ದೇಶದ ಕಲಾಪರಂಪರೆಯನ್ನು ಸಾಮಾನ್ಯ ಜನರಿಗೆ ಪರಿಚಯಿಸಬೇಕು ಎನ್ನುವ ಉದ್ದೇಶದಿಂದಲೇ ಏರ್ ಇಂಡಿಯಾ ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್‌ನಲ್ಲಿ ಕಲಾಪ್ರದರ್ಶನವನ್ನು ಆಯೋಜಿಸಿದೆ. ತನ್ನ ಸಂಗ್ರಹದಲ್ಲಿದ್ದ 200ಕ್ಕೂ ಅಧಿಕ ಕಲಾವಿದರು ರಚಿಸಿರುವ ಬಗೆ ಬಗೆಯ ಶೈಲಿ ಕಲಾಕೃತಿಗಳನ್ನು ಆಗಸ್ಟ್ 30 ರ ವರೆಗೆ ಪ್ರದರ್ಶನಕ್ಕೆ ಇಡಲಾಗಿದೆ.
ಮೋದಕಪ್ರಿಯ ಗಣೇಶ ಒಂದು ಕೈಯಲ್ಲಿ ತಂಬೂರಿ ಹಿಡಿದು, ಕಷ್ಟಕರ ಹೆಜ್ಜೆಯನ್ನು ಇಷ್ಟಪಟ್ಟು ಹಾಕುತ್ತಿರುವಂತೆ ಕಂಡರೆ, ಮತ್ತೊಂದು ಕಡೆ ಅದೇ ಗಣೇಶ ಬಹಳ ಶಾಂತಚಿತ್ತನಾಗಿ ನೃತ್ಯ ಹಾಗೂ ಗಾನವೈಭವವನ್ನು ಆರಾಮದಾಯಕ ಭಂಗಿಯಲ್ಲಿ ಕುಳಿತು ಕೇಳುತ್ತಿದ್ದಾನೇನೋ ಅನಿಸುತ್ತದೆ. ವಿದ್ಯೆಗೂ ಬುದ್ಧಿಗೂ ಅಧಿಪತಿ ಎನಿಸಿಕೊಂಡ ಗಣಪ ನಾಟ್ಯ ಸರಸ್ವತಿಯನ್ನು ಒಲಿಸಿಕೊಳ್ಳಲು ಹರಸಾಹಸ ಪಡುವ ಅವನ ಮುಖಮುದ್ರೆ ಹಾಗೂ, ಗಾನವೈಭವವನ್ನು ಆಸ್ವಾದಿಸುವ ಸಂಗೀತಪ್ರಿಯನ ಭಾವಗಳೆರಡೂ ಒಂದು ಲಾಲಿತ್ಯಪೂರ್ಣ ರೇಖೆಗಳಲ್ಲಿ ಮೂಡಿವೆ.
ಇದು ವೈ.ಡಿ.ಡಿಯೊಲಾಲಿಕರ್ ಅವರ ಕಲಾಕೃತಿಗಳು. ಶಾಸ್ತ್ರೀಯ ಆಲೋಚನೆಗಳಿಗೆ ಆಧುನಿಕ ಕಲಾಶೈಲಿಯ ಚೌಕಟ್ಟನ್ನು ಒದಗಿಸಿರುವ ಈ ಕಲಾಕೃತಿಗಳಲ್ಲಿ ಗಾಢಬಣ್ಣದ ಜತೆಗೆ ಕುಂಚವು ಅಲ್ಲಲ್ಲಿ ತನ್ನ ಒರಟುಭಾಷೆಯಲ್ಲಿಯೇ ಭಾವಾಭಿವ್ಯಕ್ತಿಯನ್ನು ಸ್ಪಷ್ಟವಾಗಿ ಮೂಡಿಸಿದೆ. ಈ ನೆಲದ ಶ್ರೀಮಂತ ಕಲಾಪರಂಪರೆ ಹಾಗೂ ಆಧುನಿಕ ಚಿಂತನೆಗಳ ಕಲಾಭಿವ್ಯಕ್ತಿಯ ನಡುವಿನ ಅಂತರವನ್ನು ತುಂಬಲೆಂದೇ ವೈ.ಡಿ. ಡಿಯೊಲಾಲಿಕರ್ ಕಲಾಕೃತಿಗಳನ್ನು ರಚಿಸಿದ್ದಾರೇನೋ ಅನ್ನುವಷ್ಟರ ಮಟ್ಟಿಗೆ ಹಿತವೆನಿಸುತ್ತದೆ.
ಏರ್ ಇಂಡಿಯಾ ಸಂಗ್ರಹದಲ್ಲಿದ್ದ ಕಲಾಕೃತಿಗಳನ್ನು ನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಅಶ್ವ ಯಾವುದರ ಸಂಕೇತ? ಉತ್ಸಾಹದ ಬುಗ್ಗೆಯಂತೆ ಕೆನೆಯುತ್ತಿರುವ ಸಪ್ತ ಅಶ್ವಗಳು ಏನನ್ನು ಹೇಳಲು ಹೊರಟಿವೆ? ಇಲ್ಲಿ ಒಂದಕ್ಕೊಂದು ಬೆಸೆದುಕೊಂಡಂತೆ ಕಾಣುವ ಈ ಅಶ್ವಗಳು ತಮ್ಮ ಬಣ್ಣದಿಂದಾಗಿಯೂ ವಿಭಿನ್ನವಾಗಿವೆ. ಎಂ.ಎಫ್. ಹುಸೇನ್ ಅವರಿಗೆ ಕುದುರೆ ವಿಶಿಷ್ಟ ಹಾಗೂ ಇಷ್ಟದ ಮೋಟಿಫ್ ಆಗಿದ್ದಿರಬೇಕು. ಹಾಗಾಗಿ ಅವರ ಹಲವು ಕಲಾಕೃತಿಗಳಲ್ಲಿ ಕುದುರೆಗಳನ್ನು ನೋಡಬಹುದು. ಕುದುರೆಗಳು ಪ್ರಾಚೀನಕಾಲದಿಂದಲೂ ಶಕ್ತಿ, ಚೈತನ್ಯ ಹಾಗೂ ವಿಮೋಚನೆಯ ದ್ಯೋತಕಗಳಾಗಿ ಗುರುತಿಸಿಕೊಂಡಿವೆ. ಬದುಕಿನ ಆತ್ಯಂತಿಕ ಉದ್ದೇಶವು ಸ್ವಾತಂತ್ರ್ಯದ ಅಪೇಕ್ಷೆಯೇ ಆಗಿರುತ್ತದೆ ಎಂಬುದನ್ನು ಸಾಂಕೇತಿಕವಾಗಿ ಎಂ.ಎಫ್. ಹುಸೇನ್ ಹೇಳಲು ಹೊರಟಿದ್ದಾರೆ ಎಂದೆನಿಸುತ್ತದೆ.
ರಾಜಸ್ತಾನದ ಬಿರುಬಿಸಿಲಿನ ಬೇಸಿಗೆ ಹೇಗಿದ್ದಿರಬಹುದು. ಕೆಮ್ಮಣಿನ ಮೋಟು ಗೋಡೆಗಳ ಮೇಲೆ ಹಾಸುಹೊದ್ದ ಎಲೆಗರಿಯ ಚಪ್ಪರ. ಬಿಸಿಲ ಬೇಗೆಗೆ ಊಟ ರುಚಿಸದು, ಬಾಯಾರಿಕೆ ತಣಿಯದು. ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡ ಮೋಟು ಗೋಡೆಯ ಮನೆಯ ಯಜಮಾನ–ಯಜಮಾನತಿಯ ನಡುವಿನ ಮಟ ಮಟ ಮಧ್ಯಾಹ್ನದ ಸಂಭಾಷಣೆಗೆ ಕಿವಿಯಾದ ಮೂರನೇ ವ್ಯಕ್ತಿ ಯಾರಿರಬಹುದು ಎಂದು ಕುತೂಹಲದ ಕಣ್ಣಾಗುವಂತೆ ಮಾಡುತ್ತದೆ ಪಿರಾಜಿ ಸಗರ ಅವರ ಈ ಕಲಾಕೃತಿ.
ಸಮುದ್ರದಾಳಕ್ಕೆ ದೋಣಿಗಳನ್ನು ಇಳಿಸಿ, ಬಲೆ ಬೀಸಿ, ಮೀನು ಹಿಡಿಯುವ ಬೆಸ್ತರ ಬದುಕನ್ನು ಬಹಳ ಸೊಗಸಾಗಿ ಕಲಾಕೃತಿಯಾಗಿಸಿದ್ದಾರೆ ಚಂದ್ರಕಾಂತ್ ಎಸ್. ಚೌಹಾಣ್. ಇದು ತೈಲವರ್ಣದಲ್ಲಿ ಮೂಡಿರುವ ಕಲಾಕೃತಿಯಾಗಿದ್ದು, ತೆಂಗಿನ ಗರಿಗಳಲ್ಲಿ ಹೆಣೆದ ಮಾಸಲು ಚಪ್ಪರಗಳು, ಮನೆಯ ಸಮೀಪವೇ ಲಂಗರು ಹಾಕಿದ ದೋಣಿ, ಈಗಷ್ಟೆ ಮೀನು ಹಿಡಿದು ಬಂದು ಸುಸ್ತಾಗಿ ಕುಳಿತ ಮನೆಯ ಒಡೆಯ, ಮನೆಯ ದೇಖರೇಖಿ ನೋಡುವ ಒಡತಿಯ ಕೈಯಲ್ಲಿ ತೆಂಗಿನ ಗರಿಯ ರಾಶಿ ಹೀಗೆ ಬೆಸ್ತರ ಬದುಕಿನ ಕತೆಯನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಚೌಹಾಣ್.
ಹೀಗೆ ಭಿನ್ನ ರಾಜ್ಯ, ಭಿನ್ನ ವಸ್ತು, ಭಿನ್ನ ಆಯಾಮಗಳಿರುವ ಹಲವು ಕಲಾಕೃತಿಗಳು ನೋಡುಗರೊಂದಿಗೆ ಸಂಭಾಷಣೆಗೆ ಇಳಿದಿದ್ದು ಮಾತ್ರ ಕಲಾಸಂವೇದನೆಯ ಭಾಷೆಯಲ್ಲಿ. ಇಲ್ಲಿ ರೇಖೆಗಳು, ಬಣ್ಣಗಳೇ ನವಿರು ನವಿರಾದ ಸಂವಹನಕ್ಕೆ ತೆರೆದುಕೊಂಡವು.
200ಕ್ಕೂ ಅಧಿಕ ಕಲಾವಿದರು ರಚಿಸಿರುವ ಬಗೆ ಬಗೆಯ ಶೈಲಿಯಲ್ಲಿರುವ ಅಂದರೆ, ಮ್ಯೂರಲ್, ಮರ, ಕಬ್ಬಿಣ, ಗಾಜಿನಿಂದ ತಯಾರಾದ ಕಲಾಕೃತಿಗಳು, ತೈಲವರ್ಣಗಳು, ಅಕ್ರಿಲಿಕ್ ಪೇಂಟಿಂಗ್, ಮೂರ್ತ, ಅಮೂರ್ತ, ಶಾಸ್ತ್ರೀಯ, ಆಧುನಿಕ... ಹೀಗೆ ನಾನಾ ಪ್ರಕಾರಗಳಲ್ಲಿರುವ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪ್ರಗತಿ ಪಥ, ಬರೋಡ ಸ್ಕೂಲ್, ಮಥಾಯ್ಸ್ ಸ್ಕೂಲ್ ಹೀಗೆ ನಾನಾ ಶೈಲಿಯ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
ಕನ್ನಡಿಗ ಎಸ್.ಜಿ. ವಾಸುದೇವ ಅವರ ಕಲಾಕೃತಿಯೂ ಈ ಪ್ರದರ್ಶನದಲ್ಲಿ ಕಾಣಬಹುದು. ವಿಷಯಾಧಾರಿತ ಸರಣಿ ಕಲಾಕೃತಿಗಳಿಗೆ ಹೆಸರಾದ ವಾಸುದೇವ ಅವರ ‘ಜೀವನ ವೃಕ್ಷ’ ಕಲಾಕೃತಿಯೂ ಪ್ರದರ್ಶನಗೊಂಡಿದೆ. ಜೀವನವೆಂಬುದು ಅನುಭವ ದ್ರವ್ಯವನ್ನು ಉಂಡು, ಒಂದು ಗತಿಯಲ್ಲಿಯೇ ಎತ್ತರಕ್ಕೆ ಬೆಳೆಯಬಲ್ಲ ವೃಕ್ಷದಂತೆ. ಬೆಳವಣಿಗೆಯೆಂಬುದು ನಿರಂತರ ಎಂಬುದನ್ನು ಅಳವಾಗಿ ಸೂಚಿಸುತ್ತದೆ ಈ ಕಲಾಕೃತಿ.
ದೊಡ್ಡ ಕುಟ್ಟಣಿಗೆ ಹಿಡಿದು, ಬಗೆ ಬಗೆಯ ಧಾನ್ಯಗಳನ್ನು ಕುಟ್ಟುತ್ತ ಹೆಣ್ಣು, ಮಕ್ಕಳು ಹಾಡಿಕೊಳ್ಳುವ ಲಾವಣಿಗೆ ಅವರ ಜೀವನದ ನೋವಿನ ರಾಗವು ಸೇರಿಕೊಳ್ಳುತ್ತದೆ. ಲಾವಣಿ ಪದಗಳು ಹೊಸ ನಾದವನ್ನೂ ವೇದವನ್ನೂ ಅರಹುತ್ತಿರುತ್ತವೆ. ಕುಟ್ಟಣಿಗೆಯನ್ನು ಎಡಗೈನಿಂದ, ಬಲಗೈಗೆ ಬದಲಿಸುವಾಗ ಬಿಟ್ಟ ನಿಟ್ಟುಸಿರಿನ ಆತಂಕಗಳನ್ನು ಅಷ್ಟೆ ಮುಚ್ಚಟೆಯಿಂದ ಚಿತ್ರಿಸಿದ್ದಾರೆ ಶಕುಂತಲಾ ಎಸ್.ಸಾತ್ಪುತೆ.
ಹೀಗೆ ಹೆಸರಾಂತ ಕಲಾವಿದರ ಹಲವು ಕಲಾಕೃತಿಗಳು ಆಡುವ ಪಿಸುಮಾತುಗಳನ್ನು ಇಲ್ಲಿ ಆಲಿಸಬಹುದು!
ಏರ್ ಇಂಡಿಯಾ ಸಂಗ್ರಹದಲ್ಲಿದ್ದ ಕಲಾಕೃತಿಗಳನ್ನು ನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.