ADVERTISEMENT

ದುರ್ಗದಹಳ್ಳಿ ದ್ರಶ್ಯಕಾವ್ಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಮಲೆನಾಡು ಪ್ರಕೃತಿಯ ಒಡಲು. ಗಿರಿ-ಕಂದಕಗಳ ನಡುವೆ ಹರಿಯುವ ಝರಿ-ತೊರೆಗಳ ಸೊಬಗು ಅದ್ಭುತ. ಈ ಗಿರಿ-ಝರಿಗಳ ಪ್ರಾಕೃತಿಕ ಸಿರಿಯ ಜತೆಗೆ ಐತಿಹಾಸಿಕ ಸಿರಿಯನ್ನೂ ಮಲೆನಾಡು ಪ್ರದೇಶ ಹೊಂದಿವೆ.

ಮೂಡಿಗೆರೆ ತಾಲ್ಲೂಕಿನ ದುರ್ಗದ ಹಳ್ಳಿಯ ಘಟ್ಟಗಳು ಇಂತಹ ಐತಿಹಾಸಿಕ ಮತ್ತು ಪ್ರಾಕೃತಿಕ ಸಿರಿಗೆ ನಿದರ್ಶನ. ಇತ್ತೀಚೆಗೆ ಚಾರಣ ಪ್ರಿಯರ ನೆಚ್ಚಿನ ತಾಣವಾಗಿಯೂ ಈ ದುರ್ಗ ಹೆಸರು ಪಡೆದಿದೆ.

ದುರ್ಗದಹಳ್ಳಿ ಘಟ್ಟ ಬಹಳ ಮಂದಿಗೆ ತಿಳಿಯದ ಹೆಸರು. ಅದೇ ಬಲ್ಲಾಳರಾಯನ ದುರ್ಗ ಎಂದರೆ ಕಣ್ಮುಂದೆ ದಟ್ಟ ಕಾನನ, ಮುಗಿಲಿಗೆ ಚುಂಬಿಸುತ್ತಿರುವ ಗಿರಿ ಶಿಖರಗಳು ಸುಳಿಯುತ್ತವೆ. ಬಲ್ಲಾಳರಾಯನ ದುರ್ಗ (ಕೋಟೆ) ಇರುವ ಘಟ್ಟದ ಮೂಲ ಹೆಸರು ದುರ್ಗದಹಳ್ಳಿ ಬೆಟ್ಟವಾದರೂ, ಜನಪ್ರಿಯವಾಗಿದ್ದು ಮಾತ್ರ ಬಲ್ಲಾಳರಾಯನ ದುರ್ಗವಾಗಿ.

ಹೊಯ್ಸಳರ ರಾಜ ಬಲ್ಲಾಳರಾಯ, ದುರ್ಗದ ಹಳ್ಳಿ ಘಟ್ಟದಲ್ಲಿ ಕೋಟೆಯನ್ನು ನಿರ್ಮಿಸಿದ್ದರಿಂದ, ಬಲ್ಲಾಳರಾಯನ ದುರ್ಗವಾಗಿ ಪ್ರಸಿದ್ಧಿಯಾಯಿತು. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ನಡುವಿನ ಪಶ್ಚಿಮ ಘಟ್ಟದ ಶಿಖರಗಳು ಆರಂಭವಾಗುವುದು ದುರ್ಗದಹಳ್ಳಿ ಘಟ್ಟದ ಸಾಲಿನಿಂದ ಎಂಬುದು ವಿಶೇಷ.
 
ಈ ಶಿಖರದ ಸಾಲುಗಳು ಎರಡೂ ಜಿಲ್ಲೆಗಳ ನಡುವಿನ ಗೋಡೆಯಂತಿವೆ. ಶಿಖರದ ರೀತಿಯಲ್ಲಿರುವ ಘಟ್ಟದ ಮೇಲೆ ನಿಂತರೆ ಎರಡೂ ಜಿಲ್ಲೆಗಳ ಪ್ರಾಕೃತಿಕ ಸೊಬಗು ಗೋಚರವಾಗುತ್ತದೆ.

4940 ಅಡಿ ಎತ್ತರದ ದುರ್ಗದ ಹಳ್ಳಿ ಬೆಟ್ಟ ಹಂತ ಹಂತಕ್ಕೂ ವೈವಿಧ್ಯವಾಗಿ ತನ್ನ ಸೊಬಗನ್ನು ಬಿಚ್ಚಿಟ್ಟಿದೆ. ಹಳ್ಳ, ದಿಣ್ಣೆಗಳ ರಸ್ತೆಯನ್ನು ದಾಟಿ, ಕಡಿದಾದ ಕಾಲುದಾರಿಯಲ್ಲಿ ಘಟ್ಟ ಏರಬೇಕು. ಘಟ್ಟ ಹೊಕ್ಕಂತೆ ಪ್ರಕೃತಿಯ ದೃಶ್ಯ ಕಾವ್ಯಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಘಟ್ಟವನ್ನು ಅರ್ಧ ಭಾಗ ಏರುವ ವೇಳೆಗೆ ಪ್ರಕೃತಿಯ ಒಯ್ಯಾರದೊಳಗೆ ಸೆರೆಯಾಗಿರುತ್ತೇವೆ.

ಬೃಹತ್ ಮರಗಿಡಗಳ ನಡುವಿನ ಕಾಲುದಾರಿಯಿಂದ ಆರಂಭವಾಗುವ ಘಟ್ಟ, ಬೆಳ್ತಂಗಡಿ ಭಾಗದಲ್ಲಿ ನಡು ಬಳುಕಿಸಿ ಹರಿಯುವ ನೇತ್ರಾವತಿ, ಮನದಲ್ಲಿ ತಲ್ಲಣವನ್ನುಂಟು ಮಾಡುವ ನೂರಾರು ಅಡಿಗಳ ಪ್ರಪಾತ, ಗುಡ್ಡವನ್ನು ನಯವಾಗಿ ಕೆತ್ತಿ ಮೂಡಿಸಿದಂತಿರುವ ಉಬ್ಬುತಗ್ಗುಗಳು, ಶಿಲಾ ಪದರಗಳನ್ನು ಕಡಿದು ಬಣ್ಣ ತುಂಬಿದಂತಿರುವ ವೈವಿಧ್ಯಮಯ ಹಾದಿಗೆ ಕರೆದೊಯ್ಯುತ್ತದೆ. 

ವಿಸ್ತಾರವಾಗಿ ಹಬ್ಬಿರುವ ಸಹ್ಯಾದ್ರಿಯ ಶಿಖರಗಳದ್ದು ಇಲ್ಲಿ ಭರ್ಜರಿ ಪೈಪೋಟಿ. ಸಾಲು ಸಾಲು ಸಹ್ಯಾದ್ರಿ ಶಿಖರಗಳು ಮುಗಿಲಿನತ್ತ ಮುಖ ಮಾಡಿವೆ. ಇಲ್ಲಿಂದ ತುಸು ಮೇಲೆ ಸಾಗಿದರೆ ಒಂದೆಡೆ ಪೂರ್ಣ ಬಯಲು. ಮತ್ತೊಂದೆಡೆ ದಟ್ಟ ಕಾನನ. ಘಟ್ಟದ ಮೇಲೆ ಹೋದಂತೆ ಕಾನನ ಕಡಿಮೆಯಾಗಿ ವೈವಿಧ್ಯಮಯ ಪರ್ವತ ಶ್ರೇಣಿಗಳು ಗೋಚರಿಸುತ್ತವೆ.

ಘಟ್ಟದ ತುದಿಯಲ್ಲಿ ಸೂರ್ಯಾಸ್ತದ ಅನುಭವ ಆಹ್ಲಾದಕರವಾದುದು. ದುರ್ಗದ ಹಳ್ಳಿ ಘಟ್ಟಕ್ಕೆ ತುಸು ದೂರದ ಬೆಂಗಾಡಿ ಬಳಿಯ ರಾಣಿ ಝರಿಯನ್ನು ಹಾದು ಬರುವ ಸಾಹಸಿ ಚಾರಣಿಗರೂ ಇದ್ದಾರೆ ಎಂದರೆ ಇಲ್ಲಿನ ವಾತಾವರಣದ ಹಿತಾನುಭವ ಎಂತಹದ್ದು ಎನ್ನುವುದು ಸ್ಪಷ್ಟವಾಗುತ್ತದೆ.
 
ಚಳಿಗಾಲದಲ್ಲಿ ಪ್ರಕೃತಿಯ ಮೇಲೆ ಪೊರೆ ಬಿಟ್ಟಂತೆ ಕಾಣುವ ಮಂಜು ಇಲ್ಲಿನ ದೃಶ್ಯ ಸೊಬಗನ್ನು ಹೆಚ್ಚಿಸುತ್ತದೆ. ದಾಹ ತಣಿಸಲು ಎಂಬಂತೆ ಘಟ್ಟಕ್ಕೆ ಸಾಗುವ ದಾರಿಯ ಕೆಲವೆಡೆ ಸಣ್ಣ ಝರಿಗಳು ಕಾಣುತ್ತವೆ.

ಘಟ್ಟದ ತುದಿಯಲ್ಲಿ ಸುಮಾರು 73 ಮೀಟರ್‌ನಷ್ಟು ಉದ್ದದ ಬಲ್ಲಾಳರಾಯನ ದುರ್ಗದ ಅವಶೇಷಗಳಿವೆ. ಕೋಟೆಯ ಗೋಡೆ ಕೆಲವೆಡೆ ಅರ್ಧ ಭಾಗವಿದ್ದರೆ, ಕೆಲವೆಡೆ ಸಂಪೂರ್ಣ ನೆಲ ಕಚ್ಚಿದೆ. ಕೋಟೆಯ ನಡುವೆ ಮನೆಯ ಅವಶೇಷವನ್ನೂ ಕಾಣಬಹುದು. 

ಚಾರಣಕ್ಕೆ ದುರ್ಗದ ದಾರಿ ತಿಳಿದಿರಲೇ ಬೇಕು. ತುಸು ಹಾದಿ ತಪ್ಪಿದರೂ ಕಾಡಿನಲ್ಲಿ ದಿಕ್ಕೆಡಬೇಕಾಗುತ್ತದೆ. ಆಹಾರದ ಪೂರ್ವ ತಯಾರಿಯೂ ಅಗತ್ಯ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ - ಕಳಸ ಮಾರ್ಗದಲ್ಲಿನ ಸಂಕಸಾಲೆಯಿಂದ ಚಾರಣ ಮಾಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.