ನನ್ನವಳೇ, ಮುದ್ದು ಮಕ್ಕಳೇ,
ಸೋದರರೇ, ಸೋದರಿಯರೇ,
ನಿಮಗಾಗಿ ವ್ಯಾಕುಲಗೊಂಡು ಮರಳಿ ಬಂದಿದ್ದೇನೆ
ಹಾದಿ ತಪ್ಪಿದ ಆತ್ಮ ತಂದಿದ್ದೇನೆ
ಇದು ನನ್ನ ಮನೆ,
ಈ ಮನೆಗಾಗಿ,
ಇಲ್ಲಿರುವ ಒಂದೊಂದು ವಸ್ತುವಿಗಾಗಿ,
ನನ್ನ ದೇಹವನು ಮಾರಿದ್ದೆ ಕಂತು ಕಂತುಗಳಲ್ಲಿ.
ಮನೆಯ ಎಲ್ಲಾ ತೆರೆದ ಕೋಣೆ ಇಣುಇಣುಕಿ ಬಂದೆ,
ನನ್ನ ನೆನಪಿಸುವ ದೃಶ್ಯ ಇಲ್ಲಿ
ಯಾವ ಕೋಣೆಯಲ್ಲೂ ಇಲ್ಲ,
ನಾನು ಆಡಿದ ನುಡಿಯ ಯಾವ ದನಿಯೂ ಇಲ್ಲ,
ಯಾರ ಹೃದಯದಲ್ಲೂ ಬಾರಿಸುವುದಿಲ್ಲ
ನನ್ನ ನಾಮದ ಗಂಟೆ.
ಪ್ರಾಯಶಃ
ನಾನೇ ಮರೆತುಬಿಟ್ಟಿರಬೇಕು ನನ್ನ ಮನೆ ದಾರಿ
ತಪ್ಪಿ ಯಾರದೋ ಮನೆಗೆ ಬಂದಿದ್ದೇನೆ
ಇದು ನನ್ನ ಮನೆ ಅಲ್ಲ.
ಮಂಜೂರ್‌ಅಹ್ಮದ್ ತಿಮ್ಮಾಪುರಿ (ನಿಧನ : ಅ.2, 2013) ‘ತನ್ಹಾ’ ಎಂಬ ಕಾವ್ಯನಾಮದಿಂದ ಉರ್ದು ಕಾವ್ಯಲೋಕದಲ್ಲಿ ಹೆಸರಾದ ಕವಿ. ಅವರು ಕನ್ನಡದ ಅನೇಕ ಕೃತಿಗಳನ್ನು ಉರ್ದುವಿಗೆ ಅನುವಾದ ಮಾಡಿದ್ದಾರೆ. ‘ಛಲನಿ ಛಲನಿ ಸಾಹೇಬಾ’, ‘ಸವೇರಾ ಮತ್ತು ಸವೇರೆ ಸೆ ಪಹಲೆ‘, ‘ಹೇ ರೋಶನಿ ಸವೇರಾ’, ‘ಕಾಯೆ ಕಸಾಯೆಂ’, ‘ಬೀಸ ಸಾಲ ಇಂತಿಕಾಬ್’, ‘ಷೀರಾಜ್’– ಅವರ ಕೆಲವು ಪ್ರಮುಖ ಕೃತಿಗಳು.
ಮೂಲ ಉರ್ದು:
‘ತನ್ಹಾ’ ತಿಮ್ಮಾಪುರಿ
ಕನ್ನಡಕ್ಕೆ:
ಸಿದ್ಧಲಿಂಗ ಪಟ್ಟಣಶೆಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.