ADVERTISEMENT

ಹೆಣ್ಣು ಪ್ರತಿಮೆ

ಜ.ನಾ.ತೇಜಶ್ರೀ
Published 2 ಡಿಸೆಂಬರ್ 2017, 19:30 IST
Last Updated 2 ಡಿಸೆಂಬರ್ 2017, 19:30 IST
ಹೆಣ್ಣು ಪ್ರತಿಮೆ
ಹೆಣ್ಣು ಪ್ರತಿಮೆ   

ಬೆಟ್ಟದ ಅಂಗಾಲು ತೊಳೆಯಲೆಂಬಂತೆ

ಅದರ ಬುಡದಲ್ಲೊಂದು ಕೊಳ,

ನೀರ ಪ್ರತಿಬಿಂಬದಲ್ಲಿ ತನ್ನನ್ನೇ ತಾನು

ADVERTISEMENT

ನೋಡಿಕೊಂಡು ಬೀಗುತ್ತ ಬೆಳೆದಿತ್ತು ಬೆಟ್ಟ.

ಅಲ್ಲೇ ಕೊಂಚ ಮುಂದೊಂದು ತಗ್ಗು

ಆ ತಗ್ಗಿನೊಳಗೊಂದು ಹೆಣ್ಣು ಪ್ರತಿಮೆ,

ಮಸೆದ ಮೂಗು, ಮುರಿದ ಗಲ್ಲ ಅದಕ್ಕೆ ಬಿರುಕು ತುಟಿ,

ಇಕ್ಕಳದಂತೆ ಹೊಸೆದ ಕಾಲುಗಳಲ್ಲಿ ಸವೆದ ಬೆರಳು

ಕಾಲದ ಏಟಿಗೆ ವಿಭ್ರಾಂತಿಗೊಳಗಾಗದ ಗಟ್ಟಿತುರುಬು ನೆತ್ತಿಮೇಲೆ,

ಕಲಶವಿಟ್ಟಂತೆ ವಿಮಗ್ನ ಅವಳ ಕಣ್ಣು.

ಮಳೆಬಿದ್ದ ಕೊಳದೊಳಗೆ ಮಳೆಹನಿಗಳ ತಟ್ಟಾಟ

ಹನಿಯು ಹನಿಯನ್ನೆ ಮುಟ್ಟಿ ಕೊಳದೊಳಗೆಲ್ಲ ಬಳೆಯ ಚಿತ್ರ

ಕಳಕಳದ ಹಕ್ಕಿಕೇಕೆ ತೊನೆಯುವ ಮರದ ಬಿಳಲು, ಪೊಟರೆಗಳಲ್ಲಿ;

ಕೊಲ್ಲಿನೋಟದ ಹೆಣ್ಣು ಪ್ರತಿಮೆ

ನೋಡುತ್ತ ತನ್ನನ್ನೇ ತಾನು ಕೊಳದ ನೀರಲ್ಲಿ

ತಳದ ಮೀನುಗಳಿಗೆ ಎಡ್ಡಂತಿದ್ದ ಪುಳಕ

ಆವೆಮಣ್ಣೊಳಗೆ ಅಡಗಿದ್ದ ಆಮೆಗಳೂ ಹೊರಗಿಣುಕಿ ಆಗ,

ಪಸೆಯಾರದ ಮಣ್ಣ ಮೇಲೆಲ್ಲ ಹೆಜ್ಜೆ ಗುರುತು.

ಏನು ಕಾತುರ ಏನಿಂಥ ಹಂಬಲ ಒದ್ದೆ ಮಣ್ಣಿಗೆ

ಮುಟ್ಟಿದ್ದ ಸೆಳೆಯುತ್ತ ಪುಸಕ್ಕನೆ ಆತು ತಬ್ಬುವ ಮಿದು!

ಮಣ್ಣಿನೆಳೆತಕ್ಕೆ ಬೀಳದೆ ಆಮೆಯೊಂದು

ಊರುತ್ತ ಮೆಲ್ಲಮೆಲ್ಲನೆ ಹೆಜ್ಜೆ ಮೇಲೆ ಹೆಜ್ಜೆ ಮೇಲೆ ಹೆಜ್ಜೆ

ಮುಟ್ಟಿತು ಪ್ರತಿಮೆಯ ಸವೆದ ಬೆರಳನ್ನು,

ತುದಿಗಾಲ ಬೆರಳಿಂದ ಶುರುವಿಕ್ಕಿದ ಅದರ ಹುಡುಕಾಟದಲ್ಲಿ

ಕಳೆದು ದಿನ ಮಾಸ ವರ್ಷವರ್ಷಂಗಳು, ಒಂದು ದಿನ

ಆಮೆ ಕುಳಿತಿತು ಪ್ರತಿಮೆಯ ನೆತ್ತಿಮೇಣ ಗಟ್ಟಿತುರುಬಿನೊಳಗೆ,

ಹಾವಸೆಗಟ್ಟಿದ ಹೆಣ್ಣುಪ್ರತಿಮೆಯೊಳಗೆ ಆಮೆಯೀಗ ಹಿಡಿಯಾಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.