ADVERTISEMENT

ದಲಿತ, ಆದಿವಾಸಿ ಕಾವ್ಯ ಕಲಾಮೇಳ

ಡಾ.ಮೂಡ್ನಾಕೂಡು ಚಿನ್ನಸ್ವಾಮಿ
Published 29 ಅಕ್ಟೋಬರ್ 2022, 14:33 IST
Last Updated 29 ಅಕ್ಟೋಬರ್ 2022, 14:33 IST
ಆದಿಮ
ಆದಿಮ   

ಕೋಲಾರದ ತೇರಹಳ್ಳಿ ಬೆಟ್ಟದ ಶಿವಗಂಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದಿಮ ಸಾಂಸ್ಕೃತಿಕ ಕೇಂದ್ರವು ಕಳೆದ ಹದಿನಾರು ವರ್ಷಗಳಿಂದ ತಳ ಸಮುದಾಯಗಳ ಕಲೆ ಮತ್ತು ಸಾಹಿತ್ಯವನ್ನು ಪೋಷಿಸುತ್ತಾ, ಬೆಳೆಸುತ್ತಾ ನೆಲಮೂಲ ಸಂಸ್ಕೃತಿಯ ಕಡೆಗಣಿಸಲ್ಪಟ್ಟವರ ಸಂಕಥನವನ್ನು ಅನಾವರಣಗೊಳಿಸುತ್ತಾ ಬಂದಿದೆ. ಅದರ ಹುಟ್ಟೇ ಒಂದು ರೋಚಕ ಕಥೆಯನ್ನು ಹೇಳುತ್ತದೆ. ದಲಿತ ಚಳವಳಿಯ ತವರು ಎನಿಸಿಕೊಂಡಿರುವ ಕೋಲಾರದ ಸುಮಾರು ಮೂವತ್ತು ಗೆಳೆಯರು ದಿನವೂ ಒಂದು ರೂಪಾಯಿ ಉಳಿತಾಯ ಮಾಡುವುದರೊಂದಿಗೆ ಈ ಸಂಸ್ಥೆಯ ಕನಸನ್ನು ಕಟ್ಟಿದ್ದಾರೆ ಮತ್ತು ಅನೇಕ ಅಡಚಣೆಗಳ ನಡುವೆಯೂ ಆಗುಮಾಡಿದ್ದಾರೆ.

ಅಲ್ಲಿ ನಡೆಯುವ ತಿಂಗಳ ‘ಹುಣ್ಣಿಮೆಯ ಹಾಡು’ ಕಾರ್ಯಕ್ರಮ ರಾಜ್ಯದಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ನೆಲಮೂಲ ಸಂಸ್ಕೃತಿಯನ್ನು ಬಿಂಬಿಸುವ ನಾಟಕ, ಜಾನಪದ ಕಲೆ, ಹಾಡುಗಾರಿಕೆ ತತ್ವಪದ ಗಾಯನ, ದೇಸೀ ಕಲೆಗಳು ಮೊದಲಾದ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಸಾಧಕರಿಗೆ ‘ಗದ್ದುಗೆ ಗೌರವ’ ನೀಡಿ ಗೌರವಿಸುತ್ತಾ ಬಂದಿದೆ. ‘ಚುಕ್ಕಿಮೇಳ’ ಎಂಬ ಹೆಸರಿನಲ್ಲಿ ನಡೆಸಿಕೊಂಡು ಬಂದ ಮಕ್ಕಳ ಶಿಬಿರಗಳು ಹೆಚ್ಚು ಜನಪ್ರಿಯವಾಗಿವೆ ಮತ್ತು ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳೆಸಿವೆ.

ಸ್ತ್ರೀ ಸಬಲೀಕರಣ ಮತ್ತು ಸ್ವಾತಂತ್ರ್ಯ ಕುರಿತಾದ ವಿಚಾರಸಂಕಿರಣ, ಸಂವಾದ, ತಳವರ್ಗದ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಿವೆ. ಜೊತೆಗೆ ರಂಗ ತರಬೇತಿ ಶಿಬಿರಗಳು, ಸಾಹಿತ್ಯ ಕಮ್ಮಟಗಳು ಯುವ ಸಮೂಹವನ್ನು ಆಧುನಿಕ ಭಾರತದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ತಯಾರು ಮಾಡಿವೆ. ಪ್ರಾರಂಭದಿಂದಲೂ ರಂಗ ನಿರ್ದೇಶಕ ಕೋಟಿಗಾನಹಳ್ಳಿ ರಾಮಯ್ಯನವರ ಕೊಡುಗೆಯನ್ನು ಮರೆಯುವಹಾಗಿಲ್ಲ. ಅವರು ರಚಿಸಿ ನಿರ್ದೇಶಿಸಿದ ಹಲವು ನಾಟಕಗಳು ಮಕ್ಕಳ ಮನಸ್ಸನ್ನು ಹುರಿಗೊಳಿಸಿವೆ. ಈ ದೃಷ್ಟಿಯಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರದ ಸಾಧನೆ ಅನನ್ಯ ಮತ್ತು ಅಭಿನಂದನಾರ್ಹ.

ADVERTISEMENT

ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ ವೀದೇಶಿ ನಂಟು ಹೊಸದೇನಲ್ಲ. ಆದಿಮದ ‘ಮತ್ತೆ ಏಕಲವ್ಯ’ ನಾಟಕ ತಂಡ ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಒಂದು ತಿಂಗಳ ಕಾಲ ಪ್ರದರ್ಶನ ನೀಡಿದೆ. ಜಪಾನಿನ ಡೊಳ್ಳು ತಂಡದವರು ಮತ್ತು ಸ್ವಿಟ್ಜರ್ಲೆಂಡ್‌ನ ಮರಗಾಲಿನ ಕಲಾವಿದರು ಆದಿಮಕ್ಕೆ ಬಂದು ಪ್ರದರ್ಶನ ನೀಡಿದ್ದಾರೆ. ಫಿನ್ಲೆಂಡ್‌ನ ಡೈನಾ ಕುಕ್ಕ ಹಾರ್ವಿಲಾಹ್ತಿ ಸುಮಾರು ಆರು ತಿಂಗಳುಗಳ ಕಾಲ ಆದಿಮದಲ್ಲಿ ವಾಸ್ತವ್ಯ ಹೂಡಿ ತಾವು ಡೊಳ್ಳು ಕುಣಿತವನ್ನು ಕಲಿತು ತಮ್ಮ ದೇಶದ ‘ಪಾಯ್ಸ್’ ಎಂಬ ಸಮರ ಕಲೆಯನ್ನು ಮಕ್ಕಳಿಗೆ ಕಲಿಸಿ ಹೋಗಿದ್ದಾರೆ. ಜರ್ಮನಿಯ ಡಯಾನಾ ಎಂಬ ಹೆಣ್ಣುಮಗಳು ಒಂದು ತಿಂಗಳು ಆದಿಮದಲ್ಲಿ ತಂಗಿದ್ದು ರದ್ದಿ ಪದಾರ್ಥಗಳಲ್ಲಿ ಕಲಾಕೃತಿಗಳನ್ನು ರಚಿಸುವುದನ್ನು ಮಕ್ಕಳಿಗೆ ಕಲಿಸಿದ್ದಾಳೆ. ಇಂತಹ ಕೊಡುಕೊಳ್ಳುವಿಕೆ ನಿರಂತರವಾಗಿ ನಡೆಯುತ್ತಾ ಬಂದಿದೆ.

ಈಗ ಮತ್ತೊಂದು ಅವಕಾಶ ಆದಿಮ ಕೇಂದ್ರಕ್ಕೆ ಒದಗಿ ಬಂದಿದೆ. ಬ್ರಿಟನ್ನಿನ ಆರ್ಟ್ಸ್ ಅಂಡ್ ಹ್ಯುಮ್ಯಾನಿಟೀಸ್ ಸೆಂಟರ್ ನೆಟ್ವರ್ಕ್ ಭಾರತದ ದಲಿತ ಮತ್ತು ಆದಿವಾಸಿ ಸಾಹಿತ್ಯ ಮತ್ತು ಪ್ರದರ್ಶನ ಕಲೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು 2015 ರಿಂದ ಕಾರ್ಯನಿರತವಾಗಿದೆ. ನಾಟಿಂಗ್‌ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದ ಡಾ. ನಿಕೋಲ್ ಥಿಯಾರಾ ಮತ್ತು ಫ್ರಾನ್ಸಿನ ಮಾಂಪೆಲಿಯರ್ ವಿಶ್ವವಿದ್ಯಾಲಯದ ಡಾ. ಜುಡಿತ್ ಮಿಸ್ರಾಹಿ-ಬರಾಕ್ ಇದರ ರೂವಾರಿಗಳು. ಇದುವರೆಗೆ ದಲಿತ ಆದಿವಾಸಿ ಸಂಸ್ಕೃತಿಗೆ ಸಂಬಂಧಪಟ್ಟಂತೆ ಭಾರತ, ಬ್ರಿಟನ್, ಫ್ರಾನ್ಸ್ ಮೂರೂ ದೇಶಗಳಲ್ಲಿಯೂ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅನೇಕ ಹೊಸ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸಿಕೊಟ್ಟಿದ್ದಾರೆ.

2022-23ರಲ್ಲಿ CADALFEST - Celebrating Dalit and Adivasi Literatures and Performing Arts ಎಂಬ ಹೆಸರಿನಲ್ಲಿ ಆರು ಕಾರ್ಯಕ್ರಮಗಳು ನಿಗದಿತವಾಗಿವೆ. ಈಗಾಗಲೇ ನಾಟಿಂಗ್‍ಹ್ಯಾಮ್ ನಗರದಲ್ಲಿ ಅಕ್ಟೋಬರ್ 14-15 ರಂದು ಒಂದು ಸಮ್ಮೇಳನವು ಯಶಸ್ವಿಯಾಗಿ ಜರುಗಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಭಾರತದ ನಾಲ್ಕು ರಾಜ್ಯಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಕರ್ನಾಟಕದಲ್ಲಿ ದಲಿತ ಮತ್ತು ಆದಿವಾಸಿ ನೆಲೆಯಲ್ಲಿ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪಸರಿಸುತ್ತಿರುವ ಆದಿಮ ಸಾಂಸ್ಕೃತಿಕ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ದಲಿತ ಆದಿವಾಸಿ ಸಮುದಾಯದ ಐವರು ಯುವ ಕವಿಗಳು ಮತ್ತು ಐವರು ರಂಗ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ನವೆಂಬರ್‌ 1ರಂದು ಕಾರ್ಯಕ್ರಮ ಜರುಗಲಿದೆ. ಉಳಿದಂತೆ ಹೈದರಾಬಾದ್, ಚೆನ್ನೈ ಮತ್ತು ರಾಂಚಿ ನಗರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.