ADVERTISEMENT

ಬುಲ್‌ ಬುಲ್‌ ಹಕ್ಕಿಯ ಬಾಣಂತನ

ರಾಮಕೃಷ್ಣ ಶಾಸ್ತ್ರಿ
Published 17 ಮೇ 2025, 23:30 IST
Last Updated 17 ಮೇ 2025, 23:30 IST
<div class="paragraphs"><p>ಬುಲ್‌ ಬುಲ್‌ ಹಕ್ಕಿ</p></div>

ಬುಲ್‌ ಬುಲ್‌ ಹಕ್ಕಿ

   

ಬೆಳ್ತಂಗಡಿ ತಾಲ್ಲೂಕಿನ ಮೇಲ್ಲಂತ ಬೆಟ್ಟು ಗ್ರಾಮದ ಜಯಶಂಕರ ಶರ್ಮ ಅವರು ಹಲಸಿನಹಣ್ಣುಗಳನ್ನು ಮರದಿಂದ ಪೆಟ್ಟಾಗದ ಹಾಗೆ ಇಳಿಸುವುದಕ್ಕಾಗಿ ಪೇಟೆಯಿಂದ ತಂದ ಹಗ್ಗಗಳನ್ನು ತಾರಸಿಯ ಕೊಂಡಿಗೆ ನೇತು ಹಾಕಿದ್ದರು. ಒಂದು ದಿನ ಕೆಲಸಗಾರ ಶರಣಪ್ಪ ಅವರಿಗೆ ಹಗ್ಗಗಳನ್ನು ಬಿಡಿಸಿ ತರಲು ಹೇಳಿದರು. ಹಗ್ಗದ ಬಳಿಗೆ ಹೋದ ಶರಣಪ್ಪ ಹಾಗೆಯೇ ಓಡಿಬಂದರು. ‘ಯಜಮಾನರೇ, ಹಗ್ಗ ತೆಗೆಯೋಕಾಗಲ್ಲ. ಅದರಲ್ಲಿ ಗೂಡಿದೆ. ಗೂಡಿನಲ್ಲಿ ಎರಡು ಮೊಟ್ಟೆಗಳಿವೆ. ಹಕ್ಕಿಯದ್ದು ಅಂತ ಕಾಣ್ಸುತ್ತೆ’ ಎಂದರು.

ಶರ್ಮ ಅವರು ಗೂಡಿನ ಬಳಿಗೆ ಹೋಗಿ ನೋಡಿದಾಗ ಕಡ್ಡಿಗಳನ್ನು ವರ್ತುಲಾಕಾರವಾಗಿ ಒಂದಕ್ಕೊಂದು ನಾಜೂಕಿನಿಂದ ಹೆಣೆದು ತಯಾರಾದ ಗೂಡು ಕಾಣಿಸಿತು. ಮುಷ್ಟಿಗಾತ್ರದ ಹಕ್ಕಿಯೊಂದು ಮೊಟ್ಟೆಗಳ ಮೇಲೆ ಬೆಚ್ಚಗೆ ಕುಳಿತು ಕಾವು ಕೊಡುತ್ತಿತ್ತು. ಬಳಿಗೆ ಹೋದರೂ ಭಯದಿಂದ ರೆಕ್ಕೆ ಬಡಿಯಲಿಲ್ಲ. ಎದ್ದು ಓಡಲಿಲ್ಲ. ಹೌದು, ಅನೇಕ ಪಕ್ಷಿಗಳು ಜನವಸತಿ ಬಳಿಯೇ ಗೂಡು ಕಟ್ಟಿ ಮೊಟ್ಟೆಯಿಡಲು ಬಯಸುತ್ತವೆ. ಹಾವು, ಗಿಡುಗದಂತಹ ಹಗೆಗಳು ಅಲ್ಲಿ ಬಾಧಿಸುವುದು ವಿರಳ ಎಂಬುದು ಅವಕ್ಕೂ ಗೊತ್ತಿದೆ ಎಂದು ಪಕ್ಷಿತಜ್ಞ ಸಲೀಂ ಅಲಿ ಹೇಳಿದ ಮಾತು  ಅವರಿಗೆ ನೆನಪಾಯಿತು.

ADVERTISEMENT

ಶರ್ಮ ಅವರು ತಮ್ಮ ಗೆಳೆಯ, ನಿವೃತ್ತ ಪ್ರಾಂಶುಪಾಲ ಉದಯಚಂದ್ರರಿಗೆ ಕರೆ ಮಾಡಿ ಹಕ್ಕಿಯೊಂದು ಮನೆಯ ತಾರಸಿ ಕೆಳಗೆ ಮೊಟ್ಟೆಯಿಟ್ಟ ವಿಚಾರ ತಿಳಿಸಿದರು. ಉದಯಚಂದ್ರ ಅವರ ಹಕ್ಕಿಯ ಬಣ್ಣ, ಆಕಾರ ಹೇಗಿದೆ ಎಂದು ಕೇಳಿ ‘ಎತ್ತರದ ಮೊನಚಾದ ಜುಟ್ಟು ತಲೆಯಲ್ಲಿದ್ದರೆ ಅದು ಕೆಂಪು ಬುಲ್‌ ಬುಲ್‌ ಹಕ್ಕಿ. ಹೊಟ್ಟೆ ತಿಳಿ ಬಿಳಿ ಬಣ್ಣ, ಪಕ್ಕದ ಭಾಗಗಳು ನಸು ಕಂದು ವರ್ಣ, ಎದೆ ಮೇಲೆ ಭುಜದ ಮಟ್ಟದಲ್ಲಿ ಚಾಚಿಕೊಂಡಿರುವ ಗಾಢ ಕಪ್ಪು ಬಣ್ಣ, ಕೊಕ್ಕಿನ ಬುಡದಿಂದ ಕುತ್ತಿಗೆ ಕಡೆಗೆ ಮೀಸೆಯಂತೆ ಕಾಣುವ ಕೆಂಪುರೇಖೆ ಇರುತ್ತದೆ’ ಎಂದು ಎಲ್ಲ ಲಕ್ಷಣಗಳನ್ನು ವಿವರಿಸಿದರು.

ಈ ಹಕ್ಕಿಗಳಲ್ಲಿ ಕೆಲವು ಜಾತಿಗಳಿವೆ. ಗಾತ್ರದಲ್ಲಿ ಇದಕ್ಕಿಂತ ಚಿಕ್ಕದು, ಕೆಂಪು ಕಿವಿ ಬುಲ್‌ ಬುಲ್.‌ ತಲೆಯಲ್ಲಿ ಜುಟ್ಟು ಚಿಕ್ಕದೇ. ಬಿಳಿ ಪೃಷ್ಠ, ಕಪ್ಪು ತಲೆ ಹೊಂದಿದೆ. ಹಿಮಾಲಯನ್‌ ಬುಲ್‌ ಬುಲ್‌ ಕಪ್ಪು ಗಂಟಲು ಮತ್ತು ತಲೆ, ಹಳದಿ ಕೆನ್ನೆ ಹೊಂದಿದೆ ಎಂದು ಇನ್ನಷ್ಟು ವಿವರಗಳನ್ನೂ ಅವರು ನೀಡಿದರು.

ಆ ಮೇಲೆ ಹಾವು, ಬೆಕ್ಕು ಇತ್ಯಾದಿ ಬರದಂತೆ ಕಾವಲು ಕಾಯುವ ಕೆಲಸ ಶರ್ಮ ಅವರದಾಯಿತು. ಆಗ ಕಾವು ಕೊಡುವ ಹಕ್ಕಿಗಿಂತ ಕೊಂಚ ದೊಡ್ಡದಿರುವ ಇನ್ನೊಂದು ಹಕ್ಕಿ ಬಂದು ಹಗ್ಗದ ಮೇಲು ಭಾಗದಲ್ಲಿ ಕುಳಿತು ಪೃಷ್ಠವನ್ನು ಕುಣಿಸುತ್ತ ‘ಕುಟುಂಕ್‌.. ಕುಟುಂಕ್‌..’ ಎಂಬ ದನಿಯಲ್ಲಿ ಏನೋ ಹೇಳಿದೆ. ಕಾವು ಕೊಡುವ ಹಕ್ಕಿ ಎದ್ದು ಪರ‍್ರನೆ ಹೊರಗೆ ಹಾರಿದಾಗ ಆ ಹಕ್ಕಿ ಮೊಟ್ಟೆ ಮೇಲೆ ಕುಳಿತಿತು. ಗಂಡು ಹಕ್ಕಿ ಕೌಟುಂಬಿಕ ಜವಾಬ್ದಾರಿಯನ್ನು ಹೊರುವ ಪರಿ ಇದು. ಗಂಡು ಹಕ್ಕಿ ಆರಿಸಿ ತಂದ ಕಡ್ಡಿಗಳನ್ನು ಕೊಕ್ಕಿನಿಂದ ಹೆಣೆದು ಚಂದದಗೂಡು ಕಟ್ಟುವುದು ಹೆಣ್ಣು ಹಕ್ಕಿ. ಸರತಿ ಪ್ರಕಾರ ಮೊಟ್ಟೆಗೆ ಕಾವು ಕೊಡುತ್ತ ಹೆಣ್ಣಿಗೂ ಹಸಿವು ನೀಗಿಸಿಕೊಂಡು ಬರಲು ಅವಕಾಶ ನೀಡುವ ಗಂಡು ಹಕ್ಕಿ ಯಾರು ಬಂದರೂ ನನಗೆ ಭಯವಿಲ್ಲ ಎಂಬಂತೆ ಕ್ಯಾಮರಾದತ್ತವೇ ನೋಡುತ್ತ ಕುಳಿತಿತ್ತು.

ಹತ್ತು ದಿವಸಗಳಾದಾಗ ಗೂಡೊಳಗೆ ಬದಲಾವಣೆ ಗೋಚರಿಸಿತು. ಮೊಟ್ಟೆಗಳು ಒಡೆದು ಎರಡು ಮರಿಗಳು ಕಾಣಿಸಿದವು. ಮೈಯಲ್ಲಿ ರೋಮವಿಲ್ಲ. ಆಗಾಗ ಕೆಂಪಗಿನ ಬಾಯಿ ತೆರೆದು ಆಹಾರ ನಿರೀಕ್ಷಿಸುತ್ತಿದ್ದವು. ಸರತಿ ಪ್ರಕಾರ ಹಕ್ಕಿಗಳು ಹೊರಗೆ ಹೋಗಿ ಆಹಾರ ತಂದು ಮರಿಗಳಿಗೆ ಕೊಡುತ್ತಿದ್ದವು.

ದಿನ ಕಳೆಯುತ್ತಿದ್ದಂತೆ ಮರಿಗಳು ಕಣ್ತೆರೆದವು. ಗಾತ್ರ ದೊಡ್ಡದಾಗುತ್ತಾ ಬಂದಿತು. ಮೈಯಲ್ಲಿ ಕೂದಲು ಹುಟ್ಟಿತು. ಆಹಾರ ತಿನ್ನುವ ಪ್ರಮಾಣವೂ ಹೆಚ್ಚಾಯಿತು. ಹೆಚ್ಚೆಚ್ಚು ಸಲ ಎರಡೂ ಹಕ್ಕಿಗಳು ಆಹಾರ ಹೊತ್ತು ತಂದು ಕೊಡುತ್ತಿದ್ದವು. ತಾಯಿ ಹಕ್ಕಿ ಮೇಲುಭಾಗದಲ್ಲಿ ಸಣ್ಣಗೆ ಹಾರುವಾಗ ಈ ಮರಿಗಳು ಗೂಡಿನಿಂದ ಸ್ವಲ್ಪ ಮೇಲಕ್ಕೆ ಎಗರಿ ಎಗರಿ ಹಾರಲು ಪ್ರಯತ್ನಿಸುತ್ತಿದ್ದವು. ಒಂದೆರಡು ದಿನಗಳಲ್ಲಿ ತಾಯಿಯ ಜೊತೆಗೆ ಗೂಡಿನಿಂದ ಹೊರಗೂ ಹಾರಿ ಹೋಗಿ ಮರಳಿ ಬಂದವು.

ತಿಂಗಳು ಕಳೆಯಿತು. ಶರ್ಮ ಅವರು ಗಮನಿಸುತ್ತಲೇ ಇದ್ದರು. ಒಂದು ದಿನ ಬೆಳಗ್ಗೆ ಗೂಡಿನಿಂದ ಕೊಂಚ ಮೇಲಕ್ಕೆ ಹಗ್ಗದ ಮೇಲೆ ಪೃಷ್ಠ ಕುಣಿಸಿಕೊಂಡು ಕುಳಿತಿರುವ ತಾಯಿ ಹಕ್ಕಿ ದನಿಯಲ್ಲೇ ಏನೋ ಸಂಜ್ಞೆ ಮಾಡಿತು. ಅಷ್ಟೇ ಸಾಕು ಎಂಬಂತೆ ಮರಿಗಳೆರಡೂ ರೆಕ್ಕೆ ಹರಡಿಕೊಂಡು ಗೂಡಿನಿಂದ ಮೇಲೆದ್ದು ಹೊರಗೆ ಹಾರಿ ಹೋದವು. ತಾಯಿ ಅದನ್ನು ಹಿಂಬಾಲಿಸಲಿಲ್ಲ, ಮತ್ತೆ ಮರಿಗಳು ಗೂಡಿಗೆ ಮರಳಲೇ ಇಲ್ಲ.

ಇಷ್ಟು ದಿನ ಅವುಗಳ ಬಾಣಂತನದ ಜವಾಬ್ದಾರಿ ಹೊತ್ತಿದ್ದ ಶರ್ಮ ಅವರ ಮುಖದಲ್ಲಿ ಮಂದಹಾಸ ಮೂಡಿತು.

ಹಕ್ಕಿ ಮರಿಗಳು
ಮೊಟ್ಟೆಯೊಡೆದು ಮರಿಯಾದಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.