ADVERTISEMENT

ಮನೆಯಂಗಳವೇ ಕಲಾ ಗ್ಯಾಲರಿ

ಕಸವಿಲ್ಲಿ ರಸವಾಯ್ತು..

ಬಳಕೂರು ವಿ.ಎಸ್.ನಾಯಕ
Published 11 ಮೇ 2020, 19:45 IST
Last Updated 11 ಮೇ 2020, 19:45 IST
ಮನೆಯ ಅಂಗಳದಲ್ಲಿರುವ ಕಲಾಕೃತಿಗಳೊಂದಿಗೆ ಸುಮತಿ
ಮನೆಯ ಅಂಗಳದಲ್ಲಿರುವ ಕಲಾಕೃತಿಗಳೊಂದಿಗೆ ಸುಮತಿ   
""
""
""

ಆ ಮನೆಯ ಅಂಗಳದಲ್ಲಿ ಹೂದೋಟ. ನಡುವೆ ಪುಟ್ಟ ಗೋಡೆಯ ಮೇಲೆ ಬಣ್ಣಗಳನ್ನೇ ಹೊದ್ದುಕೊಂಡ ಹಳೆಯ ಮಣ್ಣಿನ ಪಾತ್ರೆಗಳು. ಸುತ್ತಲೂ ಬಣ್ಣದ ಕಲಾಕೃತಿಗಳ ಜೋಡಣೆ. ಕೋಳಿ ಮೊಟ್ಟೆಯ ಹೊರ ಕವಚ, ಹಳೆಯ ಬಾಟಲಿಗಳಿಗೂ ಅಲಂಕಾರ, ಹತ್ತಿಯ ಕೋಡುಗಳು, ಒಣಗಿದ ಹಳೆಯ ಮರದ ಪರಿಕರಗಳು, ಹಳೆಯ ಹೆಂಚುಗಳಿಗೆ ಹೊಸ ರೂಪ..

ಆ ಮನೆಯಂಗಳದಲ್ಲಿ ಸುತ್ತು ಹಾಕುತ್ತಾ ಇವನ್ನೆಲ್ಲ ನೋಡುತ್ತಿದ್ದಾಗ, ‘ಇವು ನಿಜವಾಗಿಯೂ ನಿರುಪಯೋಗಿ ವಸ್ತುಗಳೇ’ ಎಂದು ಅಚ್ಚರಿ ಮೂಡಿತು. ಆ ಅಂಗಳದಲ್ಲಿ ಪುಟ್ಟದೊಂದು ಕಲಾ ಗ್ಯಾಲರಿಯೇ ಅನಾವರಣಗೊಂಡಂತೆ ಕಂಡಿತು.

ತ್ಯಾಜ್ಯದ ಹೂವಿನ ಕುಂಡ

ಮಂಗಳೂರು ಸಮೀಪದ ಕಿನ್ನಿಗೋಳಿಯ ಕೆಮ್ರಾಲ್‌ ಗ್ರಾಮದಲ್ಲಿರುವ ಸುಮತಿ ಶೆಟ್ಟಿಯವರ ತೋಟದ ಮನೆ, ವಾಸದ ಮನೆಯ ಅಂಗಳ ಹೊಕ್ಕರೆ ಕಲಾ ಗ್ಯಾಲರಿ ಹೊಕ್ಕಂತಹ ಅನುಭವವಾಗುತ್ತದೆ. ‘ಕಸದಿಂದ ರಸ’ ಎನ್ನುವಂತೆ, ಹಳೆಯ ವಸ್ತುಗಳಿಗೆ ಅವರು ಬಣ್ಣದ ಸ್ಪರ್ಶ ಕೊಟ್ಟು, ಹೊಸ ಪೋಷಾಕು ತೊಡಿಸಿ, ನವ ರೂಪ ನೀಡಿದ್ದಾರೆ. ಆ ವಸ್ತುಗಳ ಸೌಂದರ್ಯ ಹೇಗಿದೆ ಎಂದರೆ, ಮನೆ ಹೊಕ್ಕವರನ್ನುಒಂದು ಕ್ಷಣ ಕುಳಿತು ಕಲಾಕೃತಿಗಳನ್ನು ನೋಡುವಂತೆ ಮಾಡುತ್ತದೆ. ಸುಮತಿ ಅವರು ಅಷ್ಟು ಚಂದವಾಗಿ ತಮ್ಮೊಳಗಿನ ಕಲಾತ್ಮಕತೆ ಮತ್ತು ಜಾಣ್ಮೆಯಿಂದ ಕಡಿಮ ಖರ್ಚಿನಲ್ಲಿ ಇಂಥದ್ದೊಂದು ಕಲಾತ್ಮಕ ಒಳಾಂಗಣವನ್ನು ನಿರ್ಮಿಸಿದ್ದಾರೆ.

ADVERTISEMENT

‘ತ್ಯಾಜ್ಯ’ಕ್ಕೆ ಬಣ್ಣದ ಸ್ಪರ್ಶ

ಸುಮತಿಯವರು ಹುಟ್ಟು ಕಲಾವಿದರಲ್ಲ. ಕಲಾ ತರಗತಿಗಳಲ್ಲಿ ತರಬೇತಿ ಪಡೆದವರಲ್ಲ. ಆದರೆ, ಬಾಲ್ಯದಿಂದಲೇ ತಮ್ಮೊಳಗೆ ಅರಳಿದ್ದ ಕಲಾಪ್ರೀತಿಗೆ, ನೀರೆರೆದು ಪೋಷಿಸಿ ಬೆಳೆಸಿದ್ದಾರೆ. 74ರ ಹರೆಯದಲ್ಲೂ ಚೈತನ್ಯದ ಚಿಲುಮೆಯಂತೆ ಓಡಾಡುತ್ತಾ ಬಿಡುವಿನ ಸಮಯವನ್ನೂ ಒಂದಿನಿತೂ ವ್ಯರ್ಥಮಾಡದೇ, ಮನೆಯ ಅಂದವನ್ನೂ ಹೆಚ್ಚಿಸಲು ಮೀಸಲಿಟ್ಟಿದ್ದಾರೆ.

ಮನೆಯಲ್ಲಿ ನಿರುಪಯುಕ್ತವಾಗುವ ಯಾವ ವಸ್ತುಗಳನ್ನೂ ಅವರು ಬಿಸಾಡುವುದಿಲ್ಲ. ಪ್ರತಿ ವಸ್ತುವಿಗೂ ಬಣ್ಣದ ಸ್ಪರ್ಶ ನೀಡಿ, ಅದನ್ನೊಂದು ಕಲಾತ್ಮಕ ವಸ್ತುವನ್ನಾಗಿ ಮಾಡುತ್ತಾರೆ. ಒಡೆದ ಮೊಟ್ಟೆಯ ಹೊರ ಕವಚದಿಂದ ಕಲಾಕೃತಿ ಮಾಡಿದ್ದಾರೆ. ಖಾಲಿ ಪ್ಲಾಸ್ಟಿಕ್ ಬಾಟಲಿಯನ್ನೂ ಅಲಂಕರಿಸಿದ್ದಾರೆ. ತಂಪು ಪಾನೀಯ ಕುಡಿದ ಬಳಿಕ, ಉಳಿಯುವ ಶೀಶೆಗಳಿಗೆ ಬಣ್ಣ ಹಚ್ಚಿ ವಾಸ್‌ಗಳನ್ನಾಗಿಸಿದ್ದಾರೆ. ತೆಂಗಿನಕಾಯಿ ಚಿಪ್ಪಿನಲ್ಲಿ ವಿಭಿನ್ನ ಬಗೆಯ ಕಲಾಕೃತಿಗಳನ್ನು ಮಾಡಿದ್ದಾರೆ. ಗರಿಕೆ ಹುಲ್ಲಿನಲ್ಲಿ ಬುಟ್ಟಿ, ಪ್ರಸಾದಕ್ಕಾಗಿ ಕೊಡುವ ಬ್ಯಾಗ್‍ನಿಂದ ವಿಭಿನ್ನ ಹಾರಗಳನ್ನು ಮಾಡಿದ್ದಾರೆ. ದೂರದಿಂದ ನೋಡಿದರೆ,ಇವೆಲ್ಲವೂ ನಿರುಪಯುಕ್ತ ವಸ್ತುಗಳೆಂದು ಗೊತ್ತಾಗುವುದೇ ಇಲ್ಲ. ‘ಮನೆ ಅಂದವಾಗಿಸಲು ಪೇಟೆಯಿಂದ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ತರಬೇಕಿಲ್ಲ. ಸ್ವಲ್ಪ ಕ್ರಿಯಾಶೀಲತೆ, ಕಲಾತ್ಮಕ ಮನಸ್ಸಿದ್ದರೆ, ಮನೆಯಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಮನೆಯ ಅಂದ ಹೆಚ್ಚಿಸಬಹುದು’ ಎನ್ನುತ್ತಾರೆ ಸುಮತಿ.

ವಿದ್ಯಾರ್ಥಿಗಳಿಗೆ ಪರಿಸರ ಪಾಠ

ಕಸದಿಂದ ರಸದ ಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಬೇಕು ಎಂಬ ಕಾರಣಕ್ಕಾಗಿ ಸುತ್ತಲಿನ ಶಾಲಾ ಕಾಲೇಜು ಅಧ್ಯಾಪಕರು, ತಮ್ಮ ವಿದ್ಯಾರ್ಥಿಗಳನ್ನು ಇವರ ಮನೆಗೆ ಕರೆತರುತ್ತಾರೆ. ಈ ವೇಳೆ ಕಲಾಕೃತಿ ನಿರ್ಮಾಣದ ಹಿಂದಿನ ಪರಿಸರ ಕಾಳಜಿ ಮತ್ತು ಪರಿಶ್ರಮವನ್ನು ಸುಮತಿಯವರು ವಿದ್ಯಾರ್ಥಿಗಳಿಗೆ ವಿವರಿಸುತ್ತಾರೆ. ವಿದ್ಯಾರ್ಥಿಗಳಿಗೂ ಸುಮತಿಯವರ ಕಾರ್ಯ ಸ್ಫೂರ್ತಿಯಾಗಿದೆ. ‘ಪರಿಸರ ಮಲಿನವಾಗಬಾರದು. ಆ ಉದ್ದೇಶದಿಂದಲೇ ಕಸಕ್ಕೆ ಕಲಾತ್ಮಕ ಸ್ಪರ್ಶ ನೀಡುತ್ತಿದ್ದೇನೆ. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ’ ಎನ್ನುತ್ತಾರೆ ಸುಮತಿ.

ಮನೆಯ ಆವರಣದಲ್ಲಿರುವ ಕಲಾಕೃತಿಗಳು

ಅಂದ ಹಾಗೆ, ಮನೆಯಲ್ಲಿರುವ ಯಾವ ಕಲಾತ್ಮಕ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ. ಹೀಗಾಗಿ, ಪ್ರತಿ ಬಾರಿ ಹೊಸ ಹೊಸ ಕಲಾಕೃತಿಗಳು ತಯಾರಾಗುತ್ತಾ, ಇವರ ಮನೆಯ ಗೋಡೆ. ಕಿಟಕಿ, ಹಾಲ್‍ನಲ್ಲಿ ವಿಶೇಷ ವಿನ್ಯಾಸದಲ್ಲಿ ಜೋಡಣೆಯಾಗುತ್ತಿವೆ.

ಊರಿನವರಿಗೆ ಆದರ್ಶ

ಸುಮತಿ ಅವರ ಕಸದಿಂದ ರಸ ಕಲ್ಪನೆ ಊರಿನ ಜನರಿಗೆ ಮಾದರಿಯಾಗಿದೆ. ಊರಿನಲ್ಲಿರುವ ಅನೇಕರು ಈಗೀಗ ಅಲ್ಲಲ್ಲಿ ಕಸ ಹಾಕುವುದನ್ನು ಬಿಟ್ಟಿದ್ದಾರೆ. ಆ ಕಸವನ್ನು ಬೇರೆ ಬೇರೆ ರೀತಿಯಲ್ಲಿ ಮರುಬಳಸುವ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡುತ್ತಿದೆ.

ತ್ಯಾಜ್ಯದಲ್ಲಿ ಅರಳಿದ ಬೊಂಬೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.