ADVERTISEMENT

ಇದು ಗೊಂಬೆಯಾಟವಯ್ಯಾ...

ಮಂಜುಶ್ರೀ ಎಂ.ಕಡಕೋಳ
Published 19 ನವೆಂಬರ್ 2018, 20:00 IST
Last Updated 19 ನವೆಂಬರ್ 2018, 20:00 IST
   

ಜನಪದ ರಂಗಕಲೆಯಾಗಿರುವ ಗೊಂಬೆಯಾಟ ಬಹು ಪ್ರಾಚೀನ ಕಲೆ. ಅಪರೂಪದ ಈ ಕಲೆಯನ್ನು ಕೆಲವೇ ಕುಟುಂಬಗಳು ಇಂದಿಗೂ ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಮನರಂಜನೆಗಾಗಿ ಪುರಾಣ, ಐತಿಹಾಸಿಕ ಕಥನಗಳನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಿದ್ದ ಗೊಂಬೆಯಾಟ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಚಾಲ್ತಿಯಲ್ಲಿತ್ತು. ಬದಲಾದ ಕಾಲಘಟ್ಟದಲ್ಲಿ ಈ ಕಲೆ ನೇಪಥ್ಯಕ್ಕೆ ಸರಿಯುತ್ತಿದೆ.

ನಗರದ ಜನರಿಗೆ ಗೊಂಬೆಯಾಟದ ಮಹತ್ವವನ್ನು ಮನಗಾಣಿಸುವ ನಿಟ್ಟಿನಲ್ಲಿ ಅನಾವರಣ ಟ್ರಸ್ಟ್ ಇದೇ 21ರಿಂದ 23ರ ತನಕ ರವೀಂದ್ರ ಕಲಾಕ್ಷೇತ್ರ ಮತ್ತು ಸಂಸ ಬಯಲು ರಂಗಮಂದಿರದಲ್ಲಿ ಬೆಂಗಳೂರು ಪಪೆಟ್ ಉತ್ಸವ ಆಯೋಜಿಸಿದೆ.

ಕರ್ನಾಟಕ, ಕೇರಳ ಮತ್ತು ರಾಜಸ್ಥಾನದ ಖ್ಯಾತ ಗೊಂಬೆಯಾಟದ ಕಲಾವಿದರು ಮೂರು ಅಪರೂಪದ ಗೊಂಬೆಯಾಟಗಳನ್ನು ಪ್ರದರ್ಶಿಸುತ್ತಿರುವುದು ಈ ಉತ್ಸವದ ವಿಶೇಷ. ಮಕ್ಕಳು ಮತ್ತು ದೊಡ್ಡವರು ಇಬ್ಬರನ್ನೂ ರಂಜಿಸುವ ಉದ್ದೇಶ ಈ ಉತ್ಸವದ್ದು.

ADVERTISEMENT

‘ಭಿನ್ನ ಕಲಾ ಮಾಧ್ಯಮವಾಗಿರುವ ಗೊಂಬೆಯಾಟದ ಪ್ರಾಮುಖ್ಯತೆ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಯುವಜನರು ಮತ್ತು ಮಕ್ಕಳಿಗೆ ಈ ಕಲಾ ಮಾಧ್ಯಮವನ್ನು ಪರಿಚಯಿಸಬೇಕೆಂಬ ಉದ್ದೇಶದಿಂದ ಅನಾವರಣ ಟ್ರಸ್ಟ್, ಸಿಟ್ರಸ್ ವೆಂಚರ್ಸ್‌ ಜತೆಗೂಡಿ, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರು ಪಪೆಟ್ ಉತ್ಸವ ಆಯೋಜಿಸಿದೆ’ ಎನ್ನುತ್ತಾರೆ ‘ಅನಾವರಣ’ ಟ್ರಸ್ಟ್ ಅಧ್ಯಕ್ಷ ರವಿ ಎಂ.

‘ರಾಷ್ಟ್ರೀಯ ಮಟ್ಟದ ಗೊಂಬೆ ಉತ್ಸವ ನಡೆಸಬೇಕೆಂಬುದು ಹಲವು ವರ್ಷಗಳ ಕನಸಾಗಿತ್ತು. ಅದು ಈ ವರ್ಷ ನೆರವೇರುತ್ತಿದೆ. ಬೆಂಗಳೂರಿಗರಿಗೆ ಮೂರು ಭಿನ್ನ ಪ್ರದರ್ಶನಗಳನ್ನು ನೋಡುವ ಅವಕಾಶ ದೊರೆಯಲಿದೆ. ಕರ್ನಾಟಕದ ತೊಗಲು ಗೊಂಬೆಯಾಟ, ರಾಜಸ್ಥಾನದ ಕಟ್ ಪುತ್ಥಲಿ (ಸೂತ್ರದ ಗೊಂಬೆಯಾಟ),ಕೇರಳದ ತೂಲಪಾವಕೂತ್ತು (ತೊಗಲು ಗೊಂಬೆಯ ಮತ್ತೊಂದು ಶೈಲಿ) ಉತ್ಸವದ ಆಕರ್ಷಣೆಯಾಗಲಿದೆ’ ಎಂದು ವಿವರಿಸುತ್ತಾರೆ ಅವರು.

ಮೂರು ದಿನಗಳ ಉತ್ಸವದಲ್ಲಿ ಪ್ರತಿದಿನ ಸಂಜೆ 5ಕ್ಕೆ ರವೀಂ‌ದ್ರ ಕಲಾಕ್ಷೇತ್ರದ ಪುರುಷರ ವಿಶ್ರಾಂತಿ ಕೊಠಡಿಯಲ್ಲಿ ಮಾತುಕತೆ ನಡೆಯಲಿದೆ. 21ರಂದು ಕರ್ನಾಕದಲ್ಲಿ ಸಮಕಾಲೀನ ಬೊಂಬೆಯಾಟ ಕುರಿತು ಡಾ.ವಿಜಯಾ, ಗುಂಡುರಾಜು, 22ರಂದು ಪ್ರೊ.ಎಂ.ಜೆ. ಕಮಲಾಕ್ಷಿ, ಪೂರಣ್ ಭಟ್, 23ರಂದು ಶ್ರವಣ ಹೆಗ್ಗೋಡು, ರಾಮಚಂದ್ರ ಪುಲವರ್ ಮಾತುಕತೆ ನಡೆಸಿಕೊಡಲಿದ್ದಾರೆ.

ಪ್ರತಿ ಪ್ರದರ್ಶನಕ್ಕೆ ಟಿಕೆಟ್ : ₹ 50. ಟಿಕೆಟ್‌ಗಳು: bookmyshowನಲ್ಲೂ ಲಭ್ಯ.
ಮಾಹಿತಿಗಾಗಿ: 94481 30960, 97418 83811.

***


ಸುಪ್ರಭಾ ವಿಲಾಸ–ತೊಗಲು ಗೊಂಬೆಯಾಟ

ಉದ್ಘಾಟನಾ ದಿನದಂದು (ನ. 21, ರಾತ್ರಿ 7.15) ಹಾಸನದ ಎಸ್.ಜಿ.ಆರ್. ಭಾರತೀಯ ತೊಗಲುಗೊಂಬೆ ಸಂಶೋಧನಾ ಹಾಗೂ ತರಬೇತಿ ಕೇಂದ್ರ ಟ್ರಸ್ಟ್ ಗುಂಡುರಾಜು ನಿರ್ದೇಶನದ ‘ಸುಪ್ರಭಾ ವಿಲಾಸ’ ಪ್ರದರ್ಶಿಸಲಿದೆ.

‘ಸುಪ್ರಭಾ ವಿಲಾಸ’ ಕುರಿತು: ನೇಪಾಳ ದೇಶದ ರಾಜ ಪೌಂಡ್ರಿಕ ಹಾಗೂ ರಾಣಿ ಸತ್ಯವತಿ ದೇವಿ, ಪಾರ್ವತಿಯ ಅನುಗ್ರಹದಿಂದ ಪಡೆದ ಸುಪುತ್ರಿ-ಸುಪ್ರಭಾಳ ಕಥೆಯನ್ನು ಒಳಗೊಂಡಿದೆ ’ಸುಪ್ರಭಾ ವಿಲಾಸ’.

ಪೌಂಡ್ರಿಕ ಮತ್ತು ಸತ್ಯವತಿ ದೇವಿ ತಮ್ಮ ಮಗಳು ಸುಪ್ರಭಾಳಿಗೆ ಶಾಸ್ತ್ರ ಪಾಠ ಹಾಗೂ ವಿವಿಧ ಕಲಾ ಪ್ರಕಾರದಲ್ಲಿ ಶಿಕ್ಷಣ ನೀಡುವುದಲ್ಲದೇ ಆ ಕಾಲಕ್ಕೆ ಕೇವಲ ಗಂಡು ಮಕ್ಕಳಿಗೆ ಸೀಮಿತವಾಗಿದ್ದ ಯುದ್ಧ ಶಾಸ್ತ್ರದಲ್ಲೂ ತರಬೇತಿ ಕೊಡಿಸುತ್ತಾರೆ.

ಬೆಳೆದು ದೊಡ್ಡವಳಾದ ಸುಪ್ರಭಾ ತನ್ನ ರಾಜ್ಯದ ವೈರಿ ಚೋಳರ ಮೇಲೆ ದಾಳಿ ನಡೆಸಿ ಚೋಳ ರಾಜನನ್ನು ಸಂಹರಿಸಿ, ನೇಪಾಳ ದೇಶದ ಪತಾಕೆಯನ್ನು ಹಾರಿಸುತ್ತಾಳೆ. ನಂತರ ತನ್ನ ಚಾಣಾಕ್ಷ ಹಾಗೂ ದಕ್ಷ ಆಡಳಿತದಿಂದ ತನ್ನ ಪುಟ್ಟ ರಾಜ್ಯದ ವಿಸ್ತಾರವನ್ನು ಹೆಚ್ಚಿಸುತ್ತಾ ಸ್ತ್ರೀಯರೇ ಆಡಳಿತ ಮಾಡುವ ಒಂದು ಮಹಾ ರಾಜ್ಯವನ್ನಾಗಿ ಮಾರ್ಪಡಿಸುತ್ತಾ ಸ್ತ್ರೀಶಕ್ತಿಯ ಧ್ವಜವನ್ನು ಎತ್ತಿಹಿಡಿಯುತ್ತಾಳೆ. ಈ ಕಥೆಯನ್ನು ತೊಗಲು ಗೊಂಬೆಯಾಟದ ಮೂಲಕ ಆಕರ್ಷಕವಾಗಿ ತಂಡ ಪ್ರಸ್ತುತ ಪಡಿಸಲಿದೆ.

ದೋಲಾ ಮರು– ರಾಜಸ್ಥಾನಿ ಕಟ್‌ ಪುತ್ಥಲಿ
ನ. 22ರ ರಾತ್ರಿ 7ಕ್ಕೆ ಆಕಾರ್ ಪಪೆಟ್ ಥಿಯೇಟರ್, ಪೂರಣ್ ಭಟ್‌ ನಿರ್ದೇಶನದ ‘ದೋಲಾ ಮರು’ ರಾಜಸ್ಥಾನಿ ಕಟ್‌ಪುತ್ಥಲಿ (ಸೂತ್ರದ ಗೊಂಬೆಯಾಟ) ಪ್ರದರ್ಶಿಸಲಿದೆ.

‘ಡೋಲಾಮಾರು’ ಕುರಿತು: ‘ಡೋಲಾ ಮಾರು’ ಎಂಬುದು ರಾಜಸ್ಥಾನದ ಜನಪದ ಪ್ರೇಮ ಕಥೆ. ತೇಜೋಮಯ ಸ್ಫುರದ್ರೂಪಿ ಯುವರಾಜ ಡೋಲಾ, ಒಬ್ಬ ಮಾಂತ್ರಿಕಳ ತಂತ್ರದಿಂದ, ತನ್ನ ಬಾಲ್ಯದ ಪ್ರಿಯೆ ಮಾರುವಿನಿಂದ ದೂರ ಆಗಿ ಅವಳನ್ನು ಮರೆತು ಮಾಂತ್ರಿಕಳ ಜೊತೆ ಸಂಸಾರ ಮಾಡುತ್ತಿರುತ್ತಾನೆ.

ಇತ್ತ ತನ್ನ ಬಾಲ್ಯದ ಗೆಳೆಯ ಹಾಗೂ ಪ್ರಿಯತಮ ಡೋಲನಿಗಾಗಿ ಮಾರು ಕಾಯುತ್ತಿರುತ್ತಾಳೆ. ಅವಳ ಊರಿಗೆ ಬರುವ ಒಬ್ಬ ಭಟ್ಟ (ಬೊಂಬೆಯಾಟದವ) ಇವಳ ಕಥೆಯನ್ನು ಕೇಳಿ, ಅದೇ ಕತೆಯನ್ನು ತನ್ನ ಆಟದಲ್ಲಿ ಅಳವಡಿಸಿಕೊಂಡು ಡೋಲಾನ ಆಸ್ಥಾನಕ್ಕೆ ಬಂದು ಪ್ರದರ್ಶಿಸುತ್ತಾನೆ. ಆಟದಲ್ಲಿ ಬರುವ ಯುವರಾಜ ತಾನೇ ಎಂದು ಆಗ ಅರಿಯುವ ಡೋಲಾ ಬೊಂಬೆಯಾಟದವನ ಸಹಾಯದಿಂದ ಮತ್ತೆ ತನ್ನ ಪ್ರಿಯತಮೆ ಮಾರುವನ್ನು ಸೇರಲು ಹೊರಡುತ್ತಾನೆ. ಅವನನ್ನು ತಡೆಯಲು ಮಾಂತ್ರಿಕಳು ಎಷ್ಟೇ ಮಂತ್ರ ಪ್ರಯೋಗಿಸಿದರೂ ಕಡೆಗೆ ನಿಜವಾದ ಪ್ರೀತಿ ಗೆಲ್ಲುತ್ತದೆ ಎಂಬುದೇ ಈ ಆಟದಲ್ಲಿನ ಕಥೆಯ ಹಂದರ.

ಅನಾವರಣ ಟ್ರಸ್ಟ್ ಪರಿಚಯ
ವರ್ತಮಾನದ ಸಾಂಸ್ಕೃತಿಕ ಸವಾಲುಗಳನ್ನು ಕನ್ನಡದ ತಿಳಿವುಗಳ ಮೂಲಕ ನಿಭಾಯಿಸಲು ಅನಾವರಣ ಸಾಂಸ್ಕೃತಿಕ ಸಂಘಟನೆ ಶ್ರಮಿಸುತ್ತಿದೆ. ಕನ್ನಡದ ಪಾರಂಪರಿಕ ರಂಗಕಲೆಗಳ ಕೌಶಲ ಪ್ರದರ್ಶನಗಳ ಮೂಲಕ ಅರಿವು ವಿಸ್ತರಿಸುವ ಆಶಯ ಈ ಸಂಘಟನೆಯದ್ದು. ಕನ್ನಡ ನಾಟಕಗಳ ಅಪರೂಪದ ಪ್ರಯೋಗಗಳನ್ನು ಆಯೋಜಿಸುವುದು ಸೇರಿದಂತೆ ರಾಷ್ಟ್ರಮಟ್ಟದ ಉತ್ಸವಗಳನ್ನು ಆಯೋಜಿಸುವುದು ಅನಾವರಣದ ಉದ್ದೇಶ.

ವಿನಾಶದಂಚಿನಲ್ಲಿರುವ ಬೊಂಬೆಯಾಟವನ್ನು ಆಧುನಿಕ ತಂತ್ರಜ್ಞಾನದ ಅಳವಡಿಕೆ ಮೂಲಕ ಮತ್ತೆ ಅದನ್ನು ಜನಮನ್ನಣೆಯತ್ತ ಕೊಂಡೊಯ್ಯುವುದೇ ಬೆಂಗಳೂರು ಪೊಪೆಟ್ ಉತ್ಸವವಿನಾಶದ ಅಂಚಿನಲ್ಲಿರುವ ಬೊಂಬೆಯಾಟವನ್ನು ಆಧುನಿಕ ತಂತ್ರಜಾÐನದ ಅಳವಡಿಕೆಯ ಮೂಲಕ ಮತ್ತೆ ಜನಮನ್ನಣೆಯತ್ತ ಕೊಂಡೊಯ್ಯುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಶಾಲಾ ಮಕ್ಕಳಿಗಾಗಿ ಬೊಂಬೆಯಾಟದ ಮೂಲಕ ಕತೆ ಹೇಳುವ ತಂತ್ರವನ್ನು ಕಲಿಸುವುದು ಹಾಗೂ ಈ ಉದೇಶ ಸಾಧನೆಗಾಗಿ ಬೊಂಬೆಯಾಟದ ತಂತ್ರಗಳ ಕಲಿಕೆ ಹಾಗೂ ಪ್ರದರ್ಶನದ ರೆಪೊಟ್ರಿಯನ್ನು ಸ್ಥಾಪಿಸುವ ಕನಸು ಕೂಡ ಸಂಘಟನೆಗಿದೆ. ನಾಡು, ದೇಶ ಹಾಗೂ ವಿದೇಶದ ಶ್ರೇಷ್ಠ ರಂಗ ಪ್ರದರ್ಶನಗಳನ್ನು ಪ್ರಾಯೋಜಿಸುವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ. ಇತರ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಸಾಂಸ್ಕಂತಿಕ ಮಹತ್ವದ ಕಮ್ಮಟ, ವಿಚಾರ ಸಂಕಿರಣ, ತರಬೇತಿ, ಸಂವಾದದಂತಹ ಇನ್ನಿತರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಉದ್ದೇಶವಿದೆ.

ಈ ಎಲ್ಲಾ ಕೆಲಸಗಳ ಮೂಲಕ ಕನ್ನಡದ ಮುಂದಿನ ತಲೆಮಾರುಗಳನ್ನು ಸಾಮುದಾಯದ ಸಾಂಸ್ಕøತಿಕ ನೆನಪುಗಳ ಜೊತೆ ಜೋಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲು ವಿಶಿಷ್ಠವಾದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಈ ಕಾರ್ಯಗಳನ್ನು ಕಾಲಬದ್ಧವಾಗಿ ಹಾಗೂ ಸಾಮಾಜಿಕ ನ್ಯಾಯದ ತತ್ವದ ಆಧಾರದಲ್ಲಿ ಅನುಷ್ಠಾನಕ್ಕೆ ತರುವ ಹೊಣೆಯನ್ನು ಅನಾವರಣ ಸಂಘಟನೆ ಹೊತ್ತಿದೆ.

***
‘ಕಂಬರ್ ರಾಮಾಯಣ’
ನ. 23ರ ರಾತ್ರಿ 7ಕ್ಕೆ ಕೇರಳದ ಕೃಷನನ್ ಕುಟ್ಟಿ ಪುಲವರ್ ಮೆಮೋರಿಯಲ್ ತೂಲಪಾವಕೂತ್ತು ಹಾಗೂ ಪಪೆಟ್ ಸೆಂಟರ್, ರಾಮಚಂದ್ರ ಪುಲವರ್ ನಿರ್ದೇಶನದ ‘ಕಂಬರ್ ರಾಮಾಯಣ’ ತೊಗಲು ಗೊಂಬೆಯಾಟ ಪ್ರದರ್ಶಿಸಲಿದೆ.

‘ಕಂಬರ್ ರಾಮಾಯಣ’ ಕುರಿತು:ಈ ಪ್ರದರ್ಶನದಲ್ಲಿ ರಾಮಾಯಣದ ವನವಾಸ, ಪಂಚವಟಿ ಪ್ರಸಂಗ, ಸೀತಾಪಹರಣ, ಜಟಾಯು ವಧೆ, ವಾಲಿ ವಧೆ, ರಾಮ ರಾವಣ ಕಾಳಗ ಹಾಗೂ ಶ್ರೀ ರಾಮ ಪಟ್ಟಾಭಿಷೇಕದ 60 ನಿಮಿಷ ಕಾಲಾವಧಿಯ ಮಾಂತ್ರಿಕ ದೃಶ್ಯಾವಳಿಗಳನ್ನು ನೋಡಬಹುದು.

***
‘ಬೆಂಗಳೂರು ಪಪೆಟ್‍ಉತ್ಸವ’ 2018: ಚಾಲನೆ–ಎಸ್. ಸುರೇಂದ್ರನಾಥ್, ಉಪಸ್ಥಿತಿ– ರವಿ ಎಂ., ಅಧ್ಯಕ್ಷತೆ–ಎನ್.ಆರ್. ವಿಶುಕುಮಾರ್. ಆಯೋಜನೆ–ಅನಾವರಣ ಟ್ರಸ್ಟ್, ಸ್ಥಳ–ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ನ.21 ಸಂಜೆ 6.45

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.