ADVERTISEMENT

ಕತ್ತಲು

ಕವಿತೆ

ಎಸ್.ಮಂಜುನಾಥ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST


ಬಂದು ನಿಂತಿತು ಕತ್ತಲು ನನ್ನಿದಿರು
ದಟ್ಟ ಗುಂಗುರು ಕೂದಲು
ಮೋಹಕ ಮುಂಗುರುಳು
ಅದರ ಮೈತುಂಬ ಕೆಂಪು ಕೆಂಪು ಬರೆ!
ನಾನು ನಿಂತಾಗ ಕೂತಾಗ ಸ್ವಿಚ್ಚೊತ್ತಿ
ಬೆಳಕಿನ ಚಾಟಿ ಬೀಸಿದ್ದರಿಂದ ಹೀಗಾಯ್ತು
–ಗೋಳಿಟ್ಟಿತು

ಋಷಿಗಳ ಕಾಲದಿಂದಲೂ ಕತ್ತಲನ್ನೋಡಿಸು ಎಂಬ
ಮಾತು ಕೇಳಿ ಕೇಳಿ
ಹೀಗೆ ಮಾಡಿದ್ದ ಮನುಷ್ಯ
ನನಗೂ ಬದುಕಲು ಕೊಂಚ ಅವಕಾಶ ಕೊಡು
ಎಂದದರ ಮೊರೆ

ಅಂತೆಯೇ ಈಗ
ನನ್ನ ಹೃದಯ ರಂಗಸ್ಥಳ
ಬೆಳಕಿನ ಬಟಾಬಯಲೂ ಅಲ್ಲ
ಕತ್ತಲ ಕಾಡೂ ಅಲ್ಲ
ಬೆಳಕು ಕತ್ತಲಿನಲ್ಲಿ ಜೀವ ಸರಿದಾಡುವ
ಪಾತ್ರ


ಎಲ್ಲಿ ಹೋಗಿರಬಹುದು ಈ ಮರಗಳಡಿಯ ನೆರಳು
ರಾತ್ರಿಯ ಗಾಢ ಕತ್ತಲು
ರಸ್ತೆ ಅಗಲವಾಗಿ ಝಗಮಗ ದೀಪ ಬೆಳಗಿ
ಮತ್ಯಾವ ಹಳ್ಳಿಗೆ ದೇಶಾಂತರ?
ಮಸಣ ಗುಡಿ ದೆವ್ವ ದೇವರುಗಳೆಲ್ಲ
ಅದರೊಂದಿಗೆ?

ಈಗ ಬರೀ ಮನುಷ್ಯರೇ–ಹಣವಂತ
ಕಂತ್ರಾಟುದಾರ ಪುಡಾರಿ...
ಕುಡುಕ ಹುಚ್ಚ ಭಿಕ್ಷುಕರು ಭಗ್ನ ಹೃದಯೀ ಸಂತರ ಹಾಗೆ
ಊಳಿಡುವರು

ಊರ ದೇವತೆಯಂಥ ನಮ್ಮ ಕತ್ತಲನು ತಲಪುತ್ತಿದೆಯೇ ಅದು?
ಬಣ್ಣ ಬಣ್ಣದ ಅಂಗಿ ಧರಿಸಿದ ಕವಿ ಕೋಡಂಗಿ
ಮಾಸಲು ಸೀರೆಯ ಬಡ ಕೂಲಿಕಾರ ಹೆಂಗಸರಷ್ಟೇ
ನೆರಳಂತೆ ಸರಿಯುವರು...


ಕತ್ತಲ ಕೂದಲಿಗೂ ಈಗ ನೆರೆ ಬಂದು
ಹುಣ್ಣಿಮೆ ಚಂದ್ರ ಬಿಳಿಚಿಕೊಂಡಿದ್ದಾನೆ
ಬೆಳ್ಳಿ ಕಳೆದು!

ಅವಳೂ ಒಬ್ಬ ನಟೀಮಣಿ–ಡೈ ಮಾಡಿದ ಕೇಶ ಅವಳದು
ತಂಪೆರೆವ ಅವಳ ನಗು ಬರೀ ನಟನೆ-ಮೋಸ ಹೋದೀರಿ ಜೋಕೆ!
ಅಷ್ಟಕ್ಕೂ ಈ ಮೋಸಹೋಗುವಾಟದಲ್ಲಿ
ನಿಜವಾಡುವವ ಕೇಡಿ

ಕತ್ತಲನು ನೋಡಿದೆ ಅದರೊಂದಿಗೆ ನುಡಿದೆ ಕೂಡಿದೆನೆನ್ನುವ ಕಳ್ಳ
ಪ್ರಸಿದ್ಧ ವಿರಾಗಿ
ದೇವರಾದರೂ ವಿದ್ಯುತ್ ಗಂಟೆ ಜಾಗಟೆ
ಊದುಬತ್ತಿಯ ತುದಿಗೆ ಎಲೆಕ್ಟ್ರಿಕ್ ಕಿಡಿ
ಇದನ್ನೇ ಬೇಡುವುದು

ಗಣಿಯೊಳಗಿನ ಕತ್ತಲು ಬಗೆವವನ ವಜ್ರದ ಬೆಳಕಿಗವನ ಕಣ್ಣು
ಕೋರೈಸುವುದು

ADVERTISEMENT


ಹೆಬ್ಬಾವಿನಂಥ ಈ ಪ್ರಾಣಿಗೆ ಮೈಯೆಲ್ಲ ಚಿರತೆ ಕಣ್ಣು
ರೆಪ್ಪೆಗಳಿಲ್ಲ, ನಿದ್ರಾಹೀನತೆಯೆ ಇದರ
ಹೆಗ್ಗಳಿಕೆ! ಉರಿವ ಕಣ್ಣುಗಳಿಂದ ಸದಾ ನಿರುಕಿಸುವುದು
ತನ್ನದೇ ಬೇಗುದಿಯ

ಬೆಂಗಳೂರು, ಮುಂಬಯಿ, ನ್ಯೂಯಾರ್ಕು ಇದರ ಹೆಸರು
ಹಳ್ಳಿಗಾಡಿನ ಗರತಿಯರು ರೈತರು ಮಲಗಿರುವ ಹೊತ್ತಲ್ಲಿ
ಏನು ನಡೆದಿದೆ ದೂರದ

ಕೊಳ್ಳಿ ದೀಪಗಳ ಆ ದೇಶದಲ್ಲಿ?
ಹಾದರವೆ ಕೊಲೆಸ್ಕೆಚ್ಚೆ ನೋಟುಪ್ರಿಂಟೇ?
ದೇವರುಗಳೂ ಭಾಗಿ ಆ ದೆವ್ವಗಳೊಂದಿಗೆ
ಪಟಗಳಲ್ಲಿ ಅಸಹಾಯಕರಾಗಿ

ನರಗಳಂಚಿಗೆ ಸುಡುಕಣಗಳ ಹುಚ್ಚುನರ್ತನ
ಎಲ್ಲರಿಗು ಒಂದೇ ರೋಗವಿರಲಾಗಿ
ಎಲ್ಲರೂ ಸ್ವಸ್ಥ

ಒಳಗೆ ನರಳುವ ಸೋಲಿಗ ಕನಸುತ್ತಾನೆ
ಬೆಟ್ಟದ ದಟ್ಟ ಕಾಡಿನಲಿರುವ
ದೊಡ್ಡ ಸಂಪಿಗೆ ಮರ; ನಟ್ಟಿರುಳು
ಅದರ ನೆತ್ತಿಯಲಿ ಮೂಡಿದ ಚಂದ್ರ
ತಂಪೆರೆವ ತಾರೆಗಣಬೆಳಕಲ್ಲಿ


ಕಣ್ಣು ಕಾಣುವುದೆಲ್ಲ ತನ್ನನ್ನೇ
ಜರಿದುಕೊಂಡು ಕಾಣದ್ದು ಕಣ್ಣ ಪರಿಧಿಯ ಆಚೆ
ಅದು ಬೇರೆಯೇ

ಕಂಡೂ ಕಂಡೂ ದಣಿದಿದೆ ಕಣ್ಣು
ಕಾಣದ್ದ ಮುಟ್ಟದಾಗಿ

ಸ್ಪರ್ಶಕೆ ಬೆಚ್ಚಿ ಮನ ಇದ್ದು ಬೆಳಕಿನ ಮನೆಯಲ್ಲೇ
ಅಳುತ್ತಿದೆ ಒಂದೇ ಸಮ ತಾಯಿಗಾಗಿ
ಮಡಿಲು ಸೆರಗಿನ ಕತ್ತಲಿಗಾಗಿ!


ಕತ್ತಲು ಸಿಕ್ಕಿದೆ ಎಂದಿತು ಮಗು
ಅದರ ಮುದ್ದು ಮುಷ್ಟಿಯೊಳಗೆ
ಮಿಣುಕು ಹುಳ! ಅದು

ಅಪರಿಮಿತ ಕತ್ತಲ ಸೃಷ್ಟಿಸುತ್ತಿತ್ತು ಆ ಮುಷ್ಟಿಯೊಳಗೆ
ನೋಡಿ ಕಣ್ಣುರಿಯಿಳಿದು ಗುಡ್ಡೆಗಳು
ಕವಳಿಹಣ್ಣು–ಈಗ
ಬೆಳಕ ಗೆದ್ದಿದ್ದೇನೆ ನಾನು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.