ಎಸ್.ಎಲ್. ಭೈರಪ್ಪ
ಪ್ರಜಾವಾಣಿ ಆರ್ಕೈವ್ಸ್
ಬೆಂಗಳೂರು: ಅಗಲಿದ ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಜನಿಸಿದ್ದು 1931ರಲ್ಲೋ ಅಥವಾ 1934ರಲ್ಲೋ? ಹೀಗೊಂದು ಚರ್ಚೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಹೀಗಾಗಿಯೇ 1996ರಲ್ಲಿ ಅವರು ರಚಿಸಿದ ‘ಭಿತ್ತಿ’ ಕೃತಿಯಲ್ಲಿ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಅವರದೇ ಮಾತಿನಲ್ಲಿ ಹೇಳುವುದಾದರೆ, ‘ನಾನು ಹನ್ನೊಂದನೇ ವಯಸ್ಸಿಗೆ ಕೆಎಲ್‌ಎಸ್ ಮಾಡಿದ್ದರೂ ಪ್ರೈಮರಿ ಶಾಲಾ ಮೇಷ್ಟರ ಕೆಲಸ ಕೊಡುತ್ತಿರಲಿಲ್ಲ. ರಾಮಣ್ಣನ ಜನನ ತಾರೀಖನ್ನು ನನ್ನದಾಗಿ ಹಾಕಿಸಿಬಿಟ್ಟರೆ ನನಗೆ ಹದಿನಾಲ್ಕು ವರ್ಷದ ಲೆಕ್ಕ ಸಿಗುತ್ತದೆ. ಮುಂದೆ ನಾಲ್ಕು ವರ್ಷದೊಳಗೆ ನೌಕರಿಗೆ ಸೇರಿಸಬಹುದು. ಅಥವಾ ಯಾವುದಾದರೂ ಯಾವ ಮೇಷ್ಟರೂ ಹೋಗಲಿಚ್ಛಿಸದ ಕೊಂಪೆ ಸ್ಕೂಲಿನಲ್ಲಿ ಕೆಲಸ ಖಾಲಿ ಇದ್ದರೆ ತಾತ್ಕಾಲಿಕವಾಗಿ ಆಗಲೇ ಸೇರಿಸಿಕೊಳ್ಳುವ ಸಂಭವವೂ ಇತ್ತು’ ಎಂದು ಹೇಳಿದ್ದಾರೆ.
‘ನನ್ನನ್ನು ಸೇರಿಸಿದಾಗ ಹೆಡ್‌ಮಾಸ್ಟರ್ ಆದ ರಂಗಣ್ಣನವರ ಹತ್ತಿರ ಏನೋ ತಾರಾತಿಗಡಿ ಮಾಡಿ ರಾಮಣ್ಣನ 20–08–1931 ಅನ್ನು ನನ್ನ ಜನನ ದಿನಾಂಕವೆಂದು ಬರೆಸಿಬಿಟ್ಟ. ಅದುವರೆಗೂ ನನ್ನದಾಗಿದ್ದ ಹಾಗೂ ನಿಜವೂ ಆಗಿದ್ದ 26–7–1934 ಹೂತು ಹೋಯಿತು’ ಎಂದಿದ್ದಾರೆ.
‘ನನ್ನ ಈ ಕೆಲಸಕ್ಕೆ ಅಮ್ಮನೂ ಖುಷಿಪಟ್ಟಳು. ಮುಂದೆ ಮೈಸೂರಿನಲ್ಲಿ ಎಸ್‌ಎಸ್‌ಎಲ್‌ಸಿ ಕಟ್ಟುವಾಗ ಈ ತಪ್ಪನ್ನು ತಿದ್ದುವ ಆಲೋಚನೆ ನನಗೆ ಬಂತು. ಆದರೆ ಅದಕ್ಕೆ ತಕ್ಕ ದಾಖಲೆಯನ್ನು ತಾಲ್ಲೂಕು ಕಚೇರಿಯ ಜನನ ಖಾತೆಯಿಂದ ಅಮಲ್ದಾರರ ಸಹಿಯೊಡನೆ ತರಬೇಕಿತ್ತು. ಅದಕ್ಕೆ 5 ರೂಪಾಯಿಯ ತಪ್ಪು ಕಾಣಿಕೆಯನ್ನೂ ಕೊಡಬೇಕಿತ್ತು. ಅಷ್ಟೊಂದು ಹೊಂದಿಸುವ ಸ್ಥಿತಿ ನನಗಿರಲಿಲ್ಲವಾಗಿ ನಾನು ಸುಮ್ಮನಾದೆ. ಹೀಗಾಗಿ ನಿಜವಾದ ಜನನ ದಿನಾಂಕ ಮತ್ತು ಸರ್ಕಾರಿ ಲೆಕ್ಕದ ಜನನ ದಿನಾಂಕಗಳಲ್ಲಿ ಇಷ್ಟು ವ್ಯತ್ಯಾಸ’ ಎಂದು ತಮ್ಮ ಜನ್ಮದಿನಾಂಕ ಬದಲಾದದ್ದರ ಕುರಿತು ಭೈರಪ್ಪ ಅವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.