ಅನುಭವ ಮಂಟಪ
ಈ ಕಲಾ ಸಂಗ್ರಹಾಲಯದಲ್ಲಿ ಒಂದು ಸುತ್ತು ಹಾಕಿದರೆ ಸಾಕು, ಬಸವಣ್ಣ, ನೂರಾರು ಶರಣರು ಜೀವತಳೆದು ಕಣ್ಮುಂದೆ ಬಂದು ನಿಲ್ಲುತ್ತಾರೆ...
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲ ಸಂಗಮದ ಮುಖ್ಯರಸ್ತೆಯಲ್ಲಿ ‘ಬಸವ ಶರಣ ಕಲಾ ಸಂಗ್ರಹಾಲಯ’ ಎಂಬ ನಾಮಫಲಕವನ್ನು ನೋಡಿ ಒಳಗೆ ಕಾಲಿರಿಸಿದೆ. ಅಲ್ಲಿ ಎಡಗಡೆ ಗೋಡೆಗೆ ಹಬ್ಬಿದ ಬಸವಣ್ಣ, ಅವನ ಅನುಯಾಯಿಗಳ ಶಿಲ್ಪಗಳಿದ್ದವು. ಸೌರಮಂಡಲಕ್ಕೆ ಸೂರ್ಯನು ಕೇಂದ್ರವಾಗಿರುವಂತೆ, ಇಲ್ಲಿ ಬಸವಣ್ಣ ಸೂರ್ಯನೋಪಾದಿಯಲ್ಲಿ ಭೂಮಿಯ ಮೇಲೆ ಕುಳಿತು ತನ್ನ ಅರಿವಿನ ಕಿರಣಗಳನ್ನು ಸೂಸುತ್ತಾ, ವಚನಗಳನ್ನು ಬರೆಯುವುದರಲ್ಲಿ ನಿರತರಾಗಿದ್ದಾರೆ. ಗೋಡೆಗಂಟಿದ ಚಿತ್ರ-ಶಿಲ್ಪಗಳ ಮೇಲೆಲ್ಲ ಅಗತ್ಯವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮಂದವಾದ ಬೆಳಕು. ನಾನು ಮತ್ತು ಅಲ್ಲಿದ್ದ ಕೆಲವು ಸಂದರ್ಶಕರು ಮಬ್ಬುಗತ್ತಲೆಯಲ್ಲಿದ್ದೆವು. ಚಿತ್ರ–ಶಿಲ್ಪಗಳು ಮಾತ್ರ ಸ್ಪಷ್ಟವಾಗಿ ಕಾಣುತ್ತಿದ್ದವು. ಅಂದರೆ ನಾವಿಲ್ಲಿ ಸುಳ್ಳು, ಚಿತ್ರ–ಶಿಲ್ಪಗಳಷ್ಟೇ ನಿಜ ಅನಿಸಿತು. ಇದು ನಮ್ಮನ್ನು 12ನೇ ಶತಮಾನಕ್ಕೆ ಕರೆದೊಯ್ಯುವ ಬಗೆಯೂ ಅನಿಸಿತು. ಹೌದು, ಆ ಹೊತ್ತು ಬಾಲಕ ಬಸವಣ್ಣ ಜನಿವಾರ ಧಾರಣೆಗೆ ನಿರಾಕರಿಸಿದ್ದು, ವಿದ್ಯಾಭ್ಯಾಸಕ್ಕೆಂದು ಸಂಗಮಕ್ಕೆ ಬಂದಿದ್ದು, ಮುಂದೆ ಬಿಜ್ಜಳನ ಆಸ್ಥಾನ ಸೇರಿದ್ದು...ಹೀಗೆ ಒಂದೊಂದೇ ಸನ್ನಿವೇಶಗಳು ಬಿಚ್ಚಿಕೊಳ್ಳುತ್ತಲೇ ಹೋದವು.
ನಾನು ಓದಿ ತಿಳಿದುದಕ್ಕೂ, ಈ ಚಿತ್ರ–ಶಿಲ್ಪಗಳಿಗೂ ತಾಳೆ ಹಾಕತೊಡಗಿದೆ. ಮುಂದಿದ್ದ ಇನ್ನೊಂದು ಸಂದರ್ಶಕರ ಗುಂಪಿನಲ್ಲಿದ್ದ ಮಹಿಳೆಯೊಬ್ಬರು ಉಬ್ಬುಶಿಲ್ಪದಲ್ಲಿಯ ಗಿಳಿ, ಬೆಕ್ಕು, ಪಂಜರ ನೋಡಿ ‘ಇದೇನು’ ಅನ್ನುತ್ತಿದ್ದರು. ಅದೇ ಗುಂಪಿನಲ್ಲಿದ್ದ ಬಾಲಕ ‘ಗಿಳಿಯೋದಿ ಫಲವೇನು? ಬೆಕ್ಕು ಬಹುದ ಹೇಳಲರಿಯದು..?’ ಚಿತ್ರ ಚೌಕಟ್ಟಿನ ಕೆಳಗೆ ಪುಟ್ಟ ಫಲಕದಲ್ಲಿ ಬರೆದಿದ್ದ ವಚನವನ್ನು, ಅದರ ಭಾವಾರ್ಥವನ್ನೂ ಓದಿ ಹೇಳುತ್ತಿದ್ದ.
ಅನುಭವ ಮಂಟಪ ದರ್ಶನ
ವಚನ ಶಿಲ್ಪಗಳ ವಿಭಾಗ ನೋಡಿ ಮುಂದೆ ನಡೆದರೆ ಅನುಭವ ಮಂಟಪದ ದರ್ಶನವಾಯಿತು. ಅಲ್ಲಿ ಸಾಕ್ಷಾತ್ ಅನುಭವ ಮಂಟಪದ ಸನ್ನಿವೇಶವೇ ಮರುಜೀವ ಪಡೆದಿದೆ! ಅಕ್ಕಮಹಾದೇವಿ ಅನುಭವ ಮಂಟಪವನ್ನು ಪ್ರವೇಶಿಸಿದ್ದಾರೆ. ಅಲ್ಲಮನು ಷಟಸ್ಥಲ ಪೀಠದಲ್ಲಿ ಆಸೀನರಾಗಿದ್ದಾರೆ. ಅವರಿಗೆದುರಾಗಿ ನಿಂತಿರುವ ಮಹಾದೇವಿಯಕ್ಕ, ಬಸವಣ್ಣ, ಅಲ್ಲಮ ಇವರೆಲ್ಲರೂ ಸಂವಾದ ನಡೆಸುತ್ತಿದ್ದಾರೆ. ‘ನಿನ್ನ ಗಂಡನ ಹೆಸರು ಹೇಳಿದರೆ ಮಾತ್ರ ನಿನಗಿಲ್ಲಿ ಸ್ಥಾನವಿದೆ’ ಅಲ್ಲಮನೆಂದ ಮಾತಿಗೆ ‘ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ ಮಿಕ್ಕಿನ ಲೋಕದವರನೆಗೆ ಸಂಬಂಧವಿಲ್ಲವಯ್ಯಾ ಪ್ರಭುವೇ’ ಎಂದುತ್ತರ ನೀಡುತ್ತಿರುವಂತೆ ನನಗೆ ಭಾಸವಾಯಿತು. ನಾವೂ ಈ ಸಭೆಯಲ್ಲಿ ಭಾಗವಹಿಸಿದ್ದೇವೆ ಅನ್ನಿಸಲು ಮುಖ್ಯ ಕಾರಣ, ಈ ಶಿಲ್ಪಗಳೆಲ್ಲವೂ ಆಳೆತ್ತರದಾಗಿವೆ. ಅಲ್ಲಮ, ಬಸವಣ್ಣ, ಮಹಾದೇವಿಯರಲ್ಲದೇ ಮುಂದಿನ ಸಾಲಿನಲ್ಲಿರುವ ಶರಣರ ಶಿಲ್ಪಗಳು ಪೂರ್ಣಶಿಲ್ಪಗಳಾಗಿವೆ. ಉಳಿದವು ಉಬ್ಬುಶಿಲ್ಪಗಳಾಗಿವೆ. 50 x 12 ಅಡಿಗಳ ವಿಸ್ತಾರದಲ್ಲಿ ಅನುಭವ ಮಂಟಪವನ್ನು ಸೃಜಿಸಲಾಗಿದೆ. ಇಲ್ಲಿ ಒಟ್ಟು 270 ಶರಣರ ಪ್ರತಿಕೃತಿಗಳನ್ನು ಕಾಣಬಹುದು.
ಮುಂದಿನ ವಿಭಾಗದಲ್ಲಿ ಬಸವಣ್ಣನನ್ನು ಕುರಿತು ವಿವಿಧ ಕಲಾವಿದರು ಚಿತ್ರಿಸಿದ ಪೇಂಟಿಂಗ್‌ಗಳ, ಸರಣಿ ಚಿತ್ರಗಳ, ಅಮರ ಚಿತ್ರಕಥಾ ಮಾಲಿಕೆಯ ಛಾಯಾಚಿತ್ರಗಳಿವೆ. ಇದೊಂದು ಅಪರೂಪದ ಸಂಗ್ರಹವೇ ಸರಿ. ಯಾಕೆಂದರೆ, ಈ ಸಂಗ್ರಹಾಲಯದ ರೂವಾರಿ, ‘ಬಸವಣ್ಣನ ಕುರಿತು ರಚಿಸಿದ ವರ್ಣಚಿತ್ರಗಳ ಒಂದು ಅಧ್ಯಯನ’ ಎಂಬ ಸಂಶೋಧನ ಪ್ರಬಂಧ ಮಂಡಿಸಿದವರು. ಹೊರಗಿನ ಆವರಣದಲ್ಲಿ ಬಸವಪೂರ್ವ ಯುಗದ ಸಮಾಜವನ್ನು ತೆರೆದಿಡುವಂತಹ ಸಿಮೆಂಟ್ ಶಿಲ್ಪಗಳಿವೆ. ಆ ದಿನಗಳಲ್ಲಿದ್ದ ಅಸಮಾನತೆಗಳು, ಅಸ್ಪೃಶ್ಯತೆ, ದಲಿತರಿಗೆ ಶಿಕ್ಷಣದ ವಂಚನೆ, ನೀರಿನ ನಿರಾಕರಣೆ, ಅವರು ಊರು ಪ್ರವೇಶಿಸುವ ಮುನ್ನ ಸಂಬಳಿಗೋಲು ಹಿಡಿದು ಪ್ರವೇಶಿಸುವ ದೃಶ್ಯ, ಪೊರಕೆ ಹಿಡಿದು ಬರುವ ದೃಶ್ಯಗಳಿವೆ.
ಯಾರಿದರ ರೂವಾರಿ..?
ಬಾಗಲಕೋಟೆ ಜಿಲ್ಲೆಯ ಗುಂಡನಪಲ್ಲೆಯ ಬಸವರಾಜ ಅನಗವಾಡಿ ಈ ಸಂಗ್ರಹಾಲಯದ ರೂವಾರಿ. 2005ರ ಸುಮಾರಿಗೆ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಚಿತ್ರ–ಶಿಲ್ಪಗಳ ತಯಾರಿ ಕಾರ್ಯ ಆರಂಭಿಸಿದರು. ‘ಕೂಡಲ ಸಂಗಮ ಅಭಿವೃದ್ಧಿ ಮಂಡಳಿ’ ನೀಡಿದ ಒಂದು ಎಕರೆ ಜಾಗದಲ್ಲಿ 2011 ರಿಂದ ಈ ಸಂಗ್ರಹಾಲಯದ ಕೆಲಸ ಶುರುವಾಯಿತು. ಆಗ ಬಸವಣ್ಣನ ಕುರಿತಾದ 49 ಉಬ್ಬುಶಿಲ್ಪಗಳಿದ್ದವು. ಈ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು ಸದ್ಯ 100 ಉಬ್ಬುಶಿಲ್ಪಗಳು, 125 ಸಿಮೆಂಟ್ ಶಿಲ್ಪಗಳು, 100 ಕ್ಯಾನ್ವಾಸ್ ಪೇಂಟಿಂಗ್‌ಗಳಿವೆ. ಫೈಬರ್‌ನಲ್ಲಿ ನಿರ್ಮಿಸಿರುವ ಉಬ್ಬುಶಿಲ್ಪಗಳು 18 x 8, 10 x 6 ಅಡಿಗಳ ಗಾತ್ರದಲ್ಲಿವೆ. ಶಿಲ್ಪಗಳನ್ನು ಸಿಮೆಂಟ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ತಯಾರಿಸಲಾಗಿದೆ. ಮತ್ತೀಗ ಅಕ್ಕಮಹಾದೇವಿಯ ಸರಣಿಯ ಶಿಲ್ಪಗಳ ನಿರ್ಮಾಣ ಕಾರ್ಯ ನಡೆದಿದೆ. ಈ ಸಂಗ್ರಹಾಲಯ ನಿರ್ಮಾಣಕ್ಕಾಗಿ ಅನಗವಾಡಿಯವರು ಸುಮಾರು ಆರು ಕೋಟಿ ರೂಪಾಯಿ ವ್ಯಯಿಸಿದ್ದಾರೆ. ರಾಜ್ಯ ಸರ್ಕಾರ ಈ ತನಕ ಎರಡೂವರೆ ಕೋಟಿ ರೂಪಾಯಿ ಅನುದಾನ ನೀಡಿದೆ.
ಅನಕ್ಷರಸ್ಥರಿಗೂ ಶರಣರ ಜೀವನ, ಅವರ ವಚನಗಳನ್ನು ತಲುಪಿಸಬೇಕೆಂಬುದು ತಮ್ಮ ಧ್ಯೇಯವೆಂದು ಹೇಳುವ ಬಸವರಾಜ ಅನಗವಾಡಿಯವರು, ಅದಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಪ್ರತಿ ವಚನದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೂಲ ಪಠ್ಯ ಮತ್ತು ಅದರ ಭಾವಾರ್ಥಗಳ ಫಲಕಗಳು ಎಲ್ಲ ವಚನಶಿಲ್ಪಗಳ ಅಡಿಯಲ್ಲಿವೆ. ಅಕ್ಷರ ರೂಪದ ವಚನಗಳನ್ನು ದೃಶ್ಯರೂಪಕ್ಕೆ ತಂದಿರುವುದಲ್ಲದೆ ಅದನ್ನು ‘ಕೇಳುವ’ ಪಠ್ಯವಾಗಿಯೂ ರೂಪಿಸಿದ್ದಾರೆ. ಶಿಲ್ಪಗಳ ಬಳಿ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ, ನಾವು ವಚನ ಮತ್ತದರ ವಿವರಣೆಯನ್ನು ಕೇಳಬಹುದು. ವಚನಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಾಮಾನ್ಯರಿಗೆ ತಲುಪಿಸಬೇಕೆಂಬ ಅನಗವಾಡಿಯವರ ಹಂಬಲ ಗಮನಾರ್ಹವಾದುದು.
ಪ್ರವೇಶಕ್ಕೆ ₹ 30
‘ಬಸವ ಶರಣ ಕಲಾ ಸಂಗ್ರಹಾಲಯ’ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೆ ತೆರೆದಿರುತ್ತದೆ. ಯಾವ ದಿನವೂ ರಜೆ ಇರುವುದಿಲ್ಲ. ಒಬ್ಬರಿಗೆ ₹ 30 ಪ್ರವೇಶ ಶುಲ್ಕ. ಶಾಲಾ ಮಕ್ಕಳಿಗೆ ₹ 5 ರಿಯಾಯಿತಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.