ADVERTISEMENT

ಕನ್ನಡಿಯೊಳಗಿನ ತನ್ನದೇ ಬಿಂಬಗಳು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST
ಕನ್ನಡಿಯೊಳಗಿನ ತನ್ನದೇ ಬಿಂಬಗಳು
ಕನ್ನಡಿಯೊಳಗಿನ ತನ್ನದೇ ಬಿಂಬಗಳು   

ಮನೆಯಲ್ಲಿ ಯಾರೂ ಇಲ್ಲದ ಹೊತ್ತು. ನಿಲುವುಗನ್ನಡಿಯ ಎದುರು ನಿಂತ ವಿದ್ಯಾ ಬಾಲನ್‌ಗೆ ಅದೇನಾಯಿತೋ ತಮ್ಮನ್ನು ತಾವೇ ದೀರ್ಘ ಕಾಲ ನೋಡಿಕೊಳ್ಳ ಲಾರಂಭಿಸಿದರು. ಕೆಳತುಟಿಯನ್ನು ವಿಲಕ್ಷಣವಾಗಿ ಕಚ್ಚಿ, ತುಂಟ ದೃಷ್ಟಿ ಬೀರಿ ಒಮ್ಮೆ ಕನ್ನಡಿ ಮೇಲೆ ಕಣ್ಣಿಟ್ಟರು. ಮರುಕ್ಷಣವೇ ತಮಗೆ ಏನಾಗಿದೆ ಎನ್ನಿಸಿ ಬೆಚ್ಚಿದರು.

ಸೋಫಾಗೆ ಒರಗಿ ಎದುರಲ್ಲಿದ್ದ ಟೀಪಾಯಿ ಕಡೆ ನೋಡಿದರೆ ಅಲ್ಲೊಂದು ಸ್ಕ್ರಿಪ್ಟ್. ಮೂರು ಪುಟ ತಿರುವಿಹಾಕಿದ್ದೇ ಸ್ಪಷ್ಟವಾಯಿತು, ಅದು ಇನ್ನೊಂದು `ಡರ್ಟಿ ಸ್ಕ್ರಿಪ್ಟ್~! ಯಾವುದೋ ಯೋಚನೆಯಲ್ಲಿ ಮುಳುಗಿದ್ದ ನಟಿಗೆ ಕಾಲಿಂಗ್ ಬೆಲ್ ರಿಂಗಣಿಸಿದ್ದು ಕೂಡ ತಕ್ಷಣಕ್ಕೆ ಅರಿವಿಗೆ ಬರಲಿಲ್ಲ.

ಕೆಲಸದಾಕೆ ಹೋಗಿ ಕದ ತೆರೆದರೆ, ವಿದ್ಯಾ ತಾಯಿ. ಖಿನ್ನಳಾಗಿ ಕೂತಿದ್ದ ಮಗಳ ಕೈಗೆ ಅವರು ಒಂದು ಆಹ್ವಾನ ಪತ್ರಿಕೆ ತಂದಿತ್ತರು. ದೂರದ ನೆಂಟರ ಮದುವೆ ಪತ್ರಿಕೆ ಅದು. ತಮ್ಮ ಮಗಳೂ ಮದುವೆಗೆ ಮನಸ್ಸು ಮಾಡಲಿ ಎಂಬ ಇಂಗಿತ ಅವರದ್ದಾಗಿರಬೇಕು. ಅಮ್ಮನ ಸೂಚ್ಯವಾದ ವರ್ತನೆ ಅರ್ಥವಾಗದಷ್ಟು ವಿದ್ಯಾ ಇನ್ನೂ ಪಥ ಬದಲಿಸಿಲ್ಲ.

ಮತ್ತೆ ನಿಲುವುಗನ್ನಡಿ ಮುಂದೆ ನಿಂತಾಗ ತನ್ನ ಕಣ್ಣು ನಿಷ್ಕಲ್ಮಶ ಎನ್ನಿಸಿತು. `ಅಮ್ಮ ನನ್ನ ಕಣ್ಣು ಹೇಗಿದೆ?~ ಎಂದು ಮಗುವಿನ ತರಹ ಕೇಳಿದಾಗ, ಅಮ್ಮ ಏನೊಂದೂ ಹೇಳದೆ ಮಗಳ ತಲೆಮೇಲೆ ಕೈಯಾಡಿಸಿದರು. ಸಂಜೆ ಪಾರ್ಟಿಗೆ ಅಣಿಯಾಗಬೇಕಿದ್ದರಿಂದ ಭಾವ ಸಂವಾದವನ್ನು ಹೆಚ್ಚು ಮುಂದುವರಿಸಲಾಗಲಿಲ್ಲ. ಮಗಳು ಎಲ್ಲಿ ಇನ್ನೊಂದು ಡರ್ಟಿ ಸ್ಕ್ರಿಪ್ಟ್ ಒಪ್ಪಿಕೊಳ್ಳುತ್ತಾಳೋ ಎಂಬ ಆತಂಕವಂತೂ ಅಮ್ಮನಿಗೆ ಇದ್ದೇ ಇದೆ.

ವಿದ್ಯಾ ಕಷ್ಟಪಟ್ಟು ನಟಿಯಾದವರು. ಮನೆಯವರ ಸಂಪೂರ್ಣ ಸಮ್ಮತಿ ಅದಕ್ಕೆ ಇರಲೇ ಇಲ್ಲ. `ದಿ ಡರ್ಟಿ ಪಿಕ್ಚರ್~ ಸಿನಿಮಾ ಮಾಡಿದಾಗಲಂತೂ ಅಮ್ಮ ಮೂರು ದಿನ ಮಗಳ ಜೊತೆ ಮುಕ್ತವಾಗಿ ಮಾತೇ ಆಡಿರಲಿಲ್ಲ.

ಈಗ ವಿದ್ಯಾ ನಸೀಬು ಬದಲಾಗಿದೆ. `ಪರಿಣೀತಾ~ ಚಿತ್ರದಲ್ಲಿ ಸ್ನಿಗ್ಧ ಸೌಂದರ್ಯದ ಮೂಲಕ ಗಮನ ಸೆಳೆದಿದ್ದ ಅವರು ತಮ್ಮ ಹಣೆಪಟ್ಟಿಯನ್ನೇ ಬದಲಿಸಿಕೊಂಡು `ಡರ್ಟಿ ಪಿಕ್ಚರ್~ನಲ್ಲಿ ಬಿಂದಾಸ್ ಆದದ್ದು ಸಾಕ್ಷಾತ್ ಶಾರುಖ್ ಖಾನ್ ಕೂಡ ಹುಬ್ಬೇರಿಸುವಂತೆ ಮಾಡಿತು. ಖಾನ್‌ಗಳಿಲ್ಲದ ಚಿತ್ರವನ್ನೂ ಗೆಲ್ಲಿಸಬಹುದು ಎಂದು ಸಾಬೀತುಮಾಡಿದ ಹಮ್ಮಿನಿಂದ ನಿರ್ಮಾಪಕಿ ಏಕ್ತಾ ಕಪೂರ್ ಬೀಗುತ್ತಿದ್ದಾರೆ.

ವಿದ್ಯಾ ಇಮೇಜ್ ಬದಲಾಗಿದ್ದು ಏಕ್ತಾ ಕಪೂರ್ ಅವರನ್ನು ಒಪ್ಪಿಸಿದ ರೀತಿಯಿಂದ. ಮಹಿಳಾಲೋಕದ ಭಾವ ತಿಕ್ಕಾಟವನ್ನೇ ಬಂಡವಾಳವಾಗಿಸಿಕೊಂಡು ಧಾರಾವಾಹಿ ಲೋಕದ ರಾಣಿ ಎನಿಸಿಕೊಂಡ ಏಕ್ತಾ ಕಪೂರ್ ಅಲ್ಲಿ ಮುಟ್ಟಿದ್ದೆಲ್ಲ ಚಿನ್ನ. ಅವರ ಪರಿಕಲ್ಪನೆಯ ಹಲವು ಧಾರಾವಾಹಿಗಳು ದೇಶದ ಅನೇಕ ಭಾಷೆಗಳಲ್ಲಿ ರೀಮೇಕ್ ಆಗಿರುವುದು ವಿಶೇಷ. ಕನ್ನಡದ ಉದಯ ಟೀವಿಯಲ್ಲಿ ದೀರ್ಘ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡ ಧಾರಾವಾಹಿಗಳ ಸಾಲಿನಲ್ಲೂ ಏಕ್ತಾ ಕಪೂರ್ ಕಾಣ್ಕೆ ಇದೆ.

ಹಣೆ ಮೇಲೆ ಅಗಲ ಕುಂಕುಮವಿಟ್ಟು ಕೊಳ್ಳುವುದು ಏಕ್ತಾಗೆ ರೂಢಿ. ಹಾಗೆ ಕುಂಕುಮ ಇಡುವುದರಿಂದ ಯೋಚನೆ ಕೇಂದ್ರೀಕೃತ ವಾಗುತ್ತದೆ ಎಂದು ಅಪ್ಪ ಜಿತೇಂದ್ರ ಎದುರಲ್ಲಿ ಅವರೊಮ್ಮೆ ಹೇಳಿಕೊಂಡಿದ್ದರು. ಸಹೋದರ ತುಷಾರ್ ಕಪೂರ್‌ಗೂ ಏಕ್ತಾ ಯೋಚನೆಯ ಮೇಲೆ ಈಗ ಅಪಾರ ವಿಶ್ವಾಸ.
 
ದಕ್ಷಿಣ ಭಾರತದ ನಟಿಯರ ಜೀವನ ಚರಿತ್ರೆಯನ್ನು ಕುತೂಹಲದಿಂದ ಕೇಳುವ ಏಕ್ತಾ ಅದನ್ನು ಧಾರಾವಾಹಿಯಲ್ಲೋ ಸಿನಿಮಾದಲ್ಲೋ ಅಳವಡಿಸಿಕೊಳ್ಳುವ ಪರಿಪಾಠವನ್ನು ಅನೂಚಾನವಾಗಿ ರೂಢಿಸಿಕೊಂಡು ಬಂದಿದ್ದಾರೆ.

`ಮಹಿಳೆಯರು ಧಾರಾವಾಹಿ ನೋಡುವಂತೆ ಮಾಡುವುದು ಸುಲಭ. ಪುರುಷರು ಸಿನಿಮಾ ನೋಡುವಂತೆ ಮಾಡು ನೋಡೋಣ ಎಂದು ಆಪ್ತರೊಬ್ಬರು ಸವಾಲು ಹಾಕಿದ್ದರು. ಅದು ಡರ್ಟಿ ಪಿಕ್ಚರ್ ಯೋಚನೆಗೆ ಬೀಜವಾಯಿತು. ಸವಾಲುಗಳನ್ನು ಎದುರಿಸುವುದೆಂದರೆ ನನಗೆ ಬಲು ಇಷ್ಟ.

ವಿದ್ಯಾ ನಾನಂದುಕೊಂಡದ್ದಕ್ಕಿಂತ ಹೆಚ್ಚು ಸಮರ್ಥವಾಗಿ ಸಿಲ್ಕ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದರು. ಯಶಸ್ಸಿನ ಸಿಂಹಪಾಲು ಅವರಿಗೆ ಸಲ್ಲಬೇಕಿತ್ತು. ಅದೀಗ ಸಂದಿದೆಯಷ್ಟೆ~ ಎನ್ನುವ ಏಕ್ತಾ ಮುಂದೆ ಯಾವ ಸಿನಿಮಾ ಯೋಚನೆ ಮಾಡುತ್ತಾರೆ ಎಂದು ಖಾನ್‌ತ್ರಯರೂ ಕುತೂಹಲದಿಂದಿದ್ದಾರಂತೆ.

ಮೊನ್ನೆ ಮತ್ತೊಮ್ಮೆ ವಿದ್ಯಾ ಕನ್ನಡಿಯ ಮುಂದೆ ನಿಂತಾಗ ಮನೆಹೊರಗೆ ಹಾದುಹೋದ ಕಾರಿನೊಳಗಿಂದ `ಡರ್ಟಿ ಪಿಕ್ಚರ್~ನ ಹಾಡು ಕೇಳಿಸಿತಂತೆ. ಅಮ್ಮ ಸುಮ್ಮನೆ ಮಗಳನ್ನು ದಿಟ್ಟಿಸಿದಾಗ ಕನ್ನಡಿಯಿಂದಲೇ ಅದನ್ನು ನೋಡಿದ ವಿದ್ಯಾ ನಿರುತ್ತರರಾದರು. ಇದನ್ನು ಸಂದರ್ಶನವೊಂದರಲ್ಲಿ ಹೇಳಿಕೊಳ್ಳುವಾಗ ಅವರ ಕಣ್ಣಲ್ಲಿ ನೀರೇನೂ ಬರಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.