ಡಿಂಗ್‌ಬೊಚೆ, ನುಮ್ರಿ ಮತ್ತು ಚೋ ಪುಲು, ಡ್ರೋಲ್ಮಾ ಲಾದಲ್ಲಿರುವ ಗೌರಿ ಕುಂಡ, ಗಂಧರ್ವ ಚುಲಿ, ಅಮಾ ಡಬ್ಲಮ್, ರಾಕ್ಷಸ್ ತಲ್, ಗಂಗಾಪೂರ್ಣ ಮತ್ತು ಗಂಧರ್ವ ಚುಲಿ ಪರ್ವತಗಳನ್ನು ಜೋಡಿಸುವ ಸೇತುವೆ, ಕೈಲಾಸ ಪರ್ವತ, ದುದ್ ಕೋಸಿ, ಖುಂಬಲಿಯಾ, ಮಾನಸ ಸರೋವರದ ದೃಶ್ಯಗಳನ್ನು ವಿಭಿನ್ನ ಆಯಾಮದಲ್ಲಿ ಸೆರೆಹಿಡಿದಿದ್ದಾರೆ. 

ಇವನ್ನೆಲ್ಲ `ಇನ್‌ಕಾಗ್‌ನಿಟೋ~ (ಅಜ್ಞಾತ) ಶೀರ್ಷಿಕೆಯಡಿ ಪ್ರದರ್ಶಿಸುತ್ತಿದ್ದಾರೆ. ಇದರಲ್ಲಿನ 120 ಛಾಯಾಚಿತ್ರಗಳು ಒಂದಕ್ಕಿಂತ ಒಂದು ಸಂಪೂರ್ಣವಾಗಿ ಭಿನ್ನವಾಗಿದ್ದು, ನೋಡುಗರು ತಲ್ಲೆನರಾಗುವಂತೆ ಮಾಡುತ್ತವೆ.

ಸ್ಥಳ: ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್. ಬೆಳಿಗ್ಗೆ 10 ರಿಂದ ರಾತ್ರಿ 8. ಪ್ರದರ್ಶನ ಶುಕ್ರವಾರ ಆರಂಭವಾಗಿದ್ದು, ಮಂಗಳವಾರ ಮುಕ್ತಾಯ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.