
ಕೋಟ್ಯಂತರ ರೂಪಾಯಿ ಬೆಲೆಬಾಳುವ, ಬಹುಮಾನ್ಯತೆ ಪಡೆದಿರುವ, ವಿಶ್ವವಿಖ್ಯಾತ ಕಲಾವಿದ ಸ್ವೆತೊಸ್ಲವ್ ರೋರಿಕ್ ಅವರ ವರ್ಣಚಿತ್ರಗಳ ಸಂರಕ್ಷಣೆ ಕಾರ್ಯವು ದಶಕದ ನಂತರ ಪೂರ್ಣಗೊಂಡಿದೆ.
ಬೆಂಗಳೂರು ಹೊರವಲಯದ ತಾತಗುಣಿ ರೋರಿಕ್ ಎಸ್ಟೇಟ್‌ನಲ್ಲಿ ಹಲವು ವರ್ಷಗಳಿಂದ ಇರಿಸಲಾಗಿದ್ದ ಈ ಕಲಾಕೃತಿಗಳ ಸಂರಕ್ಷಣೆಗೆ ನಿರ್ಧರಿಸಿದ್ದ ರಾಜ್ಯ ಸರ್ಕಾರ, ಬಹಳಷ್ಟು ಹಿಂದೆಯೇ ಈ ಕಾರ್ಯಕ್ಕೆ ಅನುಮತಿ ನೀಡಿತ್ತು.
ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಪ್ರವಾಸೋದ್ಯಮ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಇಂಟ್ಯಾಕ್ (ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್) ಜೊತೆ ಒಪ್ಪಂದ ಮಾಡಿಕೊಂಡು ಕಲಾಕೃತಿಗಳನ್ನು ವೈಜ್ಞಾನಿಕವಾಗಿ ಜೀರ್ಣೋದ್ಧಾರ ಮಾಡಿದೆ.
ಸಂರಕ್ಷಿಸಲಾಗಿರುವ ಕಲಾಕೃತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಕಲಾ ಮಹತ್ವ ಪಡೆದುಕೊಂಡಿವೆ. ಪರಿಸರದ ಮಹತ್ವ ಸಾರುವ ಕಲಾಕೃತಿಗಳ ಜತೆಗೆ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ, ಅವರ ಪತ್ನಿ ಕಮಲಾ ನೆಹರೂ ಅವರ ಭಾವಚಿತ್ರಗಳೂ ಇದರಲ್ಲಿ ಸೇರಿವೆ.
‘ಭಾರತದ ನಾನಾ ಭಾಗಗಳಲ್ಲಿ ಪಾರಂಪರಿಕ ಮಹತ್ವ ಇರುವ ತಾಣಗಳ ಪುನಶ್ಚೇತನ, ಕಲಾಕೃತಿಗಳ ಪುನರುತ್ಥಾನ ಹಾಗೂ ಸಂರಕ್ಷಣೆ ಕಾರ್ಯದಲ್ಲಿ ನಮ್ಮ ಸಂಸ್ಥೆ ನಿರತವಾಗಿದೆ. ರೋರಿಕ್ ಅವರ ಕಲಾಕೃತಿಗಳ ಸಂರಕ್ಷಣೆ ಕಾರ್ಯವನ್ನು ನಮಗೆ ವಹಿಸಿದ ಬಳಿಕ ತಜ್ಞರ ತಂಡದೊಂದಿಗೆ ಏಳೆಂಟು ವರ್ಷಗಳಿಂದ ವೈಜ್ಞಾನಿಕವಾಗಿಯೇ ಇವುಗಳನ್ನು ಸಂರಕ್ಷಣೆ ಮಾಡಲಾಗಿದೆ. ಮುಂದಿನ ಹಲವು ವರ್ಷ ಪ್ರದರ್ಶನ ಮಾಡಲು ಯೋಗ್ಯವಾದ ವಿಶಿಷ್ಟ ಕಲಾಕೃತಿಗಳು ಇವು’ ಎಂದು ಇಂಟ್ಯಾಕ್ ಸಂಸ್ಥೆಯ ಸಂರಕ್ಷಣಾ ತಜ್ಞ ನಿತಿನ್ ಕುಮಾರ್ ತಿಳಿಸಿದರು.
ಸಂರಕ್ಷಣೆ ಮಾಡಲಾದ ಎಲ್ಲಾ ಕಲಾಕೃತಿಗಳನ್ನು ಕಸ್ತೂರಬಾ ರಸ್ತೆಯ ವೆಂಕಟಪ್ಪ ಆರ್ಟ್ ಗ್ಯಾಲರಿಯ ಆವರಣದಲ್ಲಿ ಭದ್ರವಾಗಿ ಇರಿಸಲಾಗಿದೆ. ತಾತಗುಣಿ ರೋರಿಕ್ ಎಸ್ಟೇಟ್ ಪ್ರದೇಶವನ್ನು ಪರಿಸರ ಪ್ರವಾಸೋದ್ಯಮವಾಗಿ ಅಭಿವೃದ್ದಿಪಡಿಸಿ, ರೋರಿಕ್ ಅವರಿದ್ದ ನಿವಾಸಕ್ಕೆ ಇವುಗಳನ್ನು ಸ್ಥಳಾಂತರಿಸಿ, ಸಾರ್ವಜನಿಕ ಪ್ರದರ್ಶನಕ್ಕೆ ಮುಕ್ತಗೊಳಿಸಲಾಗುತ್ತದೆ.
ರಷ್ಯಾ ಮೂಲದ ಸ್ವೆತೊಸ್ಲೊವ್ ರೋರಿಕ್ ಅವರು ಪ್ರಮುಖ ವರ್ಣಚಿತ್ರ ಕಲಾವಿದ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕಲಾವಿದೆ ಹಾಗೂ ಕವಿ ರವೀಂದ್ರನಾಥ ಟ್ಯಾಗೋರ್ ಅವರ ಸಂಬಂಧಿಯಾದ ದೇವಿಕಾರಾಣಿ ಅವರನ್ನು ವಿವಾಹವಾದ ಸ್ವೆತೊಸ್ಲೊವ್, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಹೆಚ್ಚು ಕಾಲ ನೆಲಸಿ ಹಿಮಾಲಯದ ನೆನಪುಗಳನ್ನು ಚಿತ್ರಿಸಿದ್ದರು. ಬಳಿಕ, ಕನಕಪುರ ರಸ್ತೆಯಲ್ಲಿರುವ ತಾತಗುಣಿಯಲ್ಲಿ ಜಮೀನು ಖರೀದಿಸಿ ಅಲ್ಲಿನ ಎಸ್ಟೇಟ್‌ನಲ್ಲೂ ವಾಸವಿದ್ದರು. ತಾತಗುಣಿಯಲ್ಲಿ ಕಂಡ ಪರಿಸರ, ನೈಸರ್ಗಿಕ ಸೌಂದರ್ಯಕ್ಕೆ ಚಿತ್ರ ರೂಪ ನೀಡಿದ್ದರು. ಹಲವು ಗಣ್ಯರ ಭಾವಚಿತ್ರಗಳನ್ನೂ ರಚಿಸಿದ್ದರು. ಕೆಲವು ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್ತಿಗೆ ನೀಡಿದ್ದರೆ, ಹೆಚ್ಚಿನವು ತಾತಗುಣಿ ಎಸ್ಟೇಟ್‌ನಲ್ಲೇ ಇದ್ದವು.
ರೋರಿಕ್ ದಂಪತಿ ನಿಧನರಾದ ಬಳಿಕ ಎಸ್ಟೇಟ್‌ನ ಮಾಲೀಕತ್ವದ ಕುರಿತು ವಿವಾದ ಏರ್ಪಟ್ಟಿತ್ತು. ನಂತರ ಸರ್ಕಾರ ‘ತಾತಗುಣಿ ದೇವಿಕಾರಾಣಿ ರೋರಿಕ್ ಎಸ್ಟೇಟ್ ಮಂಡಳಿ’ ರಚಿಸಿ, ಆಸ್ತಿಯ ಜತೆಗೆ ಕಲಾಕೃತಿಗಳನ್ನೂ ಸುಪರ್ದಿಗೆ ಪಡೆದಿತ್ತು. ಹಾಳಾಗಿದ್ದ ಕಲಾಕೃತಿಗಳ ಸಂರಕ್ಷಣೆಗೆ ಮುಂದಾಗಿತ್ತು.
ಎಸ್ಟೇಟ್ ಆಸ್ತಿಯ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಆಗ ಮಂಡಳಿಯು ಕಲಾಕೃತಿಗಳ ಸಂರಕ್ಷಣೆಗೆ ನ್ಯಾಯಾಲಯದಿಂದ ಅನುಮತಿ ಪಡೆದು ದಶಕದ ಹಿಂದೆಯೇ ಈ ದಿಸೆಯಲ್ಲಿ ಚಟುವಟಿಕೆ ಆರಂಭಿಸಿತ್ತು.
‘ರೋರಿಕ್ ಅವರು ಶತಮಾನದ ಹಿಂದೆಯೇ ಬಳಸಿರುವ ಬಣ್ಣಗಳು ವೈವಿಧ್ಯಮಯವಾಗಿವೆ. ಮೂಲ ಬಣ್ಣ ಹಾಳಾಗದೆ ಯಾವ ಭಾಗದಲ್ಲಿ ಮಾತ್ರ ಹಾಳಾಗಿತ್ತೋ ಅದನ್ನು ಯಥಾರೀತಿ ಉಳಿಸಲಾಗಿದೆ. ನಿಗದಿತ ತಾಪಮಾನದಲ್ಲಿ ಅವುಗಳನ್ನು ಇರಿಸಿ ಸಂರಕ್ಷಣೆ ಮಾಡುವುದು ಮುಖ್ಯ. ಇಲ್ಲದೇ ಇದ್ದರೆ ಕಲಾಕೃತಿಗಳಿಗೆ ಫಂಗಸ್ ಹಿಡಿದು ಬೇಗನೆ ಹಾಳಾಗಿ ಬಿಡಬಹುದು. ಬಣ್ಣವು ಮಾಸಲಾಗಿ ಚಿತ್ರದ ಮಹತ್ವವೇ ಮರೆಯಾಗಬಹುದು. ಪ್ರದರ್ಶನದ ಜತೆಗೆ ನಿರ್ವಹಣೆಯೂ ಮುಖ್ಯ’ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಅಭಿವೃದ್ದಿ ಪ್ರಕ್ರಿಯೆ ಆರಂಭ
ತಾತಗುಣಿ ಎಸ್ಟೇಟ್‌ನಲ್ಲಿ ರೋರಿಕ್ ಪರಿಸರ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಕೇಂದ್ರವನ್ನು ಮೊದಲ ಹಂತದಲ್ಲಿ ಅಭಿವೃದ್ದಿಪಡಿಸಲು ಪ್ರವಾಸೋದ್ಯಮ ಇಲಾಖೆ ಟೆಂಡರ್ ಪ್ರಕ್ರಿಯೆ ನಡೆಸಿದೆ. ಈಗಾಗಲೇ ಕೇಂದ್ರ ಪುರಸ್ಕೃತ ಯೋಜನೆಯಡಿ ₹ 100 ಕೋಟಿ ಅನುದಾನ ಸಿಗಲಿದೆ. ಮೊದಲ ಕಂತಿನಲ್ಲಿ ₹ 25 ಕೋಟಿ ಬಿಡುಗಡೆಯೂ ಆಗಿದೆ.
ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ₹ 99 ಕೋಟಿ ಯೋಜನೆಗೆ ರಾಜ್ಯ ಸಚಿವ ಸಂಪುಟವೂ ಒಪ್ಪಿಗೆ ನೀಡಿದೆ. ಇಡೀ ಪರಿಸರದಲ್ಲಿ 3 ಕಿ.ಮೀ. ಪ್ರಾಕೃತಿಕ ನಡಿಗೆಗೆ ವ್ಯವಸ್ಥೆ ಇದಕ್ಕಾಗಿ ಲಾನ್‌ಗಳ ಅಭಿವೃದ್ಧಿ ಸುತ್ತು ಹಾಕಲು ಅವಕಾಶ 20 ಎಕರೆಯಷ್ಟು ವಿಶಾಲವಾದ ಕೆರೆ ಆವರಣ ಅಭಿವೃದ್ದಿ ಮಕ್ಕಳಿಗೆ ದೋಣಿವಿಹಾರ ಕಾರಂಜಿ ನಿರ್ಮಾಣ ಪ್ರವಾಸಿಗರಿಗಾಗಿ 2–3 ಕಡೆ ಫುಡ್ ಕಿಯೋಸ್ಕ್‌ಗಳ ಸ್ಥಾಪನೆ ಉತ್ತಮ ಸೌಲಭ್ಯದೊಂದಿಗೆ ಶೌಚಾಲಯ ಸಂಕೀರ್ಣ ಬಯಲು ರಂಗಮಂದಿರ ನಿರ್ಮಿಸಲಾಗುತ್ತದೆ.
‘ರೋರಿಕ್ ದಂಪತಿ ವಾಸವಿದ್ದ ನಿವಾಸ ಹಾಗೂ ಅಲ್ಲಿನ ಭಾಗವನ್ನು ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಿ ಕಲಾ ಗ್ಯಾಲರಿ ರೂಪಿಸಲಾಗುತ್ತದೆ. ಇದು ಕಲಾಗ್ರಾಮದ ಮಾದರಿಯಲ್ಲಿಯೇ ಇರಲಿದೆ. ಟೆಂಡರ್ ಪ್ರಕ್ರಿಯೆಯನ್ನು ಈ ತಿಂಗಳಲ್ಲಿ ಮುಗಿಸಿ ಅಭಿವೃದ್ಧಿ ಕಾರ್ಯವನ್ನು ಆರಂಭಿಸಲಾಗುತ್ತದೆ’ ಎಂದು ಪ್ರವಾಸೋದ್ಯಮ ಇಲಾಖೆ ಆಯುಕ್ತ ಅಕ್ರಂ ಪಾಷಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.