
ಅಮೂರ್ತ ಕಲಾಕೃತಿಗಳಲ್ಲಿ ಅಡಗಿರುವ ಹತ್ತಾರು ಒಳನೋಟಗಳನ್ನು ಅರ್ಥೈಸುವುದು ಹೇಗೆ? ಎಂಬ ಪ್ರಶ್ನೆ ಎದುರಾಗುವುದೇನೋ ಸಹಜ. ಆದರೆ, ಈ ‘ಅರ್ಥೈಸುವಿಕೆ’ಯ ಚೌಕಟ್ಟಿಗೆ ಒಗ್ಗದ ಹತ್ತಾರು ಹೊಳಹುಗಳು ಮೇಲ್ನೋಟಕ್ಕೆ ಅಮೂರ್ತ ಕಲಾಕೃತಿಗಳಲ್ಲಿ ದಿಕ್ಕಾಪಾಲಾದಂತೆ ಕಂಡರೂ, ಅವುಗಳ ಲಯವನ್ನು ಮೆಲ್ಲಗೆ ಹಿಡಿಯಲು ಸಾಧ್ಯವಾಗುವುದೇನಿದ್ದರೂ ಅದು ತೀವ್ರವಾದ ಭಾವಕ್ಕೆ. ಅಂದರೆ ಅಮೂರ್ತ ಕಲೆಯಲ್ಲಿರುವ ಬಣ್ಣ, ರೇಖೆ, ಚಿತ್ತಾರ ಪ್ರತಿಯೊಂದೂ ತನ್ನ ಇರುವಿಕೆಯನ್ನು ವ್ಯಕ್ತಪಡಿಸುವುದೇ ನೋಡುಗರಲ್ಲಿ ಹುಟ್ಟುವ ಅತೀವ ಭಾವಗಳ ಮೂಲಕ.
ತುಸು ಗಾಢ ಕೆಂಬಣ್ಣವನ್ನು ತಾಕಿ, ಮಿಳಿತಗೊಂಡ ಹೊಂಬಣ್ಣವು ಏನು ಹೇಳುತ್ತಿರಬಹುದು?; ಮುಂಜಾವಿನ ಬಾನಿನ ಕೆಂಪೇ, ಮುಸ್ಸಂಜೆಯ ಆಗಸದ ವರ್ಣವೇ ಅಥವಾ ಒಡಲಿನೊಳಗೆ ಅಡಗಿರುವ ರೌದ್ರ ಭಾವವೇ? ಯಾವುದರ ಸಂಕೇತವದು? ಹೀಗೆ ಒಂದು ಬಣ್ಣ ಹುಟ್ಟಿಸುವ ಪ್ರಶ್ನೆಗಳು ಅಸಂಖ್ಯಾತ. ಉತ್ತರವನ್ನು ಕಂಡುಕೊಳ್ಳಲು ತಾಳ್ಮೆಯ ತಂತಿಯನ್ನು ಮೀಟುತ್ತಿರಬೇಕು. ನೋಡುಗರ ದೃಷ್ಟಿಕೋನದಲ್ಲಿ ಭಿನ್ನ ಸಂವೇದನೆಗಳನ್ನು ಹುಟ್ಟಿಸಿ, ಕ್ಯಾನ್ವಾಸ್‌ನ ವ್ಯಾಪ್ತಿ ಹಿರಿದಾಗುವಂತೆ ಮಾಡುವ ಮೋಡಿ ಅಮೂರ್ತ ಕಲೆಯದ್ದು.
ಇಂಥ ಅಮೂರ್ತ ಕಲಾಕೃತಿಗಳ ರಚನೆ ಹಾಗೂ ಆಧುನಿಕ ಕಲಾಪ್ರಕಾರದಲ್ಲಿ ದೊಡ್ಡ ಹೆಸರಾಗಿರುವ ರಾಮ್ ಕುಮಾರ್ ಅವರ ಕಲಾಕೃತಿಗಳ ಪ್ರದರ್ಶನ ‘ಶೇಪ್ ಆಫ್ ಎ ಥಾಟ್ ಲೆಟರ್ಸ್ ಫ್ರಂ ರಾಮ್ ಕುಮಾರ್’ ಶೀರ್ಷಿಕೆಯಡಿ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ದಿ ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್ ಫೋಟೊಗ್ರಫಿಯಲ್ಲಿ ನಡೆಯುತ್ತಿದೆ.
ರಾಮ್ ಕುಮಾರ್ ಅವರ ಶತಮಾನೋತ್ಸವದ (1924-2018) ಸ್ಮರಣಾರ್ಥ ಅವರ ಒಟ್ಟಂದದ ಕಲಾಕೃತಿಗಳು ಹಾಗೂ ಚಿಂತನೆಗಳನ್ನು ಆಧರಿಸಿ ಈ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ಶಿಮ್ಲಾ ಮತ್ತು ದೆಹಲಿಯಲ್ಲಿ ಬೆಳೆದ ರಾಮ್ ಕುಮಾರ್ ಗುಡ್ಡಗಾಡಿನ ಏಕಾಂಗಿತನವನ್ನು ಹಾಗೂ ಬೆಳೆಯುತ್ತಿರುವ ನಗರದಲ್ಲಿ ಆಳವಾಗಿ ಹೊಕ್ಕಿರುವ ಒಂಟಿತನವನ್ನು ಏಕಕಾಲಕ್ಕೆ ಗ್ರಹಿಸಿ, ಅದನ್ನು ತಮ್ಮ ಹಲವು ಕಲಾಕೃತಿಗಳಲ್ಲಿ ತರಲು ಯತ್ನಿಸಿದ್ದಾರೆ.
ಹಣಕಾಸುತಜ್ಞರಾಗಿ, ಚಿಂತಕರಾಗಿ ಪ್ರಸಿದ್ಧರಾಗಿದ್ದ ರಾಮ್ ಕುಮಾರ್ ‘ಕಲಾವಿದನಾಗಬೇಕು ಎಂಬ ಆಸೆಗೂ ಮೊದಲು ಬರಹಗಾರನಾಗಬೇಕೆಂಬ ಹಂಬಲವಿತ್ತು’ ಎಂಬುದನ್ನು ಹೇಳಿಕೊಂಡಿದ್ದರು. ಅದಕ್ಕೆ ನಿದರ್ಶನವೆಂಬಂತೆ ಹಿಂದಿಯಿಂದ ಅನುವಾದಗೊಂಡ ಅವರ ‘ದಿ ಫೇಸ್ ಆ್ಯಂಡ್ ಅದರ್ ಸ್ಟೋರಿಸ್’ ಸಣ್ಣ ಕಥಾಸಂಕಲನದಲ್ಲಿ ಓದುಗರನ್ನು ಹಿಡಿದಿಡಬಲ್ಲ ಹಲವು ಕಥೆಗಳಿವೆ.
ರಾಮ್ ಕುಮಾರ್ ಅವರು ಕಲಾಸೃಷ್ಟಿಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಹಲವು ಪ್ರೇರಣೆಗಳಿದ್ದವು. ಪ್ರೊಗ್ರೆಸ್ಸಿವ್ ಕಲಾವಿದರ ಗುಂಪಿನೊಂದಿಗಿನ ಒಡನಾಟ, ಅಂತರರಾಷ್ಟ್ರೀಯ ಕಲಾ ಪ್ರದರ್ಶನಗಳು ಮತ್ತು ಸಂಯೋಜಕರ ಜತೆಗಿನ ಬಾಂಧವ್ಯವೂ ಇದಕ್ಕೆ ಕಾರಣವಾಗಿತ್ತು.
ಅವರು ತಮ್ಮ ಆರಂಭಿಕ ವರ್ಷಗಳಲ್ಲಿ ಫಿಗರೇಟಿವ್ ಕಲಾಕೃತಿಗಳನ್ನು ರಚಿಸಿದ್ದರೂ, ವಿಶಿಷ್ಟ ಬಗೆಯ ಅಮೂರ್ತ ಕಲ್ಪನೆಯ ಕಲಾಕೃತಿಗಳಲ್ಲಿಯೇ ತಮ್ಮ ಕಲಾಭಾಷೆಯನ್ನು ಕಂಡುಕೊಂಡರು. ಅವರ ‘ಬನಾರಸಿ’ ಕಲಾಕೃತಿಯು ವಿಶಿಷ್ಟವಾಗಿದೆ.
60ರ ದಶಕದಲ್ಲಿ ರಾಮ್ ಕುಮಾರ್ ಬನಾರಸ್‌ಗೆ ಬಂದರು. ಎಂ.ಎಫ್ ಹುಸೇನ್ ಕೂಡ ಜತೆಗೂಡಿದ್ದರು. ಅವರಿಬ್ಬರ ಜುಗಲ್‌ಬಂದಿ ಹೇಗಿತ್ತೆಂದರೆ ಒಬ್ಬರ ಕುಂಚ ಹರಿವ ಗಂಗೆಯಾದರೆ, ಮತ್ತೊಬ್ಬರದ್ದು ಬನಾರಸ್‌ನ ಧ್ಯಾನಸ್ಥ ಘಾಟ್‌ಗಳಂತೆ.
ತಮ್ಮ ಜೀವಿತಾವಧಿಯಲ್ಲಿ ಅವರು ವ್ಯಕ್ತಿಗಳನ್ನು ಹಚ್ಚಿಕೊಂಡಷ್ಟೆ ಸುಲಭವಾಗಿ ನಗರಗಳನ್ನು ಹೃದಯದಾಳಕ್ಕೆ ಇಳಿಸಿಕೊಂಡಿದ್ದರು. ನಗರಕ್ಕೂ ಮನುಷ್ಯನ ಗುಣಗಳನ್ನು ಆರೋಪಿಸಿ, ಅದರಲ್ಲಿಯೂ ವ್ಯಕ್ತಿಯನ್ನು ಹುಡುಕುತ್ತಿದ್ದರು. ಅವರು ತಮ್ಮ ಪತ್ರಗಳಲ್ಲಿ ದೆಹಲಿಯನ್ನು ನಮೂದಿಸಿರುವ ರೀತಿಯನ್ನು ಗಮನಿಸಿದರೆ, ಒಬ್ಬ ಹಳೆಯ ಗೆಳೆಯನನ್ನು ನೆನಪಿಸಿಕೊಂಡಂತಿದೆ. ಕೋಲ್ಕತ್ತದ ಬಾಲಿಗಂಜ್ ಕುರಿತ ಬರಹವೂ ರಸವತ್ತಾಗಿದ್ದು, ಅಲ್ಲಿನ ಬೀದಿಗಳಲ್ಲಿ ಓಡಾಡಿದ ಅನುಭವ ದಕ್ಕುತ್ತದೆ. ಬನಾರಸ್ ಕುರಿತು ‘ಈ ನಗರಕ್ಕಾಗಿ ಹಾತೊರೆಯುವ ಭಾವ ತೀವ್ರವಾಗಿದೆ. ಹಾಗೆಯೇ ಒಮ್ಮೆಲೇ ಇದರ ಬಂಧದಿಂದ ಮುಕ್ತರಾದರೆ ಸಾಕು ಎನಿಸುತ್ತದೆ’ ಎಂದು ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್ ಫೋಟೊಗ್ರಫಿಯ ಸಂಸ್ಥಾಪಕ ಅಭಿಷೇಕ್ ಪೊದ್ದಾರ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಗೊಂಡಿದೆ.
ಈ ಕಲಾ ಪ್ರದರ್ಶನದಲ್ಲಿ ಅವರ ಅಮೂರ್ತ ಕಲಾಕೃತಿಗಳ ಜತೆಗೆ ಪ್ರಖರ ಚಿಂತನೆಗಳು, ಅವರು ತಮ್ಮ ಸ್ನೇಹಿತರಿಗೆ ಬರೆದ ಪತ್ರಗಳು ಹಾಗೂ ಅವರು ಬರೆದ ಪುಸ್ತಕಗಳು ನೋಡಲು, ಓದಲು ಲಭ್ಯವಿವೆ. ಸ್ನೇಹಿತರಿಗೆ ಬರೆದ ಪತ್ರಗಳು ಮತ್ತು ಸುತ್ತಲಿನ ಪ್ರಪಂಚದ ಕುರಿತು ಅವರು ಹೊಸೆದ ಸಂಭಾಷಣೆಯ ಸಾರವನ್ನು ‘ದಿ ಸ್ಪೇಸಸ್ ಇನ್ ಬಿಟ್ವೀನ್’ ಚಲನಚಿತ್ರವಾಗಿಯೂ ನೋಡಬಹುದು.
‘ಸಮಯ ನಿಮಗೆ ಮೋಸ ಮಾಡದಂತೆ ಎಚ್ಚರವಹಿಸಿ. ಮೋಸದ ಅರಿವಿದ್ದರೆ, ಅರಿವುಗೇಡಿಯಾಗಿ ಜಾರಿ ಬೀಳುವುದು ತಪ್ಪುತ್ತದೆ’ ಎಂಬ ಸಮಯದ ಮಹತ್ವವನ್ನು ಸಾರುವ ಅವರದ್ದೇ ಮಾತುಗಳು ಪ್ರದರ್ಶನದ ಭಾಗವಾಗಿ ಗೋಡೆ ಮೇಲೆ ಬಿತ್ತರಗೊಳ್ಳುತ್ತದೆ.
ವ್ಯಕ್ತಪಡಿಸಲಾಗದ ಭಾವನೆಗಳನ್ನು ಪದಕ್ಕಿಳಿಸುವುದು ಸಹಜ. ಆದರೆ, ಅದು ಅದರ ಮಿತಿಯೂ ಹೌದು ಎಂಬ ಅರಿವು ಅವರಿಗಿತ್ತು. ಭಾಷೆಯ ಇತಿಮಿತಿ ಹಾಗೂ ಕಲೆಯ ಅನಂತ ಸಾಧ್ಯತೆಗಳ ನಡುವೆಯೂ ಅವರು ಬರಹಗಾರರಾಗಿ, ಆಧುನಿಕ ಪ್ರಕಾರದ ಕಲಾವಿದರಾಗಿ ಎರಡೂ ದೋಣಿಗಳಲ್ಲಿ ಸರಾಗವಾಗಿ ಪಯಣವನ್ನು ಮಾಡಿದ್ದರು. ಪ್ರತಿ ಅಮೂರ್ತ ಕಲೆಯು ಧ್ವನಿಸುವ ಹಲವು ಕಥನಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಸ್ನೇಹಿತರೊಬ್ಬರು ‘ಈ ಅಮೂರ್ತ ಕಲೆ ಅರ್ಥವಾಗುತ್ತಿಲ್ಲ’ ಎಂಬ ಅಳಲನ್ನು ತೋಡಿಕೊಂಡಿದ್ದಾಗ ‘ಅಮೂರ್ತ ಕಲಾಕೃತಿಗಳಲ್ಲಿ ಅರ್ಥ ಹುಡುಕಬೇಡಿ. ಸಾಧ್ಯವಾದರೆ ಅನುಭವಕ್ಕೆ ದಕ್ಕುವಂತೆ ಗ್ರಹಿಸಿ’ ಎಂಬ ಮಾತುಗಳನ್ನಾಡಿರುವುದು ಈ ಕಲಾಕೃತಿಗಳ ಶೀರ್ಷಿಕೆಯ ಜತೆ ಉಲ್ಲೇಖವಾಗಿದೆ.
ಈ ಕಲಾಕೃತಿಗಳ ಶೀರ್ಷಿಕೆಯ ಕೆಳಗೆ, ಅವರು ವ್ಯಕ್ತಪಡಿಸಿದ ಆಳವಾದ ಚಿಂತನೆಗಳನ್ನು ನೀಡಲಾಗಿದೆ. ಅಮೂರ್ತ ಕಲಾಕೃತಿಗಳಲ್ಲಿರುವ ಅನಂತ ಧ್ವನಿಯನ್ನು ಗ್ರಹಿಸುವ ಇಚ್ಛೆಯಿದ್ದರೆ ಒಮ್ಮೆ ಪ್ರದರ್ಶನಕ್ಕೆ ಭೇಟಿ ನೀಡಬಹುದು. ಪ್ರದರ್ಶನವು ಅಕ್ಟೋಬರ್ 26ರವರೆಗೆ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.