ADVERTISEMENT

ಯುವ ಮನಸು; ಹೊಸ ಕನಸು| ಸಣ್ಣ ಕಥೆಗಳನ್ನು ಬರೆಯುವಾಸೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 19:30 IST
Last Updated 28 ಡಿಸೆಂಬರ್ 2019, 19:30 IST
ಕಪಿಲ ಹುಮನಾಬಾದೆ
ಕಪಿಲ ಹುಮನಾಬಾದೆ   

ಈ ವರ್ಷದ ಆಗಸ್ಟ್‌ನಲ್ಲಿ ಪ್ರಕಟಗೊಂಡಿದ್ದ ನನ್ನ ಮೊದಲ ಕಾದಂಬರಿ ‘ಹಾಣಾದಿ’ ಓದುಗರಿಂದ, ವಿಮರ್ಶಕರಿಂದ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಹೊಸ ವರ್ಷದ ಮೊದಲ ಹೆಜ್ಜೆಯಲ್ಲಿ ಎರಡನೇ ಮುದ್ರಣಕ್ಕೆ ‘ಹಾಣಾದಿ’ಯನ್ನು ಇನ್ನೊಂದಿಷ್ಟು ತಿದ್ದಿ-ತೀಡಿ ಪ್ರಕಟಿಸಬೇಕಿದೆ. ನನಗೆ ಮೊದಲಿನಿಂದಲೂ ಕಾದಂಬರಿಗಳ ಬಗ್ಗೆ ವಿಶೇಷ ಆಸಕ್ತಿ. ಲೈಬ್ರರಿಯ ಕಪಾಟುಗಳಲ್ಲಿ, ಹಳೆ ಪುಸ್ತಕದ ಅಂಗಡಿಗಳ ಗುಂಪುಗಳಲ್ಲಿ ನಾನು ಯಾವಾಗಲೂ ಹುಡುಕುವುದು ಇವುಗಳನ್ನೆ.

ಬರವಣಿಗೆಗೆ ಶಿಸ್ತು, ಶ್ರಮ, ತಾಳ್ಮೆ ಬೇಕೆನ್ನುವುದನ್ನು ನಾನು ಕಂಡುಕೊಂಡಿದ್ದೇನೆ ಮತ್ತು ಅವುಗಳನ್ನು ರೂಢಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. ‘ಸಣ್ಣಕಥೆ ಬರೆಯುವ ಅಭ್ಯಾಸ ನನಗೆ ಶಿಸ್ತು ಕಲಿಸಿತು’ ಎಂದು ಮೆಕ್ಸಿಕೊದ ಕಥೆಗಾರ ಹ್ವಾನ್ ರುಲ್ಫೋ ಹೇಳುತ್ತಾನೆ. ಕಾದಂಬರಿ ನನ್ನಿಷ್ಟದ ಬರವಣಿಗೆಯ ಸಾಹಿತ್ಯ ಪ್ರಕಾರವಾದರೂ ಒಂದಿಷ್ಟು ಸಣ್ಣಕಥೆಗಳನ್ನು ಬರೆಯುವುದರತ್ತ ಹೊಸ ವರ್ಷದಿಂದ ಒಲವು ತೋರಿಸಬೇಕಿದೆ. ನಗರ ಬದುಕನ್ನು ಕೇಂದ್ರವಾಗಿಟ್ಟುಕೊಂಡು ಹೊಸದಾಗಿ ‘ಬಿಸಿಲು’ ಎನ್ನುವ ಕಾದಂಬರಿ ಆರಂಭಿಸಿದ್ದು, ಅದರ ಬರವಣಿಗೆಯತ್ತ ಗಮನ ಚುರುಕುಗೊಳಿಸಬೇಕಿದೆ. ಕಲಬುರ್ಗಿಯ ಬಿಸಿಲುಂಡು ಬೆಳೆಯುತ್ತಿರುವ ನನಗೆ ಬಿಸಿಲು ಬದುಕಿನ ಬಹುದೊಡ್ಡ ರೂಪಕದಂತೆ ಕಾಣುತ್ತದೆ.

ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹೇಳುವಂತೆ ‘ಬರವಣಿಗೆ ಎನ್ನುವುದು ಒಂದು ಕಲೆ’. ಅದನ್ನು ನಿರಂತರ ಅಭ್ಯಾಸದ ಮೂಲಕ ಮಾತ್ರ ಸಾಧಿಸಿಕೊಳ್ಳಬಹುದೆಂದು ಬಲವಾಗಿ ನಂಬಿದ್ದೇನೆ. ಹೊಸ ವರ್ಷದಲ್ಲಿ ಓದಬೇಕೆಂದುಕೊಂಡಿರುವ ಪುಸ್ತಕಗಳ ಸಾಲು ಸಹ ದೊಡ್ಡದಿದೆ. ಬರವಣಿಗೆಯ ಊರಿಗೆ ಹೊಸದಾಗಿ ಬಂದಿರುವ ನನಗೆ ನನ್ನ ಓದಿನ ಪುಸ್ತಕಗಳೇ ನನ್ನ ಗೆಳೆಯರು. ಅವುಗಳ ಜೊತೆಗೆ ಒಡನಾಟ ಬೆಳೆಸುತ್ತಾ, ಅವುಗಳ ಪ್ರಭಾವದಿಂದ ಬಿಡಿಸಿಕೊಳ್ಳುತ್ತಲೇ ನನ್ನದೇ ಆದ ಒಂದು ಬರವಣಿಗೆಯ ಶೈಲಿಯನ್ನು ರೂಢಿಸಿಕೊಳ್ಳಬೇಕಿದೆ. ನಾವು ಬಯಸಿದಂತೆ ಬರೆಯುವುದು ಸಹ ಒಂದು ಹೋರಾಟವಾಗಿರುವ ಈ ಕಾಲಘಟ್ಟದಲ್ಲಿ ನನ್ನ ಧ್ವನಿಯನ್ನು ಇನ್ನಷ್ಟು ಚುರುಕುಗೊಳಿಸಬೇಕಿದೆ.

ADVERTISEMENT

‘ಏಕ್ ಭಾರತ್ ಶ್ರೇಷ್ಠ ಭಾರತ್’ ಯೋಜನೆಯಡಿ ಉತ್ತರಾಖಂಡ ರಾಜ್ಯದ ಪ್ರವಾಸಕ್ಕೆ ಆಯ್ಕೆಯಾಗಿದ್ದು, ಗುಲ್ಬರ್ಗ ಯೂನಿವರ್ಸಿಟಿ ತಂಡದೊಂದಿಗೆ ಮಾರ್ಚ್‌ನಲ್ಲಿ ಪ್ರಯಾಣ ಬೆಳೆಸುತ್ತಿದ್ದೇನೆ. ಅಲ್ಲಿನ ಜನರ ಸಂಸ್ಕೃತಿ, ಬದುಕನ್ನು ಕಣ್ಣರಳಿಸಿ ಬೆರಗಿನಿಂದ ನೋಡುವ ಅವಕಾಶ ಲಭಿಸಿದೆ‌. ಕುವೆಂಪು ಹೇಳುವಂತೆ ‘ದೊಡ್ಡ ಬದುಕನ್ನು ಬದುಕದ ಯಾವುದೇ ಬರಹಗಾರ ದೊಡ್ಡ ಲೇಖಕನಾಗಲಾರ’. ಬರವಣಿಗೆಗೆ ಮೂಲ ಸೆಲೆಯಾದ ಬದುಕನ್ನು ಇನ್ನಷ್ಟು ತೀವ್ರವಾಗಿ, ವಿಶಾಲವಾಗಿ ಬದುಕಬೇಕಿದೆ. ಹೊಸ ಸಾಹಸಗಳಿಗೆ ದಾರಿ ಹುಡುಕುತ್ತಾ, ಹಳೆ ತಪ್ಪುಗಳಿಗೆ ವಿದಾಯ ಹೇಳುತ್ತಾ, ಬದುಕಿನ ಪ್ರತಿ ಕ್ಷಣವನ್ನೂ ಸವಿಯ
ಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.