ಸತೀಶ್ ಚಪ್ಪರಿಕೆ
ಮೂರು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ಎಂಟು ವೇದಿಕೆಗಳಲ್ಲಿ ಹಲವಾರು ಗೋಷ್ಠಿಗಳು, ಚರ್ಚೆಗಳು, ಮಾತುಕತೆಗಳು, ನಡೆದವು. ನೇರಪ್ರಸಾರದಲ್ಲಿಯೂ ಸಾಹಿತ್ಯಾಸಕ್ತರು ನೋಡುತ್ತ ಪಾಲ್ಗೊಂಡರು. ಇವೆಲ್ಲಕ್ಕೂ ಮುಖ್ಯವಾಗಿ ಆ ಮೂರು ದಿನಗಳೂ ವೇದಿಕೆಯಲ್ಲಿದ್ದಷ್ಟೇ ಚಟುವಟಿಕೆಗಳು ಅಂಗಳದಲ್ಲಿಯೂ ನಡೆದಿದ್ದವು. ಸಣ್ಣ ಸಣ್ಣ ಗುಂಪುಗಳಲ್ಲಿ ಮಾತು, ಚರ್ಚೆ, ನಗು, ಸಾಹಿತ್ಯ, ಸಂಸ್ಕೃತಿ ಮತ್ತು ಬರೀ ಪ್ರೀತಿಯ ಗಾಳಿ ಅಲ್ಲಿ ಬೀಸುತಲಿತ್ತು. ಬುಕ್‌ಬ್ರಹ್ಮ ಪ್ರತಿಷ್ಠಾನದ ಸಂಸ್ಥಾಪಕ ಸತೀಶ ಚಪ್ಪರಿಕೆ ‘ಭಾನುವಾರದ ಪುರವಣಿ’ಯೊಂದಿಗೆ ಪ್ರತಿಷ್ಠಾನದ ಕೆಲಸಗಳೊಂದಿಗೆ ಲಿಟ್‌ಫೆಸ್ಟ್‌ನ ಒಳಹೊರಗನ್ನೂ ತೆರೆದಿಟ್ಟರು.
ಬುಕ್‌ಬ್ರಹ್ಮ ಲಿಟ್‌ಫೆಸ್ಟ್‌ನ ಉದ್ದೇಶ ಏನು?
ಸಾಹಿತ್ಯ ಮಾಡಬೇಕಾದ ಕೆಲಸವೇ ಕಟ್ಟುವುದು. ಮತ್ತು ಒಗ್ಗೂಡಿಸುವುದು. ಅದನ್ನೇ ಬುಕ್‌ಬ್ರಹ್ಮ ಪ್ರತಿಷ್ಠಾನದ ಬುಕ್‌ಬ್ರಹ್ಮ ಲಿಟ್‌ಫೆಸ್ಟ್ ಮಾಡುತ್ತಿದೆ. ಈ ಇಡೀ ಲಿಟ್‌ಫೆಸ್ಟ್‌ನ ಉದ್ದೇಶ ಸ್ಫಟಿಕಸ್ಪಷ್ಟ, ಭಾರತೀಯ ಭಾಷೆ ಮತ್ತು ಸಾಹಿತ್ಯಗಳ ರಾಜಧಾನಿಯಾಗಿ ಬೆಂಗಳೂರು ಹೊಮ್ಮಬೇಕು. ಬೆಂಗಳೂರಿನ ಮುಕುಟದಲ್ಲಿ ಈಗಾಗಲೇ ಹಲವಾರು ಗರಿಗಳಿವೆ. ಅವುಗಳಲ್ಲಿ ಇದೊಂದು ವಜ್ರದಂತೆ ವಿಜ್ರಂಭಿಸಬೇಕು. ಇದು ನಮ್ಮ ಕನಸೂ ಹೌದು. ಗುರಿಯೂ ಹೌದು. ಉದ್ದೇಶವೂ...
ಲಿಟ್‌ಫೆಸ್ಟ್ ಆರಂಭಿಸುವಾಗ ದಕ್ಷಿಣ ಭಾರತೀಯ ಭಾಷೆಗಳನ್ನು ಒಂದು ಅಂಗಳದಲ್ಲಿ ತರಬೇಕೆನ್ನುವ ಮಹತ್ವಾಕಾಂಕ್ಷೆ ಇತ್ತು. ಭಾರತೀಯ ಭಾಷೆಗಳ ನಡುವೆ ಕೊಡುಕೊಳ್ಳುವಿಕೆ ಆಗಬೇಕು. ಆಯಾ ಭಾಷೆಗಳಲ್ಲಿಯೇ ಸಂವಾದ ನಡೆಯಲಿ. ಭಾಷೆ ಮತ್ತು ಭಾವಗಳ ಸಂವಹನದಲ್ಲಿ ಹಲವಾರು ಭಾಷೆಗಳ ನಾಡಿಮಿಡಿತ ಓದುಗರಿಗೆ ದಕ್ಕತೊಡಗಿತು. ಅದೇ ಆಗಬೇಕಾಗಿತ್ತು.
ಬೇರೆ ಲಿಟ್‌ಫೆಸ್ಟ್‌ಗಳಿಗಿಂತ ಬುಕ್‌ಬ್ರಹ್ಮ ಲಿಟ್‌ಫೆಸ್ಟ್ ಹೇಗೆ ಭಿನ್ನ?
ಬೇರೆ ಲಿಟ್‌ಫೆಸ್ಟ್‌ಗಳಲ್ಲಿ ಇಂಗ್ಲಿಷ್ ಕೃತಿಗಳ ಚರ್ಚೆ ಹೆಚ್ಚು. ಕೇರಳದಲ್ಲಿ ಮಾತ್ರ ಮಲಯಾಳ ಭಾಷೆಗೆ ಸಿಂಹಪಾಲು ಸಿಗುತ್ತಿತ್ತು. ಬೇರೆ ಲಿಟ್‌ಫೆಸ್ಟ್‌ಗಳಲ್ಲಿ ಹಿಂದಿಗೆ ಒಂದೆರಡು ಸೆಷನ್‌ಗಳನ್ನು ನೀಡಲಾಗುತ್ತಿತ್ತು. ಭಾರತೀಯ ಭಾಷೆಗಳಲ್ಲಿ ನಡೆಯುತ್ತಿರುವ ಪ್ರಯೋಗಗಳೇನು? ಉಳಿದವರು ಅದನ್ನು ಹೇಗೆ ಸ್ವೀಕರಿಸುತ್ತಿದ್ದಾರೆ? ವಿನಿಮಯವೆಂದರೆ ಜನಪ್ರಿಯ ಸಾಹಿತ್ಯದ ಹಲವಾರು ಎಡಿಷನ್‌ಗಳ ಪ್ರಕಟಣೆಯೇ? ಕ್ಲಾಸಿಕ್‌ಗಳೂ ಅನುವಾದವಾಗಬೇಕಲ್ಲ, ಜನರಿಗೆ ತಲುಪಬೇಕಲ್ಲ, ಸಮಕಾಲೀನ ಸಾಹಿತ್ಯದ ಒಳ ಹೊರಗೆಲ್ಲವೂ ಓದುಗರೊಂದಿಗೆ ಮುಖಾಮುಖಿಯಾಗಿಸಬೇಕಾಗಿತ್ತು. ಇದೇ ಬುಕ್‌ಬ್ರಹ್ಮ ಲಿಟ್‌ಫೆಸ್ಟ್‌ನ ಸ್ವರೂಪವಾಯಿತು.
ಅದೆಷ್ಟು ದಿನಗಳಿಗೆ ಮೊದಲು ತಯಾರಿ ಆರಂಭಿಸುತ್ತೀರಿ?
ಮೂರು ದಿನಗಳ ಸಂಭ್ರಮಕ್ಕೆ ಉಳಿದ ಮುನ್ನೂರ ಅರವತ್ತೆರಡು ದಿನಗಳ ತಯಾರಿ ಬೇಕಾಗುತ್ತದೆ. ಆ ತಯಾರಿಯಲ್ಲಿ ಎಂಬತ್ತು ಜನರ ತಂಡ ತೊಡಗಿಕೊಳ್ಳುತ್ತದೆ. ಇಪ್ಪತ್ತು ಜನರ ತಂಡ ನಿರಂತರವಾಗಿ ಇದೇ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತದೆ. ಅತಿಥಿಗಳು, ಅವರ ವಿಷಯಗಳು, ಅವರು ಲಭ್ಯವಿದ್ದಾರೆಯೇ ಕೇಳಿಕೊಳ್ಳುವುದು ನಡೆಯುತ್ತದೆ. ಒಂದೆರಡು ತಿಂಗಳು ಸಮಯವಿದ್ದಾಗಲೇ ಎಲ್ಲರೂ ಲಭ್ಯ ಇರುವರೆ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ.
ಲಿಟ್‌ಫೆಸ್ಟ್‌ಗೆ ಒಂದು ಮೆಂಟರ್ಸ್ ತಂಡ ಇದೆ. ಹಿರಿಯರಾದ ಹಂಪನಾ, ರಾಜೇಂದ್ರ ಚೆನ್ನಿ, ಆಶಾದೇವಿ ಮುಂತಾದವರು ಇದ್ದಾರೆ. ಜೊತೆಗೆ ಕ್ಯುರೇಟರ್ಸ್ ತಂಡವೂ ಇದೆ. ಒಂದಷ್ಟು ಜನ ಸಮಾನ ಮನಸ್ಕರು ಕೂಡಿ ಶ್ರಮಿಸುವುದರಿಂದ ಯೋಜನೆಯಂತೂ ಪಕ್ಕಾ ಆಗುತ್ತಿದೆ. ಸ್ವಯಂಸೇವಕರು ಉತ್ಸವದ ಮೊದಲ ಮೂರು ದಿನಗಳಿಂದ ನಮ್ಮೊಟ್ಟಿಗೆ ಕೈ ಜೋಡಿಸುತ್ತಾರೆ. ಒಂದೊಂದು ಗೋಷ್ಠಿಗೂ ನಾಲ್ಕಾರು ಜನರ ತಂಡ ಕಾರ್ಯಮುಖವಾಗುತ್ತದೆ. ಪ್ರತಿಗೋಷ್ಠಿ ಆರಂಭವಾಗುವ ಮೊದಲು ಬ್ಯಾಕ್‌ಸ್ಟೇಜ್ ಮ್ಯಾನೆಜರ್‌ಗಳು ಅತಿಥಿಗಳನ್ನು ಕರೆತಂದು, ಒಂದೆರಡು ಸಲ ಸಮಯದ ಬಳಕೆಯ ಕುರಿತು ತಿಳಿ ಹೇಳುತ್ತಾರೆ. ಮೂರು ದಿನಗಳ ಸಂಭ್ರಮದಲ್ಲಿ ಒಂದರೆ ಗಳಿಗೆಯೇ ತಡವಾಗದಂತೆ ಆಗಲು ಇವರೆಲ್ಲರ ಪರಿಶ್ರಮವೇ ಕಾರಣವಾಗಿದೆ.
ಸಮಯಕ್ಕೆ ಸರಿಯಾಗಿ ಆರಂಭ ಮಾಡಿ, ಮುಗಿಸುವುದು ಕಷ್ಟವೆನಿಸಲಿಲ್ಲವೆ?
ಪ್ರತಿಗೋಷ್ಠಿಗೂ ಇಂತಿಷ್ಟೇ ಸಮಯ ಅಂತ ನಿರ್ಧಾರ ಮಾಡಿಕೊಳ್ಳಲಾಯಿತು. ಯಾವುದೇ ವಿಷಯವಾದರೂ 12–15 ನಿಮಿಷಗಳಲ್ಲಿ ಸ್ಪಷ್ಟವಾಗಿ ಮನದಟ್ಟು ಮಾಡಬಹುದು ಎಂಬುದೊಂದು ನಂಬಿಕೆ. ಒಂದುವೇಳೆ ಅಷ್ಟು ನಿಮಿಷಗಳಲ್ಲಿ ಸಾಧ್ಯವಾಗದಿದ್ದರೆ ದಿನವಿಡೀ ಸಮಯ ನೀಡಿದರೂ ಯಾವುದೇ ವಿಷಯವನ್ನು ಸ್ಪಷ್ಟಪಡಿಸಲಾರರು. ತಜ್ಞರಿಗೆಲ್ಲ 12–15 ನಿಮಿಷಯ ಕೊಡ್ತೀವಿ. ವಿಷಯ ದಾರಿ ತಪ್ಪದಂತೆ ನೋಡಿಕೊಳ್ಳಲು ಮಾಡರೇಟರ್‌ಗಳಿರ್ತಾರೆ. ಈ ಕಾರಣದಿಂದ ಒಂದು ವಿಷಯದ ಮೂರು ನಾಲ್ಕು ಆಯಾಮಗಳು 50–55 ನಿಮಿಷಗಳಲ್ಲಿ ಸ್ಪಷ್ಟ ಚಿತ್ರಣ ಸಿಗುವಂತಾಗುತ್ತದೆ.
ಪ್ರತಿಗೋಷ್ಠಿಯೂ ಕೇಳುಗರ ಮನಸಲ್ಲಿ ಗುಂಗಿಹುಳ ಬಿಡಬೇಕು. ಅದರ ಗುಂಗು ಇರಬೇಕು. ಈ ಕೆಲಸವನ್ನು ಪ್ರತಿಗೋಷ್ಠಿಗಳೂ ಮಾಡುತ್ತಿವೆ.
ಲಿಟ್‌ಫೆಸ್ಟ್‌ಗೆ ಎಷ್ಟು ಜನ ಭೇಟಿ ನೀಡಿದ್ದರು?
ಕಳೆದ ವರ್ಷ ಬುಕ್‌ಬ್ರಹ್ಮ ಲಿಟ್‌ಫೆಸ್ಟ್ ಮೂರುದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಹೊರತುಪಡಿಸಿ, 45 ಸಾವಿರ ಜನರು ಭೇಟಿ ನೀಡಿದ್ದರು. ಆದರೆ ಎರಡು ತಿಂಗಳ ಅವಧಿಯಲ್ಲಿ ವಿವಿಧ ದೇಶಗಳಿಂದ ಐದು ವೇದಿಕೆಗಳ ಕಾರ್ಯಕ್ರಮವನ್ನು ಸುಮಾರು 20 ಲಕ್ಷ ಜನರು ವೀಕ್ಷಿಸಿದರು. ಈ ವರ್ಷ ಈ ತಲುಪುವಿಕೆ ಇನ್ನೂ ವಿಸ್ತಾರಗೊಳ್ಳುತ್ತಿದೆ.
ಸಾಹಿತ್ಯದ ಕೊಡುಕೊಳ್ಳುವಿಕೆ ಅಂದ್ರಿ? ಅದನ್ನು ವಿವರಿಸಲು ಸಾಧ್ಯವೇ?
ಭಾರತೀಯ ಭಾಷೆಗಳ ಕೊಡುಕೊಳ್ಳುವಿಕೆ ಸಾರ್ಥಕ್ಯ ಕಾಣುತ್ತದೆಯೇ ಎಂಬ ಪ್ರಶ್ನೆ ನಮ್ಮಲ್ಲಿಯೂ ಇತ್ತು. ಕಳೆದ ವರ್ಷ 20–26 ಪ್ರಮುಖ ಕೃತಿಗಳು ಬೇರೆ ಭಾಷೆಯಿಂದ ಕನ್ನಡಕ್ಕೆ, ಕನ್ನಡದಿಂದ ಬೇರೆ ಭಾಷೆಗಳಿಗೆ ತರ್ಜುಮೆಗೊಳ್ಳುವ ಪ್ರಯತ್ನಗಳು ಆರಂಭವಾದವು. ಈ ವರ್ಷ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಯಶವಂತ ಚಿತ್ತಾಲರ ಶಿಕಾರಿ ಈ ವರ್ಷ ತೆಲಗು ಭಾಷೆಗೆ ಅನುವಾದವಾಗಲಿದೆ.
ಈ ವರ್ಷದಿಂದ ಆಹ್ವಾನಿತ ಭಾಷೆಯಾಗಿ ದಕ್ಷಿಣೇತರ ಭಾಷೆಗಳನ್ನು ಕರೆಯಬೇಕು ಎಂದುಕೊಂಡೆವು. ಮೊದಲಿಗೆ ಮರಾಠಿ ಭಾಷೆ ಬಂದಿದೆ. ಮುಂಬರುವ ವರ್ಷಗಳಲ್ಲಿ ಒರಿಯಾ, ಗುಜರಾತಿ, ಬಂಗಾಲಿ ಹೀಗೆ ವಿವಿಧ ಭಾಷೆಗಳು ಆಹ್ವಾನಿತ ಭಾಷೆಗಳಾಗಿ ಬರಲಿವೆ.
ಬುಕ್‌ಬ್ರಹ್ಮ ಲಿಟ್‌ಫೆಸ್ಟ್‌ನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಮಪ್ರಮಾಣದ ಮಹತ್ವ ನೀಡಿದ್ದು ಯಾಕೆ?
ಬುಕ್‌ಬ್ರಹ್ಮ ಲಿಟ್‌ಫೆಸ್ಟ್‌ನ ಆಕರ್ಷಣೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಹೌದು. ಮುಖ್ಯವೇದಿಕೆಯೂ ಸೇರಿದಂತೆ, ಮೂರು ದಿನಗಳಲ್ಲಿ ಎಂಟು ಪ್ರದರ್ಶನಗಳಿರುತ್ತವೆ. ಸಂಗೀತ ಮತ್ತು ಪ್ರದರ್ಶನ ಕಲೆಗಳ ಸಂಯೋಜನೆ ಇಲ್ಲಿದೆ. ರಂಗಗೀತೆಗಳಿಗೂ, ಗಾನ ಕಥನಗಳಿಗೂ, ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳೂ ಇವುಗಳಲ್ಲಿ ಸೇರಿವೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೇರ್ಪಡಿಸಲು ಆಗುವುದಿಲ್ಲ. ಬೆಳಗ್ಗೆ ಸಂಗೀತದಿಂದ ದಿನ ಆರಂಭವಾದರೆ, ಸಂಜೆ ಪ್ರದರ್ಶನ ಕಲೆಗಳಿಂದ ಮುಕ್ತಾಯವಾಗುತ್ತದೆ. ಡಿಸೆಂಬರ್ ಹೊತ್ತಿಗೆ ಈ ಕಲಾವಿದರ ತಂಡಗಳಿಂದ ಡೇಟುಗಳನ್ನು ಖಚಿತಗೊಳಿಸಲಾಗುತ್ತದೆ.
ಮುಂದಿನ ಲಿಟ್‌ಫೆಸ್ಟ್ ತಯಾರಿ ಯಾವಾಗಿನಿಂದ ಶುರುವಾಗುತ್ತದೆ?
ಮೂರು ದಿನಗಳ ಉತ್ಸವ ಮುಗಿದ ಕ್ಷಣದಿಂದಲೇ ಮುಂದಿನವರ್ಷದ ಲಿಟ್‌ಫೆಸ್ಟ್‌ನ ಕೆಲಸ ಆರಂಭವಾಗುತ್ತದೆ. ಬುಕ್‌ಬ್ರಹ್ಮ ಲಿಟ್‌ಫೆಸ್ಟ್ ಪ್ರತಿವರ್ಷವೂ ಹೆಚ್ಚು ಹೆಚ್ಚು ಜನರನ್ನು ಸೆಳೆಯುತ್ತಿದೆ. ಆಗಸ್ಟ್ ಎಂದರೆ ಬೆಂಗಳೂರು, ಬುಕ್‌ಬ್ರಹ್ಮ ಲಿಟ್‌ಫೆಸ್ಟ್ ಎಂಬಷ್ಟು ಜನಪ್ರಿಯ ಮತ್ತು ಜನಪರಗೊಳಿಸಬೇಕೆನ್ನುವುದು ಪ್ರತಿಷ್ಠಾನದ ಕನಸು. ಕನ್ನಡಿಗರ ಕಸುವು ನಮ್ಮೊಂದಿಗೆ ಜೊತೆಗೂಡುತ್ತಿದೆ. ಜನರನ್ನು ಒಗ್ಗೂಡಿಸುವ ಕೆಲಸ ಧರ್ಮ ಮತ್ತು ಸಾಹಿತ್ಯ ಮಾಡುತ್ತದೆ. ಸಾಹಿತ್ಯವನ್ನೇ ಧರ್ಮದಂತೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಲಿಟ್‌ಫೆಸ್ಟ್‌ನಿಂದಾಗುತ್ತಿದೆ. ಕೂಡುವ, ಕಟ್ಟುವ ಮತ್ತು ಮುನ್ನಡೆಸುವ ಕೆಲಸ.
ಚಿಣ್ಣರಿಗಾಗಿ ಸಂವಾದ ಮತ್ತು ಸಂಭಾಷಣೆಯ ರೂಪದ ಇಂಟರ್‍ಯಾಕ್ಟಿವ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಈ ವರ್ಷ ಕೊನೆಯ ಎರಡು ದಿನಗಳಲ್ಲಿ ಈ ಚಿಣ್ಣರ ಅಂಗಳವೂ ಭರ್ತಿಯಾಗಿತ್ತು. ಇಡೀ ದಿನ ಮಕ್ಕಳು ಅಲ್ಲಿ ಸಮಯ ಕಳೆದರು. ಕೆಲವು ಶಾಲೆಯ ವಿದ್ಯಾರ್ಥಿಗಳೂ ಭೇಟಿ ನೀಡಿದರು. ಪಾಲಕರೊಂದಿಗೆ ಬಂದರೆ ಮಕ್ಕಳು, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಸವಿಯಬಹುದು. ಮುಂದಿನ ವರ್ಷ ಎಳೆಯ ಓದುಗರನ್ನು ಸೆಳೆಯಲು ಇನ್ನಷ್ಟು ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.