ADVERTISEMENT

ಬದಲಾಗುವುದೆಂದರೆ...

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ಬಿಳಿ ಪಾಯಿಜಾಮ. ಮೈಗಂಟಿದಂಥ ನೀಲಿ ಬಣ್ಣದ ತುಂಡು ಬ್ಲೇಜರ್. ಅದರಿಂದ ತುಸುವೇ ಇಣುಕುವ ವಕ್ಷಸ್ಥಲ. ಸೊಂಟವನ್ನು ಬಿಗಿಯಾಗಿ ಹಿಡಿದ ಕೈಗಳು. ಎಡಗೈ ತೋರುಬೆರಳಿನಲ್ಲೊಂದು ಉದ್ದನೆ ಉಂಗುರ.

ಬಲಗೈಲಿ ಸಣ್ಣ ಬ್ರೇಸ್‌ಲೆಟ್. ಕುತ್ತಿಗೆಯಲ್ಲಿ ದಪ್ಪ ಚಿನ್ನದ ಸರ. ಗಾಢ ಕೆಂಪುಬಣ್ಣದ ತುಟಿ ರಂಗು. ಹನ್ನೆರಡು ಅಡಿ ದೂರದಿಂದ ನೋಡಿದರೂ ಕಣ್ಣಲ್ಲಿ ರಾಚುವಷ್ಟು ದಪ್ಪ ಕಾಡಿಗೆ. ಎದೆಭಾಗದಲ್ಲೊಂದು ಹೂಬಟ್ಟಲಿನಂಥ ವಿನ್ಯಾಸ.

ಕಿವಿಯ ಲೋಲಾಕಿನ ಬಣ್ಣ ಹಸಿರು. ಹಣೆ ಮೇಲೆ ಕುಂಕುಮವಿಲ್ಲ. ಎಡಭಾಗಕ್ಕೆ ತುಸುವೇ ಸರಿಸಿದ ಮುಖದಲ್ಲಿ ಗೆಲುವಿಲ್ಲ. ಗಾಢ ಬಣ್ಣ ಮೆತ್ತಿದ ತುಟಿಗಳ ಮೇಲೆ ಬಗೆ ಲಹರಿಯೂ ಇಲ್ಲ.

ಸೋನಂ ಕಪೂರ್ ಫೋಟೊಗೆ ಪೋಸ್ ಕೊಡುವಾಗ ಹೀಗೆ ಅಳೆದೂ ತೂಗುವುದು ಹೊಸತೇನಲ್ಲ. `ನೋಡಲಷ್ಟೇ ಚೆನ್ನಾಗಿರುವ, ನಾಜೂಕಾಗಿ ವರ್ತಿಸುವ, ನಟನೆಯಲ್ಲಿ ಮಂಕಾಗಿರುವ ಅಭಿನೇತ್ರಿ~ ಎಂದು ಸೋನಾಕ್ಷಿ ಸಿನ್ಹ ಇತ್ತೀಚೆಗೆ ಟೀಕಿಸಿದ್ದು ಬಿ-ಟೌನ್‌ನಲ್ಲಿ ಪ್ರತಿಧ್ವನಿಸಿತ್ತು. ಅದನ್ನು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟಿರುವ ಸೋನಂ ಆತ್ಮವಿಶ್ವಾಸ ನೆಚ್ಚಿಕೊಂಡವರು.`ನಿಂದಕರಿರಬೇಕು~ ಎಂಬ ದಾಸವಾಣಿಯ ಪರಿಪಾಲಕಿ.

`ಅಯ್‌ಶಾ~ ಸಿನಿಮಾ ಹಣ ಮಾಡದಿದ್ದಾಗ ಸೋನಂ ತುಸು ಬೇಸರ ಮಾಡಿಕೊಂಡಿದ್ದರು. `ಮೌಸಮ್~ ಮಕಾಡೆಯಾದಾಗಲಂತೂ ಕಂಗಾಲಾಗಿದ್ದರು. ಆಗ ಎರಡು ದಿನ ಆಪ್ತೇಷ್ಟರ ಜೊತೆ ಅವರು ಸರಿಯಾಗಿ ಮಾತನ್ನೂ ಆಡಿರಲಿಲ್ಲವಂತೆ.

ಆಮೇಲೆ ಅವರು ದಿಗ್ಗನೆದ್ದು, ತುಟಿಗೆ ಢಾಳು ಬಣ್ಣ ಹಚ್ಚಿಕೊಂಡು, ಕನ್ನಡಿ ಎದುರಲ್ಲಿ ನಿಂತು ಎಂದಿನಂತೆ ನಟನೆಯ ತಾಲೀಮಿನಲ್ಲಿ ತೊಡಗಿದ್ದನ್ನು ಕಂಡು ಅವರ ತಂದೆ ಅನಿಲ್‌ಕಪೂರ್ ಕೂಡ ಸಂತೋಷಪಟ್ಟರಂತೆ.

ಈಗ ಸೋನಂ `ಭಾಗ್ ಮಿಲ್ಖಾ ಭಾಗ್~ ಚಿತ್ರದಲ್ಲೊಂದು ಪಾತ್ರ ಮಾಡಿದ್ದಾರೆ. `ಡೆಲ್ಲಿ 6~ ನಿರ್ದೇಶಿಸಿದ್ದ ಓಂಪ್ರಕಾಶ್ ಮೆಹ್ರಾ ಅದರ ನಿರ್ದೇಶಕ. ಚಿತ್ರದ ನಾಯಕಿ ಸೋನಂ ಅಲ್ಲ, ಅದರಲ್ಲಿರುವುದು ವಿಶೇಷ ಪಾತ್ರವಷ್ಟೆ ಎಂಬುದು ಅನೇಕರ ಅಭಿಪ್ರಾಯ.

ADVERTISEMENT

ಇದಕ್ಕೆ ಸೋನಂ ಕೊಟ್ಟಿರುವ ಪ್ರತಿಕ್ರಿಯೆ ಇದು: `ಮೆಹ್ರಾ ಜೊತೆ ಕೆಲಸ ಮಾಡುವುದೇ ಒಂದು ರೋಚಕ ಅನುಭವ. ಸಿನಿಮಾದಲ್ಲಿ ನನ್ನದು ತುಂಬಾ ಮುಖ್ಯ ಪಾತ್ರ. ಮಿಲ್ಖಾ ಸಿಂಗ್‌ಗೆ ಸ್ಫೂರ್ತಿ ನೀಡುವ ಪಾತ್ರ ಅದು. ಅದನ್ನು ನಾನು ಅನುಭವಿಸಿ ಅಭಿನಯಿಸಿದ್ದೇನೆ.
ಫರ‌್ಹಾನ್ ಅಖ್ತರ್ ಪಾತ್ರಕ್ಕಾಗಿ ತಮ್ಮ ದೇಹವನ್ನು ರೂಪಿಸಿಕೊಂಡಿರುವ ರೀತಿ, ಮನಸ್ಸನ್ನು ಅಣಿಮಾಡಿಕೊಂಡಿರುವ ರೀತಿ ಬೆರಗು ಮೂಡಿಸುತ್ತದೆ. ಅಂಥ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದರೂ ನಾವು ಏನನ್ನೋ ಸಾಧಿಸಿದಂತೆಯೇ ಎಂಬುದು ನನ್ನ ಭಾವನೆ~.

ಹಿಂದೆ ಅಭಯ್ ದೇವಲ್ ಜೊತೆ ಮುನಿಸಿಕೊಂಡಿದ್ದ ಅವರೀಗ ಸರಿಹೋಗಿದ್ದಾರೆ. `ರಾಂಝಣ~ ಚಿತ್ರದಲ್ಲಿ ಅಭಯ್‌ಗೆ ಜೋಡಿಯಾಗಲು ಒಪ್ಪಿರುವುದೇ ಇದಕ್ಕೆ ಸಾಕ್ಷಿ. ಆಗ ಜಗಳವಾಡಿದ್ದು ದಿಟ ಎಂದು ಒಪ್ಪಿಕೊಂಡಿರುವ ಸೋನಂ, `ಅದೊಂದು ಕ್ಷುಲ್ಲಕ ಘಟನೆ~ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ.

ಮಾತಿಗೆ ಮಾತು ಸೇರಿಸಿದಾಗ ಅಂಥ ಜಗಳಗಳು ನಡೆಯುತ್ತಿರುತ್ತವೆ. ಅವನ್ನು ಮರೆತು ಮುಂದೆ ಸಾಗಬೇಕು ಎಂಬುದು ಅವರ ತತ್ವ. ಇಷ್ಟಕ್ಕೂ ಅಭಯ್ ಒಳ್ಳೆಯ ನಟ ಎಂದು ಮುಕ್ತಕಂಠದಿಂದ ಹೇಳುವ ಈ ನಟೀಮಣಿ ಈಗ ಸಾಕಷ್ಟು ಬದಲಾಗಿದ್ದಾರೆ. ಅದನ್ನು ಅವರೇ ಹೇಳಿಕೊಂಡಿರುವುದು ಹೀಗೆ:

`ಒಳ್ಳೆಯ ಸಿನಿಮಾಗಳಲ್ಲಿ ಅಭಿನಯಿಸಬೇಕು. ಅದು ಗೆಲ್ಲುತ್ತದೋ ಹಣ ಮಾಡುತ್ತದೋ ಮುಖ್ಯವಲ್ಲ. ಕೆಲಸ ಆತ್ಮತೃಪ್ತಿ ನೀಡಬೇಕಷ್ಟೆ. ಮೊದಮೊದಲು ನನ್ನ ಚಿತ್ರಗಳು ಸೋತಾಗ ದುಃಖವಾಗುತ್ತಿತ್ತು. ಈಗ ಒಳ್ಳೆಯ ಪಾತ್ರ ಸಿಗದೇಹೋದಾಗ ದುಃಖವಾಗುತ್ತದೆ.

ಗಾಸಿಪ್‌ಗೆ ವಸ್ತುವಾದಾಗಲೂ ಹಿಂದೆಲ್ಲಾ ಹಿಂಸೆಯಾಗುತ್ತಿತ್ತು. ಈಗ ಅಭ್ಯಾಸವಾಗಿದೆ. ನಾನು ಸುಮ್ಮನೆ ನಗುವವಳಲ್ಲ. ಕೈಚಾಚಿ ಕರೆದವರ ಸಾಥಿಯಾಗುವ ಹುಂಬಳೂ ಅಲ್ಲ. ನಾನೊಬ್ಬ ನಟಿ... ನಟಿ... ನಟಿ; ಸಂದರ್ಶನ ನೀಡುವಾಗಲೂ~!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.